ಅಕ್ರಮ ವಲಸಿಗರೆಂಬ ನಿಗೂಢ ಭೂತ

ಹುಚ್ಚು ಊಹೆಯು ಅಕ್ರಮ ವಲಸಿಗರ ಪ್ರಮಾಣವನ್ನು 5 ಕೋಟಿಯವರೆಗೆ ಎಳೆದಿರುವುದು ಮಾತ್ರವಲ್ಲ ಅದಕ್ಕಿಂತಲೂ ಆಚೆಗೆ ಒಯ್ಯುವ ತಯಾರಿಯಲ್ಲಿದೆ. 2022 ಎಪ್ರಿಲ್‌ನಲ್ಲಿ ಉಪಾಧ್ಯಾಯ್, ತನ್ನ ಹಳೆಯ ಅರ್ಜಿಯನ್ನು ಕ್ಷಿಪ್ರವಾಗಿ ವಿಚಾರಣೆಗೆ ತೆಗೆದುಕೊಳ್ಳಬೇಕೆಂದು ಮತ್ತೆ ಸುಪ್ರೀಮ್ ಕೋರ್ಟಿಗೆ ಮನವಿ ಸಲ್ಲಿಸಿದ್ದರು. ಆಗ ಈ ಕುರಿತು ವಿಮರ್ಶಿಸಿದ ಅಂದಿನ ಮುಖ್ಯ ನ್ಯಾಯಾಧೀಶ ಎನ್.ವಿ. ರಮಣ್ ಅವರು ಉಪಾಧ್ಯಾಯ್ ಅವರನ್ನು ತರಾಟೆಗೆ ತೆಗೆದುಕೊಂಡು, ಇವೆಲ್ಲಾ ರಾಜಕೀಯ ವಿಷಯಗಳು. ಜನಪ್ರತಿನಿಧಿಗಳು ಮತ್ತು ಸರಕಾರಗಳು ಮಾಡಬೇಕಾದ ಕೆಲಸಗಳನ್ನು ನಮ್ಮ ಬಳಿಗೆ ತರಬೇಡಿ ಎಂದು ಎಚ್ಚರಿಸಿದ್ದರು

Update: 2024-05-06 05:18 GMT

ಭಾಗ- 4

ಕೆಲವು ವರ್ಷಗಳ ಹಿಂದೆ ದಿಲ್ಲಿಯ ಕುಖ್ಯಾತ ದ್ವೇಷಭಾಷಣ ಪ್ರವೀಣ ಎಡ್ವೊಕೇಟ್ ಅಶ್ವಿನಿ ಉಪಾಧ್ಯಾಯ್ ಅವರು ಕಾಪಿಟಲ್ ಟಿವಿಗೆ ನೀಡಿದ ಹೇಳಿಕೆಯೊಂದು ಹೀಗಿತ್ತು:

‘‘ಭಾರತದಲ್ಲಿ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಿಂದ ಬಂದಿರುವ 5 ಕೋಟಿ ಅಕ್ರಮ ವಲಸಿಗರು ನೆಲೆಸಿದ್ದಾರೆ. ಅವರಿಗೆ ಮಕ್ಕಳು ಕೂಡಾ ಹುಟ್ಟುತ್ತಿರುವುದರಿಂದ ಈಗ ಅವರ ಸಂಖ್ಯೆ ಇನ್ನೂ ಹೆಚ್ಚಿರಬಹುದು. ನಾನು 2017ರಲ್ಲಿ ಸುಪ್ರೀಮ್ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (PIL) ಯೊಂದನ್ನು ಸಲ್ಲಿಸಿ ಪ್ರಸ್ತುತ ಅಕ್ರಮ ವಲಸಿಗರನ್ನು ಗುರುತಿಸಿ, ಬಂಧಿಸಿ ದೇಶದಿಂದ ಹೊರದಬ್ಬುವುದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರಕ್ಕೆ ಆದೇಶ ನೀಡಬೇಕೆಂದು ಮನವಿ ಮಾಡಿದ್ದೆ.’’

ಇದೆಲ್ಲಾ ಅಧಿಕೃತ ಮಾಹಿತಿಯ ಅನುಪಸ್ಥಿತಿಯ ಪರಿಣಾಮ. ಹುಚ್ಚು ಊಹೆಯು ಅಕ್ರಮ ವಲಸಿಗರ ಪ್ರಮಾಣವನ್ನು 5 ಕೋಟಿಯವರೆಗೆ ಎಳೆದಿರುವುದು ಮಾತ್ರವಲ್ಲ ಅದಕ್ಕಿಂತಲೂ ಆಚೆಗೆ ಒಯ್ಯುವ ತಯಾರಿಯಲ್ಲಿದೆ. 2022 ಎಪ್ರಿಲ್‌ನಲ್ಲಿ ಉಪಾಧ್ಯಾಯ್, ತನ್ನ ಹಳೆಯ ಅರ್ಜಿಯನ್ನು ಕ್ಷಿಪ್ರವಾಗಿ ವಿಚಾರಣೆಗೆ ತೆಗೆದುಕೊಳ್ಳಬೇಕೆಂದು ಮತ್ತೆ ಸುಪ್ರೀಮ್ ಕೋರ್ಟಿಗೆ ಮನವಿ ಸಲ್ಲಿಸಿದ್ದರು. ಆಗ ಈ ಕುರಿತು ವಿಮರ್ಶಿಸಿದ ಅಂದಿನ ಮುಖ್ಯ ನ್ಯಾಯಾಧೀಶ ಎನ್.ವಿ. ರಮಣ್ ಅವರು ಉಪಾಧ್ಯಾಯ್ ಅವರನ್ನು ತರಾಟೆಗೆ ತೆಗೆದುಕೊಂಡು, ಇವೆಲ್ಲಾ ರಾಜಕೀಯ ವಿಷಯಗಳು. ಜನಪ್ರತಿನಿಧಿಗಳು ಮತ್ತು ಸರಕಾರಗಳು ಮಾಡಬೇಕಾದ ಕೆಲಸಗಳನ್ನು ನಮ್ಮ ಬಳಿಗೆ ತರಬೇಡಿ ಎಂದು ಎಚ್ಚರಿಸಿದ್ದರು.

ತೀರಾ ಇತ್ತೀಚಿನ ಕಥೆ ಕೇಳಿ. ತಾವು ಅಸ್ಸಾಮ್‌ನ ಮೂಲ ನಿವಾಸಿಗಳ ಪ್ರತಿನಿಧಿಗಳೆಂದು ಹೇಳಿಕೊಳ್ಳುವ ಅನೇಕ ಸಂಸ್ಥೆಗಳು ಮತ್ತು ವ್ಯಕ್ತಿಗಳು ಅಕ್ರಮ ವಲಸಿಗರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಾಗೂ 1955ರ ಪೌರತ್ವ ಕಾನೂನಿನ ಸೆಕ್ಷನ್ 6ಂರ ಔಚಿತ್ಯವನ್ನು ಪ್ರಶ್ನಿಸುವ ಹತ್ತಾರು ಅರ್ಜಿಗಳು ಸುಪ್ರೀಮ್ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದ್ದವು. ಕಳೆದ ವರ್ಷ (2023) ಡಿಸೆಂಬರ್ 5ರಂದು ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ, ಐದು ಮಂದಿ ಸದಸ್ಯರನ್ನೊಳಗೊಂಡ ಸಾಂವಿಧಾನಿಕ ಪೀಠವು ಅಂತಹ ಹಲವಾರು ಅರ್ಜಿಗಳನ್ನು ಒಟ್ಟು ಸೇರಿಸಿ ವಿಚಾರಣೆಗೆ ಎತ್ತಿಕೊಂಡಿತು.

ಈ ವೇಳೆ ನ್ಯಾಯ ಪೀಠವು ಕೇಂದ್ರ ಸರಕಾರಕ್ಕೆ ಒಂದು ಮಹತ್ವದ ಆದೇಶವನ್ನು ನೀಡಿತು. 1971 ಮಾರ್ಚ್ 25ರ ಬಳಿಕ ಅಸ್ಸಾಮ್ ಸಹಿತ, ಆದರೆ ಕೇವಲ ಅಸ್ಸಾಮ್‌ಗೆ ಮಾತ್ರ ಸೀಮಿತವಾಗಿಡದೆ, ಎಷ್ಟು ಮಂದಿ ಅಕ್ರಮ ವಲಸಿಗರು ಭಾರತದೊಳಗೆ ಬಂದಿದ್ದಾರೆ ಎಂಬ ಬಗ್ಗೆ ಅಂದಾಜು ವಿವರವನ್ನು ನೀಡಬೇಕು ಎಂಬುದು ಅವರ ಆದೇಶವಾಗಿತ್ತು. ಸರಕಾರಗಳ ಕಾಲಹರಣದ ಹಣೆಬರಹ ಬಲ್ಲ ನ್ಯಾಯಾಧೀಶರು ಈ ಕೆಲಸವನ್ನು ಒಂದೇ ವಾರದೊಳಗೆ ಅಂದರೆ ಡಿಸೆಂಬರ್ 11ರೊಳಗೆ ಮುಗಿಸಬೇಕು ಎಂಬ ಗಡುವನ್ನೂ ವಿಧಿಸಿದರು.

ಹಲವು ದಶಕಗಳಿಂದ ಸಹಸ್ರನಾಮವೋ ಎಂಬಂತೆ ‘‘ವಲಸಿಗರು, ವಲಸಿಗರು’’ ಎಂದು ಮಂತ್ರವನ್ನು ನಿಷ್ಠೆಯಿಂದ ನಿತ್ಯ ಜಪಿಸುತ್ತಾ, ಕಿರುಚಾಡುತ್ತಾ ಬಂದಿರುವ ಮತ್ತು ಹಲವು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಮತ್ತು ಶಾ ಪಾಳಯದ ಪಾಲಿಗೆ, ಇದು ಇನ್ನೊಂದು ಸುವರ್ಣಾವಕಾಶವಾಗಿತ್ತು. ಕೇಂದ್ರ ಗೃಹಕಾರ್ಯದರ್ಶಿಯನ್ನುದ್ದೇಶಿಸಿ ನೀಡಲಾಗಿದ್ದ ಈ ಆದೇಶಕ್ಕೆ ಉತ್ತರವಾಗಿ ಸರಕಾರವು ವಲಸಿಗರ ಕುರಿತು ಎಲ್ಲ ವಿವರಗಳನ್ನು ನ್ಯಾಯಾಲಯದ ಮುಂದಿಡುತ್ತದೆ ಮತ್ತು ಆ ಮೂಲಕ ಲಕ್ಷಾಂತರ ಅಥವಾ ಕೋಟ್ಯಂತರ ವಲಸಿಗರ ಸಮಸ್ಯೆಯಿಂದ ಕೊನೆಗೂ ಭಾರತಕ್ಕೆ ಮುಕ್ತಿ ಸಿಕ್ಕಿ ಬಿಡುತ್ತದೆ ಎಂದು ಹಲವರು ನಂಬಿದ್ದರು.

ನ್ಯಾಯ ಪೀಠವು ಸರಕಾರವು ಸಲ್ಲಿಸಿದ ವರದಿಯನ್ನು ಡಿಸೆಂಬರ್ 12ರಂದು ವಿಚಾರಣೆಗೆತ್ತಿಕೊಂಡಾಗ ಎಲ್ಲರಿಗೂ ನಿರಾಶೆ ಕಾದಿತ್ತು. ಪ್ರಸ್ತುತ ವರದಿಯು 2012ರಲ್ಲಿ ಅಂದಿನ ಸರಕಾರವು ಸಲ್ಲಿಸಿದ್ದ ವರದಿಗಿಂತ ಸ್ವಲ್ಪವೂ ಭಿನ್ನವಾಗಿರಲಿಲ್ಲ. ಅದೇ ಹಳೆಯ ಗೊಂದಲ, ತಾಂತ್ರಿಕ ಶಬ್ದಾವಳಿ, ಅಸ್ಪಷ್ಟತೆ, ಸುತ್ತು-ಬಳಸು ಶೈಲಿ, ನೈಜ ಪ್ರಶ್ನೆಗಳಿಂದ ಜಾರಿಕೊಳ್ಳುವ ಚಾಣಾಕ್ಷ ಯತ್ನ - ಇತ್ಯಾದಿಗಳೇ ವರದಿಯುದ್ದಕ್ಕೂ ಮೆರೆದಿದ್ದವು. ಕೇಂದ್ರ ಸರಕಾರವು 2023 ಡಿಸೆಂಬರ್‌ನಲ್ಲಿ ಸುಪ್ರೀಮ್ ಕೋರ್ಟಿಗೆ ಸಲ್ಲಿಸಿದ ವರದಿಯ ಕೆಲವು ಮುಖ್ಯ ಅಂಶಗಳನ್ನು ಗಮನಿಸಿ:

‘‘1966 ಜನವರಿ ಮತ್ತು 1971 ಮಾರ್ಚ್ 25ಕ್ಕಿಂತ ಮುನ್ನ 17,000 ಸಾವಿರಕ್ಕೂ ಅಧಿಕ ಬಾಂಗ್ಲಾದೇಶಿ ವಲಸಿಗರು ಭಾರತದೊಳಗೆ ಪ್ರವೇಶಿಸಿ ಇಲ್ಲಿ ನೆಲೆಸಿದ್ದು, ಅವರಿಗೆ ಪೌರತ್ವ ನೀಡಲಾಗಿದೆ.’’ (ನಿಜವಾಗಿ ನ್ಯಾಯಾಲಯವು ಕೇಳಿದ್ದ ಪ್ರಶ್ನೆಯು ಬಹಳ ನಿರ್ದಿಷ್ಟವಾಗಿ 1971 ಮಾರ್ಚ್ 25ರ ಬಳಿಕದ ಸನ್ನಿವೇಶದ ಕುರಿತಾಗಿತ್ತು!)

‘‘ಅಕ್ರಮ ವಲಸಿಗರನ್ನು ಗುರುತಿಸಿ, ಬಂಧಿಸಿ ಹೊರದಬ್ಬುವ ಕೆಲಸ ಬಹಳ ಸಂಕೀರ್ಣ ಸ್ವರೂಪದ್ದಾಗಿರುವುದರಿಂದ ಆ ಕುರಿತು ನಿಖರವಾದ ಅಂಕಿ ಅಂಶಗಳನ್ನು ಒದಗಿಸಲು ಸರಕಾರಕ್ಕೆ ಸಾಧ್ಯವಿಲ್ಲ.’’

‘‘ಸರಕಾರವು 100ರಷ್ಟು ವಿದೇಶಿ ಟ್ರಿಬ್ಯೂನಲ್ ಗಳನ್ನು ಸ್ಥಾಪಿಸಿದೆ. ಅಕ್ಟೋಬರ್ 31ರಂದು ಈ ಟ್ರಿಬ್ಯೂನಲ್‌ಗಳಲ್ಲಿ 97,714 ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದವು. ಟ್ರಿಬ್ಯೂನಲ್ ನ ಆದೇಶಗಳನ್ನು ಪ್ರಶ್ನಿಸಿ ಗುವಾಹಟಿ ಹೈಕೋರ್ಟ್ ನಲ್ಲಿ 8,461 ಅರ್ಜಿಗಳು ದಾಖಲಾಗಿದ್ದವು.’’

ಹಾಗಾದರೆ ಆರೆಸ್ಸೆಸ್ ಕಣ್ಮಣಿ ಉಪಾಧ್ಯಾಯ್ ಹೇಳಿದ್ದ ಆ 5 ಕೋಟಿಗೂ ಹೆಚ್ಚಿನ ವಲಸಿಗರು, ಸಾಕ್ಷಾತ್ ಗೃಹ ಸಚಿವ ಅಮಿತ್ ಶಾ ಅವರು ಗುರುತಿಸಿದ್ದ 40 ಲಕ್ಷ ವಲಸಿಗರು, ಪ್ರಕಾಶ್ ಜೈಸ್ವಾಲ್ ಹೇಳಿದ್ದ ಆ 1.2 ಕೋಟಿ ವಲಸಿಗರು, ಕಿರಣ್ ರಿಜಿಜು ಅವರು ಹೇಳಿದ್ದ ಆ ಭರ್ತಿ 2 ಕೋಟಿ ಅಕ್ರಮ ವಲಸಿಗರು ...... ಅವರೆಲ್ಲಾ ಹಠಾತ್ತನೆ ಎಲ್ಲಿ ಮಾಯವಾಗಿ ಬಿಟ್ಟರು?

ಇಷ್ಟಾಗಿಯೂ ಮೋದಿಯವರು ದೇಶದ ಮುಸಲ್ಮಾನರ ಮೇಲೆ ಸಾರಾಸಗಟಾಗಿ ಅಕ್ರಮ ವಲಸಿಗರು ಎಂಬ ಘೋರ ಸುಳ್ಳು ಆರೋಪ ಹೊರಿಸುವ ಭಂಡ ಧೈರ್ಯ ತೋರಿದ್ದಾರೆ. ಮೆಚ್ಚಲೇಬೇಕು.

ಪ್ರಸ್ತುತ ಅರ್ಜಿಗಳ ವಿಚಾರಣೆಯ ವೇಳೆ ಜಸ್ಟಿಸ್ ಚಂದ್ರಚೂಡ್ ಅವರು, ಅಕ್ರಮ ವಲಸಿಗರ ಕುರಿತಾದ ಆರೋಪವನ್ನು ತಾವು ಗಂಭೀರವಾಗಿ ಪರಿಗಣಿಸುತ್ತಿರುವುದಾಗಿ ತಿಳಿಸಿ, ಅರ್ಜಿದಾರರು ಮತ್ತವರ ವಕೀಲರನ್ನುದ್ದೇಶಿಸಿ ಹೇಳಿದ ಕೆಲವು ಮಾತುಗಳು ಗಮನಾರ್ಹವಾಗಿವೆ:

‘‘ಅವರು (ಅಕ್ರಮ ವಲಸಿಗರು) ಬೇಕಾಬಿಟ್ಟಿಯಾಗಿ ಭಾರತದೊಳಗೆ ಬಂದು ನೆಲೆಸುವುದನ್ನು ನಾವು ಅನುಮತಿಸುವ ಹಾಗಿಲ್ಲ.... ನಮ್ಮ ಸಂಪನ್ಮೂಲಗಳು ಸೀಮಿತ .... ಪರಿಚ್ಛೇದ 6ಂ ಕುರಿತು ಯಾವ ಬಗೆಯ ತೀರ್ಪು ಬಂದರೂ, ನಮ್ಮದು ಸಾಂವಿಧಾನಿಕ ಪೀಠವಾಗಿರುವುದರಿಂದ, ಅಕ್ರಮ ವಲಸಿಗರ ವಿಷಯದಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ನಾವು ತಿಳಿಯಬಯಸುತ್ತೇವೆ.’’

‘‘ಅಕ್ರಮ ವಲಸಿಗರು ಎನ್ನಲಾಗುವವರನ್ನೆಲ್ಲಾ ಹಿಡಿದು ಹೊರದಬ್ಬಿ ಬಿಡಲು ನಮ್ಮದು ಸರ್ವಾಧಿಕಾರಿ ಸರಕಾರವೇನಲ್ಲ. ಈ ಪ್ರಕ್ರಿಯೆಯಲ್ಲಿ ನಿರಪರಾಧಿಗಳು ಬಲಿಪಶುಗಳಾಗುವ ಸಾಧ್ಯತೆ ಇರುವುದರಿಂದ ಸರಕಾರವು ಒಂದು ನಿರ್ದಿಷ್ಟ ಕಾನೂನು ಪ್ರಕ್ರಿಯೆಯನ್ನು ಪಾಲಿಸಬೇಕಾಗುತ್ತದೆ.’’

ಅಸ್ಸಾಮ್ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನುದ್ದೇಶಿಸಿ ನ್ಯಾಯಮೂರ್ತಿ ಚಂದ್ರಚೂಡ್ ಕೇಳಿದರು: ‘‘ನೀವು ಅಸ್ಸಾಮ್ ಬಗ್ಗೆ ಮಾತ್ರ ಯಾಕೆ ಮಾತನಾಡುತ್ತೀರಿ? ನೀವು ಪಶ್ಚಿಮ ಬಂಗಾಳವನ್ನು ಪ್ರಸ್ತಾಪಿಸದೆ ಹಾಗೆಯೇ ಬಿಟ್ಟು ಬಿಡುವುದಕ್ಕೆ, ಆ ರಾಜ್ಯದಲ್ಲಿ ಅಕ್ರಮ ವಲಸಿಗರು ಅಸ್ಸಾಮ್‌ಗಿಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿಸುವ ನಂಬಲರ್ಹ ಡೇಟಾ ಏನಾದರೂ ನಿಮ್ಮ ಬಳಿ ಉಂಟೇ?’’

ಐಟಿ ರಂಗದಲ್ಲಿ ವಿವಿಧ ರಾಜ್ಯಗಳ ನಡುವೆ ಭಾರೀ ದೊಡ್ಡ ಪ್ರಮಾಣದ ವಲಸೆ ನಡೆದಿದೆ. ಇದರಿಂದಾಗಿ ನಮ್ಮ ಸಂಸ್ಕೃತಿ ಬಾಧಿತವಾಗುತ್ತದೆಂದು ಯಾರೂ ವಾದಿಸುವಂತಿಲ್ಲ. ಭಾರತ ಎಂಬುದು ಒಂದೇ ಘಟಕ. ಇಲ್ಲಿಯ ಯಾವುದೇ ರಾಜ್ಯದವರು, ನಮ್ಮ ರಾಜ್ಯಕ್ಕೆ ವಲಸೆ ಬಂದರೆ ನಮ್ಮ ಸಂಸ್ಕೃತಿ ಹಾಳಾಗುತ್ತದೆಂದು ಹೇಳುವಂತಿಲ್ಲ.

ರಾಜ್ಯಗಳ ನಡುವೆ ನಡೆಯುವ ವಲಸೆಯನ್ನು ದೇಶಗಳ ನಡುವೆ ನಡುವೆ ನಡೆಯುವ ವಲಸೆಗೆ ಹೋಲಿಸಬಾರದು ಎಂಬುದು ಮುಖ್ಯ ನ್ಯಾಯಾಧೀಶರ ಪ್ರಧಾನ ಆಶಯವಾಗಿತ್ತು.

ಬಾಂಗ್ಲಾದೇಶವೇನು ಅಷ್ಟೊಂದು ದರಿದ್ರ ದೇಶವೇ?

2020ರಲ್ಲಿ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಜಿ.ಕೃಷ್ಣಾ ರೆಡ್ಡಿಯವರು ‘‘ಬಾಂಗ್ಲಾದೇಶದ ಸ್ಥಿತಿ ಹೇಗಿದೆಯೆಂದರೆ ಅಲ್ಲಿನ ಪ್ರಜೆಗಳಿಗೆ ನಾವು ಭಾರತದ ಪೌರತ್ವ ನೀಡಲು ಮುಂದಾದರೆ ಅಲ್ಲಿನ ಅರ್ಧ ಜನಸಂಖ್ಯೆ ಖಾಲಿಯಾಗಿ ಬಿಡುವುದು ಖಂಡಿತ’’ ಎಂದಿದ್ದರು. ಇದು ಸ್ವತಃ ಬೆಳೆಯಲಾಗದ ಮುಗ್ಧ ಕುಬ್ಜನೊಬ್ಬ ಇತರೆಲ್ಲರನ್ನು ಕುಬ್ಜರೆಂದು ಕರೆದು ನೆಮ್ಮದಿ ಪಟ್ಟಂತಿದೆ. ನಿಜವಾಗಿ ಬಾಂಗ್ಲಾದೇಶದ ಪರಿಸ್ಥಿತಿ ಯಾರಾದರೂ ಮರುಕ ತೋರಬೇಕಾದಷ್ಟು ಹೀನಾಯವೇನೂ ಆಗಿಲ್ಲ.

ನಮ್ಮ ದೇಶದ ಜನಸಂಖ್ಯೆ 140 ಕೋಟಿಯಷ್ಟಿದೆ ಮತ್ತು ಈ ವಿಷಯದಲ್ಲಿ ನಾವು ಜಗತ್ತಿನಲ್ಲೇ ನಂಬರ್ 1 ಸ್ಥಾನದಲ್ಲಿದ್ದೇವೆ. ಅತ್ತ ಬಾಂಗ್ಲಾದೇಶದ ಜನಸಂಖ್ಯೆ 17 ಕೋಟಿ ಮಾತ್ರ ಮತ್ತು ಈ ವಿಷಯದಲ್ಲಿ ಅದು ಜಗತ್ತಿನಲ್ಲಿ 8ನೇ ಸ್ಥಾನದಲ್ಲಿದೆ. ವಿಶ್ವ ಬ್ಯಾಂಕ್, ಐಎಂಎಫ್ ಮುಂತಾದ ಜಾಗತಿಕ ಸಂಸ್ಥೆಗಳು ಅಂಗೀಕರಿಸಿರುವ ಪ್ರಕಾರ ಕಳೆದ ದಶಕದಲ್ಲಿ ಬಾಂಗ್ಲಾ ದೇಶದ ಆರ್ಥಿಕತೆಯು ಕ್ಷಿಪ್ರ ಪ್ರಗತಿಯನ್ನು ಕಂಡಿದ್ದು, 2019ರಿಂದೀಚೆಗೆ ಬಾಂಗ್ಲಾ ದೇಶದ ತಲಾ ಜಿಡಿಪಿಯು ಸತತವಾಗಿ ಭಾರತಕ್ಕಿಂತ ಉತ್ತಮವಿದೆ. 2019ರಲ್ಲಿ ಏಶಿಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನವರು ಬಿಡುಗಡೆ ಗೊಳಿಸಿದ ಅಂಕಿ ಅಂಶಗಳ ಪ್ರಕಾರ ಆ ವರ್ಷ ಭಾರತದ ಪರ್ ಕ್ಯಾಪಿಟಾ (ತಲಾ) ಜಿಡಿಪಿ ಶೇ. 5.3ರಷ್ಟಿದ್ದರೆ ಬಾಂಗ್ಲಾದೇಶದ ತಲಾ ಜಿಡಿಪಿ ಶೇ. 8ರಷ್ಟಿತ್ತು. ವಲಸೆ ಹೋಗುವವರು ತಮಗಿಂತ ಕಡಿಮೆ ಆದಾಯವಿರುವ ದೇಶಕ್ಕೆ ವಲಸೆ ಹೋಗುವ ಸಾಧ್ಯತೆ ಎಷ್ಟಿದೆ?

ಬಾಂಗ್ಲಾ ದೇಶ ತುಂಬಾ ಸಂಪನ್ನ ದೇಶವೇನೂ ಅಲ್ಲ. ಬೆಲೆಯೇರಿಕೆ, ನಿರುದ್ಯೋಗ ಇತ್ಯಾದಿ ಸಮಸ್ಯೆಗಳು ಅಲ್ಲೂ ಗಂಭೀರ ಸ್ತರದಲ್ಲಿವೆ. ಆದರೆ ಸಾಮಾಜಿಕ ಹಾಗೂ ಆರ್ಥಿಕ ಸ್ಥಿರತೆಯನ್ನು ಅಳೆಯುವ ಅನೇಕ ಮಾಪಕಗಳ ದೃಷ್ಟಿಯಿಂದ ಆ ದೇಶದ ಸ್ಥಿತಿ ನಮಗಿಂತ ಉತ್ತಮವಾಗಿದೆ. 1.9 ಡಾಲರ್‌ಗಿಂತ ಕಡಿಮೆ ದೈನಿಕ ಆದಾಯ ಇರುವವರನ್ನು ಕಡುಬಡವರೆಂದು ಗುರುತಿಸುವ ಬಗ್ಗೆ ಜಾಗತಿಕ ಒಮ್ಮತವಿದೆ. ಈ ಮಾಪಕದ ಪ್ರಕಾರ ನೋಡಿದರೆ ಭಾರತದಲ್ಲಿ ಕಡುಬಡವರ ಸಂಖ್ಯೆ ಬಾಂಗ್ಲಾದೇಶಕ್ಕಿಂತ ತುಂಬಾ ಅಧಿಕವಿದೆ. ವಲಸೆ ಹೋಗುವವರು ಕಡುಬಡತನವನ್ನು ಅರಸಿಕೊಂಡು ಹೋಗುವ ಸಾಧ್ಯತೆ ತೀರಾ ಕಡಿಮೆ.

ಒಂದು ಸಮಾಜದಲ್ಲಿ ಒಬ್ಬ ವ್ಯಕ್ತಿಯ ಸರಾಸರಿ ಆಯುಷ್ಕಾಲ ಎಷ್ಟು ಎಂಬುದು ಆ ಸಮಾಜದ ಸ್ಥಿತಿ ಹೇಗಿದೆ ಎಂಬುದನ್ನು ಅಳೆಯುವ ಒಂದು ಸ್ಪಷ್ಟ ಮಾಪಕ. ಭಾರತದಲ್ಲಿ ಒಬ್ಬ ಮಹಿಳೆಯ ಸರಾಸರಿ ಆಯುಷ್ಯ 68.6 ವರ್ಷವಿದ್ದರೆ ಬಾಂಗ್ಲಾದೇಶದಲ್ಲಿ ಒಬ್ಬ ಮಹಿಳೆಯ ಸರಾಸರಿ ಆಯುಷ್ಯ 72.5 ವರ್ಷಗಳು. ಜಾಗತಿಕ ಲಿಂಗಾನುಪಾತದ ಇಂಡೆಕ್ಸ್ ಪ್ರಕಾರ 2020ರಲ್ಲಿ ಭಾರತವು 112ನೇ ಸ್ಥಾನದಲ್ಲಿದ್ದರೆ ಬಾಂಗ್ಲಾದೇಶವು 50ನೇ ಸ್ಥಾನದಲ್ಲಿದೆ. ಅಂದರೆ ಈ ವಿಷಯದಲ್ಲಿ ನಮ್ಮ ಸ್ಥಿತಿಯು ಅವರಿಗಿಂತ ದುಪ್ಪಟ್ಟು ಮಾತ್ರವಲ್ಲ ಅದಕ್ಕಿಂತಲೂ ಹೀನಾಯವಾಗಿದೆ. ಸ್ವೀಡನ್‌ನ ಪಾರ್ಲಿಮೆಂಟಿನಲ್ಲಿ ಮಹಿಳಾ ಸದಸ್ಯರ ಪ್ರಾತಿನಿಧ್ಯ ಶೇ. 46ರಷ್ಟಿದೆ. ಜಾಗತಿಕ ಮಟ್ಟದಲ್ಲಿ ಪಾರ್ಲಿಮೆಂಟುಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ. 26.2 ಇದೆ. ಆದರೆ ಭಾರತದ ಸಂಸತ್ತಿನಲ್ಲಿ ಮಹಿಳಾ ಸದಸ್ಯರಿಗಿರುವ ಪ್ರಾತಿನಿಧ್ಯ ಕೇವಲ ಶೇ. 15. ನಮಗೆ ಹೋಲಿಸಿದರೆ ಬಾಂಗ್ಲಾದೇಶದ ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ. 21ರಷ್ಟಿದೆ. 2023ರ ಜಾಗತಿಕ ಹಸಿವು ಸೂಚ್ಯಂಕ ನೋಡಿದರೆ ಅಲ್ಲಿ ಭಾರತವು 125 ದೇಶಗಳ ಪಟ್ಟಿಯಲ್ಲಿ 111ನೇ ಸ್ಥಾನದಲ್ಲಿದೆ. ಅತ್ತ ಬಾಂಗ್ಲಾದೇಶವು ಈ ಸೂಚ್ಯಂಕದಲ್ಲಿ 81ನೇ ಸ್ಥಾನದಲ್ಲಿ ಅಂದರೆ ನಮಗಿಂತ ತುಂಬಾ ಉತ್ತಮ ಸ್ಥಿತಿಯಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎ.ಎಸ್. ಪುತ್ತಿಗೆ

contributor

Similar News