ಮೈಸೂರು: 103ನೆ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶಕ್ಕೆ ಚಾಲನೆ

Update: 2016-01-03 17:26 GMT

ಜ್ಞಾನ-ವಿಜ್ಞಾನಕ್ಕೆ ಸೇತುವೆ ನಿರ್ಮಾಣವಾಗಲಿ: ಪ್ರಧಾನಿ ಮೋದಿ

ಮೈಸೂರು, ಜ.3: ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ವಿಜ್ಞಾನದ ನಡುವೆ ಸೇತುವೆ ನಿರ್ಮಾಣವಾದರೆ ಜಗತ್ತು ಎದುರಿಸುತ್ತಿರುವ ಅನೇಕ ಸಮಸ್ಯೆ ಮತ್ತು ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ರವಿವಾರದಿಂದ ಆರಂಭಗೊಂಡ 103ನೆ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಕುಲದ ಅಭಿವೃದ್ಧಿ, ಭೂಮಿಯ ರಕ್ಷಣೆ, ನಗರೀಕರಣ, ಪರಿಸರ, ಇಂಧನ, ವೈಜ್ಞಾನಿಕ ಆವಿಷ್ಕಾರಗಳ ಮೇಲೆ ಬೆಳಕು ಚೆಲ್ಲಿದರು. ಮಾನವನ ಅನುಭವ ಮತ್ತು ಪ್ರಕೃತಿಯ ಸಹಜ ಪ್ರಕ್ರಿಯೆಗಳು ನಮಗೆ ಅನೇಕ ಪಾಠಗಳನ್ನು ಕಲಿಸಿದೆ. ಇದನ್ನೆಲ್ಲ ಎದುರಿಸಿಯೇ ಮಾನವನ ಅಭಿವೃದ್ಧಿಯಾಗಿದೆ. ಮಾನವ ಮತ್ತು ಪರಿಸರದ ನಡುವೆ ಸೌಹಾರ್ದತೆ ಮೂಡಬೇಕಾದಲ್ಲಿ ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ವಿಜ್ಞಾನಕ್ಕೆ ಸೇತುವೆಯಾಗಿ ವಿಜ್ಞಾನಿಗಳು, ಸಂಶೋಧಕರು ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಇದು ನಗರೀಕರಣದ ಯುಗ. ಮಾನವನ ಇತಿಹಾಸದಲ್ಲಿ ಮನುಷ್ಯ ನಗರೀಕರಣದ ಘಟ್ಟ ತಲುಪಿದ್ದಾನೆ. ಜಗತ್ತಿನಲ್ಲಿ ಜೀವಿಸುತ್ತಿರುವ ಮಂದಿಯ ಪೈಕಿ 2/3ರಷ್ಟು ಮಂದಿ ನಗರ ವಾಸಿಗಳಾಗಿದ್ದಾರೆ. 2050ರ ವೇಳೆಗೆ ಭಾರತದಲ್ಲಿ ಶೇ.50ರಷ್ಟು ಮಂದಿ ನಗರವಾಸಿಗಳಾಗುತ್ತಾರೆ. ಇದು ವಿಶ್ವದ ಜನಸಂಖ್ಯೆಯಲ್ಲಿ ಶೇ.10ರಷ್ಟಾಗಿದೆ. ಆದ್ದರಿಂದ ನಗರ ಯೋಜನೆಗಳು ಅತ್ಯಂತ ಯೋಜಿತ ಮತ್ತು ದೂರದೃಷ್ಟಿಯನ್ನು ಹೊಂದಿರಬೇಕೆಂದು ಹೇಳಿದರು.
ನದಿಗಳು ಪ್ರಕೃತಿಯ ಆತ್ಮ ಇದ್ದಂತೆ. ನದಿಗಳು ಮಾನವನ ಇತಿಹಾಸದಲ್ಲಿ ಬಹುದೊಡ್ಡ ಪಾತ್ರ ವಹಿಸಿವೆ. ನದಿಗಳು ಉಳಿದರೆ ಮಾತ್ರ ಪರಿಸರ ಉಳಿಯಲು ಸಾಧ್ಯ ಆದ್ದರಿಂದ ನಗರದ ನಿರ್ಮಾಣದ ವೇಳೆ ಪರಿಸರ, ಹಸಿರು, ಅಂತರ್ಜಲ ವೃದ್ಧಿ, ತ್ಯಾಜ್ಯ ವಸ್ತುಗಳ ಪುನರ್ ಬಳಕೆ, ಬಳಕೆಯಾದ ನೀರು ಪುನರ್ ಸಂಸ್ಕರಣೆ, ಪ್ರಕೃತಿ ವಿಕೋಪದಿಂದ ನಗರಗಳ ರಕ್ಷಿಸುವ ನಿಟ್ಟಿನಲ್ಲಿ ನಗರ ಯೋಜನೆಗಳು ರೂಪಿತವಾಗಬೇಕೆಂದು ಸಲಹೆ ನೀಡಿದರು.

ಇಂದು ಜಗತ್ತಿನ ಮುಂದೆ ಎರಡು ಬಹುದೊಡ್ಡ ಸವಾಲು ಎದುರಾಗಿದೆ. ಒಂದು ಆರ್ಥಿಕ ಅಭಿವೃದ್ಧಿ ಮೂಲಕ ಸಮೃದ್ಧಿಯ ಜೀವನ ಮತ್ತು ಮುಂದಿನ ಪೀಳಿಗೆಗೆ ಸ್ವಚ್ಛ ಭೂಮಿಯನ್ನು ಉಳಿಸುವುದಾಗಿದೆ. ಇತ್ತೀಚೆಗೆ ಒಕ್ಕೂಟ ರಾಷ್ಟ್ರ ಮತ್ತು ಪ್ಯಾರಿಸ್‌ನಲ್ಲಿ ನಡೆದ ಸಭೆಗಳಲ್ಲಿ ಈ ಬಗ್ಗೆ ಚರ್ಚೆಗಳು ನಡೆದಿದ್ದು, ಈ ನಿಟ್ಟಿನಲ್ಲಿ ಸಂಶೋಧನೆ ಮತ್ತು ವೈಜ್ಞಾನಿಕ ಆವಿಷ್ಕಾರಗಳು ಆಗಬೇಕಿದೆ. ಇದಕ್ಕೆ ದ್ವಿರಾಷ್ಟ್ರಗಳ ಒಡಂಬಡಿಕೆ ಮತ್ತು ಯೂನಿವರ್ಸಿಟಿಗಳ ಸಾಂಘಿಕ ಸಂಶೋಧನೆ ಅಗತ್ಯ ಎಂದು ಅಭಿಪ್ರಾಯಪಟ್ಟರು. ಭೂಮಿ ಉಳಿಯಬೇಕಾದಲ್ಲಿ ಕೇವಲ ಮನುಷ್ಯ ಭೂಮಿ ಮೇಲೆ ಏನು ಮಾಡುತ್ತಾರೆ ಎಂಬುವುದು ಮುಖ್ಯವಲ್ಲ. ಸಮುದ್ರವನ್ನೂ ನಾವು ಗಮನದಲ್ಲಿರಿಸಿಕೊಂಡು ಯೋಜಿಸಬೇಕಿದೆ. ಭೂಮಿಯ ಶೇ.70ರಷ್ಟಿರುವ ಸಮುದ್ರವನ್ನು ರಕ್ಷಿಸಲು, ಅವುಗಳ ಅಸ್ತಿತ್ವಕ್ಕೆ ಧಕ್ಕೆ ಬಾರದಂತೆ ಯೋಜನೆಗಳನ್ನು ರೂಪಿಸಬೇಕಿದೆ. ಮುಂದಿನ ಯುಗ ಸೌರ ಯುಗವಾಗಿದ್ದು, ಸೌರಶಕ್ತಿ ಬಳಕೆಯ ಮೂಲಕ ಇಂಧನ ಶಕ್ತಿಯನ್ನು ಸಮರ್ಪಕವಾಗಿ ಬಳಸಬೇಕಾಗಿದೆ. 2022ರ ವೇಳೆಗೆ ಭಾರತ ಸೌರಶಕ್ತಿಯಲ್ಲಿ ಸ್ವಾವಲಂಬನೆಯಾಗುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸೈನ್ಸ್ ಕಾಂಗ್ರೆಸ್ ಅಧ್ಯಕ್ಷ ಪ್ರೊ.ಅಶೋಕ್ ಸಕ್ಸೇನಾ, ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪಮೊದಲಾದವರು ಉಪಸ್ಥಿತರಿದ್ದರು.


ಮಾನಸ ಗಂಗೋತ್ರಿಯಲ್ಲಿ ವಿಜ್ಞಾನ ಸಂಗಮ

ಮೈಸೂರು, ಜ.3: ಜ್ಞಾನದ ಗಂಗೋತ್ರಿಯಲ್ಲಿ ವಿಜ್ಞಾನ ಸಂಗಮವಾಗಿದೆ. ಮೈಸೂರಿನಲ್ಲಿ 34 ವರ್ಷಗಳ ಬಳಿಕ ಭಾರತೀಯ ವಿಜ್ಞಾನ ಕಾಂಗ್ರೆಸ್‌ಗೆ ಮಾನಸ ಗಂಗೋತ್ರಿ ಸಾಕ್ಷಿಯಾಗಿದ್ದು, ರವಿವಾರ ಉದ್ಘಾಟನೆ ಗೊಂಡಿದೆ. ಜ.7ರವರೆಗೆ ನಡೆಯುವ ವಿಜ್ಞಾನ ಕಾಂಗ್ರೆಸ್‌ನಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಲೋಕ ವಿಖ್ಯಾತ 400ಕ್ಕೂ ಹೆಚ್ಚು ವಿಜ್ಞಾನಿಗಳು ಭಾಗವಹಿಸಲಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರ-ಸಂಶೋಧನೆಗಳ ಕುರಿತು ವಿಚಾರ ಮಂಥನವಾಗಲಿದೆ.

ಭಾರತದ ದೇಶಿಯತೆಯ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಶೀರ್ಷಿಕೆಯಡಿಯಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು. ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ 28 ಮಂದಿಗೆ ಪ್ರಶಸ್ತಿ, ಪುರಸ್ಕಾರಗಳನ್ನು ಪ್ರಧಾನಮಂತ್ರಿ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಆರು ನೊಬೆಲ್ ಪುರಸ್ಕೃತರಿಗೆ ಚಿನ್ನದ ಪದಕ ನೀಡಲಾಯಿತು. ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾರತ ರತ್ನ ಪ್ರೊ.ಸಿ.ಎನ್.ಆರ್.ರಾವ್ ಅವರು ‘ಭಾರತದಲ್ಲಿ ವಿಜ್ಞಾನದ ಮುನ್ನಡೆ’ ಕುರಿತು ಉಪನ್ಯಾಸ ನೀಡಿದರು. ವಸ್ತು ಪ್ರದರ್ಶನ: ಎಂಎಂ ಆಕ್ಟಿವ್ ಸೈನ್ಸ್ ಟೆಕ್ ಕಮ್ಯುನಿಕೇಶನ್ ಆಯೋಜಿಸಿರುವ ಪ್ರೈಡ್ ಆಫ್ ಇಂಡಿಯಾ ಎಕ್ಸ್‌ಪೋ ವಸ್ತು ಪ್ರದರ್ಶನ ಆಯೋಜಿಸಲಾಗಿದ್ದು, 15 ಸಾವಿರ ಚದುರ ಮೀಟರ್ ವಿಸ್ತೀರ್ಣದಲ್ಲಿ 180 ಸಂಸ್ಥೆಗಳು ತಮ್ಮ ಕ್ಷೇತ್ರದ ಸಾಧನೆಗಳನ್ನು ಪ್ರದರ್ಶಿಸಿವೆ. ಅಣುಶಕ್ತಿ ಇಲಾಖೆ, ನ್ಯಾಷನ್ ಕೌನ್ಸಿಲ್ ಆಫ್ ಸೈನ್ಸ್ ಮ್ಯೂಸಿಯಂ, ಸೆಂಟರ್ ಫಾರ್ ಡೆವಲಪ್ ಮೆಂಟ್ ಆಫ್ ಅಡ್ವಾನ್ಸ್ ಕಂಪ್ಯೂಟಿಂಗ್, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಸಿಎಫ್‌ಟಿಆರ್‌ಐ, ಡಿಎಫ್‌ಆರ್‌ಎಲ್ ವಸ್ತು ಪ್ರದರ್ಶನದಲ್ಲಿ ಭಾಗಿಯಾಗಿವೆ. ಮೊದಲ ದಿನವೇ ವಸ್ತು ಪ್ರದರ್ಶನಕ್ಕೆ ವಿದ್ಯಾರ್ಥಿ ಸಮೂಹ ಮುಗಿಬಿದ್ದಿದ್ದಾರೆ. ಇಲ್ಲಿಗೆ ಆಗಮಿಸಿರುವ ಸುಮಾರು 8 ಸಾವಿರಕ್ಕೂ ಹೆಚ್ಚು ದೇಶ, ವಿದೇಶಗಳ ಪ್ರತಿನಿಧಿಗಳು ಮತ್ತು 4,500ರಷ್ಟು ರಾಜ್ಯದ ಪ್ರತಿನಿಧಿ ಗಳಿಗೆ ಫುಡ್‌ಕೋರ್ಟ್ ನಿರ್ಮಿಸಲಾಗಿದ್ದು, ಒಟ್ಟಾರೆ, ಮೈಸೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದಲ್ಲಿ ಐತಿಹಾಸಿಕ ಪುಟ ಸೇರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News