ಇನ್ಫೋಸಿಸ್‌ನಿಂದ ವಿಶ್ವದ ಅತ್ಯಂತ ಎತ್ತರದ ಕ್ಲಾಕ್ ಟವರ್

Update: 2016-02-02 18:22 GMT

ಕೆಫ್ ಇನ್ಫ್ರಾಕ್ಕೆ ನಿರ್ಮಾಣ ಉಸ್ತುವಾರಿ  

ಬೆಂಗಳೂರು , ಫೆ.2 : ಸಾಫ್ಟ್‌ವೇರ್ ದಿಗ್ಗಜ ಕಂಪೆನಿ ಇನ್ಫೋಸಿಸ್ ಮೈಸೂರಿನ 345 ಎಕರೆ ಪ್ರದೇಶದಲ್ಲಿರುವ ತನ್ನ ಪ್ರತಿಷ್ಠಿತ ಗ್ಲೋಬಲ್ ಎಜುಕೇಶನ್ ಸೆಂಟರ್ ನಲ್ಲಿ ವಿಶ್ವದ ಅತಿ ಎತ್ತರದ ಸ್ವತಂತ್ರ ಗಡಿಯಾರ ಗೋಪುರ (ಕ್ಲಾಕ್ ಟವರ್) ನಿರ್ಮಿಸಲು ಹೊರಟಿದೆ. ಇಂತಹದೊಂದು ವಿಶ್ವಖ್ಯಾತಿಯ ಗೋಪುರ ನಿರ್ಮಾಣ ಕಂಪೆನಿಯ ಸ್ಥಾಪಕಾಧ್ಯಕ್ಷ ಎನ್.ಆರ್. ನಾರಾಯಣಮೂರ್ತಿ ಅವರ ಬಯಕೆಯಾಗಿತ್ತು ಎಂದು ಹೇಳಲಾಗಿದೆ.

ಇನ್ಫೋಸಿಸ್ ಪ್ರಕಾರ ಅದರ ಮೈಸೂರು ಕ್ಯಾಂಪಸ್ ಈಗಾಗಲೇ ವಿಶ್ವದ ಅತಿ ದೊಡ್ಡ ಕಾರ್ಪೊರೇಟ್ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವಿಶಿಷ್ಟ , ವಿಶ್ವಖ್ಯಾತಿಯ ಗೋಪುರವನ್ನು ಕೇರಳ ಮೂಲದ ಉದ್ಯಮಿ ಫೈಝಲ್ ಕೊಟ್ಟಿಕೊಲ್ಲನ್ ಹಾಗೂ ಶಬಾನ ಫೈಝಲ್ ಅವರ ಕೆಫ್ ಇನ್ಫ್ರಾ ಸಂಸ್ಥೆ ನಿರ್ಮಿಸಲಿದೆ.

ಕೆಫ್ ಭಾರತಕ್ಕೆ ಪ್ರಿಕಾಸ್ಟ್ ನಿರ್ಮಾಣದ ಕಲ್ಪನೆಯನ್ನು ಪರಿಚಯಿಸಿ ಕೃಷ್ಣಗಿರಿಯಲ್ಲಿ ದೇಶದ ಪ್ರಪ್ರಥಮ ಹಾಗೂ ಅತಿ ದೊಡ್ಡ ಪ್ರಿಕಾಸ್ಟ್ ನಿರ್ಮಾಣ ಘಟಕವನ್ನು ಇತ್ತೀಚೆಗೆ ಪ್ರಾರಂಭಿಸಿದೆ. ಲಂಡನ್‌ನ ಬಿಗ್ ಬೆನ್(96 ಮಿ.), ಕ್ಯಾಲಿಫೋರ್ನಿಯಾದ ಹೂವರ್ ಟವರ್(87 ಮಿ.) ಹಾಗೂ ಕಾರ್ನೆಲ್‌ನ ಮೆಗ್ರಾ ಟವರ್(53 ಮಿ.)ಗಳಿಗಿಂತ ಎತ್ತರದ ಈ ಗೋಪುರ 135 ಮೀಟರ್ ಎತ್ತರವಿರುತ್ತದೆ.

ಮೈಸೂರು ಕ್ಯಾಂಪಸ್‌ನಲ್ಲಿ ಈಗಾಗಲೇ ಇರುವ ವಿಶಿಷ್ಟ ಶೈಲಿಯ ಕಟ್ಟಡಗಳಿಗೆ ಸರಿಹೊಂದುವಂತೆ ವಿಶೇಷವಾಗಿ ಗಾಥಿಕ್ ಶೈಲಿಯಲ್ಲಿ ನಿರ್ಮಾಣವಾಗಲಿರುವ ಈ ಗೋಪುರದಲ್ಲಿ ಒಟ್ಟು 19 ಮಹಡಿಗಳು ಇರುತ್ತವೆ. ಇದರ 7ನೆ ಮಹಡಿಯಲ್ಲಿ ಕಂಪೆನಿಯ ಬೋರ್ಡ್‌ರೂಂ ಇರಲಿದೆ. 22್ಡ22 ಮೀಟರ್ ಅಳತೆಯ ಮೂಲ ಆಧಾರದ ಮೇಲೆ ಈ ಗೋಪುರ ನಿರ್ಮಾಣವಾಗುತ್ತದೆ. ಗೋಪುರ ನಿರ್ಮಾಣಕ್ಕೆ ಒಟ್ಟು 60 ಕೋಟಿ ರೂ. ಖರ್ಚಾಗಲಿದ್ದು, 20 ತಿಂಗಳಲ್ಲಿ ನಿರ್ಮಾಣ ಪೂರ್ಣಗೊಳ್ಳಲಿದೆ.

ನಾರಾಯಣಮೂರ್ತಿ ಅವರು ಗೋಪುರ ನಿರ್ಮಾಣದ ವಿಷಯವನ್ನು ಖಚಿತಪಡಿಸಿದ್ದಾರೆ. ಈ ಗೋಪುರವಿಲ್ಲದೆ ಮೈಸೂರು ಕ್ಯಾಂಪಸ್ ಅಪೂರ್ಣವಾಗಿದೆ ಎಂದವರು ಹೇಳಿದ್ದಾರೆ. ಇಂತಹ ಕ್ಯಾಂಪಸ್ ಒಂದಕ್ಕೆ ಗಡಿಯಾರ ಗೋಪುರ ಶೈಕ್ಷಣಿಕ ವಾತಾವರಣ ಕಲ್ಪಿಸುತ್ತದೆ.

   ವಿಶಾಲ್ (ಸಿಕ್ಕ , ಕಂಪೆನಿಯ ಸಿಇಒ) ಕೂಡ ಇದು ಬಹಳ ಒಳ್ಳೆಯ ಐಡಿಯಾ ಎಂದು ಒಪ್ಪಿದರು ಎಂದು ಅವರು ಸಂತಸ ವ್ಯಕ್ತ ಪದಿಸಿದರು. ಮೈಸೂರು ಕ್ಯಾಂಪಸ್ ಅನ್ನು ವಿನ್ಯಾಸ ಮಾಡಿರುವ ದೇಶದ ಖ್ಯಾತ ಆರ್ಕಿಟೆಕ್ಟ್ ಮುಂಬೈ ಯ ಹಫೀಜ್ಹ್ ಕಾಂಟ್ರಾಕ್ಟರ್ ಗೋಪುರದ ವಿನ್ಯಾಸ ಮಾಡಿದ್ದಾರೆ. ನ್ಯೂಯಾರ್ಕ್‌ನ ಲೆರಾ ಎಂಬ ಸಂಸ್ಥೆ ಇದಕ್ಕೆ ಸ್ಟ್ರಕ್ಚರಲ್ ಕನ್ಸಲ್ಟನ್ಸಿ ಮಾಡುತ್ತಿದ್ದು ಬೆಂಗಳೂರು ಮೂಲದ ಕೆಫ್ ಇನ್ಫ್ರಾ ಇದನ್ನು ನಿರ್ಮಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News