ಭರವಸೆಯ ಬೆಳಕು: ಇ-ತ್ಯಾಜ್ಯದಿಂದ ಚಿನ್ನ!

ಇ-ತ್ಯಾಜ್ಯದಿಂದ ಚಿನ್ನವನ್ನು ಪ್ರೊಟೀನ್ ಅಮಿಲಾಯ್ಡ್ ನ್ಯಾನೊಫಿಬ್ರಿಲ್ ಏರ್‌ಜೆಲ್‌ನೊಂದಿಗೆ ಹಾಲೊಡಕುಗಳಿಂದ ಪಡೆಯಲಾಗುತ್ತದೆ. ಇದು ಗಿಣ್ಣು (ಚೀಸ್) ತಯಾರಿಕೆಯ ಉಪ ಉತ್ಪನ್ನವಾಗಿದೆ. ಏರ್‌ಜೆಲ್ ಚಿನ್ನದ ಸ್ಪಂಜಿನಂತೆ ಕಾರ್ಯನಿರ್ವಹಿಸುತ್ತದೆ ಎಂಬುದು ಸಂಶೋಧಕರ ಅಭಿಪ್ರಾಯ. ಸಂಶೋಧಕರು 20 ತಿರಸ್ಕರಿಸಿದ ಕಂಪ್ಯೂಟರ್ ಮದರ್‌ಬೋರ್ಡ್‌ಗಳಿಂದ ಸುಮಾರು ಅರ್ಧ ಗ್ರಾಂ ತೂಕದ 22-ಕ್ಯಾರೆಟ್ ಗುಣಮಟ್ಟದ ಶುದ್ಧ ಚಿನ್ನವನ್ನು ಹೊರತೆಗೆದಿದ್ದಾರೆ.

Update: 2024-05-05 10:13 GMT

ಮೊನ್ನೆ ಬೆಳ್ಳಂಬೆಳಗ್ಗೆ ನಮ್ಮ ಹೊಳಗುಂದಿಯಲ್ಲಿ ಮಳೆಯಾಯಿತು. ಬಿರುಬೇಸಿಗೆಯಲ್ಲಿ ಬೆಳಗ್ಗೆ ಸುರಿದ ಮಳೆ ಭೂಮಿಗೆ ತಂಪೆರೆದಿತ್ತು. ಜೊತೆಗೆ ನನ್ನನ್ನು ಬಾಲ್ಯಕ್ಕೆ ಕರೆದೊಯ್ದಿತು. ನಾವು ಬಾಲಕರಿದ್ದಾಗ ನಮ್ಮೂರಿನಲ್ಲಿ ಭೀಮಜ್ಜ ಎಂಬ ತೆಳುದೇಹದ ವ್ಯಕ್ತಿಯಿದ್ದ. ಆತ ಇಡೀ ಊರಿನ ಜನರಿಗೆ ಚಿರಪರಿಚಿತ. ಮಕ್ಕಳಿಗೆ, ಮಹಿಳೆಯರಿಗೆ, ವಯಸ್ಕರಿಗೆ, ಮುದುಕರಿಗೆ ಹೀಗೆ ಎಲ್ಲಾ ವಿಧದ ಜನರಿಗೂ ಆತ ಬೇಕಾಗಿದ್ದ. ಬೆಳಗ್ಗಿನ ಜಾವ ಮಳೆ ಸುರಿದರೆ ಸಾಕು, ಭೀಮಜ್ಜ ಸೂರ್ಯ ಹುಟ್ಟೋಕೂ ಮುಂಚೆ ಊರಿಗೆ ಹೊಂದಿಕೊಂಡಂತೆ ಇದ್ದ ಗೌಡರ ಹೊಲದಲ್ಲಿ ಹಾಜರಿರುತ್ತಿದ್ದ. ಏಕೆಂದರೆ ಆ ಹೊಲದಲ್ಲಿ ಆತನಿಗೆ ಬಂಗಾರದ ತುಂಡುಗಳು ಸಿಗುತ್ತಿದ್ದವಂತೆ. ಬೆಳಗ್ಗಿನ ಜಾವ ಅಥವಾ ಬೆಳಗ್ಗೆ ಮುಂಗಾರು ಮಳೆಯಾದಾಗ ಮಾತ್ರ ಭೀಮಜ್ಜನಿಗೆ ಬಂಗಾರದ ಸಣ್ಣ ಸಣ್ಣ ತುಂಡುಗಳು ಸಿಗುತ್ತಿದ್ದವಂತೆ. ಅವುಗಳನ್ನು ಆರಿಸಿ ತಂದು ಸಾಹುಕಾರ ಮಂದಿಗೆ ಮಾರಿ ಜೀವನ ಸಾಗಿಸುತ್ತಿದ್ದ ಎಂಬ ಸುದ್ದಿ ಇಡೀ ಊರಲ್ಲಿತ್ತು. ಸಾಹುಕಾರರು ತಮ್ಮ ಮನೆಯ ಕಸವನ್ನು ತಿಪ್ಪೆಗೆ ಹಾಕುತ್ತಿದ್ದರು. ಕಸದಲ್ಲಿದ್ದ ಸಣ್ಣ ಸಣ್ಣ ಬಂಗಾರದ ತುಣುಕುಗಳು ತಿಪ್ಪೆಯ ಗೊಬ್ಬರದ ಮೂಲಕ ಹೊಲ ಸೇರುತ್ತಿದ್ದವು. ಇದನ್ನರಿತಿದ್ದ ಭೀಮಜ್ಜ ಮಳೆ ಬಿದ್ದ ದಿನ ಬೆಳಗ್ಗೆ ಹೊಲದಲ್ಲಿ ಬಂಗಾರದ ತುಣುಕುಗಳನ್ನು ಹುಡುಕುತ್ತಿದ್ದನಂತೆ.

ಇದು ಎಷ್ಟು ನಿಜವೋ ನಾನರಿಯೆ. ಆದರೆ ಈಗ ಇಲ್ಲಿ ಪ್ರಸ್ತಾಪಿಸಿದ ಬಂಗಾರಕ್ಕೂ, ಬೇಡ ಎಂದು ಬಿಸಾಕಿದ ಕಸಕ್ಕೂ ಸಂಬಂಧ ಇದೆ. ಕಸದಿಂದ ರಸ ತೆಗೆಯುವ ವಿದ್ಯೆ ನಮಗೆಲ್ಲಾ ಚೆನ್ನಾಗಿ ಗೊತ್ತಿದೆ. ಬೇಡವಾದ ವಸ್ತುವನ್ನು ತ್ಯಾಜ್ಯ ಎಂದು ನಿರ್ಧರಿಸಿ ಎಸೆಯುತ್ತೇವೆ. ಆದರೆ ಅದೇ ಕಸ ಇಂದು ಅಮೂಲ್ಯ ಸಂಪತ್ತು ಎಂಬುದು ಸಾಬೀತಾಗುತ್ತಿರುವುದರಿಂದ ಅನೇಕರ ಚಿತ್ತ ಈಗ ಕಸದತ್ತ ನೆಟ್ಟಿದೆ.

ಇತ್ತೀಚಿನ ವರ್ಷಗಳಲ್ಲಿ ಇಲೆಕ್ಟ್ರಾನಿಕ್ ಸಾಧನಗಳ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಹೀಗೆ ಬಳಕೆಯಾದ ಹೆಚ್ಚಿನ ಇಲೆಕ್ಟ್ರಾನಿಕ್ ಸಾಧನಗಳ ರಿಪೇರಿ ಕಷ್ಟಸಾಧ್ಯ ಎಂದಾದಾಗ ಅವುಗಳನ್ನು ಬಿಸಾಕುತ್ತೇವೆ. ಇ-ಕಸ ಎಂದು ಕರೆಸಿಕೊಳ್ಳುವ ವಿದ್ಯುನ್ಮಾನ ತ್ಯಾಜ್ಯವು ಪರಿಸರಕ್ಕೆ ಮಾರಕ ಎನಿಸುವಂತಾಗಿದೆ. ಹೀಗೆ ಬಳಸಿ ಬಿಸಾಡಿದ ಇ-ತ್ಯಾಜ್ಯದಿಂದ ಬಂಗಾರ ತೆಗೆಯುವ ಸಾಹಸಕ್ಕೆ ಸ್ವಿಟ್ಸರ್‌ಲ್ಯಾಂಡ್ ಮತ್ತು ಕೊರಿಯಾದ ಸಂಶೋಧಕರು ಮುಂದಾಗಿದ್ದಾರೆ. ಸ್ವಿಟ್ಸರ್‌ಲ್ಯಾಂಡ್‌ನ ಇಟಿಎಚ್ ಜ್ಯೂರಿಚ್‌ನ ಸಂಶೋಧಕರು ಹಾಗೂ ಕೊರಿಯಾ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ಸಂಶೋಧಕರು ಇ-ತ್ಯಾಜ್ಯದಿಂದ ಚಿನ್ನವನ್ನು ಹೊರತೆಗೆಯುವ ಸಮರ್ಥನೀಯ ವೆಚ್ಚ ಮತ್ತು ಪರಿಣಾಮಕಾರಿ ವಿಧಾನವನ್ನು ವಿವರಿಸಿದ್ದಾರೆ.

ಹಳೆಯ ವಿದ್ಯುತ್ ಉಪಕರಣಗಳು, ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ಸರ್ಕ್ಯೂಟ್ ಬೋರ್ಡ್ ಗಳು, ಬ್ಯಾಟರಿಗಳು, ಆಟಿಕೆಗಳು, ಗೃಹೋಪಯೋಗಿ ಉಪಕರಣಗಳು, ಇಲೆಕ್ಟ್ರಾನಿಕ್ ರೇಜರ್‌ಗಳು, ಕೇಬಲ್‌ಗಳು, ಹೇರ್ ಡ್ರೈಯರ್‌ಗಳು, ರೂಟರ್‌ಗಳು, ಸ್ಪೀಕರ್‌ಗಳು ಮತ್ತು ಫೈರ್ ಅಲಾರ್ಮ್ ಮುಂತಾದ ಇಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿದ ನಂತರ ಬಿಸಾಕುತ್ತೇವೆ. ಇದು ಇ-ತ್ಯಾಜ್ಯವಾಗಿ ನೆಲ ಭರ್ತಿಗೆ ಸೇರುತ್ತದೆ.

ಪ್ರತೀ ವರ್ಷ ಜಾಗತಿಕವಾಗಿ 50 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಇಲೆಕ್ಟ್ರಾನಿಕ್ ತ್ಯಾಜ್ಯವನ್ನು ಉತ್ಪಾದಿಸಲಾಗುತ್ತದೆ. ಇದು 2030ರ ವೇಳೆಗೆ 74 ಮಿಲಿಯನ್ ಟನ್‌ಗಳನ್ನು ತಲುಪುವ ನಿರೀಕ್ಷೆ ಇದೆ. ಈಗ ಉತ್ಪತ್ತಿಯಾಗುವ 50 ಮಿಲಿಯನ್ ಟನ್‌ನಲ್ಲಿ ಶೇ. 20ರಷ್ಟನ್ನು ಮರುಬಳಕೆ ಮಾಡಲಾಗುತ್ತದೆ. ಇ-ತ್ಯಾಜ್ಯವು ಸಾಮಾನ್ಯವಾಗಿ ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ, ತಾಮ್ರ, ಅಲ್ಯೂಮಿನಿಯಂ ಮತ್ತು ಕಬ್ಬಿಣದಂತಹ ಅಮೂಲ್ಯವಾದ ಲೋಹಗಳನ್ನು ಹೊಂದಿರುತ್ತದೆ. ಆದರೆ ಈ ಲೋಹಗಳನ್ನು ತ್ಯಾಜ್ಯದಿಂದ ಪರಿಣಾಮಕಾರಿಯಾಗಿ ತೆಗೆದುಹಾಕುವುದು ಕಷ್ಟದ ಕೆಲಸವಾಗಿದೆ.

ಇಂತಹ ಕಷ್ಟದ ಕೆಲಸವನ್ನು ಸಂಶೋಧಕರು ಈಗ ಇಷ್ಟಪಟ್ಟು ಮಾಡುತ್ತಿದ್ದಾರೆ. ಏಕೆಂದರೆ ಇ-ತ್ಯಾಜ್ಯದಿಂದ ದೊರೆಯುವ ಚಿನ್ನವು ಶುದ್ಧ ಚಿನ್ನವಾಗಿದೆ. ಕಸವನ್ನು ಚಿನ್ನವಾಗಿ ಪರಿವರ್ತಿಸುವುದು ಒಂದು ರೀತಿಯ ರಸವಿದ್ಯೆಯಂತಿದೆ. ಆದರೆ ಸಂಶೋಧಕರು ಸಾಮಾನ್ಯ ಇಲೆಕ್ಟ್ರಾನಿಕ್ ತ್ಯಾಜ್ಯದಿಂದ ಚಿನ್ನದ ಗಟ್ಟಿಗಳನ್ನು ಹೊರತೆಗೆಯಲು ಸಮರ್ಥನೀಯ ವಿಧಾನವನ್ನು ಪ್ರದರ್ಶಿಸಿದ್ದಾರೆ.

ಇ-ತ್ಯಾಜ್ಯದಿಂದ ಚಿನ್ನವನ್ನು ಪ್ರೊಟೀನ್ ಅಮಿಲಾಯ್ಡ್ ನ್ಯಾನೊಫಿಬ್ರಿಲ್ ಏರ್‌ಜೆಲ್‌ನೊಂದಿಗೆ ಹಾಲೊಡಕುಗಳಿಂದ ಪಡೆಯಲಾಗುತ್ತದೆ. ಇದು ಗಿಣ್ಣು (ಚೀಸ್) ತಯಾರಿಕೆಯ ಉಪ ಉತ್ಪನ್ನವಾಗಿದೆ. ಏರ್‌ಜೆಲ್ ಚಿನ್ನದ ಸ್ಪಂಜಿನಂತೆ ಕಾರ್ಯನಿರ್ವಹಿಸುತ್ತದೆ ಎಂಬುದು ಸಂಶೋಧಕರ ಅಭಿಪ್ರಾಯ. ಸಂಶೋಧಕರು 20 ತಿರಸ್ಕರಿಸಿದ ಕಂಪ್ಯೂಟರ್ ಮದರ್‌ಬೋರ್ಡ್‌ಗಳಿಂದ ಸುಮಾರು ಅರ್ಧ ಗ್ರಾಂ ತೂಕದ 22-ಕ್ಯಾರೆಟ್ ಗುಣಮಟ್ಟದ ಶುದ್ಧ ಚಿನ್ನವನ್ನು ಹೊರತೆಗೆದಿದ್ದಾರೆ.

ಸಂಶೋಧಕರು ಹಳೆಯ ಕಂಪ್ಯೂಟರ್ ಮದರ್‌ಬೋರ್ಡ್ ಗಳಿಂದ ಲೋಹದ ಭಾಗಗಳನ್ನು ಹೊರತೆಗೆದರು. ಲೋಹಗಳನ್ನು ಅಯಾನೀಕರಿಸಲು ಅಥವಾ ಅವುಗಳನ್ನು ಧನಾತ್ಮಕ ಮತ್ತು ಋಣಾತ್ಮಕ ಅಯಾನುಗಳಾಗಿ ಬೇರ್ಪಡಿಸಲು ಆಮ್ಲದಲ್ಲಿ ಅದ್ದಿ ಕರಗಿಸಿದರು. ಪ್ರೊಟೀನ್ ಫೈಬ್ರಿಲ್ ಸ್ಪಾಂಜ್‌ನ್ನು ಲೋಹದ ಅಯಾನು ದ್ರಾವಣದಲ್ಲಿ ಇರಿಸಿದಾಗ ಚಿನ್ನದ ಅಯಾನುಗಳು ಅದಕ್ಕೆ ಅಂಟಿಕೊಂಡವು. ಇತರ ಲೋಹಗಳಾದ ತಾಮ್ರ ಮತ್ತು ಕಬ್ಬಿಣವೂ ಸ್ಪಂಜಿನಿಂದ ಹೀರಿಕೊಂಡಾಗ, ಚಿನ್ನವು ಹೆಚ್ಚು ಪರಿಣಾಮಕಾರಿಯಾಗಿ ಹೀರಿಕೊಂಡಿದ್ದನ್ನು ಸಂಶೋಧಕರು ಗಮನಿಸಿದರು.

ಪ್ರೊಟೀನ್ ಫೈಬ್ರಿಲ್ ಸ್ಪಾಂಜು ಚಿನ್ನದ ಅಯಾನುಗಳನ್ನು ಹೀರಿಕೊಂಡ ನಂತರ ಅದಕ್ಕೆ ಶಾಖ ನೀಡಲಾಯಿತು. ಅಯಾನುಗಳು ಚಕ್ಕೆಗಳಾಗಿ ರೂಪುಗೊಂಡವು. ಅಂತಿಮವಾಗಿ ಸುಮಾರು 500 ಮಿ.ಗ್ರಾಂ. ದ್ರವ್ಯರಾಶಿಯೊಂದಿಗೆ ಚಿನ್ನದ ಗಟ್ಟಿಯಾಗಿ ಪರಿವರ್ತನೆಯಾಯಿತು. ಹೀಗೆ ತಯಾರಾದ ಚಿನ್ನವು 21 ಅಥವಾ 22 ಕ್ಯಾರೆಟ್ ಗುಣಮಟ್ಟವನ್ನು ಹೊಂದಿದೆ ಎಂಬುದನ್ನು ಸಂಶೋಧಕರು ಪ್ರತಿಪಾದಿಸಿದ್ದಾರೆ.

ಇ-ತ್ಯಾಜ್ಯದಿಂದ ಚಿನ್ನವನ್ನು ಹೊರತೆಗೆಯುವುದು ಸ್ಪಷ್ಟ ಕಾರಣಕ್ಕಾಗಿ ಅಪೇಕ್ಷಣೀಯವಾಗಿದೆ. ಚಿನ್ನವು ಮೌಲ್ಯಯುತವಾಗಿದೆ. ಬೆಲೆಗಳು ಬದಲಾಗಬಹುದು. ಆದರೆ ಅದರ ಅಪರಿಮಿತ ಉಪಯೋಗಗಳು ಮಾತ್ರ ಬದಲಾಗುವುದಿಲ್ಲ. ಇಂದು ಚಿನ್ನವು ಕೇವಲ ಆಭರಣ ದ್ರವ್ಯವಾಗಿ ಉಳಿದಿಲ್ಲ. ಬದಲಾಗಿ ಅದು ಇತ್ತೀಚೆಗೆ ಇಲೆಕ್ಟ್ರಾನಿಕ್ಸ್, ಮೈಕ್ರೋಇಲೆಕ್ಟ್ರಾನಿಕ್ಸ್, ಏರೋಸ್ಪೇಸ್, ಮೆಡಿಸಿನ್, ಬಯೋಟೆಕ್ನಾಲಜಿ ಮತ್ತು ನ್ಯಾನೊಟೆಕ್ನಾಲಜಿಯಂತಹ ಕ್ಷೇತ್ರಗಳಲ್ಲಿ ಅದರ ತಾಂತ್ರಿಕ ಅನ್ವಯಿಕೆಗಳಿಗಾಗಿ ಬಳಕೆಯಾಗುತ್ತಿದೆ. ಅಲ್ಲದೆ ಯಾವುದೇ ಲೋಹದಂತೆ ಚಿನ್ನವು ಸಹ ನವೀಕರಿಸಲಾಗದ ಸಂಪನ್ಮೂಲವಾಗಿದೆ. ದಿನೇ ದಿನೇ ಬಳಕೆಗೆ ಅನುಗುಣವಾಗಿ ಬೇಡಿಕೆ ಹೆಚ್ಚುತ್ತಲೇ ಇದೆ. ಆದರೆ ಪೂರೈಕೆ ಮಾತ್ರ ಸೀಮಿತವಾಗಿದೆ. ಈ ಕಾರಣಗಳಿಂದ ಪರ್ಯಾಯ ವಿಧಾನಗಳಿಂದ ಚಿನ್ನವನ್ನು ಹೊರತೆಗೆಯುವುದು ಅಪೇಕ್ಷಣೀಯವಾಗಿದೆ.

ಪ್ರಸಕ್ತ ದಿನಮಾನಗಳಲ್ಲಿ ತಂತ್ರಜ್ಞಾನದ ಸಾಮರ್ಥ್ಯವು ವಿಸ್ತಾರಗೊಳ್ಳುತ್ತಿದೆ. ವಿಸ್ತರಿಸುತ್ತಿರುವ ತಂತ್ರಜ್ಞಾನದ ಅನ್ವಯಿಕೆಗಳನ್ನು ಬಳಸಿಕೊಂಡು ಇ-ತ್ಯಾಜ್ಯದ ಪ್ರಭಾವವನ್ನು ಕಡಿಮೆ ಮಾಡುವುದು ಮತ್ತು ಅಮೂಲ್ಯ ಸರಕುಗಳನ್ನು ಸಂರಕ್ಷಿಸುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ.

ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಇ-ತ್ಯಾಜ್ಯ ಮರುಬಳಕೆಯ ಆಯ್ಕೆಯು ಒಂದು ದೊಡ್ಡ ಹೆಜ್ಜೆಯಾಗಿದೆ. ಎಲ್ಲಾ ಸರಕುಗಳ ಬಳಕೆಯನ್ನು ಕಡಿಮೆ ಮಾಡಬೇಕು, ಅದರಲ್ಲೂ ಇಲೆಕ್ಟ್ರಾನಿಕ್ ವಸ್ತುಗಳ ಬಳಕೆಗೆ ಮಿತಿಹಾಕಬೇಕು ಎಂದು ಆಗಾಗ ಚರ್ಚಿಸುತ್ತಿರುತ್ತೇವೆ. ಇತ್ತೀಚಿನ ವರ್ಷಗಳಲ್ಲಿ ಇಲೆಕ್ಟ್ರಾನಿಕ್ ವಸ್ತುಗಳ ಮರುಬಳಕೆಯನ್ನು ಉತ್ತೇಜಿಸುವ ಹಲವಾರು ಉಪಕ್ರಮಗಳು ಕಂಡುಬಂದಿವೆ. ಈ ಉಪಕ್ರಮಗಳು ಒಂದಿಷ್ಟು ಭರವಸೆಯ ಬೆಳಕಾಗುತ್ತಿರುವುದು ಸಂತಸ ತಂದಿದೆ. ಅಂತಹ ಭರವಸೆಯ ಬೆಳಕಲ್ಲಿ ಚಿನ್ನದ ಮರುಬಳಕೆಯು ಅಗಾಧವಾಗಿ ಬೆಳೆಯಲಿ ಎಂಬುದೇ ನಮ್ಮ ಆಶಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಬಿ. ಗುರುಬಸವರಾಜ

contributor

Similar News