ಜೆಎನ್‌ಯು ರಾಜಕೀಯ ಇನ್ನೊಬ್ಬ ವೇಮುಲಾ ಬಲಿಯಾಗದಿರಲಿ

Update: 2016-02-12 18:53 GMT

ದಿಲ್ಲಿಯ ಜವಾಹರಲಾಲ್ ನೆಹರೂ ಯುನಿವರ್ಸಿಟಿಗೆ ದೇಶದೊಳಗೆ ಮಾತ್ರವಲ್ಲ, ಹೊರದೇಶಗಳಲ್ಲೂ ವಿಶೇಷ ವರ್ಚಸ್ಸಿದೆ. ಈ ದೇಶದ ವೈಚಾರಿಕ, ಪ್ರಗತಿಪರ ಚಿಂತನೆಗಳಿಗೆ ನಿರಂತರವಾಗಿ ನೀರೆರೆದು ಪೋಷಿಸುತ್ತಾ ಬಂದಿದೆ ಜೆಎನ್‌ಯು. ಇಲ್ಲ್ಲಿ ಎಡಪಂಥೀಯ ಚಿಂತನೆಗಳು ಆದ್ಯತೆಯನ್ನು ಪಡೆದಿವೆ ಎಂಬ ಆರೋಪಗಳನ್ನು ಕೆಲವರು ಮಾಡುತ್ತಾರಾದರೂ, ಜೀವಪರ ಚಿಂತಕರ ತೊಟ್ಟಿಲಾಗಿದೆ ಈ ವಿಶ್ವವಿದ್ಯಾಲಯ. ಬಹುಶಃ ಈ ಕಾರಣದಿಂದಲೇ ಇರಬೇಕು, ಸಂಘಪರಿವಾರ ಮತ್ತು ಬಿಜೆಪಿ ಮುಖಂಡರಿಗೆ ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಕಾರ್ಯಕ್ರಮಗಳ ಮೇಲೆ ಬಹಳಷ್ಟು ಅಸಮಾಧಾನಗಳಿವೆ.ಆಗಾಗ ಇದರಲ್ಲಿ ಮೂಗು ತೂರಿಸಲು ಹವಣಿಸುತ್ತಾ ಬಂದಿದೆಯಾದರೂ, ಅದರಲ್ಲಿ ಯಶಸ್ವಿಯಾದದ್ದು ಕಡಿಮೆ.ಇದೀಗ ಜೆಎನ್‌ಯುವಿನ ಆವರಣದ ಹೊರಗೆ ನಡೆದಿರುವ ಒಂದು ಕಾರ್ಯಕ್ರಮವನ್ನು ಮುಂದಿಟ್ಟುಕೊಂಡು ಆ ವಿಶ್ವವಿದ್ಯಾನಿಲಯದಲ್ಲಿ ತನ್ನ ನಿಯಂತ್ರಣವನ್ನು ಸಾಧಿಸಲು ಸಂಘಪರಿವಾರ ಮತ್ತು ಕೆಲ ಬಿಜೆಪಿ ಮುಖಂಡರು ಹವಣಿಸುತ್ತಿದ್ದಾರೆ. ಇದರ ಭಾಗವಾಗಿಯೇ ಕಳೆದ ಫೆಬ್ರವರಿ 9ರಂದು ಇಲ್ಲಿನ ವಿದ್ಯಾರ್ಥಿ ಸಂಘಟನೆಗಳು ಹಮ್ಮಿಕೊಂಡ ಕಾರ್ಯಕ್ರಮಕ್ಕೆ ದೇಶದ್ರೋಹದ ಆರೋಪವನ್ನು ಬಳಿಯಲು ಕೇಂದ್ರ ಸರಕಾರ ಹವಣಿಸುತ್ತಿದೆ. ಫೆ. 9 ಅಫ್ಝಲ್‌ಗುರುವನ್ನು ನೇಣಿಗೇರಿಸಿದ ದಿನ. ಈ ಸಂದರ್ಭದಲ್ಲೇ ಜೆಎನ್‌ಯು ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಆಯೋಜಿಸಿದ್ದರು ಮತ್ತು ಕಾಶ್ಮೀರ ಸಮಸ್ಯೆಗಳನ್ನು ಚರ್ಚಿಸಿದ್ದರು. ಆಗ ಅಫ್ಝರ್ ಗುರು ನೇಣಿಗೇರಿಸಿದ ವಿಷಯವೂ ಚರ್ಚೆಗೊಳಗಾಗಿತ್ತು.ಅಫ್ಝಲ್‌ಗುರು ನೇಣು ಚರ್ಚೆಗೊಳಗಾಗಿರುವುದು ಇದೇ ಮೊದಲೇನಲ್ಲ.ಹಲವು ನ್ಯಾಯವಾದಿಗಳು, ಚಿಂತಕರು ಈ ಕುರಿತಂತೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ ಮತ್ತು ಅದನ್ನು ವಿಶ್ಲೇಷಿಸಿದ್ದಾರೆ.ಅಷ್ಟಕ್ಕೇ ಅವರನ್ನು ದೇಶದ್ರೋಹಿ ಎಂದು ಕರೆದು, ಜೈಲಿಗೆ ತಳ್ಳುವುದಕ್ಕೆ ಪ್ರಜಾಸತ್ತಾತ್ಮಕವಾದ ವ್ಯವಸ್ಥೆಯಲ್ಲಿ ಅವಕಾಶವಿಲ್ಲ.ಆದರೆ ಇದೀಗ ಜೆಎನ್‌ಯುವಿನ ಎಂಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ವಿದ್ಯಾರ್ಥಿಗಳ ತಲೆಗೆ ದೇಶದ್ರೋಹದ ಮುಳ್ಳಿನ ಕಿರೀಟ ತೊಡಿಸಲು ಕೇಂದ್ರ ಸರಕಾರ ಹವಣಿಸುತ್ತಿದೆ. ಬಿಜೆಪಿಯ ಸಂಸದರೊಬ್ಬರು, ‘ಅಪರಿಚಿತ ಜನರು’ ಜೆಎನ್‌ಯುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ್ರೋಹಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಕೇಂದ್ರ ಸರಕಾರ ನೇರವಾಗಿ ಮೂಗು ತೂರಿಸಿದ್ದು, ಗೃಹ ಸಚಿವ ರಾಜ್‌ನಾಥ್ ಸಿಂಗ್, ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮತಿ ಇರಾನಿಯಂತಹ ನಾಯಕರು ಈಗಾಗಲೇ ತಮ್ಮ ತಮ್ಮ ಬಾಣವನ್ನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ವಿರುದ್ಧ ಪ್ರಯೋಗಿಸಿದ್ದಾರೆ.ಅನಿವಾರ್ಯವಾಗಿ ಪೊಲೀಸರು ಇದೀಗ ಓರ್ವ ವಿದ್ಯಾರ್ಥಿ ಮುಖಂಡನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿಯೂ ಆಗಿದೆ.
   ಜೆಎನ್‌ಯು ಮೇಲೆ ಸರಕಾರ ಒಂದು ಕಣ್ಣಿಟ್ಟಿದ್ದು, ಅದರ ಮೇಲೆ ಕ್ರಮ ತೆಗೆದುಕೊಳ್ಳಲು ಹೊಂಚು ಹಾಕಿತ್ತು. ಈ ಸಂದರ್ಭವನ್ನು ತನ್ನ ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡಿದೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಜೆಎನ್‌ಯುವಿನಲ್ಲಿ ತಮ್ಮ ಸಂಘಟನೆಯನ್ನು ಬಲಪಡಿಸಲು ಎಬಿವಿಪಿ ಹಲವು ವರ್ಷಗಳಿಂದ ಹವಣಿಸುತ್ತಿದೆ. ಆದರೆ ಜೆಎನ್‌ಯುವಿನಲ್ಲಿ ಎಡ ಪಂಥೀಯ ವಿದ್ಯಾರ್ಥಿ ಸಂಘಟನೆ ಬಲವಾಗಿ ಬೇರೂರಿದೆ. ಈ ಎರಡು ವಿದ್ಯಾರ್ಥಿ ಸಂಘಟನೆಗಳ ರಾಜಕೀಯ ತಿಕ್ಕಾಟಗಳಿಗೆ ಫೆಬ್ರವರಿ 9 ಒಂದು ನೆಪವಾಗಿದೆ. ಎಬಿವಿಪಿ ಮತ್ತು ಸಂಘಪರಿವಾರವು ಕೇಂದ್ರ ಸರಕಾರವನ್ನು ಬಳಸಿಕೊಂಡು, ವಿಶ್ವವಿದ್ಯಾನಿಲಯದೊಳಗೇ ಮುಗಿಯಬಹುದಾಗಿದ್ದ ಪ್ರಕರಣವನ್ನು ಇಡೀ ದೇಶದ ಸಮಸ್ಯೆಯಾಗಿ ಪರಿವರ್ತಿಸಲು ಕೇಂದ್ರ ಸರಕಾರ ಹವಣಿಸುತ್ತಿದೆ. ಎಂದಿನಂತೆಯೇ ಬಿಜೆಪಿ ಮತ್ತು ಸಂಘಪರಿವಾರ ‘ದೇಶದ್ರೋಹ’ ಶಿಲುಬೆಗೆ ವಿದ್ಯಾರ್ಥಿಗಳನ್ನು ಏರಿಸುವ ಹವಣಿಕೆಯಲ್ಲಿದೆ. ವಿಶ್ವವಿದ್ಯಾನಿಲಯದೊಳಗೆ ರಾಜಕಾರಣಿಗಳ ನೇರ ಪ್ರವೇಶದ ಪರಿಣಾಮವನ್ನು ಅಂತಿಮವಾಗಿ ಎದುರಿಸುವವರು ವಿದ್ಯಾರ್ಥಿಗಳು ಎನ್ನುವ ಎಚ್ಚರಿಕೆ ಕೇಂದ್ರ ಸರಕಾರಕ್ಕೆ ಬೇಕಾಗಿದೆ. ಇಂತಹದೇ ಒಂದು ರಾಜಕೀಯ ಒತ್ತಡಗಳ ಪರಿಣಾಮವಾಗಿ ಹೈದರಾಬಾದ್ ವಿಶ್ವವಿದ್ಯಾನಿಲಯದ ಪ್ರತಿಭಾವಂತ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅದರ ಸಿಕ್ಕುಗಳಿಂದ ಇನ್ನೂ ಕೇಂದ್ರ ಸರಕಾರ ಸರಿಯಾಗಿ ಬಿಡಿಸಿಕೊಂಡಿಲ್ಲ.ಅಷ್ಟರಲ್ಲೇ, ಇನ್ನೊಂದು ವಿಶ್ವವಿದ್ಯಾನಿಲಯದ ಮೇಲೆ ಹಸ್ತಕ್ಷೇಪ ನಡೆಸಿ ಮಗದೊಂದು ದುರಂತವನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ಧತೆ ನಡೆಸುತ್ತಿದೆ.
ವಿದ್ಯಾರ್ಥಿಗಳು ರಾಜಕೀಯ ಚರ್ಚೆಯನ್ನೇ ಮಾಡಬಾರದು, ಮಾಡುವುದಾಗಿದ್ದರೆ ಅದು ಎಬಿವಿಪಿ ಮುಖಾಂತರವಷ್ಟೇ ನಡೆಯಬೇಕು ಎನ್ನುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿರುವುದು ಸ್ಪಷ್ಟವಾಗಿದೆ. ಇಲ್ಲವಾದರೆ ತನ್ನದೇ ವಿದ್ಯಾರ್ಥಿ ಸಂಘಟನೆಯ ದೂರಿನ ಮೇರೆಗೆ ಇನ್ನೊಂದು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷನನ್ನು ಅತ್ಯಾತುರವಾಗಿ ಬಂಧಿಸುವಂತಹ ಅದರಲ್ಲೂ ದೇಶದ್ರೋಹದಂತಹ ಆಪಾದನೆಯ ಮೇಲೆ ಬಂಧಿಸುವಂತಹ ನಿರ್ಧಾರವನ್ನು ಮಾಡುತ್ತಿರಲಿಲ್ಲ. ಜೆಎನ್‌ಯುವಿನಲ್ಲಿ ನಡೆಯುತ್ತಿರುವುದು, ಹೈದರಾಬಾದ್ ಯುನಿವರ್ಸಿಟಿಯಲ್ಲಿ ನಡೆಯುತ್ತಿರುವುದಕ್ಕಿಂತಲೂ ಹೆಚ್ಚು ಭಯಾನಕ ಬೆಳವಣಿಗೆಯಾಗಿದೆ. ಯಾವುದೇ ತನಿಖೆ, ವಿಚಾರಣೆ ನಡೆಯುವ ಮೊದಲೇ ಬಿಜೆಪಿ ಮುಖಂಡನ ದೂರಿನ ಮೇರೆಗೆ ವಿದ್ಯಾರ್ಥಿಗಳ ಮೇಲೆ ಮೊಕದ್ದಮೆ ದಾಖಲಿಸಿಕೊಂಡ ಪೊಲೀಸರು, ಗಾಂಧಿಯನ್ನು ಹತ್ಯೆಗೈದ ದಿನವಾದ ಡಿಸೆಂಬರ್ 30ರಂದು ಸಿಹಿ ಹಂಚಿ ಸಂಭ್ರಮಿಸಿದ ಸಂಘಪರಿವಾರದ ಉಗ್ರರ ಮೇಲೆ ಯಾಕೆ ಈವರೆಗೆ ಕ್ರಮ ಕೈಗೊಂಡಿಲ್ಲ? ಎನ್ನುವ ಪ್ರಶ್ನೆಗೆ ಕೇಂದ್ರ ಸರಕಾರ ಉತ್ತರಿಸಲೇಬೇಕಾಗಿದೆ.ಅಫ್ಝಲ್‌ಗುರುವನ್ನು ಬೆಂಬಲಿಸುವವರಿಗೆ ಶಿಕ್ಷೆಯಾಗಲೇ ಬೇಕಾಗಿದೆ. ಇದರಲ್ಲಿ ಅನುಮಾನವಿಲ್ಲ.ಇದೇ ಸಂದರ್ಭದಲ್ಲಿ ಗೋಡ್ಸೆಯನ್ನು ಬಹಿರಂಗವಾಗಿ ಬೆಂಬಲಿಸುವವರಿಗೆ ಸರಕಾರ ಯಾವ ಶಿಕ್ಷೆ ನೀಡಿದೆ? ಅಥವಾ, ಇಂದಿರಾಗಾಂಧಿಯನ್ನು ಕೊಂದ ಆರೋಪಿಗಳ ಕುಟುಂಬವನ್ನು ಬಹಿರಂಗವಾಗಿ ಸನ್ಮಾನಿಸಿದವರನ್ನು ಸರಕಾರ ಯಾಕೆ ಈವರೆಗೆ ಬಂಧಿಸಿಲ್ಲ? ಈ ದೇಶದಲ್ಲಿ ಗೋಡ್ಸೆಯನ್ನು ಬೆಂಬಲಿಸುವುದು ದೇಶದ್ರೋಹವಲ್ಲ. ಇಂದಿರಾಗಾಂಧಿ ಹಂತಕರನ್ನು ಬೆಂಬಲಿಸುವುದು ದೇಶದ್ರೋಹವಲ್ಲ. ಆದರೆ ಅಫ್ಝಲ್‌ಗುರು ಕುರಿತಂತೆ ಸಾರ್ವಜನಿಕವಾಗಿ ಮಾತನಾಡಿದಾಕ್ಷಣ ಅದು ದೇಶದ್ರೋಹವಾಗುವುದು ಹೇಗೆ ಎನ್ನುವುದನ್ನು ಸ್ವಯಂಘೋಷಿತ ದೇಶಭಕ್ತ ನಾಯಕರು ಜನತೆಗೆ ವಿವರಿಸಬೇಕಾಗಿದೆ.
ಈ ದೇಶದಲ್ಲಿ ಕೆಲವರಿಗೆ ಗೋಡ್ಸೆ ದೇಶಪ್ರೇಮದ ಸಂಕೇತವಾದರೆ, ಇನ್ನು ಕೆಲವರಿಗೆ ಅಫ್ಝಲ್‌ಗುರು, ಹಲವರಿಗೆ ಬಿಂದ್ರನ್‌ವಾಲೆ ದೇಶಪ್ರೇಮದ ಸಂಕೇತವಾಗುತ್ತಾರೆ.ಇವರೆಲ್ಲರನ್ನು ಒಂದೇ ತಕ್ಕಡಿಯಲ್ಲಿಟ್ಟು, ನ್ಯಾಯವನ್ನು ಪಾಲಿಸಬೇಕಾದ ಹೊಣೆಗಾರಿಕೆ ಸರಕಾರದ್ದಾಗಿದೆ. ಇದು ಬಿಟ್ಟು, ವಿಶ್ವವಿದ್ಯಾನಿಲಯಗಳಲ್ಲಿ ತಮ್ಮ ರಾಜಕೀಯ ನಿಯಂತ್ರಣವನ್ನು ಸಾಧಿಸುವ ದುರುದ್ದೇಶದಿಂದ ದೇಶದ್ರೋಹದ ಕಾಯ್ದೆಯನ್ನು ಬಳಸಿದರೆ, ಈ ದೇಶದ ಗಲ್ಲಿಗಲ್ಲಿಗಳಲ್ಲಿ ದೇಶದ್ರೋಹಿಗಳು ಹುಟ್ಟುವ ಅಪಾಯವಿದೆ.ಈ ಅಪಾಯದಿಂದ ದೇಶವನ್ನು ರಕ್ಷಿಸುವ ಒಂದೇ ಒಂದು ದಾರಿಯೆಂದರೆ, ದೇಶದ್ರೋಹಿಗಳ ಬಗೆಗಿರುವ ದ್ವಂದ್ವಗಳನ್ನು ಬದಿಗಿಟ್ಟು, ನಿರ್ದಾಕ್ಷಿಣ್ಯವಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿದೆ. ಹಾಗೆಯೇ ವಿಶ್ವವಿದ್ಯಾನಿಲಯದಂತಹ ಚಿಂತನೆಗಳ ವೇದಿಕೆಗಳಲ್ಲಿ ಸಂಘಪರಿವಾರದಂತಹ ಉಗ್ರವಾದಿಗಳು ಮೂಗು ತೂರಿಸದಂತೆ ನೋಡಿಕೊಳ್ಳುವುದೂ ಸರಕಾರದ ಕರ್ತವ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News