ಸಹಜ ಹೆರಿಗೆಯ ಪದ್ಯಗಳು...

Update: 2016-01-04 09:46 GMT

"ಹಳ್ಳ-ಕೊಳ್ಳಗಳು; ಡೊಣಿ-ಡೊಳ್ಳಗಳು
ಸೇರ ಬಂದರೆ ನದಿಯೇ ಸೇರಬೇಕು
ಸಂಗಮವೆನಿಸುವ ಸಂದರ್ಭ ಬಂದರೆ
ನಿನ್ನ ಕುರುಹನು ತೊರೆದು ಒಂದಾಗಬೇಕು....''

 
""...ಹಝರತ್ ಅಲಿ ದೇಗಿನಾಳ ಅವರ 'ನನ್ನ ಜೀವನ ನದಿ' ಸಂಕಲನದಲ್ಲಿರುವ ಕವಿತೆಗಳ ಮಹದುದ್ದೇಶವೇ ಕುರುಹನ್ನು ಕಳೆದುಕೊಳ್ಳುತ್ತಾ ಮನುಷ್ಯತ್ವಕ್ಕೆ ಹತ್ತಿರವಾಗುತ್ತಾ ಹೋಗುವುದು. ಬಿಜಾಪುರ ಜಿಲ್ಲೆಯಿಂದ ಹೊರ ಬಂದಿರುವ ಅಲಿಯ ಪ್ರತಿ ಕವಿತೆಗಳಲ್ಲೂ ಉತ್ತರಕರ್ನಾಟಕದ ಸೊಗಡಿವೆ. ''ಸಿಜರಿನಗಿಂತ ಸಹಜ ಹೆರಿಗೆ ಸುಂದರವಾದದ್ದು. ಇಲ್ಲಿಯ ಯಾವ ಕವಿತೆಯನ್ನೂ ನಾನು ತಿಣುಕಿ ತಿಣುಕಿ ಸಿಜರಿನ ಮಾಡಿಸಿಕೊಂಡು ಹೆತ್ತಿಲ್ಲ....'' ಎಂದು ಬರೆಯುವ ಕವಿಯ ಮುಗ್ಧತೆ ಮತ್ತು ಅವರು ಬಳಸುವ ಮಣ್ಣಿಂದ ಎದ್ದ ಹಸಿ ಭಾಷೆಯೇ ಇಲ್ಲಿನ ಹೆಗ್ಗಳಿಕೆ.

ವರ ಕುನ್ನಿ ಗೆಳತ್ಯಾರ ಜೋಡಿ
ಬೂದಿಯೊಳಗ ಮಲಕೊಂಡು
ಪ್ರೇಮಲೋಕದೊಳಗ ಜಾರಿರೈಡ ಮಾಡತೈತಿ
ಬಂಗಲೆ ಕುನ್ನಿ ಬಂಗಲೆದೊಳಗಾದಿ ಮ್ಯಾಲ ಮಲಕೊಂಡು

""ಹನಿಮೂನ ಮಾಡಿದಾಂಗ ಕನಸ ಕಾಣತೈತಿ...'' ಬೀದಿಯ ನಾಯಿ ಮತ್ತು ಶ್ರೀಮಂತರ ಮನೆಯ ನಾಯಿಯನ್ನು ರೂಪಕವಾಗಿಟ್ಟುಕೊಂಡು, ಮನುಷ್ಯನ ಸಹಜ ಸಂತೋಷ ಮತ್ತು ಶ್ರೀಮಂತಿಕೆಯ ಕೃತಕ ವೈಭವಗಳನ್ನು ಕವಿ ಅಣಕಿಸುತ್ತಾರೆ.

ಪ್ಯಾಟಿ ಮಾಡತೈತಿ ಡೌಲ
ಸುಣ್ಣದ ನೀರ ಆಗೇತಿ ಹಾಲ
ಹಳ್ಳಿಯ ಬದುಕು ರಿಯಲ್ಲ


"ಪ್ಯಾಟಿಯ ಬದುಕು ಬರಿ ರೀಲ...'' ಎಂದು ಕವಿ ಹಳ್ಳಿಯ ತಾಜಾತನವನ್ನು ಎತ್ತಿ ಹಿಡಿಯುವ ಸಂದರ್ಭದಲ್ಲಿ ಬಳಸುವ ತಾಜಾ ಭಾಷೆ ಕವಿತೆಯ ಸಹಜ ನಡೆಗೆ ಪೂರಕವಾಗಿದೆ. ಇಲ್ಲಿನ ಭಾಷೆಯ ಸೊಗಡೇ ಕವಿತೆಯ ಲಾಲಿತ್ಯ ಮತ್ತು ಅಂತಸ್ಸತ್ವವಾಗಿದೆ. ನವೋದಯದ ಪ್ರಭಾವ ಕವಿತೆಗಳ ಮೇಲೆ ದಟ್ಟವಾಗಿದೆ. ಆದರೆ ಇಲ್ಲಿನ ಕವಿತೆಗಳು ಆ ರಮ್ಯತೆಯಲ್ಲಿ ಕೊಚ್ಚಿಕೊಂಡು ಹೋಗಿಲ್ಲ. ವರ್ತಮಾನದ ಬೇರನ್ನು ಗಟ್ಟಿಯಾಗಿ ಹಿಡಿದುಕೊಂಡಿವೆ. ವಾಸ್ತವಕ್ಕೆ ಮುಖಾಮುಖಿಯಾಗುವ ಹಲವು ಕವಿತೆಗಳು ನಮ್ಮನ್ನು ತಟ್ಟುತ್ತವೆ. ದೇಶಪ್ರೇಮ, ವಿಡಂಬನೆ, ಪ್ರಕೃತಿ ಪ್ರೇಮ ಎಲ್ಲವನ್ನೂ ಕವಿ ಇಲ್ಲಿ ಕವಿತೆಯಾಗಿಸುವ ಪ್ರಯತ್ನವನ್ನು ಮಾಡಿದ್ದಾರೆ. ನಾವ್ರೀಯಪ್ಪಾ ಮುಸಲ್ಮಾನ್ರು' ಕವಿತೆ ಮುಸಲ್ಮಾನ ಕವಿಯೊಬ್ಬನ ಒಳಗಿನ ಅಭದ್ರತೆ, ತಲ್ಲಣಗಳನ್ನು ಹೇಳುತ್ತಲೇ,

ನಾವ್ರಿಯಪ್ಪಾ ಮುಸಲ್ಮಾನ್ರು
ಮನಸ ಶುದ್ಧ ಇದ್ದವ್ರುಪ್ತ ಭಕ್ತ ಹನುಮಂತನಂಗ
ದೇಶಭಕ್ತಿ ಇಟಗೊಂಡವ್ರ
ಪರೀಕ್ಷೆ ಮಾಡೇ ನೋಡೂಣಂದ್ರ
 ಎದಿ ಹರದು ತೋರಸಿತೀವು
...'

ಎಂಬ ಬೇಡಿಕೆ ಪುಸ್ತಕ ಮಡಚಿಟ್ಟ ಮೇಲೂ ನಮ್ಮನ್ನು ಕಾಡುತ್ತವೆ. ಕಾವ್ಯ ಪ್ರಕಾಶನ ಧಾರವಾಡ ಪ್ರಕಟಿಸಿರುವ ಈ ಕೃತಿಯ ಮುಖಬೆಲೆ 100 ರೂ. ಆಸಕ್ತರು 89712 20346 ದೂರವಾಣಿಯನ್ನು ಸಂಪರ್ಕಿಸಬಹುದು.


 

        
    

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News