ಜೋಗತಿ ಜೋಳಿಗೆ: ಹಕ್ಕಿ ಗೂಡು ಕಟ್ಟುವಂತೆ...

Update: 2016-02-04 17:44 GMT

ಈಗಾಗಲೇ ಕತೆ ನಾಟಕಗಳ ಮೂಲಕ ಗಮನಾರ್ಹ ಕತೆಗಾರ್ತಿಯಾಗಿ ಮೂಡಿ ಬಂದಿರುವ ಅನುಪಮಾ ಪ್ರಸಾದ್ ಹೊಸ ಕತಾಸಂಕಲನ ‘ಜೋಗತಿ ಜೋಳಿಗೆ’. ಈ ಸಂಕಲನದಲ್ಲಿ ಒಟ್ಟು ಎಂಟು ಕತೆಗಳಿವೆ. ಮನುಷ್ಯ ತಾನು ನಿರ್ಮಿಸಿಕೊಂಡ ಸಂಬಂಧಗಳು ಮತ್ತು ಅದರ ಗಟ್ಟಿತನವನ್ನು ಅಲುಗಾಡಿಸಿ ನೋಡುವ ಕತೆಗಳು, ಮನುಷ್ಯ-ಮನುಷ್ಯನ ನಡುವೆ ಮಾತ್ರವಲ್ಲದೆ, ಮನುಷ್ಯ ಪ್ರಕೃತಿಯ ನಡುವಿನ ಸಂಬಂಧಗಳನ್ನೂ ಒರೆಗೆ ಹಚ್ಚಿ ನೋಡುತ್ತವೆ. ‘ಇಸುಮುಳ್ಳು’ ಕತೆಯ ಕುರಿತಂತೆ ಖ್ಯಾತ ವಿಮರ್ಶಕ ಡಾ. ಎಚ್. ಎಸ್. ರಾಘವೇಂದ್ರರಾವ್ ಹೀಗೆ ಬರೆಯುತ್ತಾರೆ ‘‘ಹಲವು ಆಯಾಮ ಹೊಂದಿರುವ ಸಂಕೀರ್ಣ ಕಥೆ ಇದು. ಹಳ್ಳಿ, ನಗರ, ನಿಸರ್ಗ, ಸ್ಲಮ್ಮು, ನಗರ ಜೀವನದ ನಿಗೂಢಗಳು-ಎಲ್ಲವನ್ನು ಹಕ್ಕಿ ಕಡ್ಡಿಗಳಿಂದ ಗೂಡು ಕಟ್ಟುವಂತೆ ರೂಪಿಸಲು ಸಾಧ್ಯವಾಗಿರುವುದು ವಾಸ್ತವವನ್ನು ಮೀರು ಕಲೆಗಾರಿಕೆಯಿಂದ...’’ ಇವರ ಈ ಮಾತು, ಇಲ್ಲಿರುವ ಇನ್ನೂ ಹಲವು ಕತೆಗಳಿಗೆ ಅನ್ವಯಿಸುತ್ತದೆ. ಈ ಕತೆಯಲ್ಲಿ ಬರುವ ಸಣ್ಣ ಸಣ್ಣ ವಿವರಗಳಿಗೂ ಅಗಾಧತೆಯನ್ನು ಹೊಳೆಯಿಸುವ ಶಕ್ತಿಯಿದೆ.
ಜೋಗತಿ ಜೋಳಿಗೆಯ ಯಮುನಕ್ಕು ವಿಧವೆಯ ಮೂಲಕ ಹೆಣ್ಣಿನ ಒಳ ತುಮುಲಗಳನ್ನು ಅತ್ಯಂತ ಪ್ರಬುದ್ಧತೆಯಿಂದ ಮಂಡಿಸುತ್ತಾರೆ ಅನುಪಮಾ. ನೈತಿಕತೆ ಮತ್ತು ಅನೈತಿಕತೆಯ ನಡುವೆ ಮನುಷ್ಯನ ತೊಳಲಾಟಗಳನ್ನು ಈ ಕತೆ ಪರಿಣಾಮಕಾರಿಯಾಗಿ ನಿರೂಪಿಸುತ್ತದೆ. ಮುನ್ನುಡಿಯಲ್ಲಿ ಸಬಿತಾ ಬನ್ನಾಡಿಯವರು ಹೇಳುವಂತೆ, ತಾನು ಏನನ್ನು ಹೇಳ ಹೊರಡುತ್ತಿದ್ದೇನೆ ಎಂಬುದರ ಕುರಿತ ಸ್ಪಷ್ಟತೆ, ಅದನ್ನು ಕತೆಯಾಗಿಸುವಲ್ಲಿ ಪರಿಣತಿ ಎರಡೂ ಈ ಕತೆಗಾರ್ತಿಯಲ್ಲಿದೆ.
ಈ ಸಂಕಲನವನ್ನು ಅಹರ್ನಿಶಿ ಪ್ರಕಾಶನ ಶಿವಮೊಗ್ಗ ಹೊರತಂದಿದೆ. ಮುಖಬೆಲೆ 120 ರೂ. ಆಸಕ್ತರು 94491 74662 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯ

contributor

Editor - ಕಾರುಣ್ಯ

contributor

Similar News