ದುಬಾರಿ ಬೆಲೆಗೆ ಮಾರಾಟ ಮಾಡಿದರೆ ಕಠಿಣ ಕ್ರಮ: ಸಚಿವ ಶಾಮನೂರು ಎಚ್ಚರಿಕೆ

Update: 2016-02-24 18:51 GMT

ಹಾಪ್‌ಕಾಮ್ಸ್‌ನಲ್ಲಿ ರಿಯಾಯಿತಿ ದರದಲ್ಲಿ ಹಣ್ಣು-ತರಕಾರಿ
ಬೆಂಗಳೂರು: ಹಣ್ಣು ಹಾಗೂ ತರಕಾರಿಗಳನ್ನು ಹೆಚ್ಚಿನ ಬೆಲೆಗೆ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಮಾರಾಟ ಮಾಡುವ ಸಿಬ್ಬಂದಿ ವಿರುದ್ಧ ಕ್ರಮ ಜರಗಿಸಲಾಗುವುದು ಎಂದು ತೋಟಗಾರಿಕಾ ಹಾಗೂ ಎಪಿಎಂಸಿ ಸಚಿವ ಶಾಮನೂರು ಶಿವಶಂಕರಪ್ಪಹೇಳಿದರು.

ನಗರದ ಲಾಲ್‌ಬಾಗ್‌ನಲ್ಲಿ ಇಂದು ದ್ರಾಕ್ಷಿ-ಕಲ್ಲಂಗಡಿ ಹಾಗೂ ಅಪರೂಪದ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾಪ್‌ಕಾಮ್ಸ್ ಮಾರಾಟ ಮಳಿಗೆಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಗ್ರಾಹಕರಿಗೆ ಹಣ್ಣು ತರಕಾರಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಹಾಪ್‌ಕಾಮ್ಸ್ ನಿಗದಿ ಮಾಡಿರುವ ದರಕ್ಕಿಂತ ಹೆಚ್ಚು ಬೆಲೆಯಲ್ಲಿ ಮಾರಾಟ ಮಾಡಿದರೆ ಅಂಥವರ ವಿರುದ್ಧ ಕ್ರಮ ಜರಗಿಸಲಾಗುವುದು ಎಂದರು.
ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಹಣ್ಣು-ತರಕಾರಿಗಳನ್ನು ಒದಗಿಸಬೇಕು ಎಂಬುದು ಹಾಪ್‌ಕಾಮ್ಸ್‌ನ ಉದ್ದೇಶ. ರೈತರಿಂದ ನೇರವಾಗಿ ಖರೀದಿ ಮಾಡಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೂ ಕೆಲವರು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿರುವುದನ್ನು ಸಹಿಸುವುದಿಲ್ಲ. ಮಾರಾಟ ಮಳಿಗೆಗಳಲ್ಲಿ ಹೆಚ್ಚಿನ ದರದಲ್ಲಿ ಹಣ್ಣು-ತರಕಾರಿಗಳನ್ನು ಮಾರಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲು ಈಗಾಗಲೇ ಅನಿರೀಕ್ಷಿತವಾಗಿ ಮಳಿಗೆಗಳಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಆರಂಭಿಸಲಾಗಿದೆ ಎಂದರು.
ರೈತರ ತೋಟಗಳಿಂದಲೇ ಹಣ್ಣುಗಳನ್ನು ನೇರವಾಗಿ ಖರೀದಿಸಿ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರಿಂದ ರೈತರಿಗೂ ಉತ್ತಮ ಬೆಲೆ ಸಿಗುತ್ತದೆ. ಗ್ರಾಹಕರಿಗೂ ಕಡಿಮೆ ದರದಲ್ಲಿ ಹಣ್ಣುಗಳು ಸಿಗುತ್ತಿವೆ, ಎಲ್ಲ ಮಾರಾಟ ಮಳಿಗೆಗಳಲ್ಲೂ ಶೇ. 10ರಷ್ಟು ರಿಯಾಯಿತಿ ಇದೆ ಎಂದರು.
ಈ ಮೇಳದಲ್ಲಿ ದ್ರಾಕ್ಷಿ, ಕಲ್ಲಂಗಡಿ, ಬೆಟ್ಟದ ನಲ್ಲಿ, ಬೋರೆಹಣ್ಣು, ಬೇಲ, ಕಿವಿಹಣ್ಣು, ರಾಮಫಲ, ನೇರಳೆ, ಬಾರ್ಬಾಡಸ್ ಚರ್ವಿ ಮತ್ತಿತರ ಹಣ್ಣುಗಳನ್ನು ಪ್ರದರ್ಶನ ಹಾಗೂ ಮಾರಾಟದ ಜೊತೆಗೆ ಕಳೆದ 3 ವರ್ಷಗಳಿಂದ ನಂಜನಗೂಡು ರಸಬಾಳೆ, ಚಂದ್ರಬಾಳೆ, ಜಂಬುದ್ರಾಕ್ಷಿ, ಚಕೋತ, ಲಿಕ್ಕಿ, ಸಿಹಿಹುಣಸೆ ಹೀಗೆ ಅಪರೂಪದ ಹಣ್ಣುಗಳನ್ನು ಮಾರಾಟಕ್ಕೆ ಇಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಎಂಟಿಸಿ ಅಧ್ಯಕ್ಷ ವಿ.ಎಸ್. ಆರಾಧ್ಯ, ಪರಿಸರವಾದಿ ಡಾ. ಯಲ್ಲಪ್ಪರೆಡ್ಡಿ, ಹಾಪ್‌ಕಾಮ್ಸ್ ಅಧ್ಯಕ್ಷ ಜಿ.ಆರ್. ಶ್ರೀನಿವಾಸನ್, ಉಪಾಧ್ಯಕ್ಷ ಬಿ.ಮುನೇಗೌಡ, ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News