ಉಗ್ರರ ಸಂಚು ವಿಫಲವಾಗಲಿ

Update: 2016-01-03 17:33 GMT

ಭಾ ರತದ ವಾಯುನೆಲೆಯ ಮೇಲೆ ಅತ್ಯಂತ ಆಘಾತಕಾರಿಯಾದ ರೀತಿಯಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ನಮ್ಮ ಯೋಧರ ಸಮಯ ಪ್ರಜ್ಞೆ ಹಾಗೂ ಎದೆಗಾರಿಕೆಯ ಪರಿಣಾಮವಾಗಿ ಭಾರೀ ದುರಂತವೊಂದು ತಪ್ಪಿ ಹೋಗಿದೆ. ಆದರೆ ಈ ದಾಳಿಯಲ್ಲಿ ಏಳು ಯೋಧರು ಮೃತಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಐದು ಮಂದಿ ಉಗ್ರರು ಮೃತಪಟ್ಟಿದ್ದಾರೆ. ಪಠಾಣ್‌ಕೋಟ್‌ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ. ಕಳೆದ ಶನಿವಾರ ಮುಂಜಾವು ನಡೆದ ದಾಳಿ ಮತ್ತು ಅವರ ವಿರುದ್ಧದ ಕಾರ್ಯಾಚರಣೆ ರವಿವಾರ ತಡರಾತ್ರಿಯವರೆಗೂ ಮುಂದುವರಿದಿದೆ. ಭಾರತದ ಪಾಲಿಗೆ ಈ ರೀತಿಯ ದಾಳಿ ಹೊಸತೇನೂ ಅಲ್ಲ. ಕಳೆದ 15 ವರ್ಷಗಳಲ್ಲಿ ಪಂಜಾಬ್ ಭಾಗದಲ್ಲಿ ಐದಕ್ಕೂ ಅಧಿಕ ಭೀಕರ ದಾಳಿಗಳನ್ನು ಉಗ್ರರು ನಡೆಸಿದ್ದಾರೆ. ಗುರುದಾಸ್‌ಪುರದ ಮೇಲೆ ಉಗ್ರರಿಗೆ ಸದಾ ಒಂದು ಕಣ್ಣು ಇದ್ದೇ ಇದೆ. 2015ರಲ್ಲಿ ಗುರುದಾಸ್ ಪುರದ ಪೊಲೀಸ್ ಠಾಣೆಯೊಂದರ ಮೇಲೆ ನಡೆದ ದಾಳಿಯಲ್ಲಿ ಸುಪರಿಟೆಂಡೆಂಟ್ ಸೇರಿ 7 ಮಂದಿ ಮೃತರಾಗಿದ್ದರು. ಈ ಉಗ್ರರನ್ನು ಸದೆ ಬಡಿಯಲು ನಮ್ಮ ಯೋಧರು ಯಶಸ್ವಿಯಾಗಿದ್ದರು ಎನ್ನುವುದೂ ನಮಗೆ ಹೆಮ್ಮೆಯ ವಿಷಯವಾಗಿದೆ. 2001ರಲ್ಲಿ ಭಾರತ ಪಾಕ್ ನಡುವೆ ಉಗ್ರರು ಕೊರೆದಿದ್ದ ನೀಳವಾದ ಸುರಂಗವೊಂದನ್ನು ನಮ್ಮ ಯೋಧರು ಪತ್ತೆ ಹಚ್ಚಿದ್ದರು. ಇದಾದ ಬಳಿಕ ಸಣ್ಣ ಪುಟ್ಟ ದಾಳಿಗಳು ನಡೆಯುತ್ತಲೇ ಇವೆ. ಇದೀಗ ಈ ದಾಳಿಯನ್ನು ವಿವಿಧ ಉಗ್ರ ಸಂಘಟನೆಯೊಟ್ಟಿಗೆ ಗುರುತಿಸುವ ಪ್ರಯತ್ನ ನಡೆಯುತ್ತಿದೆ. ಯಾವ ಸಂಘಟನೆಯೇ ಈ ದಾಳಿಯನ್ನು ನಡೆಸಿರಲಿ, ಅವರ ಉದ್ದೇಶ ಅಶಾಂತಿ, ಹಿಂಸೆಯಷ್ಟೇ ಆಗಿದೆ. ಅವರ ಗುರಿ ಕೇವಲ ಭಾರತ ಮಾತ್ರವಲ್ಲ ಎನ್ನುವುದೂ ಬಹು ಮುಖ್ಯವಾಗಿದೆ. ಭಾರತ ಮತ್ತು ಪಾಕಿಸ್ತಾನಗಳ ಮೇಲೆ ಏಕಕಾಲದಲ್ಲಿ ಪರಿಣಾಮ ಬೀರುವಂತಹ ದಾಳಿ ಇದಾಗಿದೆ.
 
 ಶನಿವಾರ ನಡೆದ ಈ ದಾಳಿ ಭಾರತದ ಹೃದಯಕ್ಕೇ ಗಾಯ ಮಾಡಿದೆ ಎಂದರೆ ತಪ್ಪಲ್ಲ. ಅದಕ್ಕೊಂದು ಮುಖ್ಯ ಕಾರಣವಿದೆ. ಕೆಲವೇ ದಿನಗಳ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ಆತ್ಮೀಯ ಭೇಟಿಯನ್ನು ನೀಡಿ ಬಂದಿದ್ದರು. ರಾಜತಾಂತ್ರಿಕವಾಗಿ ಈ ಭೇಟಿ ಎಷ್ಟರ ಮಟ್ಟಿಗೆ ಯೋಗ್ಯವಾದದ್ದು ಎನ್ನುವುದು ಪಕ್ಕಕ್ಕಿರಲಿ. ಉಭಯ ದೇಶಗಳ ಪ್ರಧಾನಿಗಳು ಪರಸ್ಪರ ಮಾಧ್ಯಮಗಳಲ್ಲಿ ದ್ವೇಷದ ಹೇಳಿಕೆಗಳನ್ನು ನೀಡುತ್ತಾ ಕಾಲ ಕಳೆಯುವುದಕ್ಕೆ ಹೋಲಿಸಿದರೆ, ಮೋದಿಯವರ ಈ ಆಕಸ್ಮಿಕ ಭೇಟಿ ಉಪಖಂಡಕ್ಕೆ ವಿಶಿಷ್ಟವಾದ ಉತ್ಸಾಹ ಮತ್ತು ಸ್ಫೂರ್ತಿಯನ್ನು ತುಂಬುವಂತಹದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ಯುಪಿಎ ಸರಕಾರದ ಕಾಲದಲ್ಲಿ ಅಂದಿನ ಪ್ರಧಾನಿ ಇಂತಹದೊಂದು ಭೇಟಿ ನೀಡಿದ್ದಿದ್ದರೆ ಆರೆಸ್ಸೆಸ್, ಬಿಜೆಪಿ ಹೇಗೆ ಪ್ರತಿಕ್ರಿಯಿಸುತ್ತಿತ್ತು ಎನ್ನುವುದನ್ನು ಬದಿಗಿಟ್ಟು, ಎಲ್ಲರೂ ಧನಾತ್ಮಕವಾಗಿ ಮೋದಿಯ ಹೆಜ್ಜೆಯನ್ನು ಶ್ಲಾಘಿಸಿದರು. ಪಾಕ್ ಪ್ರಧಾನಿ ನವಾಝ್ ಶರೀಫ್ ಕೂಡ ಈ ಭೇಟಿಗೆ ಅಷ್ಟೇ ತೀವ್ರವಾಗಿ ಹೃದಯದಿಂದ ಪ್ರತಿಕ್ರಿಯಿಸಿದರು. ಹೀಗೂ ಸಾಧ್ಯವೇ? ಎಂದು ಉಭಯ ದೇಶಗಳ ಜನರು ಖುಷಿಯಿಂದ ಮೂಗಿನ ಮೇಲೆ ಬೆರಳಿಟ್ಟರು. ಉಭಯ ದೇಶಗಳು ಮಾತುಕತೆಗೆ ಹೊಸ ಸಿದ್ಧತೆಯನ್ನು ಮಾಡಲು ಹೊರಟಿದ್ದವು. ಇನ್ನೇನು ಗಡಿಯಲ್ಲಿ ಶಾಶ್ವತ ಶಾಂತಿ ನೆಲೆಸಿಬಿಡುವುದು ಎಂಬ ವಾತಾವರಣ ಮಾಧ್ಯಮಗಳಲ್ಲಿ ನಿರ್ಮಾಣವಾಯಿತು. ಅಷ್ಟರಲ್ಲೇ ಉಗ್ರರು ಇಂತಹದೊಂದು ದಾಳಿಯನ್ನು ನಡೆಸಿದ್ದಾರೆ. ಭಾರತ ನಂಬಿರುವ ಸ್ನೇಹ, ವಿಶ್ವಾಸದ ಮೇಲೆ ನಡೆಸಿರುವ ದಾಳಿ ಇದು. ಇದು ಪಾಕಿಸ್ತಾನದ ಪ್ರೇರಣೆಯಿಂದ ನಡೆದ ದಾಳಿಯಲ್ಲ ಎಂದು ಸರಕಾರ ನಂಬಿಕೊಂಡಿದೆ. ಮತ್ತು ಆ ನಂಬಿಕೆ ಸದ್ಯಕ್ಕೆ ಅತ್ಯಗತ್ಯವಾಗಿದೆ. ಭಾರತ-ಪಾಕಿಸ್ತಾನಗಳ ನಡುವೆ ಮಾತುಕತೆ ಚಿಗುರಿಕೊಂಡಾಗಲೆಲ್ಲ ಉಗ್ರರು ಅದನ್ನು ಚಿವುಟಿಹಾಕಲು ಸರ್ವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದಾರೆ. ಇದು ಕೇವಲ ಪಾಕಿಸ್ತಾನದ ಉಗ್ರವಾದಿಗಳಿಗಷ್ಟೇ ಸೀಮಿತವಾಗಿಲ್ಲ. ಅವರೊಂದಿಗೆ ಭಾರತದ ಕೇಸರಿ ಉಗ್ರರೂ ಯಶಸ್ವಿಯಾಗಿ ಕೈಜೋಡಿಸಿಕೊಂಡು ಬಂದಿದ್ದಾರೆ. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗಲೂ ಅವರು ಪಾಕಿಸ್ತಾನದ ಜೊತೆಗೆ ಒಳ್ಳೆಯ ಸಂಬಂಧವನ್ನು ಬೆಳೆಸಲು ಸರ್ವ ಪ್ರಯತ್ನ ಮಾಡಿದ್ದರು. ಅದೇ ಸಂದರ್ಭದಲ್ಲಿ, ಆ ಸಂಬಂಧವನ್ನು ಮುರಿಯಲು ಉಭಯ ದೇಶಗಳ ಉಗ್ರರು, ಪಾಕಿಸ್ತಾನದ ಸೇನೆಯೂ ತಮ್ಮ ಪ್ರಯತ್ನವನ್ನು ಮಾಡಿದ್ದವು. ಅಟಲ್ ಅವರ ಪ್ರಯತ್ನದಿಂದ ಭಾರತ-ಪಾಕಿಸ್ತಾನಗಳ ನಡುವೆ ‘ಸಂಜೋತಾ ರೈಲು’ ಓಡಿತು. ಆದರೆ ಆ ಪ್ರಯತ್ನವನ್ನು ಭಾರತದಲ್ಲಿರುವ ಕೇಸರಿ ಉಗ್ರರು ಧ್ವಂಸ ಮಾಡಿ ಬಿಟ್ಟರು. ಆ ರೈಲಿಗೆ ಬಾಂಬಿಟ್ಟು ನೂರಾರು ಜನ ಅಮಾಯಕರನ್ನು ಕೊಂದು, ಭಾರತ-ಪಾಕಿಸ್ತಾನಗಳ ನಡುವಿನ ಅಳಿದುಳಿದ ಸಂಬಂಧವನ್ನು ಸ್ಫೋಟ ಮಾಡಿ ಬಿಟ್ಟರು. ಒಂದೆಡೆ ಪಾಕಿಸ್ತಾನದ ಸೇನೆ ಮತ್ತು ಅಲ್ಲಿನ ಉಗ್ರರಿಗೆ ಸಂಬಂಧ ಸುಧಾರಣೆ ಬೇಕಾಗಿಲ್ಲ. ಇನ್ನೊಂದೆಡೆ ಭಾರತದ ಕೇಸರಿ ಉಗ್ರರಿಗೂ ಸಂಬಂಧ ಸುಧಾರಣೆ ಬೇಕಾಗಿಲ್ಲ. ಇದೇ ಸಂದರ್ಭದಲ್ಲಿ ಕೇಸರಿ ಬೇರುಗಳು ಭಾರತದ ಸೇನೆಯನ್ನೂ ಹರಡಿಕೊಂಡಿವೆ ಎಂಬ ಮಾಧ್ಯಮ ಸುದ್ದಿಗಳನ್ನು ಮುಂದಿಟ್ಟು ಚರ್ಚಿಸಿದರೆ, ಸೇನೆಯೊಳಗಿರುವ ಕೆಲವರಿಗೆ ಸಂಬಂಧ ಸುಧಾರಣೆ ಬೇಕಾಗಿಲ್ಲ. ಇತ್ತೀಚೆಗೆ ವಿದೇಶದಲ್ಲಿ ನವಾಝ್ ಶರೀಫ್ ಮತ್ತು ಮೋದಿ ಕೈಕುಲುಕಿ ಮಾತುಕತೆಯ ಬಗ್ಗೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದಾಗ ಪಾಕಿಸ್ತಾನದ ಸೇನೆ ಅದನ್ನು ವಿಫಲಗೊಳಿಸಿತು. ಇದೀಗ ಮೋದಿಯ ಪಾಕಿಸ್ತಾನ ಭೇಟಿ ವಾತಾವರಣವನ್ನು ತಿಳಿಗೊಳಿಸುತ್ತದೆ ಎನ್ನುವಾಗ, ಪಂಜಾಬ್‌ನಲ್ಲಿ ಪಾಕಿಸ್ತಾನದ ಉಗ್ರರು ದಾಳಿ ನಡೆಸಿ, ಮತ್ತೆ ಸಂಬಂಧವನ್ನು ಕಲುಷಿತಗೊಳಿಸಿದ್ದಾರೆ.
ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ, ಈ ಉಗ್ರರ ದಾಳಿಯ ಬಗ್ಗೆ ಆರೆಸ್ಸೆಸ್ ಮತ್ತು ಅದರ ಪರಿವಾರ ನಿಗೂಢ ವೌನವನ್ನು ತಳೆದಿದೆ. ಇಲ್ಲವಾದರೆ, ಇಷ್ಟುಹೊತ್ತಿಗೆ ಅವರು ‘ಯುದ್ಧ ಘೋಷಿಸಿ’ ಎಂದು ಸರಕಾರದ ವಿರುದ್ಧ ತಮ್ಮ ಪಾಂಚಜನ್ಯವನ್ನು ಊದಿಯೇ ಬಿಡುತ್ತಿದ್ದರು. ಅನಗತ್ಯವಾಗಿ ಪಾಕಿಸ್ತಾನ ಸರಕಾರದ ವಿರುದ್ಧವೂ ಆರೆಸ್ಸೆಸ್ ಪರಿವಾರ ಹೇಳಿಕೆಯನ್ನು ನೀಡಿಲ್ಲ. ನಮ್ಮ ಕೇಂದ್ರ ಸರಕಾರವೂ ಕೂಡ, ಪಾಕಿಸ್ತಾನದ ಪಾತ್ರವನ್ನು ಎತ್ತಿ ಹಿಡಿದಿಲ್ಲ. ‘‘ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಇದೆ ಎನ್ನುವುದು ಸ್ಪಷ್ಟವಾಗಿಲ್ಲ’’ ಎಂಬರ್ಥದ ಮಾತುಗಳನ್ನು ಕೇಂದ್ರ ಸರಕಾರ ಹೇಳಿದೆ. ಇದು ಶ್ಲಾಘನಾರ್ಹವಾಗಿದೆ. ಉಭಯ ದೇಶಗಳ ಪ್ರಜಾಸತ್ತೆಯನ್ನು ವಿಫಲಗೊಳಿಸುವ ಉಗ್ರರಿಗೆ, ಸರಕಾರಗಳ ಈ ಸಂಯಮ ಒಂದಿಷ್ಟು ಕಿರಿಕಿರಿಯನ್ನುಂಟು ಮಾಡುವುದು ಸ್ಪಷ್ಟ. ಪಾಕಿಸ್ತಾನ ಕೂಡ ಈ ದಾಳಿಯನ್ನು ಬಲವಾಗಿ ಖಂಡಿಸಿದೆ. ಭಾರತ-ಪಾಕಿಸ್ತಾನಗಳ ನಡುವೆ ಸಂಬಂಧ ಸುಧಾರಣೆಯಾಗುವುದು ಉಭಯ ದೇಶಗಳ ಅಗತ್ಯ. ಎರಡೂ ದೇಶಗಳು ಅಭಿವೃದ್ಧಿಯೆಡೆಗೆ ಹೆಜ್ಜೆಯಿಡಬೇಕಾದರೆ, ತಮ್ಮೆಳಗಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಆದುದರಿಂದ, ಪ್ರಜಾಸತ್ತೆಯ ವಿರೋಧಿಗಳು ಅದೆಷ್ಟು ವಿಘ್ನಗಳನ್ನು ಉಂಟು ಮಾಡಿದರೂ ಮಾತುಕತೆಯನ್ನು ಮುಂದೆ ಕೊಂಡೊಯ್ಯುವುದು ಉಭಯದೇಶಗಳ ನಾಯಕರ ಹೊಣೆಗಾರಿಕೆ, ಕರ್ತವ್ಯವಾಗಿದೆ. ಅದರಲ್ಲಿ ಆಯಾ ದೇಶದ ಪ್ರಜೆಗಳ ಹಿತಾಸಕ್ತಿ ಅಡಗಿದೆ. ಆದುದರಿಂದ, ಪಂಜಾಬ್‌ನಲ್ಲಿ ನಡೆದಿರುವ ದಾಳಿ ಮಾತುಕತೆಯ ಮೇಲೆ ಯಾವ ಪರಿಣಾಮವನ್ನೂ ಬೀರದಂತೆ ನೋಡಿಕೊಳ್ಳುವುದು ನವಾಝ್ ಶರೀಫ್ ಮತ್ತು ನರೇಂದ್ರಮೋದಿ ಬಳಗದ ಜವಾಬ್ದಾರಿಯಾಗಿದೆ. ಈ ಮೂಲಕ ನಾವು ಉಗ್ರರ ನಿಜವಾದ ಉದ್ದೇಶವನ್ನು ವಿಫಲಗೊಳಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News