ದಿಲ್ಲಿಯ ರಾಜಪಥದಲ್ಲಿ ಘಮಘಮಿಸಿದ ಕೊಡಗಿನ ಕಾಫಿ

Update: 2016-01-26 18:56 GMT

ಹೊಸದಿಲ್ಲಿ: ಹೊಸದಿಲ್ಲಿಯ ರಾಜಪಥದಲ್ಲಿಂದು ನಡೆದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಪಾಲ್ಗೊಂಡ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ‘ಕೊಡಗು: ಕಾಫಿಯ ನಾಡು’ ಸ್ತಬ್ಧಚಿತ್ರ ಎಲ್ಲರ ಕಣ್ಮನ ಸೆಳೆಯಿತು.

ಕೊರೆಯುವ ಚಳಿಗೆ ಕಾಫಿ ಬೇಕೆನಿಸುವ ಹೊತ್ತಿಗೆ ‘ಕೊಡಗು: ಕಾಫಿಯ ನಾಡು’ ಸ್ತಬ್ಧಚಿತ್ರವು ರಾಜಪಥದುದ್ದಕ್ಕೂ ಬಿಸಿ ಕಾಫಿಯ ಸವಿಯನ್ನು ಆಸ್ವಾದಿಸುವ ಭಾವ ಮೂಡಿಸಿತು. ಸ್ತಬ್ಧ ಚಿತ್ರ ವಾಹನದ ಮುಂಭಾಗದಲ್ಲಿ ಬೃಹದಾಕಾರದ ಲೋಟದಿಂದ ಬಟ್ಟಲಿಗೆ ಕಾಫಿಯನ್ನು ಸುರಿಸುತ್ತಿರುವಂತೆ ಚಿತ್ರಿಸಲಾಗಿತ್ತು. ಜೊತೆಗೆ ಕಾಫಿಯ ಪರಿಕರಗಳನ್ನೂ ಪ್ರತಿಬಿಂಬಿಸಲಾಗಿತ್ತು
      
ಕಾಫಿಯ ಬಿಸಿ ಹಬೆಯು ಆವರಿಸು ತ್ತಿರುವುದನ್ನು ಕಂಡು ಕೇಂದ್ರ ಸಚಿವರಾದ ಅನಂತ ಕುಮಾರ್, ಸದಾನಂದಗೌಡ ಸೇರಿದಂತೆ ಜನಸ್ತೋಮ ಎದ್ದುನಿಂತು ಹರ್ಷ ವ್ಯಕ್ತಪಡಿಸಿದರು. ಕಾಫಿಯ ಪರಿಮಳದ ಸುವಾಸನೆ ಬೀರುವಂತೆಯೂ, ಕಾಫಿ ಬೀಜಗಳ ರಾಶಿಯ ನಡುವೆ ಇರುವ ಲೋಟದಿಂದ ಬಟ್ಟಲಿಗೆ ಕಾಫಿಯನ್ನು ಸುರಿಸುವಂತೆ ಮಾಡಲಾಗಿತ್ತು.

ಫಿಲ್ಟರ್ ಕಾಫಿ ತಯಾರಿಸುವ ಪಾತ್ರಗಳು, ಸಕ್ಕರೆ ಬಟ್ಟಲುಗಳು ಸಹ ಪ್ರಧಾನವಾಗಿ ಕಂಡು ಬಂತು. ಕಾಫಿ ಬೀಜ ಸಂಸ್ಕರಣೆಗೊಂಡು ಕಾಫಿಪುಡಿಯಾಗಿ ಬರುವ ವಿವಿಧ ಹಂತಗಳನ್ನು ತೋರಿಸಲಾಗಿತ್ತು. ಪ್ರಧಾನ ಭಾಗದಲ್ಲಿ ಕಾಫಿ ತೋಟದಲ್ಲಿ ಕಾಫಿ ಹಣ್ಣು ಕೀಳುತ್ತಿರುವ ಮಹಿಳೆಯ ಆಳೆತ್ತರದ ಪ್ರತಿಕೃತಿ ಆಷರ್ಕಣೀಯವಾಗಿತ್ತು.

ಹಾಗೆಯೇ, ಕಾಫಿ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗ ಎನ್ನುವುದನ್ನು ಪ್ರತಿಬಿಂಬಿ ಸಲಾಗಿತ್ತು. ಕಾಫಿ ಹಣ್ಣು ಗಳನ್ನು ಹಸನ ಗೊಳಿಸುತ್ತಿರುವ ಮತ್ತು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ವಿವಿಧ ಹಂತಗಳನ್ನು ತೋರಿಸಲಾಗಿತ್ತು. ಸ್ತಬ್ಧಚಿತ್ರದ ಮೇಲ್ಭಾಗದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವವರು ಮತ್ತು ವಿವಿಧ ಹಂತಗಳನ್ನು ಪರಿಶೀಲಿಸುವ ಕಾಫಿ ತೋಟದ ಮಾಲಕರಾಗಿ ಕೊಡಗಿನ ಕುರಿಕಾದ ಗಣಪತಿ ಕವಿತಾ, ಸಿ.ಎಂ.ಸಚ್ಚಿ, ಕೆ.ಸೋಮಯ್ಯ ಹಾಗೂ ನೇವಿ ಚಾರ್ಲೇ ಪಾಲ್ಗೊಂಡಿದ್ದರು. ಕಾಫಿ ಎಸ್ಟೇಟ್‌ಗಳಲ್ಲಿರುವ ನಾಯಿಗಳ ಚಿತ್ರವನ್ನು ಅಳವಡಿಸಲಾಗಿತ್ತು.

ಕಪ್‌ನಿಂದ ಕಾಫಿ ಬಟ್ಟಲಿಗೆ ಸುರಿಯುವ ಮೂಲಕ ವಿಶ್ವಕ್ಕೇ ಕಾಫಿ ಸ್ವಾದವನ್ನು ಪಸರಿಸುವಂತೆ ಬಿಂಬಿಸಲಾಗಿತ್ತು. ಅಂತಾ ರಾಷ್ಟ್ರೀಯ ಖ್ಯಾತಿಯ ಕಲಾನಿರ್ದೇಶಕ ಶಶಿಧರ ಅಡಪ ಹಾಗೂ ತಂಡ ಸ್ತಬ್ಧಚಿತ್ರವನ್ನು ಆಕರ್ಷಕವಾಗಿ ರೂಪಿಸಿದ್ದರು. ಯುವ ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್ ಸಂಗೀತ ಸಂಯೋಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News