ವೃತ್ತಿ ಶಿಕ್ಷಣ ಕೋರ್ಸ್: ಕನ್ನಡ ಕಡ್ಡಾಯಕ್ಕೆ ಪ್ರಯತ್ನ: ಜಯಚಂದ್ರ

Update: 2016-01-16 18:16 GMT

ಬೆಂಗಳೂರು, ಜ.16: ವೃತ್ತಿ ಶಿಕ್ಷಣ ಕೋರ್ಸ್‌ಗಳಲ್ಲಿ ಕನ್ನಡ ಕಡ್ಡಾಯ ಈಗಾಗಲೇ ವಿಳಂಬವಾಗಿದ್ದು, ವರದಿಯ ಶಿಫಾರಸ್ಸುಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
 ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ವೃತ್ತಿ ಶಿಕ್ಷಣದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬೋಧಿಸುವ ಬಗೆಗಿನ ಡಾ.ಹಿ.ಚಿ.ಬೋರಲಿಂಗಯ್ಯ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ವೃತ್ತಿ ಶಿಕ್ಷಣ ಸಂಬಂಧ ಪಠ್ಯವನ್ನು ತಯಾರಿಸಬೇಕಾಗುತ್ತದೆ. ವಿಶ್ವವಿದ್ಯಾಲಯಗಳ ಕುಲಪತಿಗಳು ಪಠ್ಯಪುಸ್ತಕ ತಯಾರು ಮಾಡಲು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲು ಕಾಲಾವಕಾಶ ಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಪಠ್ಯವನ್ನು ತಯಾರಿಸಿ ವೃತ್ತಿ ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಲು ಸರಕಾರ ಎಲ್ಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಸರಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಮಾತನಾಡಿದ ಸಮಿತಿ ಅಧ್ಯಕ್ಷ ಡಾ.ಚಿ. ಬೋರಲಿಂಗಯ್ಯ, ಎಲ್ಲ ವಿಶ್ವ ವಿದ್ಯಾಲಯಗಳೂ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿ ಶಿಕ್ಷಣದಲ್ಲಿ ಕನ್ನಡ ಕಲಿಸಲು ಆಸಕ್ತಿವಹಿಸಿದ್ದು, ಈ ಸಂಬಂಧ ಸರಕಾರ ಸುತ್ತೋಲೆ ಹೊರಡಿಸಬೇಕೆಂದು ಕೋರಿದರು.
ಪದವಿ ಕಾಲೇಜುಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಕಡ್ಡಾಯಗೊಳಿ ಸಲಾಗಿದೆ. ಆದರೆ, ಕನ್ನಡ ಭಾಷೆೆಯ ಬದಲು ಬೇರೆ ಭಾಷೆ ಕಲಿಯುವ ಅವಕಾಶ ಕಲ್ಪಿಸಲಾಗಿದೆ. ಇದು ಸರಿಯಲ್ಲ ಎಂದ ಬೋರಲಿಂಗಯ್ಯ, ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸುವಂತೆ ಸಮಿತಿಯು ಶಿಫಾರಸು ಮಾಡಿದೆ ಎಂದರು.
ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಭರತ್‌ಲಾಲ್ ಮೀನಾ, ಸಮಿತಿ ಸದಸ್ಯರೂ ಆಗಿರುವ ಪ್ರಾಧಿಕಾರದ ಕಾರ್ಯದರ್ಶಿ ಮುರುಳೀಧರ್ ಉಪಸ್ಥಿತರಿದ್ದರು.

ಶಿಫಾರಸುಗಳು
ರಾಜ್ಯದಲ್ಲಿನ ವೃತ್ತಿ ಶಿಕ್ಷಣ ಕೋರ್ಸ್ ಗಳ ವಿವಿಗಳು ಸೇರಿದಂತೆ ಬೋಧನಾ ವ್ಯವಸ್ಥೆ ಇರುವ ಎಲ್ಲ ವಿವಿಗಳಲ್ಲಿ ಕನ್ನಡ ಭಾಷೆ ಬೋಧನೆ ಕಡ್ಡಾಯಗೊಳಿಸಬೇಕು. ವಿದ್ಯಾರ್ಥಿಗಳ ಪ್ರವೇಶ ಹಂತವನ್ನು ಪರಿಗಣಿಸಿ ಪಿಯುಸಿಯಿಂದ ಬಂದವರಿಗೆ 1ರಿಂದ 4ನೆಸೆಮಿಸ್ಟರ್‌ಗಳಲ್ಲಿ ಕಡ್ಡಾಯವಾಗಿ ಕನ್ನಡ ಬೋಧಿಸಬೇಕು.
ಬಿಎ, ಬಿಕಾಂ, ಬಿಎಸ್ಸಿ ಪದವಿ ಮುಗಿಸಿ ಮೂರು ವರ್ಷದ ಎಲ್ಎಲ್‌ಬಿ ಪ್ರವೇಶ ಪಡೆಯುವವರಿಗೆ ಎರಡು ಸೆಮಿಸ್ಟರ್‌ಗಳಲ್ಲಿ ಕಡ್ಡಾಯವಾಗಿ ಕನ್ನಡ ಬೋಧಿಸಬೇಕು. ಐದು ವರ್ಷದ ಎಲ್ಎಲ್‌ಬಿ ವಿದ್ಯಾರ್ಥಿಗಳಿಗೆ 4ನೆ ಸೆಮಿಸ್ಟರ್‌ಗಳಲ್ಲಿ ಕಡ್ಡಾಯವಾಗಿ ಕನ್ನಡ ಕಲಿಸಬೇಕು.
ಕನ್ನಡ ಮಾತೃಭಾಷಾ ವಿದ್ಯಾರ್ಥಿಗಳಿಗೆ ‘ಸಾಂಸ್ಕೃತಿಕ ಕನ್ನಡ’ದ ಜತೆಗೆ ಅವರು ಓದುವ ತಾಂತ್ರಿಕ ವಿಷಯಗಳ ಜ್ಞಾನಕ್ಕೆ ಪೂರಕವಾಗಿ ಕನ್ನಡ ಭಾಷೆಯಲ್ಲೇ ‘ಕ್ರಿಯಾತ್ಮಕ ಕನ್ನಡ’ವನ್ನು ಕಲಿಸಬೇಕು. ಕನ್ನಡೇತರ ವಿದ್ಯಾರ್ಥಿಗಳಿಗೆ ಸರಳ ರೂಪದಲ್ಲಿ ಪಠ್ಯ ರೂಪಿಸಬೇಕು. ಕನ್ನಡ ಸಂಸ್ಕೃತಿ ಮತ್ತು ಅವರ ಮಾತೃಭಾಷೆ ನಡುವೆ ಜೀವಾತ್ಮಕ ಸಂಬಂಧ ಏರ್ಪಡಿಸುವಂತಿರಬೇಕು.
ಕನ್ನಡ ಕಲಿಕೆ ಶಿಕ್ಷೆ ಎಂಬ ಕಠಿಣ ವ್ಯವಸ್ಥೆ ನಿರ್ಮಿಸದೆ, ಕನ್ನಡ ಮತ್ತು ಕನ್ನಡೇತರರಿಗೆ ಪ್ರತ್ಯೇಕ ಪಠ್ಯಕ್ರಮಗಳನ್ನು ರೂಪಿಸಬೇಕು. ಶೇ.50ರಷ್ಟು ಪಠ್ಯಕ್ರಮಗಳು ಎಲ್ಲ ವಿವಿಗಳಲ್ಲಿ ಏಕರೂಪವಾಗಿ ರಬೇಕು. ಉಳಿದ ಶೇ.50ರಷ್ಟು ಪಠ್ಯಗಳು ಆಯಾ ವಿವಿಗಳ ವಿದ್ಯಾರ್ಥಿಗಳು ಕಲಿಯುವ ವಿಷಯಗಳಿಗೆ ಪೂರಕ ವಾಗಿರಬೇಕು.
ಪ್ರಾಂತವಾರು ಭಾಷೆಯಲ್ಲಿನ ಏರಿಳಿತಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಥಳೀಯತೆಗೆ ಹೊಂದಿಕೊಳ್ಳುವಂತೆ ಪಠ್ಯ ರೂಪಿಸಬೇಕು. ಪ್ರತಿಯೊಂದು ವಿವಿ ಭಾಷಾ ತಜ್ಞರನ್ನು ಒಳಗೊಂಡ ಉಪ ಸಮಿತಿಯನ್ನು ರಚಿಸಿ ವಿಷಯ ತಜ್ಞರ ಸಲಹೆ ಮೇರೆಗೆ ಪಠ್ಯ ರಚಿಸಿ ಅಧ್ಯಯನ ಮಂಡಳಿಯಲ್ಲಿ ಚರ್ಚಿಸಿ ಅಧಿಕೃತಗೊಳಿಸಬೇಕು.
ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸುವ ನಿರ್ಣಯ ಕೈಗೊಳ್ಳಬೇಕು. ಕನ್ನಡ ಬೋಧನೆಗೆ ಮತ್ತು ಕನ್ನಡೇತರ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆ ಅರಿವಿರುವ ಕನ್ನಡ ಅಧ್ಯಾಪಕರನ್ನು ವಿವಿಗಳು ನೇಮಿಸಿಕೊಳ್ಳ ಬೇಕು. ವಿವಿಗಳ ಒಟ್ಟು ಅನುದಾನದಲ್ಲಿ ಕನ್ನಡ ಬೋಧನೆ ಮತ್ತು ಪಠ್ಯಪುಸ್ತಕ ರಚನೆಗೆ ಹಾಗೂ ಕನ್ನಡ ಚಟುವಟಿಕೆ ಗಳಿಗೆ ನಿಗದಿತ ಮೊತ್ತವನ್ನು ಆಯವ್ಯಯದಲ್ಲಿ ಕಾಯ್ದಿರಿಸಿ ಬಳಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News