ವಾಯುಮಾಲಿನ್ಯದಿಂದ ಪ್ರತಿ ವರ್ಷ 55 ಲಕ್ಷ ಸಾವು ಅರ್ಧದಷ್ಟು ಮರಣ ಭಾರತ, ಚೀನಾಗಳಲ್ಲಿ

Update: 2016-02-13 14:34 GMT

ವಾಶಿಂಗ್ಟನ್, ಫೆ. 13: ವಾಯು ಮಾಲಿನ್ಯದಿಂದಾಗಿ ಜಗತ್ತಿನಾದ್ಯಂತ ಪ್ರತಿ ವರ್ಷ 55 ಲಕ್ಷಕ್ಕೂ ಅಧಿಕ ಮಂದಿ ಅಕಾಲಿಕ ಸಾವನ್ನಪ್ಪುತ್ತಿದ್ದಾರೆ ಹಾಗೂ ಈ ಪೈಕಿ ಅರ್ಧಕ್ಕೂ ಹೆಚ್ಚಿನ ಸಾವುಗಳು ಚೀನಾ ಮತ್ತು ಭಾರತಗಳಲ್ಲಿ ಸಂಭವಿಸುತ್ತಿವೆ ಎಂದು ನೂತನ ಸಂಶೋಧನೆಯೊಂದು ತಿಳಿಸಿದೆ.
2013ರಲ್ಲಿ ವಾಯು ಮಾಲಿನ್ಯದ ಕಾರಣದಿಂದಾಗಿ ಚೀನಾದಲ್ಲಿ 16 ಲಕ್ಷ ಮತ್ತು ಭಾರತದಲ್ಲಿ 14 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ಅಮೆರಿಕ, ಕೆನಡ, ಚೀನಾ ಮತ್ತು ಭಾರತ ದೇಶಗಳ ವಿಜ್ಞಾನಿಗಳು ಹೇಳಿದ್ದಾರೆ. ಇಲ್ಲಿ ನಡೆದ ಅಮೆರಿಕನ್ ವಿಜ್ಞಾನ ಮುನ್ನಡೆ ಅಸೋಸಿಯೇಶನ್‌ನ ವಾರ್ಷಿಕ ಸಭೆಯಲ್ಲಿ ಈ ವಿಜ್ಞಾನಿಗಳು ತಮ್ಮ ಸಂಶೋಧನೆಯನ್ನು ಮಂಡಿಸಿದ್ದಾರೆ.


‘‘ಜಾಗತಿಕವಾಗಿ ವಾಯು ಮಾಲಿನ್ಯ ಸಾವಿನ ನಾಲ್ಕನೆ ಅತಿ ದೊಡ್ಡ ಕಾರಣವಾಗಿದೆ’’ ಎಂದು ಬ್ರಿಟಿಶ್ ಕೊಲಂಬಿಯ ವಿಶ್ವವಿದ್ಯಾನಿಲಯದ ಸಂಶೋಧಕ ಮೈಕಲ್ ಬ್ರಾವರ್ ತಿಳಿಸಿದರು.


ಸಾವಿಗೆ ಮೊದಲ ಮೂರು ಮಹತ್ವದ ಕಾರಣಗಳೆಂದರೆ ಅಧಿಕ ರಕ್ತದೊತ್ತಡ, ಅಪೌಷ್ಟಿಕತೆ ಮತ್ತು ಧೂಮಪಾನ.
‘‘ಜಾಗತಿಕ ಜನಸಂಖ್ಯೆಯ 85 ಶೇಕಡಕ್ಕೂ ಅಧಿಕ ಜನರು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ವಾಯುಮಾಲಿನ್ಯದ ‘‘ಸುರಕ್ಷಿತ ಮಟ್ಟ’’ವನ್ನು ಮೀರಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ’’ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ರಾವರ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News