ಮೂರು ಕ್ಷೇತ್ರಗಳ ಉಪಚುನಾವಣೆ: ಶಾಂತಿಯುತ ಮತದಾನ

Update: 2016-02-13 18:21 GMT

ದೇವದುರ್ಗ-ಶೇ.67, ಬೀದರ್-ಶೇ.61, ಹೆಬ್ಬಾಳ-ಶೇ.45ರಷ್ಟು ಮತದಾನ

ಬೆಂಗಳೂರು, ಫೆ.13: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಪ್ರಕ್ರಿಯೆಯು ಬಹುತೇಕ ಶಾಂತಿಯುತವಾಗಿ ಅಂತ್ಯಗೊಂಡಿದ್ದು, ದೇವದುರ್ಗ-ಶೇ.67, ಬೀದರ್-ಶೇ.61 ಹಾಗೂ ಹೆಬ್ಬಾಳದಲ್ಲಿ ಅತೀ ಕಡಿಮೆ ಶೇ.45ರಷ್ಟು ಮತದಾನವಾಗಿದೆ.

ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ನಡುವೆ ತೀವ್ರ ಹಣಾಹಣಿಗೆ ಕಾರಣವಾಗಿರುವ ಮೂರೂ ಕ್ಷೇತ್ರಗಳಲ್ಲಿ ಭರ್ಜರಿ ಮತದಾನವಾಗುವ ನಿರೀಕ್ಷೆಯಿತ್ತು. ಅದರಲ್ಲೂ ಕಾಂಗ್ರೆಸ್ ಪಕ್ಷ ಹೆಬ್ಬಾಳ ಕ್ಷೇತ್ರವನ್ನು ಅತ್ಯಂತ ಪ್ರತಿಷ್ಠೆಯ ಕಣವನ್ನಾಗಿ ಪರಿಗಣಿಸಿದ್ದರೂ ಮತದಾನ ಮಾತ್ರ ಶೇ.50ರ ಗಡಿಯನ್ನೂ ದಾಟಿಲ್ಲ.

ಬೀದರ್‌ನಲ್ಲಿ ಶೇ.61ರಷ್ಟು ಮತದಾನವಾಗಿದ್ದು, ಕೆಎಚ್‌ಬಿ ಕಾಲನಿಯಲ್ಲಿ ಮಾಜಿ ಮುಖ್ಯಮಂತ್ರಿ ಎನ್.ಧರಂಸಿಂಗ್, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಸೇರಿದಂತೆ ಹಲವು ಪ್ರಮುಖರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತವಾಗಿ ಮತದಾನ ಮುಕ್ತಾಯಗೊಂಡಿದೆ.

ಹೆಬ್ಬಾಳ ಕ್ಷೇತ್ರದ ವಿ.ನಾಗೇನಹಳ್ಳಿ, ಗಂಗೇನಹಳ್ಳಿ, ಹೆಬ್ಬಾಳ, ರಾಧಾಕೃಷ್ಣ ನಗರ ವಾರ್ಡ್‌ಗಳಲ್ಲಿ ಮಂದಗತಿಯಲ್ಲಿ ಮತದಾನವಾದರೆ, ಉಳಿದ ನಾಲ್ಕು ವಾರ್ಡ್‌ಗಳಲ್ಲಿ ಬಿರುಸಿನ ಮತದಾನವಾಗಿತ್ತು. ಬೆಳಗ್ಗೆ ಮತದಾನ ಚುರುಕಿನಿಂದ ಸಾಗುವ ಲಕ್ಷಣ ಕಂಡು ಬಂದಿತ್ತಾದರೂ ಮಧ್ಯಾಹ್ನದ ವೇಳೆಗೆ ಮಂದಗತಿಯಲ್ಲಿ ಸಾಗಿತು.

ಬಿಗಿಪೊಲೀಸ್ ಬಂದೋಬಸ್ತ್: ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಎಲ್ಲ 237 ಮತಗಟ್ಟೆಗಳಿಗೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಚುನಾವಣಾ ಆಯೋಗವು ಪೊಲೀಸ್ ಸಿಬ್ಬಂದಿಯೊಂದಿಗೆ ಅತಿಸೂಕ್ಷ್ಮ ಹಾಗೂ ಸೂಕ್ಷ್ಮ ಮತಗಟ್ಟೆಗಳ ಬಳಿ ಅರೆಸೇನಾ ಪಡೆಯನ್ನು ನಿಯೋಜಿಸಿತ್ತು.

ಹೆಬ್ಬಾಳ ಕ್ಷೇತ್ರದ ಮತಗಟ್ಟೆ ಸಂಖ್ಯೆ 88 ಹಾಗೂ 103ರಲ್ಲಿ ಮತಯಂತ್ರ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಕೆಲಕಾಲ ತಡವಾಗಿ ಮತದಾನ ಆರಂಭಗೊಂಡಿತ್ತು. ಸ್ಥಳಕ್ಕೆ ಆಗಮಿಸಿದ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಜಿ.ಕುಮಾರನಾಯ್ಕ, ಬಿಇಎಲ್ ಇಂಜಿನಿಯರ್‌ಗಳೊಂದಿಗೆ ಸಮಾಲೋಚನೆ ನಡೆಸಿ ಮತಯಂತ್ರ ದುರಸ್ತಿಪಡಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟರು.

ಜಯಮಾಲಾರನ್ನು ವಾಪಸ್ ಕಳುಹಿಸಿದ ಚುನಾವಣಾಧಿಕಾರಿ: ವಿಧಾನ ಪರಿಷತ್ ಸದಸ್ಯೆ ಹಾಗೂ ಹಿರಿಯ ನಟಿ ಡಾ.ಜಯಮಾಲಾ ಮತ್ತು ಅವರ ಪುತ್ರಿ ಸೌಂದರ್ಯಾ ಗುರುತಿನ ಚೀಟಿ ಇಲ್ಲದೆ ಡಾಲರ್ಸ್ ಕಾಲನಿಯ ಗೋಪಾಲ ರಾಮನಾರಾಯಣ ಸರಕಾರಿ ಶಾಲೆಯ 51ನೆ ಮತಗಟ್ಟೆಯಲ್ಲಿ ಮತದಾನಕ್ಕೆ ಆಗಮಿಸಿದ್ದರಿಂದ ಮತಗಟ್ಟೆ ಚುನಾವಣಾಧಿಕಾರಿ ಅವರನ್ನು ವಾಪಸ್ ಕಳುಹಿಸಿದರು. ಬಳಿಕ ಗುರುತಿನ ಚೀಟಿಯೊಂದಿಗೆ ಆಗಮಿಸಿ ಅವರಿಬ್ಬರು ಮತ ಚಲಾಯಿಸಿದರು.

ಮತದಾನ ಮಾಡಿದ ಪ್ರಮುಖರು: ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್, ಮಾಜಿ ಸಂಸದ ಡಿ.ಬಿ.ಚಂದ್ರೇಗೌಡ, ಬಿಬಿಎಂಪಿ ಆಯುಕ್ತ ಜಿ.ಕುಮಾರ ನಾಯ್ಕ, ವಿಧಾನಪರಿಷತ್ ಸದಸ್ಯೆ ಡಾ.ಜಯಮಾಲಾ, ಬಿಜೆಪಿ ಮುಖಂಡ ಅಬ್ದುಲ್ ಅಝೀಮ್, ಕಾಂಗ್ರೆಸ್ ಅಭ್ಯರ್ಥಿ ಸಿ.ಕೆ.ರೆಹಮಾನ್ ಶರೀಫ್, ಜೆಡಿಎಸ್ ಅಭ್ಯರ್ಥಿ ಇಸ್ಮಾಯೀಲ್ ಶರೀಫ್ ಸೇರಿದಂತೆ ಅನೇಕ ಪ್ರಮುಖರು ಮತದಾನ ಮಾಡಿದರು.

ಡಿವಿಎಸ್ ಮತಗಟ್ಟೆ ಭೇಟಿಗೆ ಆಕ್ಷೇಪ

ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಗಂಗೇನಹಳ್ಳಿ ವಾರ್ಡ್‌ನ ಮತಗಟ್ಟೆ ಸಂಖ್ಯೆ 204ಕ್ಕೆ ಭೇಟಿ ನೀಡಿದಾಗ ಕ್ಷೇತ್ರದ ಮತದಾರರಲ್ಲದವರು ಮತದಾನದ ಸಂದರ್ಭದಲ್ಲಿ ಮತಗಟ್ಟೆಗೆ ಭೇಟಿ ನೀಡುತ್ತಿರುವುದು ಸರಿಯಲ್ಲ ಎಂದು ಕೆಲವು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರು ಅಲ್ಲಿಂದ ನಿರ್ಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News