ಸಲಿಂಗಕಾಮ:ಪರಿಹಾರಕ ಅರ್ಜಿಗಳ ವಿಚಾರಣೆ ಹೊಣೆ ಸಂವಿಧಾನ ಪೀಠಕ್ಕೆ

Update: 2016-02-02 13:30 GMT

ಹೊಸದಿಲ್ಲಿ,ಫೆ.2: ಐಪಿಸಿಯ ಕಲಂ 377ರಡಿ ಸಲಿಂಗಕಾಮವನ್ನು ಅಪರಾಧವೆಂದು ಘೋಷಿಸಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪುನರ್‌ಪರಿಶೀಲನೆಯನ್ನು ಕೋರಿ ಸಲ್ಲಿಸಲಾಗಿರುವ ಪರಿಹಾರಕ ಅರ್ಜಿಗಳ ವಿಚಾರಣೆಯನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠವು ನಡೆಸಲಿದೆ.
 ಈ ವಿಷಯದಲ್ಲಿ ಸಂವಿಧಾನಕ್ಕೆ ಸಂಬಂಧಿಸಿದ ಮಹತ್ವದ ವಿಚಾರಗಳು ಒಳಗೊಂಡಿರುವುದರಿಂದ ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ಒಪ್ಪಿಸುವುದು ಸೂಕ್ತವಾಗುತ್ತದೆ ಎಂದು ಶ್ರೇಷ್ಠ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಹಾಗೂ ನ್ಯಾಯಮೂರ್ತಿಗಳಾದ ಎ.ಆರ್.ದವೆ ಮತ್ತು ಜೆ.ಎಸ್.ಕೆಹರ್ ಅವರನ್ನೊಳಗೊಂಡ ಪೀಠವು ಹೇಳಿತು.
  ಇಬ್ಬರು ವ್ಯಕ್ತಿಗಳ ನಡುವೆ ಪರಸ್ಪರ ಒಪ್ಪಿಗೆಯ ಮೇರೆಗೆ ನಡೆಯುವ ಸಲಿಂಗ ಕಾಮ ಚಟುವಟಿಕೆ ಅಪರಾಧವಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು 2013,ಡಿ.11ರಂದು ತಳ್ಳಿಹಾಕಿತ್ತು. ಈ ಆದೇಶವನ್ನು ಪುನರ್‌ಪರಿಶೀಲಿಸುವಂತೆ ಕೋರಿ ಎಂಟು ಪರಿಹಾರಕ ಅರ್ಜಿಗಳು ದಾಖಲಾಗಿವೆ.
ಉತ್ತರ ಭಾರತದ ಚರ್ಚ್‌ಗಳು ಮತ್ತು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಸಲಿಂಗಕಾಮವನ್ನು ಅಪರಾಧವಲ್ಲ ಎಂದು ಪರಿಗಣಿಸುವುದನ್ನು ವಿರೋಧಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News