ರಾಷ್ಟ್ರೀಯ ಗ್ರಾಹಕ ವ್ಯವಹಾರಗಳ ಸಂಶೋಧನಾ ಕೇಂದ್ರ ಸ್ಥಾಪನೆ: ಸಚಿವ ಪಾಸ್ವಾನ್

Update: 2016-01-16 18:14 GMT

ಬೆಂಗಳೂರು, ಜ.16: ರಾಜ್ಯದಲ್ಲಿ ಗ್ರಾಹಕ ವ್ಯವಹಾರಗಳ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲು ಅನುಮತಿ ನೀಡುವುದಾಗಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಮ್‌ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕೇಂದ್ರ ಸರಕಾರದ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯದ ವತಿಯಿಂದ ಆಯೋಜಿಸಲಾಗಿದ್ದ ದಕ್ಷಿಣ ಭಾರತ ರಾಜ್ಯಗಳ ಪ್ರಾದೇಶಿಕ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಸರಕಾರವು ಶಿಫಾರಸ್ಸು ಮಾಡಿರುವಂತೆ ಹುಬ್ಬಳ್ಳಿ-ಧಾರವಾಡದಲ್ಲಿ ಗ್ರಾಹಕ ವ್ಯವಹಾರಗಳ ಸಂಶೋಧನಾ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಆದಷ್ಟು ಶೀಘ್ರದಲ್ಲೆ ವಿವರವಾದ ಯೋಜನಾ ವರದಿಯನ್ನು ಸಲ್ಲಿಸಿದರೆ ಕೇಂದ್ರ ಸರಕಾರ ಅನುಮತಿ ನೀಡಲಿದೆ ಎಂದು ಅವರು ಹೇಳಿದರು.
ಗ್ರಾಹಕರ ಹಕ್ಕುಗಳ ರಕ್ಷಣೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆದ್ಯತೆಯಾಗಿದ್ದು, ಅಗತ್ಯ ವಸ್ತುಗಳ ಗುಣಮಟ್ಟ ಖಾತ್ರಿಗೊಳಿಸುವ ಬಿಐಎಸ್ ಕಡ್ಡಾಯ ಮಾಡುವುದು ಹಾಗೂ ಗ್ರಾಹಕರ ಹಕ್ಕುಗಳ ಸಂರಕ್ಷಣೆಯ ನೂತನ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಪಾಸ್ವಾನ್ ತಿಳಿಸಿದರು.
ಗ್ರಾಹಕರ ನ್ಯಾಯಾಲಯಗಳು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾಮಟ್ಟದಲ್ಲಿದ್ದ 20 ಲಕ್ಷ ರೂ.ಗಳನ್ನು 1 ಕೋಟಿ ರೂ., ರಾಜ್ಯಮಟ್ಟದಲ್ಲಿದ್ದ 1 ಕೋಟಿ ರೂ.ಗಳನ್ನು 10 ಕೋಟಿ ರೂ. ಹಾಗೂ ರಾಷ್ಟ್ರೀಯ ಮಟ್ಟದಲ್ಲಿ 10 ಕೋಟಿ ರೂ.ಮೇಲ್ಪಟ್ಟ ವ್ಯಾಜ್ಯಗಳ ಬಗ್ಗೆ ವಿಚಾರಣೆ ನಡೆಯಲಿದೆ ಎಂದು ಅವರು ಹೇಳಿದರು.
ಜಿಲ್ಲಾಮಟ್ಟದ ಗ್ರಾಹಕರ ನ್ಯಾಯಾಲಯಗಳ ಕಾರ್ಯವೈಖರಿಯನ್ನು ಉತ್ತಮಗೊಳಿಸಲು ಕೇಂದ್ರೀಯ ಆಯೋಗಗಳು ಕೆಲಸ ಮಾಡುತ್ತಿವೆ. ಗ್ರಾಹಕರ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳ ವಿಲೇವಾರಿಗಾಗಿ 2 ವರ್ಷ ಬೇಕಾಗುತ್ತಿದೆ. ಇವುಗಳನ್ನು 90 ದಿನಗಳಲ್ಲಿ ಇತ್ಯರ್ಥಗೊಳಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಪಾಸ್ವಾನ್ ತಿಳಿಸಿದರು.
ರಾಜ್ಯ ಸರಕಾರಗಳು ಗ್ರಾಹಕರ ಹಕ್ಕುಗಳ ಆಯೋಗಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳು, ಕಚೇರಿ ಸೇರಿದಂತೆ ಎಲ್ಲವನ್ನು ಒದಗಿಸಬೇಕು. ಜಿಲ್ಲಾ ಹಾಗೂ ರಾಜ್ಯಮಟ್ಟದ ನ್ಯಾಯಾಲಯಗಳು ನೀಡುವ ಆದೇಶಗಳನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಮೂಲಕ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಗಳಿಗೆ ಪತ್ರ ಬರೆಯಲಾಗುವುದು ಎಂದು ಅವರು ಹೇಳಿದರು.
ದೇಶದಲ್ಲಿ 226 ಲಕ್ಷ ಟನ್ ಬೇಳೆಕಾಳುಗಳಿಗೆ ಬೇಡಿಕೆಯಿದೆ. 172 ಲಕ್ಷ ಟನ್ ಮಾತ್ರ ಉತ್ಪಾದನೆಯಾಗುತ್ತಿದ್ದು, 45 ಲಕ್ಷ ಟನ್‌ನ್ನು ಆಮದು ಮಾಡಿಕೊಳ್ಳಲಾಗಿದೆ. ಜನಸಂಖ್ಯಾ ಪ್ರಮಾಣವು ಕಳೆದ 40 ವರ್ಷಗಳಲ್ಲಿ ಶೇ.130ರಷ್ಟು ಏರಿಕೆಯಾಗಿದೆ. ಆದರೆ, ಬೇಳೆಕಾಳುಗಳ ಉತ್ಪಾದನಾ ಪ್ರಮಾಣ ಕೇವಲ ಶೇ.18ರಷ್ಟು ಮಾತ್ರ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.
ಅಕ್ರಮ ದಾಸ್ತಾನು ಹಾಗೂ ಕಾಳ ಸಂತೆಕೋರರ ವಿರುದ್ಧ ಕರ್ನಾಟಕ ಹಾಗೂ ಮಹಾರಾಷ್ಟ್ರ ಸರಕಾರಗಳು ಕೈಗೊಂಡಿರುವ ಕ್ರಮಗಳು ಸ್ವಾಗತಾರ್ಹ. ಅಕ್ರಮ ದಾಸ್ತಾನು ಹಾಗೂ ಕಾಳ ಸಂತೆಯ ಮೇಲೆ ನಿಯಂತ್ರಣ ಹೇರಿದರೆ ಬೆಲೆ ಏರಿಕೆಯನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಕೃಷಿ, ವಾಣಿಜ್ಯ ಹಾಗೂ ನಮ್ಮ ಇಲಾಖೆಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಲಿವೆ ಎಂದು ಪಾಸ್ವಾನ್ ತಿಳಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್‌ಗುಂಡೂರಾವ್ ಮಾತನಾಡಿ, ಪಡಿತರ ಕಾರ್ಡ್‌ಗಳನ್ನು ಚುನಾವಣಾ ಗುರುತಿನ ಚೀಟಿ ಹಾಗೂ ಆಧಾರ್ ಸಂಖ್ಯೆಯಿಂದ ಜೋಡಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದ್ದು, ಇದರಿಂದ ನಕಲಿ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿದೆ ಎಂದರು.
1.05 ಕೋಟಿ ಕುಟುಂಬಗಳಿಗೆ ಪಡಿತರ ವಿತರಿಸಲಾಗುತ್ತಿದೆ. ಎಪಿಎಲ್ ಕಾರ್ಡುಗಳಿಗೆ ರಿಯಾಯಿತಿ ದರದಲ್ಲಿ ಪಡಿತರ ನೀಡಲಾಗುತ್ತಿದೆ. ಬಯೋಮೆಟ್ರಿಕ್ ಮೂಲಕ ಎಲ್ಲ ಕಾರ್ಡುದಾರರ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಮೊದಲ ಹಂತದಲ್ಲಿ 3877 ನ್ಯಾಯಬೆಲೆ ಅಂಗಡಿಗಳಲ್ಲಿ ಅತ್ಯಾಧುನಿಕ ದರ ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದರು.
ಎಲ್ಲ ಜಿಲ್ಲೆಗಳಲ್ಲಿ ಗ್ರಾಹಕರ ಮಾಹಿತಿ ಕೇಂದ್ರ ಗಳನ್ನು ಆರಂಭಿಸಿರುವ ದೇಶದ ಮೊದಲ ರಾಜ್ಯ ನಮ್ಮದು. ಗ್ರಾಹಕರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿ ದಂತೆ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆಗೂ ನಮ್ಮ ಸರಕಾರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಸಭೆಯಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು, ಪಾಂಡಿಚೇರಿ, ಲಕ್ಷದೀಪ ರಾಜ್ಯಗಳ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ರಿಜಿಸ್ಟ್ರಾರ್, ನಿರ್ದೇಶಕರು, ನಿಯಂತ್ರಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News