18 ಸಾವಿರ ಹಳ್ಳಿಗಳಿಗೆ ಇನ್ನೂ ವಿದ್ಯುತ್ ಸಂಪರ್ಕವೇ ಇಲ್ಲ: ಕೇಂದ್ರ ಸಚಿವ ಪಿಯೂಶ್ ಗೋಯಲ್

Update: 2016-02-13 18:03 GMT

ಬೆಂಗಳೂರು, ಫೆ. 13: ದೇಶಕ್ಕೆ ಸ್ವಾತಂತ್ರ ಬಂದು ಆರು ದಶಕಗಳು ಕಳೆದರೂ ಇನ್ನೂ ದೇಶದಲ್ಲಿನ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಿರುವುದು ನಾಚಿಕೆಗೇಡಿನ ಸಂಗತಿ ಎಂದು ವಿಷಾದಿಸಿರುವ ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್, ಎಲ್ಲ ಮನೆಗಳಿಗೆ ಇನ್ನು 3 ವರ್ಷಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಶನಿವಾರ ಇಲ್ಲಿನ ತುಮಕೂರು ರಸ್ತೆಯಲ್ಲಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಏರ್ಪಡಿಸಿರುವ ಎಲೆಕ್ಟ್ರಾನಿಕ್ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಎಲ್ಲ ಮನೆಗಳಿಗೂ ಗುಣಮಟ್ಟದ ವಿದ್ಯುತ್ ಒದಗಿಸಲು ಕೇಂದ್ರ ಸರಕಾರ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
2019ರ ವೇಳೆಗೆ ಎಲ್ಲ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದ್ದು, ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜೀ ಮಾಡಿಕೊಳ್ಳುವುದಿಲ್ಲ ಎಂದ ಅವರು, ಸೋರಿಕೆ ತಡೆಗೆ ವಿದ್ಯುತ್ ಉಪಕರಣಗಳ ಗುಣಮಟ್ಟಕ್ಕೆ ಕೇಂದ್ರ ಆದ್ಯತೆ ನೀಡಿದೆ ಎಂದರು.
ಎಲೆಕ್ಟ್ರಾನಿಕ್ಸ್ ಕಂಪೆನಿಗಳು ಕಳಪೆ ಗುಣಮಟ್ಟದ ವಸ್ತುಗಳ ಉತ್ಪಾದನೆ ಗೊತ್ತಾದರೆ ಆ ಕಂಪೆನಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದ ಗೋಯಲ್, ಇದನ್ನು ಕಂಪೆನಿಗಳು ಬೆದರಿಕೆ ಎಂದು ಭಾವಿಸದೆ ಸಲಹೆ ಎಂದು ಪರಿಗಣಿಸಬೇಕು ಎಂದು ಇದೇ ವೇಳೆ ಕೋರಿದರು.
ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಸ್ಥಳೀಯ ಉತ್ಪಾದನೆಗೆ ಕೇಂದ್ರ ಸರಕಾರ ಆದ್ಯತೆ ನೀಡಿದೆ. ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣ ಹಾಗೂ ಉದ್ಯಮ ಸ್ನೇಹಿತಾಣ ಭಾರತ ಎಂದು ಅವರು, ಮುಂದಿನ ದಿನಗಳಲ್ಲಿ ಭಾರತ ವಿದ್ಯುತ್ ಉಪಕರಣಗಳನ್ನು ರಫ್ತು ಮಾಡುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿದೆ ಎಂದು ತಿಳಿಸಿದರು.
ಸೌರಶಕ್ತಿಗೆ ಆದ್ಯತೆ: ಮೇಳದಲ್ಲಿ ಪಾಲ್ಗೊಂಡಿದ್ದ ಇಂಧನ ಸಚಿವ ಡಿ.ಕೆ.ಶಿವ ಕುಮಾರ್ ಮಾತನಾಡಿ, ದಿನದ ಇಪ್ಪತ್ನಾಲ್ಕು ಗಂಟೆ ವಿದ್ಯುತ್ ಪೂರೈಕೆ ನಿಟ್ಟಿನಲ್ಲಿ ರಾಜ್ಯ ಸರಕಾರ ಪಾವಗಡದಲ್ಲಿ 2 ಸಾವಿರ ಮೆ.ವ್ಯಾ. ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ರೈತರ ಭೂಮಿ ಸ್ವಾಧೀನಪಡಿಸಿಕೊಂಡಿಲ್ಲ ಎಂದರು.
ರೈತರ ಸಹಕಾರದಲ್ಲಿ ಈ ಯೋಜನೆ ಕೈಗೊಂಡಿದ್ದು, ರಾಜ್ಯ ಸರಕಾರ ನೂತನ ಸೋಲಾರ್ ನೀತಿಯನ್ವಯ ರೈತರು ಹೆಚ್ಚುವರಿ ವಿದ್ಯುತ್ತನ್ನು ರಾಜ್ಯ ಸರಕಾರದ ಗ್ರೀಡ್‌ಗೆ ಮಾರಾಟ ಮಾಡಲು ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ ಭೀಕರ ಸ್ವರೂಪದ ಬರ ಸ್ಥಿತಿಯ ಮಧ್ಯೆಯೂ ಸೂಕ್ತ ರೀತಿಯಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದರು.
ಮೇಳದ ಆಯೋಜಕರಾದ ಬಾಬು ಪೆರಲ್, ಆದಿತ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು. ದೇಶದ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಎಲೆಕ್ಟ್ರಾನಿಕ್ಸ್ ಉತ್ಪಾದಕ ಕಂಪೆನಿಗಳು ತಮ್ಮ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News