ಮೂಲಸೌಕರ್ಯಗಳಿಲ್ಲದ ಕಾನೂನು ಕಾಲೇಜುಗಳನ್ನು ಮುಚ್ಚಿ ಬಿಸಿಐಗೆ ಸಿಜೆಐ ಸೂಚನೆ

Update: 2016-01-08 18:33 GMT

ಹೊಸದಿಲ್ಲಿ,ಜ.8: ಸೂಕ್ತ ಮೂಲಸೌಕರ್ಯಗಳಿಲ್ಲದ ಕಾನೂನು ಕಾಲೇಜುಗಳ ವಿರುದ್ಧ ಕ್ರಮಗಳನ್ನು ಕೈಗೊಂಡು ಅವುಗಳನ್ನು ಮುಚ್ಚಿಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರು ಶುಕ್ರವಾರ ಬಾರ್ ಕೌನ್ಸಿಲ್ ಆಫ್ ಇಂಡಿಯಾ(ಬಿಸಿಐ)ಕ್ಕೆ ಕರೆ ನೀಡಿದರು.
 ಬಿಸಿಐ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಬೋಧಕ ವೃಂದ ಮತ್ತು ಗ್ರಂಥಾಲಯಗಳು ಇಲ್ಲದ ಕಾನೂನು ಕಾಲೇಜುಗಳಿವೆ. ಅಲ್ಲಿ ವಿದ್ಯಾರ್ಥಿಗಳಿಗೆ ಹಾಜರಾತಿಯೂ ಇರುವುದಿಲ್ಲ. ಹಣವನ್ನೊಂದು ನೀಡಿಬಿಟ್ಟರೆ ಉಳಿದಿದ್ದಲ್ಲವನ್ನೂ ತಾವೇ ಮಾಡಿ ಪದವಿಯನ್ನು ಕೈಗೊಪ್ಪಿಸುವ ಕಾಲೇಜುಗಳೂ ಇವೆ ಎಂದು ತಾನು ಭಾವಿಸಿದ್ದೇನೆ ಎಂದರು.
   ಇಂತಹುದನ್ನು ವಕೀಲರಾಗಿ ನೀವು ಹೇಗೆ ಸಹಿಸಿಕೊಳ್ಳುತ್ತೀರಿ? ಇಂತಹ ಕಾಲೇಜುಗಳನ್ನು ಮುಚ್ಚಿಸುವುದು ಬಿಸಿಐ ಮತ್ತು ಬಾರ್ ಕೌನ್ಸಿಲ್‌ಗಳ ಮಹತ್ತರ ಜವಾಬ್ದಾರಿಯಾಗಿದೆ ಎನ್ನುವುದು ತನ್ನ ಅಭಿಪ್ರಾಯ. ಪ್ರವೇಶ ಗುಣಮಟ್ಟ ಖಂಡಿತವಾಗಿಯೂ ಹೆಚ್ಚುತ್ತದೆ ಎಂದು ತನಗೆ ಭರವಸೆಯಿದೆ ಎಂದು ಅವರು ಹೇಳಿದರು.
ವಕೀಲ ವೃತ್ತಿಗೆ ಅಗೌರವವನ್ನು ತರುವ ವಕೀಲರನ್ನು ತೆಗೆದು ಹಾಕುವುದು ಬಿಸಿಐಗೆ ಸವಾಲಿನ ಕೆಲಸವಾಗಿದೆ ಎಂದ ಅವರು,ವಕೀಲ ವೃತ್ತಿ ಗೌರವವನ್ನು ಹೆಚ್ಚಿಸುತ್ತದೆ ಎಂಬ ಏಕಮಾತ್ರ ಕಾರಣದಿಂದ ಈ ಕ್ಷೇತ್ರವನ್ನು ಪ್ರವೇಶಿಸಿರುವ ಕೆಲವರಿದ್ದಾರೆ ಎಂದರು. ಬಿಸಿಐ ತನ್ನ ಘನತೆಯನ್ನು ಉಳಿಸಿಕೊಳ್ಳುವಂತಾಗಲು ಇಂತಹ ಶಕ್ತಿಗಳನ್ನು ಗುರುತಿಸಿ ಕಿತ್ತು ಹಾಕಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News