ಜೆಎನ್‌ಯು ವಿದ್ಯಾರ್ಥಿಯ ಬಂಧನ: ದೇಶಾದ್ಯಂತ ವ್ಯಾಪಕ ಆಕ್ರೋಶ

Update: 2016-02-13 18:23 GMT

ಸಿಪಿಐ ನಾಯಕ ಡಿ. ರಾಜಾ ಪುತ್ರಿಯ ಹೆಸರು ಪೊಲೀಸರ ಪಟ್ಟಿಯಲ್ಲಿ!

ಹೊಸದಿಲ್ಲಿ,ಫೆ.13: ಜವಾಹರಲಾಲ್ ನೆಹರು ವಿವಿ(ಜೆಎನ್‌ಯು)ಯಲ್ಲಿ ವಿದ್ಯಾರ್ಥಿ ಸಂಘಟನೆಯ ಮುಖಂಡನೊಬ್ಬನನ್ನು ದೇಶದ್ರೋಹದ ಆರೋಪದಲ್ಲಿ ಪೊಲೀಸರು ಬಂಧಿಸಿರುವುದು ದೇಶಾದ್ಯಂತ ವಿವಾದದ ಕಿಡಿ ಹಚ್ಚಿದೆ.

ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿದಿದ್ದು, ಸರಕಾರದ ಕೃತ್ಯವನ್ನು ಖಂಡಿಸಿದೆ. ಇದೇ ಸಂದರ್ಭದಲ್ಲಿ ದೇಶದ್ರೋಹದ ಆರೋಪದಲ್ಲಿ ಶುಕ್ರವಾರ ಬಂಧಿಸಲ್ಪಟ್ಟಿರುವ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರ ಬಿಡುಗಡೆಗೆ ಆಗ್ರಹಿಸಿ ಎಡರಂಗ ಮತ್ತು ಜೆಡಿಯು ನಾಯಕರ ನಿಯೋಗವೊಂದು ಗೃಹಸಚಿವ ರಾಜ್‌ನಾಥ್ ಸಿಂಗ್‌ರನ್ನು ಭೇಟಿ ಮಾಡಿದೆ. ಅಮಾಯಕ ವಿದ್ಯಾರ್ಥಿಗಳಿಗೆ ಯಾವುದೇ ಕಿರುಕುಳವಾಗದು ಎಂದು ಭೇಟಿಯಾದ ನಾಯಕರಿಗೆ ಸಿಂಗ್ ಭರವಸೆ ನೀಡಿದ್ದಾರೆ. ಸಂಸತ್ ಮೇಲಿನ ದಾಳಿಯ ರೂವಾರಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸಿದ್ದರ ವಿರುದ್ಧ ವಿವಿ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಸಂಬಂಧಿ ಸಿದಂತೆ ತನ್ನನ್ನು ಭೇಟಿಯಾದ ಬಳಿಕ ಗೃಹಸಚಿವರ ಈ ಹೇಳಿಕೆ ಹೊರಬಿದ್ದಿದೆ.

‘ಕುಲಪತಿ ಸರಕಾರದ ಕೈಗೊಂಬೆ’: ಸಿಂಗ್ ಜೊತೆ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು, ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ 20 ವಿದ್ಯಾರ್ಥಿಗಳ ಪಟ್ಟಿಯೊಂದನ್ನು ದಿಲ್ಲಿ ಪೊಲೀಸರು ಬಿಡುಗಡೆಗೊಳಿಸಿದ್ದು, ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಅವರ ಪುತ್ರಿಯ ಹೆಸರೂ ಅದರಲ್ಲಿದೆ. ಆದರೆ ಘೋಷಣೆಗಳನ್ನು ಕೂಗುತ್ತಿದ್ದ ವೀಡಿಯೊದಲ್ಲಿ ಇವರು ಕಾಣಿಸಿಕೊಂಡಿದ್ದಾರೆಯೇ ಎಂದು ನಾವು ಪ್ರಶ್ನಿಸುತ್ತಿದ್ದೇವೆ ಎಂದು ಹೇಳಿದರು.

ಜೆಎನ್‌ಯು ವಿವಿಯ ನೂತನ ಕುಲಪತಿಗಳು ಸರಕಾರದ ಸೂಚನೆಗಳ ಮೇರೆಗೆ ಕಾರ್ಯಾಚರಿಸುತ್ತಿದ್ದಾರೆ ಮತ್ತು ಕ್ಯಾಂಪಸ್‌ನಲ್ಲಿ ‘‘ದಾಳಿ’’ ನಡೆಸಲು ಪೊಲೀಸರಿಗೆ ಅನುಮತಿ ನೀಡಿದ್ದಾರೆ ಎಂದು ಅವರು ಆರೋಪಿಸಿದರು.

ಸರಕಾರವು ಕುಲಪತಿಗಳನ್ನು ಎತ್ತಂಗಡಿ ಮಾಡಿ ತನ್ನ ನಿರ್ದೇಶಗಳಂತೆ ಕಾರ್ಯ ನಿರ್ವಹಿಸುವ ವ್ಯಕ್ತಿಗಳನ್ನು ಅಲ್ಲಿಗೆ ನೇಮಿಸುತ್ತಿದೆ. ಇದು ಎಲ್ಲ ವಿವಿಗಳಲ್ಲಿಯೂ ನಡೆಯುತ್ತಿದೆ ಎಂದು ಯೆಚೂರಿ ಹೇಳಿದರು. ಅವರೊಂದಿಗೆ ಡಿ.ರಾಜಾ ಮತ್ತು ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ ಅವರು ನಿಯೋಗದಲ್ಲಿ ಭಾಗಿಯಾಗಿದ್ದರು.

ತನ್ಮಧ್ಯೆ ದಿಲ್ಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ಅವರು,ಅಮಾಯಕರಿಗೆ ಯಾವುದೇ ತೊಂದರೆಯಾಗದು. ದಿಲ್ಲಿ ಪೊಲೀಸರು ಕಾನೂನಿನ ಆಡಳಿತಕ್ಕೆ ಬದ್ಧರಾಗಿದ್ದಾರೆ ಮತ್ತು ಯಾರಿಗೂ ಕೆಡುಕುಂಟಾಗಲು ಅವಕಾಶ ನೀಡುವುದಿಲ್ಲ. ಯಾವುದೇ ಬಾಹ್ಯ ಪ್ರಭಾವಕ್ಕೊಳಗಾಗದೆ ದಿಲ್ಲಿ ಪೊಲೀಸರು ಕಾರ್ಯ ನಿರ್ವಹಿಸುತ್ತಾರೆ ಎನ್ನುವುದರಲ್ಲಿ ಯಾರಿಗೂ ಶಂಕೆ ಬೇಡ ಎಂದು ಟ್ವೀಟಿಸಿದ್ದಾರೆ.

.....

ಭಾರತ ವಿರೋಧಿ ಭಾವನೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಆದರೆ ಇಲ್ಲಿ ಜೆಎನ್‌ಯು ವಿದ್ಯಾರ್ಥಿ ಕನ್ಹಯ್ಯಾ ಬಂಧನ ಖಂಡನೀಯ. ಈ ಮೂಲಕ ಮೋದಿ ಸರಕಾರ ಜೆಎನ್‌ಯುದಂತಹ ಸಂಸ್ಥೆಯನ್ನು ಬೆದರಿಸುತ್ತಿದೆ. -ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ

...

ರಾಷ್ಟ್ರ ವಿರೋಧಿ ಶಕ್ತಿಗಳನ್ನು ಯಾರೂ ಬೆಂಬಲಿಸಲ್ಲ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಜೆಎನ್‌ಯುನಲ್ಲಿ ಮುಗ್ಧ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿದರೆ, ಮೋದಿ ಸರಕಾರ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ.  -ಅರವಿಂದ್ ಕೇಜ್ರಿವಾಲ್, ದಿಲ್ಲಿ ಸಿಎಂ

....

ದಿಲ್ಲಿ ಪೊಲೀಸರು ಪ್ರತಿಭಟನೆಯಲ್ಲಿ ಭಾಗವಹಿಸಿದ 20 ಮಂದಿ ವಿದ್ಯಾರ್ಥಿಗಳ ಹೆಸರು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ರಾಜ್ಯಸಭೆ ಸದಸ್ಯ ಎ.ರಾಜಾ ಅವರ ಮಗಳೂ ಸೇರಿದ್ದಾಳೆ. ಇವೆಲ್ಲವೂ ಪ್ರತೀಕಾರದ ರಾಜಕೀಯದಿಂದ ಕೂಡಿವೆ. -  ಸೀತಾರಾಂ ಯಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

...

ಪುತ್ರನ ಮೇಲೆ ದೇಶದ್ರೋಹದ ಆರೋಪ: ಕನ್ಹಯ್ಯ ತಾಯಿಗೆ ಆಘಾತ

ಪಾಟ್ನಾ, ಫೆ.13: ‘‘ನನ್ನ ಮಗನ ವಿರುದ್ಧ ದೇಶದ್ರೋಹದ ಆರೋಪ ಬಂದಿರಬಹುದು. ಶಾಲಾ ದಿನಗಳಿಂದಲೇ ರಾಜಕೀಯದತ್ತ ಆಕರ್ಷಿತನಾಗಿರುವ ಆತ ಯಾವತ್ತೂ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಮಾತನಾಡಿಲ್ಲವೆಂದು ಆತನ ತಾಯಿಯಾಗಿ ನಾನು ದೃಢವಾಗಿ ಹೇಳಬಲ್ಲೆ,’’ ಎನ್ನುತ್ತಾರೆ ಮೀನಾ ದೇವಿ (55). ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯ ಸ್ಟೂಡೆಂಟ್ಸ್ ಯೂನಿಯನ್ ಅಧ್ಯಕ್ಷನಾಗಿರುವ ತನ್ನ ಮಗ ಕನ್ಹಯ್ಯ್ ಕುಮಾರ್‌ನನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಿರುವುದು ಈ ತಾಯಿಗೆ ದೊಡ್ಡ ಆಘಾತವನ್ನೇ ನೀಡಿದೆ.

ಕೆಲವು ಜೆಎನ್‌ಯು ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಸಂಸತ್ ದಾಳಿ ರೂವಾರಿ ಅಫ್ಝಲ್ ಗುರು ಹಾಗೂ ಮಕ್ಬೂಲ್ ಭಟ್ ಅವರಿಗೆ ಗಲ್ಲು ವಿಧಿಸಿರುವುದನ್ನು ಖಂಡಿಸಿ ನಡೆಸಿದ ಪ್ರತಿಭಟನೆಯ ನಂತರ ಕನ್ಹಯ್ಯಾ ಸಿಂಗ್‌ನನ್ನು ಬಂಧಿಸಲಾಗಿತ್ತು.

ಅಂಗನವಾಡಿ ಕಾರ್ಯಕರ್ತೆಯಾಗಿರುವ ಆಕೆ ತಿಂಗಳಿಗೆ 4,000 ರೂ. ವೇತನ ಪಡೆಯುತ್ತಿದ್ದು, ಪಾಟ್ನಾದಿಂದ 129 ಕಿ.ಮೀ. ದೂರದಲ್ಲಿರುವ ಬೇಗುಸರಾಯ್ ಜಿಲ್ಲೆಯಲ್ಲಿರುವ ತನ್ನ ಕುಟುಂಬದ ಆಧಾರಸ್ತಂಭವಾಗಿದ್ದಾಳೆ. ಕನ್ಹಯ್ಯಾ ಸಿಂಗ್ ತಂದೆ ಜೈಶಂಕರ್ ಸಿಂಗ್ (60) ರೈತರಾಗಿದ್ದು ,ಎರಡು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ. ಕನ್ಹಯ್ಯಾನಿಗೆ ಇಬ್ಬರು ಸಹೋದರರಿದ್ದು, ಹಿರಿಯವ ಮಣಿಕಂಠ ಸಿಂಗ್ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ನೌಕರಿ ಮಾಡುತ್ತಿದ್ದರೆ, ಕಿರಿಯ ಸಹೋದರ ಪ್ರಿನ್ಸ್ ಸಿಂಗ್ ಜೆಎನ್‌ಯುವಿನಲ್ಲಿ ಎಂಫಿಲ್ ಮಾಡುತ್ತಿದ್ದಾನೆ. ಕನ್ಹಯ್ಯಿ ಬಿಹಾಟಿನ ಸರಕಾರಿ ಶಾಲೆಯೊಂದರಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ಬರೌನಿಯ ಶಾಲೆಯೊಂದರಲ್ಲಿ 10 ಹಾಗೂ 12ನೆ ತರಗತಿ ತೇರ್ಗಡೆಯಾಗಿದ್ದನು.

ಕನ್ಹಯ್ಯ ಸಿಂಗ್‌ನ ಶೈಕ್ಷಣಿಕ ಸಾಧನೆ ಬಗ್ಗೆ ಹೆಮ್ಮೆ ಪಡುವ ಮೀನಾದೇವಿ ಆತ ಬಿಹಾರದಿಂದ ದಿ. ಚಂದ್ರಶೇಖರ್ ಪ್ರಸಾದ್ ನಂತರ ಜೆಎನ್‌ಯು ವಿದ್ಯಾರ್ಥಿ ಸಂಘದ ನಾಯಕರಾದವರಲ್ಲಿ ಎರಡನೆಯವನು. ಚಂದ್ರಶೇಖರ್ ಮುಂದೆ ಸಿಪಿಐ-ಎಂಎಲ್‌ನಲ್ಲಿ ಸಕ್ರಿಯರಾಗಿದ್ದರೂ ಸಿವಾನ್‌ನಲ್ಲಿ ಮಾರ್ಚ್ 31, 1997ರಲ್ಲಿ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News