ಸರಳ ಭಾಷೆಯಲ್ಲಿ ಚೀಣಾ ತತ್ವ ದರ್ಶನ

Update: 2016-01-03 06:30 GMT

ನ ವಕರ್ನಾಟಕ ಪ್ರಕಾಶನವು ಹೊರತರುತ್ತಿರುವ ಲೋಕ ತತ್ವ ಶಾಸ್ತ್ರ ಪ್ರವೇಶಿಕೆಯ ಎರಡನೆ ಪುಸ್ತಕ ಡಾ. ಜಿ. ರಾಮಕೃಷ್ಣ ಅನುವಾದಿಸಿರುವ ‘ಚೀಣಾದಲ್ಲಿ ತತ್ವಶಾಸ್ತ್ರ’ ಇದರ ಪ್ರಧಾನ ಸಂಪಾದಕರು ಡಾ. ದೇವಿಪ್ರಸಾದ್ ಚಟ್ಟೋಪಾಧ್ಯಾಯ. ಸದ್ಯದ ಜಾಗತಿಕ ರಾಜಕಾರಣದ ಮೂಲಕ ರೂಪುಗೊಂಡಿರುವ ಚೀನಾಕ್ಕೆ ಹೊರತಾದ, ತತ್ವಶಾಸ್ತ್ರದ ಹಿನ್ನೆಲೆಯಲ್ಲಿರುವ ಪ್ರಾಚೀನ ಚೀಣಾವೊಂದನ್ನು ಬಗೆಯುವ ಪ್ರಯತ್ನ ಇದಾಗಿದೆ. ಚೀಣಾದ ತತ್ವಶಾಸ್ತ್ರ ಎಂದೊಡನೆ ಕನ್‌ಫ್ಯೂಶಿಯಸ್ ಮತ್ತು ತವೋ ಹೆಸರುಗಳಷ್ಟೇ ಮುನ್ನೆಲೆಯಲ್ಲಿ ನಿಲ್ಲುತ್ತವೆ. ಕೆಲವು ಜನಪ್ರಿಯ ಪಲುಕುಗಳನ್ನೇ ಮುಂದಿಟ್ಟುಕೊಂಡು ಚೀನಾದ ತತ್ವಶಾಸ್ತ್ರವನ್ನ ಚರ್ಚಿಸುವವರೂ ಇದ್ದಾರೆ. ಇವುಗಳ ನಡುವೆ, ಇತರ ಶಾಖೆಗಳ ಬಗ್ಗೆಯೂ ಬೆಳಕನ್ನು ಹರಿಸುವ ಕೆಲಸವನ್ನು ಈ ಕೃತಿ ಮಾಡುತ್ತದೆ. ಯಿನ್-ಯಾಂಗ್ ಶಾಖೆ ಮತ್ತು ಬೌದ್ಧಮತದ ದಾರ್ಶನಿಕ ತತ್ವಗಳನ್ನು ಇದು ವಿಸ್ತಾರವಾಗಿ ಚರ್ಚಿಸುತ್ತದೆ. ಬೌದ್ಧಧರ್ಮಕ್ಕೂ ಭಾರತಕ್ಕೂ ಅವಿನಾಭಾವ ಸಂಬಂಧವಿರುವುದರಿಂದ, ಭಾರತ-ಚೀಣಾ ನಡುವಿನ ದಾರ್ಶನಿಕ ಕೊಡುಕೊಳ್ಳುವಿಕೆಗಳ ಕುರಿತಂತೆ ಈ ಕೃತಿಯಲ್ಲಿ ವಿವರಗಳು ದೊರಕುತ್ತವೆ.

ಕನ್‌ಫ್ಯೂಶಿಯಸ್ ತತ್ವ, ತವೋ ಸಿದ್ಧಾಂತ, ನ್ಯಾಯಪರತೆಯ ತತ್ವ, ಮೋ ಸಿದ್ಧಾಂತ, ನಾಮಧೇಯಗಳ ಶಾಖೆ, ಯಿನ್-ಯಾಂಗ್ ಶಾಖೆ, ಬೌದ್ಧರ ಸಿದ್ಧಾಂತಗಳು, ನವ-ಕನ್‌ಫ್ಯೂಶಿಯಸ್ ಪಂಥ, ಸಂದೇಹಿ ವಿಚಾರವಾದ ಮತ್ತು ಭೌತವಾದ ಹೀಗೆ ಎಲ್ಲ ಶಾಖೆಗಳನ್ನೂ ಚಾರಿತ್ರಿಕ ಮತ್ತು ಸಾಮಾಜಿಕ ಸನ್ನಿವೇಶಗಳ ತಿಳುವಳಿಕೆಯೊಡನೆ ಪರಾಮರ್ಶೆ ಮಾಡುವ ಈ ಸಂಪುಟವು ಓದುಗನಿಗೆ ಹೊಸ ಕಾಣ್ಕೆಗಳನ್ನು ನೀಡುತ್ತದೆ. ಇದು ಕೇವಲ ಚೀಣಾದರ್ಶನವಾಗಿಯಷ್ಟೇ ಉಳಿಯದೆ, ನಮ್ಮೆಳಗಿನ ಬೆಳಕಾಗಿ ನಮ್ಮವಾಗಿ ವಿಸ್ತರಿಸುತ್ತವೆ. ತತ್ತ್ವಶಾಸ್ತ್ರವೆಂದರೆ ಯಾರೋ ವಿದ್ವಾಂಸರು ಮಾತ್ರ ತಮ್ಮ ತಮ್ಮಲ್ಲೇ ಚರ್ಚಿಸಿಕೊಳ್ಳುವ ನಿಗೂಢ ಮತ್ತು ಕಠಿಣವಾದ ಶಿಸ್ತು ಎಂಬ ಐತಿಹ್ಯವನ್ನು ದೂರಮಾಡುವ ಶಕ್ತಿ ರಾಮಕೃಷ್ಣ ಅವರ ಸರಳ ಬರಹಗಳಿಗಿವೆ. ದೇಶದ ನೈತಿಕ ಮತ್ತು ಬೌದ್ಧಿಕ ವಾತಾವರಣವು ಕಲುಷಿತವಾಗಿರುವ ಹೊತ್ತಿನಲ್ಲಿ, ಪ್ರಗತಿಯ ಹಾದಿಯನ್ನು ತೋರಿಸಿಕೊಡುವಲ್ಲಿ ತತ್ವಶಾಸ್ತ್ರದ ಪಾತ್ರ ಬಹುದೊಡ್ಡದು. ಈ ಕೃತಿ ಆ ನಿಟ್ಟಿನಲ್ಲಿ ತನ್ನದೇ ಆದ ರೀತಿಯಲ್ಲಿ ಹೊಸ ಬೌದ್ಧಿಕ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸುತ್ತದೆ.

196 ಪುಟಗಳ ಈ ಕೃತಿಯ ಮುಖಬೆಲೆ 150 ರೂ. ಆಸಕ್ತರು 080-30578020 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News