ನಾನು, ದೇಶ ಹಾಗೂ ಪ್ರಜಾತಂತ್ರ, ಇತ್ಯಾದಿ....

Update: 2016-01-26 18:14 GMT

 ಸಮಾಜ ಎಂಬ ಅಪೂರ್ವ ಯಂತ್ರ ನಮ್ಮನ್ನು ಕೆಲವು ಮೆಕ್ಯಾನಿಸಂಗಳೊಂದಿಗೆ ಸಿಕ್ಕಿಸಿ ತಮಾಷೆ ನೋಡುತ್ತದೆ!! ಹೊರ ನೋಟಕ್ಕೆ ತೀರಾ ತಮಾಷೆಯಾಗಿ ಕಾಣುವ, ಯಾವ ಕ್ಷಣದಲ್ಲಿ ಬೇಕಾದರೂ ಅಂತಹ ಮೆಕ್ಯಾನಿಸಂಗಳನ್ನು ಸ್ವಿಚ್ ಆಫ್ ಮಾಡಿ ಮುಂದೆ ನಡೆಯಬಲ್ಲೆ! ಎಂಬ ನಮ್ಮ ಉಮೇದನ್ನು ಅದು ಕಸಿದು ಕೊಳ್ಳುವ ‘ಪರಿ’ ಇದೆಯಲ್ಲಾ...., ಅದು...., ಆ ನಾಗರಿಕ ಕಾಡುಗಳೊಳಗಿಂದ ಈ ಅನಾಗರಿಕ ಜಗತ್ತಿಗೆ ಹಿಂದಿರುಗಿದಾಗಿನ ವಾಸ್ತವ ಮತ್ತು ವಾಸ್ತವ ಹಾಗೂ ವಾಸ್ತವ!!

ಹೀಗೆ ಹೇಗೇಗೋ... ಎಲ್ಲೆಲ್ಲೋ... ಸುತ್ತಿ ಸುಳಿದು... ಇನ್ನೆಲ್ಲೊ... ಹೊರ ಜಗತ್ತಿನ ಎದೆಗಿಳಿದಾಗ ನನಗೆ ತಿಳಿದೊ ತಿಳಿಯದೆಯೊ, ಹೆಂಗೊ...! ನನಗೆ ಸತತವಾಗಿ ಢಿಕ್ಕಿ ಹೊಡೆಯುತ್ತಿದ್ದ ಕೆಲವು ಜಾಗಗಳೆಂದರೆ: ಮಂಜುನಾಥೇಶ್ವರ, ಗೋಕರ್ಣೇಶ್ವರ, ಮುರುಡೇಶ್ವರ, ಶೃಂಗೇರಿ ಶಾರದೇಶ್ವರಿ, ಕುಕ್ಕೆ ಸುಬ್ರಹ್ಮಣ್ಯೇಶ್ವರ, ಬಿಳಿಗಿರಿರಂಗ, ಬಾಬಾ ಬುಡನ್ ಮತ್ತು ಮಲೆ ಮಾದೇಶ್ವರರ ಆಸ್ಥಾನಗಳು. ಏಕೆಂದರೆ, ಇವರೆಲ್ಲಾ ಇದ್ದದ್ದೇ ನಾನು ಓಡಾಡಲು ಇಷ್ಟಪಡುವ ಜಾಗಗಳಲ್ಲಿ! ಈ ಬಿಳಿಗಿರಿ ರಂಗ, ಬಾಬಾ ಬುಡನ್, ಮಲೆ ಮಾದೇಶ್ವರರೆಲ್ಲಾ ಅಂಗೂ ಇಂಗೂ ನಮ್ಮ ಒಳ ಬಳಗದವರೇ ಆದ್ದರಿಂದ ಅವರ ಆಸ್ಥಾನಗಳಿಗೆ ನಮ್ಮ ಪ್ರವೇಶಕ್ಕೆ ಯಾವ ಹೊತ್ತಲ್ಲಾದರೂ ಅಡ್ಡಿ ಇರಲಿಲ್ಲವಾದ್ದರಿಂದ ಇವರ ಆಸ್ಥಾನಗಳಲ್ಲಿ ಕುಳಿತು, ಹಳಸಿನತೊಳೆ; ಬೆಲ್ಲ; ಕಾಯಿತುರಿ ಮಿಶ್ರಿತ ರಸಾಯನದಂಥ ಚರ್ಚೆ-ಪರ್ಚೆಗಳಿಗೆ ಅವಕಾಶವಿತ್ತು.ಯಾವುದೇ ಕ್ಲೇಶಗಳಿಲ್ಲದೆ ಅದನ್ನು ಮಾಡಬಹುದಿತ್ತು.

 ಆದರೆ, ಮಂಜುನಾಥೇಶ್ವರ; ಗೋಕರ್ಣೇಶ್ವರ; ಮುರುಡೇಶ್ವರ; ಶಾರದೇಶ್ವರಿ; ಸುಬ್ರಹ್ಮಣ್ಯೇಶ್ವರರ ಜೊತೆಗಿನ ಚರ್ಚೆಗೆ ಸ್ವಲ್ಪ ಕಷ್ಟವಾಗುತ್ತಿತ್ತು. ಆದರೂ, ಅವರಿಗೂ ನಮಗೂ ಯಾವುದೇ ವೈಯಕ್ತಿಕ ವೈರವಿಲ್ಲದ ಕಾರಣ ಹಾಗಾದರೂ ನಡೆಯುತ್ತೆ...! ಹೀಗಾದರೂ ನಡೆಯುತ್ತೆ...!! ಎಂದು ನಮ್ಮ ಪಾಡಿಗೆ ನಾವಿದ್ದೆವು.ಆದರೆ ಒಮ್ಮೆ ನಾವು ಮಂಜುನಾಥೇಶ್ವರರ ಪ್ರಭಾವಲಯದಲ್ಲಿದ್ದಾಗ, ನಮ್ಮ ಗೃಹ ಮಂತ್ರಾಲಯದಿಂದ ಒಂದು, ಒಂದು ಸಾಲಿನ ಆದೇಶ ಬಂತು. ‘ಸಾಧ್ಯವಾದರೆ ಒಳಗೆ ಹೋಗಿ ಬನ್ನಿ’!!

ಓಕೆ.... ಅಂತಿಮವಾಗಿ ಕಳೆದುಕೊಳ್ಳುವುದೇನು? ಅದೃಷ್ಟಕ್ಕೆ, ಅದಕ್ಕೆ ಸಮೀಪದಲ್ಲೇ ಇದ್ದೆ. ಸುತ್ತ ನೋಡಿದೆ!! ಎಂದಿನ ಜನ ಜಂಗುಳಿ ಇರಲಿಲ್ಲ!?, ನನ್ನೊಳಗೂ ಬಹಳ ದಿನಗಳಿಂದ ಇದ್ದ ‘ಇಷ್ಟು ಜನ ಯಾಕೆ, ಏನನ್ನು ನೋಡಲು ಹೀಗೆ ನುಗ್ಗುತ್ತಾರೆ?’ ಎಂಬ ಕುತೂಹಲವೂ ಇತ್ತಾದ್ದರಿಂದ ಗೃಹಾದೇಶವನ್ನು ಪಾಲಿಸುವುದೆಂದು ಹೊರಟೆ.

ಸಣ್ಣದಾದರೂ ಸರಿ ಒಂದು ದೊಡ್ಡ ಕೂೂೂೂೂ್ಯೂೂ.... ಇತ್ತು. ಆದರ ಮೂಲಕವೇ ಮುಂದೆ ಹೋದೆ.... ಹೋದೆ.... ಹೋದೆ.....! ಆ ಮಹಾನುಭಾವ ನಾನು ಅಂದುಕೊಂಡಷ್ಟು ಹತ್ತಿರದಲ್ಲಿರಲಿಲ್ಲ! ಅಂತಿಮವಾಗಿ ಹತ್ತಿರ... ಹತ್ತಿರ... ಹೋದೆ; ಎಂದು ಕೊಳ್ಳುವ ಹೊತ್ತಿಗೆ, ಒಂದು ತಿರುವಿಗೆ ಬಂದೆ. ಅಲ್ಲಿ ಒಂದಷ್ಟು ಜನ ಮೇಲ್ಬೆತ್ತಲೆ ಬಿಳಿಪಂಚೆ ಪೊಲೀಸರು!! ಸುಮ್ಮನೆ ಅವರನ್ನೇ ನೋಡುತ್ತಾ..., ನನ್ನ ಸರದಿಗಾಗಿ ಕಾಯುತ್ತಿದ್ದರೆ! ಮುಂದಿನ ತಿರುವಿನಲ್ಲಿ ಆ ಅದೇ ಬಿಳಿಪಂಚೆ ಪೊಲೀಸರು ‘‘ಎಲ್ಲಿ ನಿಮ್ಮ ಶರ್ಟ್ ಕಳ್ಚಿ ಮಾರಾಯ್ರೇ... ಬನೀನ್ ಕಳ್ಚಿ ಮಾರಾಯ್ರೇ... ಎನ್ನಬೇಕೆ? ನಾನು ಮಂಜುನಾಥೇಶ್ವರನ ಆಸ್ಥಾನಕ್ಕೆ ಹೋಗುವುದಕ್ಕೂ...., ನನ್ನ ಮೇಲುಡುಪುಗಳನ್ನು ಕಳಚಿ ಅರೆಬತ್ತಲಾಗುವುದಕ್ಕೂ ಕಾರ್ಯಕಾರಣ ಸಂಬಂಧಗಳು ಹೊಳೆಯದೆ, ತಪ್ತ ಮನಸ್ಸಿನಿಂದಲೇ ಅವರ ಆದೇಶವನ್ನು ಕುರಿತು... ‘‘ಅಲ್ಲಾ ಮಾರಾಯ್ರೇ... ಪೊಲೀಸ್ ಸ್ಟೇಶನ್‌ನಲ್ಲಿ ಅಪರಾಧಿಗಳಿಗೆ ಭಯ ಬರ್ಲಿ ಅಂತಾ ಬಟ್ಟೆ ಬಿಚ್ಚಿಸ್ತಾರೆ, ಅದು ಒಂಥರಾ ಸರಿ ಇದ್ರೂ ಇರಬೌದು!. ಯಾಕಂದ್ರೆ ಅವ್ರ ಕ್ರಿಮಿನಲ್‌ಗಳು!.ಆದ್ರೆ ಇಲ್ಯಾಕೆ ನಮ್ಮ ಬಟ್ಟೆ ಬಿಚ್ಚಿಸ್ತಿದ್ದೀರಾ ಸ್ವಾಮಿ?ನಾವು ಮಂಜುನಾಥೇಶ್ವರನ ಆಸ್ಥಾನಕ್ಕೆ ಬಂದಿದ್ದೇ ಕೆಮಾ? ಈವರೆಗೂ ಎಣ್ಣೆ ಮುಗಿದ ದೀಪದಂತಿದ್ದ ಅವರ ಕಣ್ಣ ದೀಪಗಳು ಬೆಂಕಿಬಿದ್ದ ಗುಡಿಸಲಿನ ರೂಪತಾಳಿ.... ತಾಳಿ... ತಾಳಿ...!? ‘ಅಯ್ಯೋ.... ಮಂಜುನಾಥೇಶ್ವರ ಏನಿದು ನಿನ್ನ ರಕ್ಷಕರ ವಿಶ್ವರೂಪ’ ಎನ್ನುವಂತಾಗುವಲ್ಲಿಗೆ; ಸುತ್ತಮುತ್ತಲ ಹತ್ತೆಂಟು ಮೇಲ್ಬೆತ್ತಲೆ ಬಿಳಿಪಂಚೆ ಪೊಲೀಸರು ನನ್ನನ್ನು ಆವರಿಸಿ, ದೃಷ್ಟಿ ಮಾತ್ರದಿಂದಲೇ ನನ್ನನ್ನು ಫೈರ್ ಮಾಡುತ್ತಾ...! ‘ಇನ್ನೊಂದು ಕ್ಷಣ..., ಆದೇಶವನ್ನು ಪಾಲಿಸದಿದ್ದಲ್ಲಿ ನಿನ್ನ ಹೆಣ ಬೀಳುವುದು ಗ್ಯಾರಂಟಿ’ಎನ್ನುವಂತೆ ನೋಡುತ್ತಿದ್ದರೆ....!? ನಾನು ಸುತ್ತ ಕಣ್ಣಾಡಿಸಿ, ಕಣ್ಣಲ್ಲೇ ಅಂಗಲಾಚಿದೆ; ಬೆಂಬಲಕ್ಕಾಗಿ!! ಒಂದೇ ಒಂದು ನರಪ್ರಾಣಿ ನನ್ನ ಕಣ್ಣಿಗೆ ಕಣ್ಣು ಕೊಡಲಿಲ್ಲ!?, ಬದಲಾಗಿ ಕೆಲವು ಕಣ್ಣುಗಳು ಬೆತ್ತಲಾಗದೇ ನಾನು ಅಲ್ಲಿ ನಿಂತಿರುವುದೇ ಅಪರಾಧ ಎಂಬಂತೆ ನನ್ನತ್ತ ಕೆಕ್ಕರಿಸುತ್ತಿದ್ದರೆ....!? ಮಂಜುನಾಥಾ....! ಮಂಜುನಾಥಾ....!! ಎನ್ನಬೇಕೋ...? ಇಲ್ಲಾ....!?,

ಯೋಚಿಸಿದೆ..., ಬಂದೇ ಬಿಟ್ಟಿದ್ದೇನೆ! ಕೆಲವೇ ಅಡಿಗಳು...!! ಹಿಂದಾಸಿ ದಾರಿ ಮಾಡಿಕೊಂಡು ಹೋಗುವುದಕ್ಕಿಂತ ಮುಂದಾಸಿ ಹೋಗುವುದೇ ಕಡಿಮೆ ಅಪಾಯಕಾರಿ ಅನಿಸಿತು. ಒಂದು ಸಾರಿ ಹಾಗೇ ವಾರೆಗಣ್ಣಲ್ಲಿ ನೋಡಿಕೊಂಡು ಹೋಗೇ ಬಿಡುವ ಎಂದೆನ್ನುತ್ತಾ... ಎದೆ ಬೆತ್ತಲಾಗಿ ಮುನ್ನಡೆದೆ... ಅಲ್ಲಿದ್ದ ಸಾವಿರಾರು ಎದೆಗಳೂ ನನಗೆ ಸಾಂತ್ವನ ನೀಡುವ ಯೋಗ್ಯತೆ ಹೊಂದಿರಲಿಲ್ಲ.

 ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನನ್ನ ಅಸ್ತಿತ್ವದ ಬಗ್ಗೆ ನನಗೆ ಸಂದೇಹ ಬಂದಿತು. ಹಾಗಾದರೆ ನಾನು ಯಾರು?ವ್ಯಕ್ತಿ ಸ್ವಾತಂತ್ರ್ಯದ ಅರ್ಥವೇನು? ಇಲ್ಲಿ ನನ್ನ ಭಾವನೆ, ನಾನು ನಂಬುವ ಮೌಲ್ಯಗಳಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ ಎನ್ನುವುದಾದರೆ?! ಈ ನಾಡಿನಲ್ಲಿ ನನ್ನ ಸ್ಥಾನವಾದರೂ ಏನು? ಹಾಗೇೀೀೀೀ.....!? ಯಾಕೋ! ಈ ವ್ಯವಸ್ಥೆಗೆ, ಈ ನಾಡಿಗೆ ನಾನು ಪರಕೀಯ ಅನ್ನಿಸಿತು!! ದೇವರ ಆಸ್ಥಾನಗಳಲ್ಲಿ ಈ ಪರಕೀಯತೆ ಎಂಬುದು ಒಂದು ಬಗೆಯಲ್ಲಿ ಸ್ಥಾಯೀಭಾವವಾಗಿಬಿಟ್ಟಿರುವುದರಿಂದ ಈಗಲೂ ನನಗೆ ದೇವರ ಆಸ್ಥಾನಗಳೆಂದರೆ ಭಯ.

ಒಮ್ಮೆ ದಿಲ್ಲಿಗೆ ಹೋಗಿದ್ದೆ, ಅದೇನು ಮೊದಲಲ್ಲ. ನಾನು ಮೊದಲ ಬಾರಿ ಹೋಗಿದ್ದು ರಾಜೀವ್ ಗಾಂಧಿ ಹತ್ಯೆ ನಡೆದ ಸಂದರ್ಭದಲ್ಲಿ.ಬೀದಿಗಳ ತುಂಬಾ ಬರೀ ಖಾಕೀಧಾರಿಗಳು, ಕೈಯಲ್ಲಿ ಬಂದೂಕ-ಪಂದೂಕಗಳಲ್ಲ! ಮೆಶಿನ್‌ಗನ್‌ಗಳು!?, ಮೂಲೆ ಮೂಲೆಯಲ್ಲಿ ಬಂಕರ್‌ಗಳು. ಅದರೊಳಗಿಂದ ನಮ್ಮತ್ತಲೇ ಗುರಿ ಇಟ್ಟ ನೋಟಗಳು ಮತ್ತು ಮೆಶಿನ್‌ಗನ್ನುಗಳು !! ಎಲ್ಲಿ ನೋಡಿದರೂ ಜನಕ್ಕಿಂತ ಅವರೇ ಜಾಸ್ತಿ ಕಾಣುತ್ತಿದ್ದರು!! ಎಷ್ಟೊಂದು ಗಾಬರಿಯಾಯಿತೆಂದರೆ, ಇನ್ನೊಮ್ಮೆ ಇತ್ತ ತಲೆಹಾಕಿ ಮಲಗಲೂ ಕೂಡದು ಎಂದು ತೀರ್ಮಾನಿಸಿ, ಹಿಂದಿರುಗಿದ್ದೆ.

ಆದರೆ ಹಾಗಾಗಲಿಲ್ಲ. ಈ ನಡುವೆ ಲೋಹಿಯಾರ ‘ಡೆಲ್ಲಿ ಎಂದೂ ಕರೆಯುವ ದಿಲ್ಹಿ’ ಓದಿದ್ದೆ. ಲೋಹಿಯಾ ಈ ನಗರವನ್ನು ‘ನಾಯಕಸಾನಿ’ ಎನ್ನುತ್ತಾರೆ ಮತ್ತು ಎಷ್ಟು ಆತ್ಮೀಯವಾಗಿ ಅವಳ ಕ್ರೌರ್ಯಗಳನ್ನು ವಿವರಿಸುತ್ತಾರೆಂದರೆ ಅದರ ಬಗ್ಗೆ ಪ್ರೇಮ, ಹಗೆ, ಮತ್ಸರ, ಮಾಧುರ್ಯದ ಭಾವಗಳ ಮೆರವಣಿಗೆ ಒಟ್ಟೊಟ್ಟಿಗೇ ಹುಟ್ಟಿ ಎತ್ತೆತ್ತಲೋ ಎಳೆದೊಯ್ದು ನಿಮ್ಮನ್ನು ಅವರ್ಣನೀಯ ರೋಚಕ ಗೊಂದಲದಲ್ಲಿ ಕೆಡವಿಬಿಡುತ್ತವೆ. ನನಗೂ ಕಾಲಾಂತರದಲ್ಲಿ ಅದರ ಒಳಹೊಕ್ಕು ಅದರ ಇತಿಹಾಸ, ಗತ ವೈಭವಗಳೇ ಮೊದಲಾಗಿ ಅಲ್ಲಲ್ಲಿ ಚೆಲ್ಲಿ ಬಿದ್ದಿರುವ, ಇಂದಿಗೂ ಎದೆಸೆಟೆಸಿ ನಿಂತಿರುವ ಸ್ಮಾರಕಗಳನ್ನು ನೋಡುತ್ತಾ ಹೋದಹಾಗೆ ಅದೆಲ್ಲ ನಿಜ ಅನ್ನಿಸಲು ಶುರುವಾಯ್ತು.ಯಾವ್ಯಾವುದೋ ಕಾರಣಗಳಿಗೆ ಮತ್ತೆ ಮತ್ತೆ ನಾನು ಅದರತ್ತ ಆಕರ್ಷಿತನಾಗತೊಡಗಿದ್ದೆ. ಅದರಲ್ಲೂ ಹೊಸದಿಲ್ಲಿ ಇದೆಯಲ್ಲಾ.... ?! ಏಕೆ...? ಪ್ರತಿಯೊಬ್ಬ ರಾಜಕಾರಣಿಯೂ ಹೇಗಾದರೂ ಮಾಡಿ ಅಲ್ಲಿಗೆ ಹೋಗಲು ಮತ್ತೆ ಮತ್ತೆ ಪ್ರಯತ್ನಿಸುತ್ತಾನೆ? ಇಲ್ಲಿ ಮಾಡಬಾರದ್ದನ್ನೆಲ್ಲಾ ಮಾಡಿ! ಎಂದು ಯೋಚಿಸುತ್ತಿದ್ದೆ!? ನಿಜ, ಲೋಹಿಯಾ ಹೇಳಿದಂತೆ, ಅವಳ ಆಕರ್ಷಣೆಯಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ!!

‘ಅದರಲ್ಲೂ ಹೊಸದಿಲ್ಲಿ ಇದೆಯಲ್ಲಾ.... ?!’ ಎಂದು ಹೇಳಿದ್ದೇಕ್ಕೆಂದರೆ, ಅದಕ್ಕೂ ಹಳೆ ದಿಲ್ಲಿಗೂ ಇರುವ ಮಹ್ಮಮೇರಿ ವ್ಯತ್ಯಾಸಗಳು.ತಾಳಮೇಳವಿಲ್ಲದ ಹೊರರೂಪ ಮತ್ತು ಒಳರೂಪಗಳು ನಮ್ಮನ್ನು ದಿಗ್ಮೂಢರನ್ನಾಗಿ ಮಾಡುತ್ತವೆ. ಹೊಸದಿಲ್ಲಿಯಲ್ಲಿರುವ, ‘ವಿಶಾಲ’ ಎಂಬ ಪದ ನಾಚಿಕೆಯಿಂದ ಮದುಡಿಕೊಂಡುಬಿಡುವಷ್ಟು ವಿಸ್ತಾರವಾದ ರಸ್ತೆಗಳು. ಇತಿಹಾಸವನ್ನು ಬೇಡಬೇಡವೆಂದರೂ ನೆನಪಿಸುವ ಅವುಗಳ ಹೆಸರುಗಳು, ರಸ್ತೆಯುದ್ದಕ್ಕೂ ಪಾರ್ಕುಗಳು ಮತ್ತು ಅಸಂಖ್ಯಾತ ಗಿಡಮರಗಳು, ಅವುಗಳ ಹಿಂದಕ್ಕೆ ‘ಬಂಗಲೆ’ ಎಂಬುದರ ಅರ್ಥವನ್ನೇ ಬದಲಿಸಿ, ನಾಚಿ ನೀರಾಗಿಸುವಂಥ ಬೃಹತ್... ಬೃಹತ್.... ಕಟ್ಟಡಗಳು.ಅವುಗಳ ಮುಂದೆ ನಾವು ಬೆಳಗ್ಗೆ ಒಂದು ನಮ್ಮ ಹಳ್ಳಿಗಳಲ್ಲಿ ಕುಳಿತು ಪತ್ರಿಕೆಗಳಲ್ಲಿ ಓದುವ ವಿಐಪಿ, ವಿವಿಐಪಿಗಳ ಹೆಸರುಗಳು.ಪರೀಕ್ಷೆಯ ನೆಪದಲ್ಲಿ ಪುಸ್ತಕದಲ್ಲಿ ಓದುವ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಪಟ್ಟಿಯಲ್ಲಿನ ಹೆಸರುಗಳು ಅಲ್ಲಿ ಜೀವಂತ ಮೈತಳೆದು ನಿಂತಂತೆ ಕಾಣುವ ಅವುಗಳ ಎಕರೆಗಟ್ಟಲೆ ಧೂತಾವಾಸಗಳು.ಅವುಗಳ ಮುಂದೆ ಗಾಬರಿ ಬೀಳುವಷ್ಟು ರಕ್ಷಣಾ ಸಿಬ್ಬಂದಿ.ಆ ರಸ್ತೆಗಳಲ್ಲೆಲ್ಲೂ ನಿಲ್ಲುವುದನ್ನೂ; ಕೂರುವುದನ್ನೂ ನಿಷೇಧಿಸಿರುವ ಫಲಕಗಳು. ನಿಮ್ಮ ಪಾಡಿಗೆ ನೀವಿದ್ದರೂ ನಿಮ್ಮನ್ನು ಸದಾ ಅನುಸರಿಸುತ್ತಿರುವ ಅಸಂಖ್ಯ ಅಗೋಚರ ಕಣ್ಣುಗಳು. ಅಯ್ಯೋ ದೇವರೆ?!ಎಂದು ನೀವು ಉದ್ಘಾರ ತೆಗೆಯುವ ಹೊತ್ತಿಗೆ ನಿಮಗೆ ಎದುರಾಗುವ ಅದೇ ಹಳೆ ದಿಲ್ಲಿ, ನಮ್ಮ ಬೆಂಗಳೂರು-ಚೆನ್ನೈ-ಹೈದರಾಬಾದಿನ ರೆುುರಾಕ್ಸ್ ಕಾಪಿ.

ಇರಲಿ, ವಿಷಯ ಅದಲ್ಲ; ಕಳೆದ ವರ್ಷ ಮತ್ತಾವುದೋ ಕಾರ್ಯನಿಮಿತ್ತವಾಗಿ ನನ್ನ ಮಗಳೊಂದಿಗೆ ಅಲ್ಲಿಗೆ ಹೋಗಿದ್ದೆ. ಬೆಳ್ಳಂಬೆಳಗ್ಗೆಯೇ ಲ್ಯಾಂಡಿಂಗ್ ಮಾಡಿ, ಕರ್ನಾಟಕ ಭವನಕ್ಕೆ ಬಂದು ತಿಂಡಿತಿಂದು ಮುಗಿಸಿ, ಪಟಿಯಾಲ ಕೋರ್ಟ್ ಸಂಕೀರ್ಣಕ್ಕೆ ಹೋಗುವ ಹೊತ್ತಿಗೆ ಅಲ್ಲಿಗಾಗಲೇ ಬಂದು ಕಾಯುತ್ತಿದ್ದ ವಕೀಲೆಯೊಂದಿಗೆ ಮಾತುಕತೆ ಪೂರೈಸಿ ದಾಖಲೆಗಳ ಹಸ್ತಾಂತರ ಮಾಡಿದೆ, ಅಲ್ಲಿಗೆ ಬಂದಿದ್ದ ಕೆಲಸದ ಅಂದಿನ ಭಾಗ ಮುಗಿದು, ಉಳಿದ ಭಾಗ ಮರುದಿನಕ್ಕೆ ನಿಗಧಿಯಾಯಿತು.ಹಾಗಾದರೆ ಇಡೀ ದಿನ ಏನು ಮಾಡುವುದು?ಸ್ವಲ್ಪ ಚಳಿ ಇದ್ದರೂ ವಾತಾವರಣ ಅಷ್ಟೇನೂ ಕೆಟ್ಟದಾಗಿರಲಿಲ್ಲ. ಹಾಗಾಗಿ ಹೊರಗೆ ಹೋಗುವುದೆಂದು ನಿರ್ಧರಿಸಿದೆ. ಆದರೆ ಎಲ್ಲಿಗೆ ಹೋಗುವುದು?.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News