ತಿಪ್ಪೆ ಪಾಲಾಗುತ್ತಿರುವ ಗೇರು ಹಣ್ಣು; ಸಂಕಷ್ಟದಲ್ಲಿ ರೈತರು

Update: 2024-05-06 10:56 GMT

ಹೊಸಕೋಟೆ: ಬಡವರ ಸೇಬು ಖ್ಯಾತಿಯ ಹಲವು ಪೋಷಕಾಂಶಗಳ ಆಗರವಾಗಿರುವ ಗೇರು ಹಣ್ಣಿಗೆ ಸರಕಾರ ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸದೇ ಇರುವುದರಿಂದ ಹಣ್ಣು ತಿಪ್ಪೆಯ ಪಾಲಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಜಿಲ್ಲೆಯಲ್ಲಿ 110 ಹೆಕ್ಟೇರ್‌ನಲ್ಲಿ ರೈತರು ಗೇರು ಹಣ್ಣು ಬೆಳೆಯುತ್ತಾರೆ. ಎಪ್ರಿಲ್-ಮೇ ತಿಂಗಳಿನಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಈ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ. ಸುವಾಸನೆ ಭರಿತವಾದ ಗೇರು ಹಣ್ಣುಗಳು ಹಳದಿ, ಕೆಂಪು ಹಾಗೂ ಕೇಸರಿ ಬಣ್ಣದಲ್ಲಿ ಗ್ರಾಹಕರ ಕಣ್ಮನ ಸೆಳೆಯುತ್ತವೆ.

ಗೇರು ಹಣ್ಣಿನಲ್ಲಿ ಅನೇಕ ವಿಟಮಿನ್‌ಗಳಿದ್ದು, ಗಾಯಗಳನ್ನು ಅತೀ ಬೇಗನೆ ವಾಸಿ ಮಾಡುವ ಶಕ್ತಿಯನ್ನು ಹೊಂದಿವೆ. ಮಕ್ಕಳ ಹೊಟ್ಟೆಯಲ್ಲಿ ಜಂತು ಹುಳುಗಳನ್ನು ಸಾಯಿಸಲು ಇದರಲ್ಲಿ ರೋಗ ನಿರೋಧಕ ಗುಣ ಅಧಿಕವಿದ್ದು, ಕ್ಯಾನ್ಸರ್ ತಡೆಯಲು ಸಹಕಾರಿಯಾಗಿದೆ. ಮಧುಮೇಹ ಕಾಯಿಲೆಗಳಿಗೆ ರಾಮಬಾಣವಾಗಿ ಕಾರ್ಯ ನಿರ್ವಹಿಸುವ ಅಂಶ ಇದರಲ್ಲಿ ಅಡಕವಾಗಿದೆ. ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯಿಲ್ಲದ ಕಾರಣ ಕಟಾವು ಸಮಯದಲ್ಲಿ ರೈತರು ಹಣ್ಣನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದೆ ತಿಪ್ಪೆಗೆ ಸುರಿಯುತ್ತಿದ್ದಾರೆ

ನೆರೆ ರಾಜ್ಯಗಳಲ್ಲಿ ಗೇರು ಹಣ್ಣನ್ನು ಸಂಸ್ಕರಿಸಿ ನಾನಾ ಉತ್ಪನ್ನಗಳಿಗೆ ಬಳಕೆ ಮಾಡುವ ಮೂಲಕ ಆರ್ಥಿಕವಾಗಿ ಲಾಭದಾಯಕ ಕೃಷಿಯನ್ನಾಗಿಸಿದ್ದಾರೆ. ಕೇರಳ, ಗೋವಾ ಮತ್ತಿತರ ರಾಜ್ಯಗಳಲ್ಲಿನ ಸರಕಾರಗಳು ಅಲ್ಲಿನ ರೈತರಿಗೆ ಗೇರು ಹಣ್ಣನ್ನು ಸಂಸ್ಕರಿಸಿ ಸೂಕ್ತ ತರಬೇತಿ ಮೂಲಕ ಜ್ಯೂಸ್, ಹಲ್ವಾ, ತಯಾರಿಸಿ ಮಾರಾಟ ಮಾಡುವುದಲ್ಲದೇ ಮದ್ಯ ತಯಾರಿಸಲು ಕೃಷಿಕರಿಂದಲೇ ನೇರವಾಗಿ ಹಣ್ಣನ್ನು ಖರೀದಿಸಲು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ರೈತರ ನೆರವಿಗೆ ನಿಂತಿವೆ.

ಬಂಜರು ಭೂಮಿಯಲ್ಲಿ ಕೂಲಿಕಾರರ ಕೊರತೆ ಎದುರಿಸುತ್ತಿರುವ ಕೃಷಿಕರಿಗೆ ಕಡಿಮೆ ಕೆಲಸದಲ್ಲಿ ಉಪ ಆದಾಯ ಪಡೆದುಕೊಳ್ಳಲು ಗೇರು ಬೆಳೆ ಅನುಕೂಲವಾಗಿದೆಯಾದರೂ ಸೂಕ್ತ ಮಾಹಿತಿಯ ಕೊರತೆಯಿಂದ ಗೇರು ಹಣ್ಣು ರೈತರಿಗೆ ಲಾಭ ತರದೇ ತಿಪ್ಪೆಯ ಪಾಲಾಗಿ ಬೆಳೆಗಾರನಿಗೆ ಸಿಗಬೇಕಾದ ಆದಾಯಕ್ಕೆ ಕತ್ತರಿ ಬೀಳುವಂತಾಗಿದೆ.

3 ಎಕರೆಯಲ್ಲಿ ಗೇರು ಹಣ್ಣು ಬೆಳೆದಿದ್ದು ವರ್ಷಕ್ಕೆ ಒಂದು ಬಾರಿ ಇದರ ಫಸಲನ್ನು ಪಡೆಯುತ್ತಿದ್ದು, ಗೇರು ಬೀಜದ ವ್ಯಾಪಾರಿಗಳು ಮನೆ ಬಾಗಿಲಿಗೆ ಬಂದು ಬೀಜ ಕೊಂಡುಕೊಳ್ಳುತ್ತಾರೆ. ಗೇರು ಬೀಜದ ಸಮೇತ ಕೆಜಿ ಲೆಕ್ಕದಲ್ಲಿದರ ನಿಗದಿ ಮಾಡಿ ಖರೀದಿಸುತ್ತಾರೆ ಹಣ್ಣನ್ನು ಕೊಳ್ಳುವವರಿಲ್ಲದೇ ಪ್ರಾಣಿ-ಪಕ್ಷಿಗಳಿಗೆ ತಿನ್ನಲು ಬಿಟ್ಟಿದ್ದು, ಉಳಿಕೆ ಹಣ್ಣನ್ನು ಕಿತ್ತು ತಿಪ್ಪೆಗೆ ಸುರಿಯುತ್ತೇವೆ.

► ಮಂಜುನಾಥ್, ಗೇರು ಕೃಷಿಕ ದೊಡ್ಡಕೋಲಿಗ

ಗೇರು ಹಣ್ಣಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ, ಹಣ್ಣು ಕೊಯ್ದ ಮರುದಿನವೇ ಮುದುಡಿ ಹೋಗುತ್ತದೆ. ಸಂಸ್ಕರಿಸುವ ವಿಧಾನ ತಿಳಿದಿಲ್ಲವಾದ್ದರಿಂದ ಹಣ್ಣನ್ನು ಮಾರಾಟ ಮಾಡಲಾಗುತ್ತಿಲ್ಲ, ಗೇರು ಬೀಜದ ಆದಾಯಕ್ಕಾಗಿ ಕೃಷಿ ಮಾಡುತ್ತಿದ್ದು, ಹಣ್ಣಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಬರುವಂತಾದರೆ ಬೆಳೆಗಾರನಿಗೆ ಇನ್ನಷ್ಟು ಆದಾಯ ಕಾಣಲೂ ಸಾಧ್ಯ. ಈ ಬಗ್ಗೆ ಸರಕಾರ ಕಾಳಜಿ ವಹಿಸಬೇಕು.

► ಎನ್.ಸಿ.ಮುನಿರಾಜು, ತಾಲೂಕು ಕಾರ್ಯಾಧ್ಯಕ್ಷ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಹೊಸಕೋಟೆ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನಾರಾಯಣಸ್ವಾಮಿ ಸಿ.ಎಸ್.

contributor

Similar News