ಬಂಧಿತ ಖಾಸ್ಮಿ ದೇಶ ವಿರೋಧಿಯಾಗಿರಲಿಲ್ಲ: ಮುಹಮ್ಮದ್ ಸುಲೈಮಾನ್

Update: 2016-02-01 17:14 GMT

ಬೆಂಗಳೂರು, ಫೆ. 1: ಐಎಸ್ ಸಂಪರ್ಕ ಹೊಂದಿರುವ ಸಂಶಯದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿರುವ ನಗರದ ಬನಶಂಕರಿ ನಿವಾಸಿ ವೌಲಾನ ಅಂಝರ್‌ಷಾ ಖಾಸ್ಮಿ ಇಸ್ಲಾಂ ಹಾಗೂ ಪವಿತ್ರ ಕುರ್‌ಆನ್‌ನ ಕುರಿತು ಮುಸ್ಲಿಂ ಬಾಂಧವರಲ್ಲಿ ಮಾಹಿತಿ ಪ್ರಚಾರ ಮಾಡುತ್ತಿದ್ದರು. ಯಾವುದೇ ರೀತಿಯ ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿರಲಿಲ್ಲ ಎಂದು ಇಂಡಿಯನ್ ನ್ಯಾಷನಲ್ ಲೀಗ್‌ನ ಅಧ್ಯಕ್ಷ ಮುಹಮ್ಮದ್ ಸುಲೈಮಾನ್ ತಿಳಿಸಿದ್ದಾರೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಸ್ಲಾಂ ಕುರಿತ ಖಾಸ್ಮಿ ಮಾಡಿರುವ ಭಾಷಣದ ಧ್ವನಿ ಸುರಳಿಯನ್ನು ಬೆಂಗಳೂರು ಪೊಲೀಸ್ ಆಯುಕ್ತ ಮೇಘರಿಕ್ ಕೇಳಿದ್ದಾರೆ. ಆ ಧ್ವನಿ ಸುರಳಿಯಲ್ಲಿ ಯಾವುದೇ ತಪ್ಪು ಮಾಹಿತಿಗಳು ಇಲ್ಲವೆಂದು ಹೇಳಿದ್ದಾರೆ. ಇಷ್ಟಾಗಿಯೂ ರಾಷ್ಟ್ರೀಯ ತನಿಖಾ ದಳದ ಸಿಬ್ಬಂದಿ ಖಾಸ್ಮಿಯನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದರು.
 ಇಂಡಿಯನ್ ನ್ಯಾಷನಲ್ ಲೀಗ್ ವತಿಯಿಂದ ಖಾಸ್ಮಿ ಮನೆಗೆ ಭೇಟಿ ನೀಡಿ, ಅವರ ಕುಟುಂಬಸ್ಥರೊಂದಿಗೆ ಮಾತನಾಡಿದೆವು. ಅವರ ಕುಟುಂಬಕ್ಕೆ ಒಳ್ಳೆಯ ಹೆಸರಿದೆ. ಖಾಸ್ಮಿ ಕುರಿತು ಸ್ಥಳೀಯ ಜನತೆ ಅಭಿಮಾನವನ್ನು ಹೊಂದಿದ್ದಾರೆ. ಕೇವಲ ಇಸ್ಲಾಂ ಕುರಿತು ಭಾಷಣ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಿರುವುದು ಸರಿಯಲ್ಲವೆಂದು ಅವರು ತಿಳಿಸಿದರು.
ಭಾರತದಲ್ಲಿ ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸುವಂತಹ ಪ್ರಕ್ರಿಯೆ ನಿರಂತರವಾಗಿ ನಡೆದಿದೆ. ಇಲ್ಲಿಯವರೆಗೂ ನೂರಾರು ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಿರುವ ಪೊಲೀಸ್ ಇಲಾಖೆ, 10 ವರ್ಷಗಳಿಗೂ ಹೆಚ್ಚು ಕಾಲ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಬಿಡುಗಡೆ ಮಾಡುತ್ತಾರೆ. ಜನತೆಗೆ ರಕ್ಷಣೆ ಕೊಡಬೇಕಾದ ಪೊಲೀಸ್ ಇಲಾಖೆ ನಮಗೆ ಹಿಂಸೆ ಕೊಡುತ್ತಿದೆ. ಇದರಿಂದ ಅಮಾಯಕ ಮುಸ್ಲಿಂ ಯುವಕರಲ್ಲಿ ಆತ್ಮವಿಶ್ವಾಸ ಕುಗ್ಗುತ್ತಿದೆ ಎಂದು ಅವರು ತಿಳಿಸಿದರು.
ದಿಲ್ಲಿ ಪೊಲೀಸರು ಕೋಮುವಾದಿಗಳ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರವು ಮುಸ್ಲಿಂ ಸಮುದಾಯದ ಕುರಿತು ಅಪಪ್ರಚಾರ ಮಾಡುತ್ತಿದೆ. ಈ ಬಗ್ಗೆ ಜನತೆಗೆ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು. ಗೋಷ್ಠಿಯಲ್ಲಿ ಇಂಡಿಯನ್ ನ್ಯಾಷನಲ್ ಲೀಗ್‌ನ ಉಪಾಧ್ಯಕ್ಷ ಪಿ.ಸಿ.ಕುರೀಲ್, ಕಾರ್ಯದರ್ಶಿ ಅಹ್ಮದ್ ದೇವರ್ ಕೊವಿಲ್, ಇಫ್ತಿಖಾರ್ ಇಸ್ಲಾಂ, ಡಾ.ಹಾಫಿಝ್, ಅಝ್‌ಗರ್ ರಫಿಲ್ಲಉದ್ದಿನ್, ಪಿ.ಕೆ.ಸಿದ್ದಿಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News