ಕರಾವಳಿಗರ ನಮ್ಮೂರ ಹಬ್ಬಕ್ಕೆ ವರ್ಣರಂಜಿತ ಚಾಲನೆ

Update: 2016-02-13 18:06 GMT

ಬೆಂಗಳೂರು, ಫೆ.13: ನಗರದಲ್ಲಿ ನೆಲಸಿರುವ ಕರಾವಳಿಗರ ಅಪರೂಪದ ಸಮ್ಮಿಲನ, ಕಾಸರಗೋಡಿನಿಂದ ಕಾರವಾರದವರೆಗಿನ ಕರಾವಳಿ ಮನಸ್ಸುಗಳ ಜಾತಿ, ಭಾಷೆಗಳನ್ನು ಮೀರಿ ಎಲ್ಲರೂ ಒಂದೆಡೆ ಸೇರಿ ಆಚರಿಸುವ ನಮ್ಮೂರ ಹಬ್ಬ-2016ಕ್ಕೆ ಜಯನಗರದ ಚಂದ್ರಗುಪ್ತ ವೌರ್ಯ ಕ್ರೀಡಾಂಗಣ(ಶಾಲಿನಿ ಗ್ರೌಂಡ್)ದಲ್ಲಿ ಶನಿವಾರ ವರ್ಣರಂಜಿತ ಚಾಲನೆ ದೊರೆಯಿತು.
ಕ್ರೀಡಾಂಗಣದಲ್ಲಿ ಜನರಿಂದ ಮರೆಯಾಗುತ್ತಿರುವ ಗ್ರಾಮೀಣ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ನಮ್ಮೂರ ಸಂತೆ, ಗ್ರಾಮೀಣ ಕ್ರೀಡಾಕೂಟಗಳಾದ ಲಗೋರಿ, ಹಗ್ಗಜಗ್ಗಾಟ, 200ಕ್ಕೂ ಹೆಚ್ಚು ಕರಾವಳಿ ಭಾಗದ ವಿಶಿಷ್ಟ ತಿನಿಸುಗಳ ನಮ್ಮೂರ ಹೊಟೇಲ್‌ಗೆ ಇಂದು ಅದ್ದೂರಿ ಚಾಲನೆ ನೀಡಲಾಯಿತು. ಎರಡು ದಿನಗಳ ಕಾಲ ನಡೆಯಲಿರುವ ನಮ್ಮೂರ ಹಬ್ಬದ ಉದ್ಘಾಟನಾ ಕಾರ್ಯಕ್ರ ಮದಲ್ಲಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ ಕರಾವಳಿ ಮಂದಿ ಇಂದು ದೇಶದ ಎಲ್ಲಡೆ ತಮ್ಮ ಪರಿಶ್ರಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಕರಾವಳಿ ಭಾಗದ ಜನರನ್ನು ಮೊದಲೆಲ್ಲಾ ಬೆಂಗಳೂರಿನಲ್ಲಿ ಸೌಟು ಹಿಡಿದು ಬಂದವರು ಎಂದು ಗೇಲಿ ಮಾಡುತ್ತಾ, ಇಲ್ಲಿನ ಮೂಲ ನಿವಾಸಿಗಳು ನಮ್ಮನ್ನು ಪರಕೀಯರಂತೆ ನೋಡುತ್ತಿದ್ದರು. ಆದರೆ ಇಂದು ನಮ್ಮ ಜನ ತಮ್ಮ ಸತತ ಪರಿಶ್ರಮದಿಂದ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ನಮ್ಮನ್ನು ಮೂದಲಿಸುತ್ತಿದ್ದ ಬೆಂಗಳೂರಿಗರು ಇಂದು ನಮ್ಮನ್ನು ಒಪ್ಪಿದ್ದಾರೆ. ಕರಾವಳಿಗರು ಬಹಳ ಸ್ವಾಭಿಮಾನಿಗಳು ಮತ್ತು ಪ್ರಯೋಗಶೀಲತೆ ಉಳ್ಳವರು. ಕರಾವಳಿಯಲ್ಲಿನ ವಿಶಿಷ್ಟವಾದ ಆಹಾರ ಸಂಸ್ಕೃತಿ, ಯಕ್ಷಗಾನ, ಹುಲಿ ಕುಣಿತ ಹೀಗೆ ಹತ್ತು ಹಲವು ವಿಶೇಷತೆಗಳನ್ನು ಒಂದೇ ವೇದಿಕೆಯಡಿ ತರುವ ದೊಡ್ಡ ಪ್ರಯತ್ನ ನಮ್ಮೂರ ಹಬ್ಬ ಪ್ರತಿ ವರ್ಷವೂ ನಡೆಯಲಿ. ಬೆಂಗಳೂರಿನಲ್ಲಿ ಕರಾವಳಿ ಭಾಗದ ಸಂಭ್ರಮ ಮಾತ್ರವಲ್ಲದೇ ನಾಡಿನ ಎಲ್ಲ ಭಾಗದ ಕಾರ್ಯಕ್ರಮಗಳು ನಡೆದು ಎಲ್ಲ ಸಂಸ್ಕೃತಿಗಳು ಒಂದೇ ಸೂರಿನಡಿ ಬರುವಂತೆ ಆಗಲಿ ಎಂದರು.
ನಮ್ಮೂರ ಹಬ್ಬದ ಕ್ರೀಡಾ ಕೂಟ ಮತ್ತು ಆಹಾರ ಉತ್ಸವವನ್ನು ಉದ್ಘಾಟಿಸಿದ ಜಯನಗರ ಶಾಸಕ ಬಿ.ಎನ್. ವಿಜಯಕುಮಾರ್ ಮಾತನಾಡಿ ನಮ್ಮ ದೇಶದಲ್ಲಿ ಪ್ರತಿ ಮೂರು ಕಿಲೋಮೀಟರ್‌ಗೊಂದರಂತೆ ಸಂಸ್ಕೃತಿ, ಆಚಾರ, ವಿಚಾರ, ಭಾಷೆ, ಆಹಾರ ಪದ್ಧತಿ ಬದಲಾಗುತ್ತಾ ಹೋಗುತ್ತದೆ. ಅಂತಹದ್ದರಲ್ಲಿ ವಿಭಿನ್ನ ಸಂಸ್ಕೃತಿಯನ್ನು ಒಟ್ಟಿಗೆ ಕಲೆ ಹಾಕಿ ಈ ನಮ್ಮೂರ ಹಬ್ಬವನ್ನು ಆಚರಿಸುತ್ತಿರುವುದು ಸಂತೋಷದ ವಿಷಯ. ಇಲ್ಲಿ ದಕ್ಷಿಣ ಕನ್ನಡ ಶೈಲಿಯ ಊಟ, ದಕ್ಷಿಣ ಕನ್ನಡದಲ್ಲಿ ಸಿಗುವ ತರಕಾರಿಯ ಸಂತೆ, ಅಲ್ಲಿನ ಯಕ್ಷಗಾನ ಹುಲಿ ಕುಣಿತ ಮತ್ತಿತರ ಕಾರ್ಯಕ್ರಮದ ಮೂಲಕ ಕರಾವಳಿಯನ್ನು ಮರು ಸೃಷ್ಟಿಸಿದ್ದಾರೆ ಎಂದು ಬಣ್ಣಿಸಿದರು. 200ಕ್ಕೂ ಹೆಚ್ಚಿನ ಕರಾವಳಿ ಖಾದ್ಯ: ಅಭಿನಂದನಾ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಮೂರನೇ ಬಾರಿ ನಡೆಯುತ್ತಿರುವ ಈ ಹಬ್ಬದಲ್ಲಿ ಕಳೆದ ಬಾರಿ 60 ಸಾವಿರ ಜನ ಸೇರಿದ್ದರು. ಈ ಬಾರಿ ಒಂದು ಲಕ್ಷ ಜನರ ನಿರೀಕ್ಷೆ ಇದೆ. ಇಲ್ಲಿ ಸುಮಾರು 200ಕ್ಕೂ ಹೆಚ್ಚಿನ ಕರಾವಳಿ ಖಾದ್ಯ ಸಿಗುತ್ತದೆ. ಇವಲ್ಲದೆ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, ದೊಡ್ಡಾಟ, ಹಗ್ಗಜಗ್ಗಾಟ, ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಪದ್ಮಶ್ರಿ ಅರ್ಜುನ ಪ್ರಶಸ್ತಿ ವಿಜೇತ ಪ್ಯಾರ ಒಲಂಪಿಯನ್ ಎಚ್.ಎನ್.ಗಿರೀಶ್, ಸ್ಥಳೀಯ ಪಾಲಿಕೆ ಸದಸ್ಯೆ ಮಾಲತಿ ಸೋಮಶೇಖರ್, ಪಾಲಿಕೆಯ ಮಾಜಿ ಸದಸ್ಯ ಸೋಮಶೇಖರ್ ಮತ್ತಿತರರು ಭಾಗವಹಿಸಿದ್ದರು.

ಮನುಬಳಿಗಾರ್‌ಗೆ ಬೆಂಬಲ

ಇದೇ ಫೆ.28 ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆಗಾಗಿ ಮನುಬಳಿಗಾರ್ ಅವರನ್ನು ಬೆಂಬಲಿಸುತ್ತೇನೆ. ಮನುಬಳಿಗಾರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತಾಧಿಕಾರಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ ಮತ್ತು ನನ್ನ ಅಧಿಕಾರವಧಿಯಲ್ಲಿ ಮಾಡಬೇಕು ಎಂದುಕೊಂಡಿದ್ದ ಮತ್ತಷ್ಟು ಕೆಲಸಗಳು ಬಾಕಿ ಉಳಿದಿವೆ. ಅವುಗಳನ್ನು ಮನು ಬಳಿಗಾರ್ ಮಾಡಿ ಮುಗಿಸುತ್ತಾರೆ ಎಂಬ ಭರವಸೆ ಇದೆ. ಪುಂಡಲೀಕ ಹಾಲಂಬಿ, ನಿಕಟಪೂರ್ವ ಕಸಾಪ ಅಧ್ಯಕ್ಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News