ಆಹಾರ ಸಂಸ್ಕೃತಿಯ ಮೇಲಿನ ದಾಳಿ ಖಂಡನೀಯ: ನಾರಾಯಣಸ್ವಾಮಿ

Update: 2016-02-07 18:36 GMT

ಬೆಂಗಳೂರು, ಫೆ.7: ಜನ ಸಾಮಾನ್ಯರು ಯಾವ ಬಗೆಯ ಆಹಾರವನ್ನು ಸ್ವೀಕರಿಸಬೇಕು ಎಂದು ಮತ್ತೊಬ್ಬರು ನಿರ್ಧರಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕ ಎಂದು ಬ್ಯಾಮ್‌ಸೆಫ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಿ. ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಕನ್ನಿಂಗ್‌ಹ್ಯಾಮ್‌ರಸ್ತೆಯಲ್ಲಿರುವ ಫಿರೋಝ್ ಎಸ್ಟೇಟ್‌ನಲ್ಲಿ ಅಖಿಲ ಭಾರತ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದ ಉದ್ಯೋಗಿಗಳ ಒಕ್ಕೂಟ (ಬಿಎಎಂಸಿಇಎಫ್-ಬ್ಯಾಮ್‌ಸೆಫ್)ದ ವತಿಯಿಂದ ಆಯೋಜಿಸಲಾಗಿದ್ದ ಮೂಲನಿವಾಸಿ-ಬಹುಜನ ಐಕ್ಯತಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

 
ಭಾರತವು ಹಲವಾರು ಸಂಸ್ಕೃತಿಗಳನ್ನು ಒಳಗೊಂಡಿರುವ ವಿಶ್ವದ ಅತ್ಯಂತ ಸಮೃದ್ಧ ರಾಷ್ಟ್ರ. ಆದರೆ, ಇತ್ತೀಚಿನ ದಿನಗಳಲ್ಲಿ ಅಸಹಿಷ್ಣುತೆ, ಲವ್‌ಜಿಹಾದ್, ಘರ್‌ವಾಪಸಿ ಸೇರಿದಂತೆ ಅನಗತ್ಯ ವಿಚಾರಗಳಿಂದಾಗಿಯೇ ಹೆಚ್ಚು ಚರ್ಚೆಗೆ ಒಳಗಾಗುತ್ತಿದೆ ಎಂದು ಅವರು ಹೇಳಿದರು. ದೇಶದ ಮೂಲ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಯಾರೊಬ್ಬರೂ ಮುಂದಾಗುತ್ತಿಲ್ಲ. ಸ್ವಾತಂತ್ರ ಬಂದು ಆರು ದಶಕಗಳು ಕಳೆದಿದ್ದರೂ ಇಂದಿಗೂ ಆಹಾರ, ಕುಡಿಯುವ ನೀರು, ವಸತಿಯಂತಹ ಮೂಲಭೂತ ಸೌಕರ್ಯಗಳು ನಮ್ಮ ಚುನಾವಣಾ ಪ್ರಣಾಳಿಕೆಯ ಭಾಗಗಳಾಗಿವೆ. ಎರಡು ಲಕ್ಷ ಗ್ರಾಮಗಳು ಇಂದಿಗೂ ವಿದ್ಯುತ್ ಸಂರ್ಪಕವನ್ನು ಪಡೆದಿಲ್ಲ. ಶೇ.50ರಷ್ಟು ಜನ ಅನಕ್ಷರಸ್ಥರಾಗಿದ್ದಾರೆ ಎಂದು ಅವರು ತಿಳಿಸಿದರು. ವಾಸಿಸಲು ಯೋಗ್ಯವಲ್ಲದ ವಿಶ್ವದ 20 ನಗರಗಳ ಪೈಕಿ 13 ನಗರಗಳು ಭಾರತದಲ್ಲಿವೆ. ಶೇ.85ರಷ್ಟು ಮೂಲ ನಿವಾಸಿಗಳು ದೇಶದ ಅಭಿವೃದ್ಧಿಯ ಭಾಗವಾಗಿಲ್ಲ. ಆಳುವ ವರ್ಗಗಳು ರಾಷ್ಟ್ರ ಹಾಗೂ ಜನರ ಹಿತವನ್ನು ಮರೆತಿವೆ ಎಂದು ನಾರಾಯಣಸ್ವಾಮಿ ಕಿಡಿಕಾರಿದರು.
ದೇಶದಲ್ಲಿ ಸಾವಿರಾರು ಜಾತಿ, ಉಪ ಜಾತಿಗಳಿವೆ. ಮೂಲನಿವಾಸಿಗಳು ಪರಸ್ಪರ ಕಚ್ಚಾಡುವಂತೆ ಕೆಲವು ಶಕ್ತಿಗಳು ಮಾಡಿದ್ದಾರೆ. ಶೇ.85ರಷ್ಟಿರುವ ಮೂಲನಿವಾಸಿಗಳನ್ನು ಜಾತಿ, ಧರ್ಮದ ಆಧಾರದಲ್ಲಿ ವಿಭಜಿಸಿ, ಕೇವಲ ಶೇ.3ರಷ್ಟಿರುವ ಜನ ರಾಷ್ಟ್ರೀಯ ಮಟ್ಟದ ಸಂಘಟನೆ ಮಾಡಿ ನಮ್ಮನ್ನು ಅಧೀರರನ್ನಾಗಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
 
ಸಂಘಟನಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಇಕ್ಬಾಲ್ ಮಾತನಾಡಿ, ಅಲ್ಪಸಂಖ್ಯಾತರನ್ನು ಗುರಿಯನ್ನಾಗಿಸಿ ದಾಳಿ ಮಾಡಿ, ಇತರ ವರ್ಗಗಳನ್ನು ತಮ್ಮತ್ತ ಸೆಳೆದುಕೊಳ್ಳುತ್ತಿರುವ ಪ್ರಯತ್ನಗಳನ್ನು ನಾವು ನೋಡಬಹುದು. ಮೂಲ ನಿವಾಸಿಗಳು ರಾಷ್ಟ್ರೀಯ ಮಟ್ಟದಲ್ಲಿ ವಿಷಯಾಧಾರಿತವಾಗಿ ಮುನ್ನಡೆಯಬೇಕು. ಅನ್ಯಾಯವನ್ನು ನ್ಯಾಯ ಎಂಬ ರೀತಿಯಲ್ಲಿ ಬಿಂಬಿಸುವ ಮೂಲಕ ನಮ್ಮನ್ನು ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಇಕ್ಬಾಲ್ ಅಹ್ಮದ್ ಶರೀಫ್, ಸಿದ್ಧಾರ್ಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News