‘ಜನ ಗಣ ಮನ’ದ ಬದಲು ‘ವಂದೇ ಮಾತರಂ’ ರಾಷ್ಟ್ರಗೀತೆ ಮಾಡುವ ಹುನ್ನಾರ: ಪ್ರೊಫೆಸರ್ ತನಿಕಾ ಸರ್ಕಾರ್

Update: 2016-02-26 08:24 GMT

ನವದೆಹಲಿ, ಫೆ.26: ಬಲ ಪಂಥೀಯ ಸಂಘಟನೆಗಳ ಬೇಡಿಕೆಯಂತೆ ‘ಜನ ಗಣ ಮನ’ದ ಬದಲು ‘ವಂದೇ ಮಾತರಂ’ ಹಾಡನ್ನು ರಾಷ್ಟ್ರಗೀತೆಯನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆಯೆಂದು ಇತಿಹಾಸತಜ್ಞೆ ಹಾಗೂ ಜೆಎನ್‌ಯುವಿನ ಮಾಜಿ ಪ್ರೊಫೆಸರ್  ತನಿಕಾ ಸರ್ಕಾರ್ ಹೇಳಿದ್ದಾರೆ.

ಶುಕ್ರವಾರ ಜೆಎನ್‌ಯುವಿನಲ್ಲಿ ‘ರಾಷ್ಟ್ರೀಯತೆ’ ವಿಷಯದ ಮೇಲೆ ಆಯೋಜಿಸಲಾದ ಭಾಷಣ ಮಾಲಿಕೆಯಲ್ಲಿ ಐದನೇ ಭಾಷಣ ನೀಡಿದ ಸರ್ಕಾರ್‘‘ಬಲಪಂಥೀಯ ಸಂಘಟನೆಗಳು ವಂದೇ ಮಾತರಂ ಹಾಡನ್ನು ರಾಷ್ಟ್ರಗೀತೆಯನ್ನಾಗಿ ಮಾಡಬೇಕೆಂದು ಹಲವು ಸಮಯದಿಂದ ಆಗ್ರಹಿಸುತ್ತಿವೆ. ಜನ ಗಣ ಮನ ನಮ್ಮ ರಾಷ್ಟ್ರಗೀತೆಯಾಗಿ ಯಾವತ್ತೂ ಇರಬಹುದೆಂದು ತಿಳಿಯಬೇಡಿ,’’ ಎಂದು ಹೇಳಿದರು.ಇತ್ತೀಚೆಗೆ ವಿಶ್ವವಿದ್ಯಾಲಯ ಆವರಣದಲ್ಲಿ ಸಂಸತ್ ದಾಳಿ ಪ್ರಕರಣದ ದೋಷಿ ಅಫ್ಚಲ್ ಗುರುವಿನ ಗಲ್ಲು ಶಿಕ್ಷೆಯನ್ನು ವಿರೋಧಿಸಿ ನಡೆದ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಕ್ಕೆ ‘ದೇಶ ವಿರೋಧಿ’ ಎಂಬ ಹಣೆಪಟ್ಟಿ ಕಟ್ಟಿರುವುದರ ವಿರುದ್ಧ ಈ ಭಾಷಣ ಮಾಲಿಕೆಯನ್ನು ಆಯೋಜಿಸಲಾಗಿದೆ.


ಇದೀಗ ದೇಶದ್ರೋಹದ ಆರೋಪದ ಮೇಲೆ ಬಂಧನದಲ್ಲಿರುವ ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಹಾಗೂ ಅನಿರ್ಬನ್ ಭಟ್ಟಾಚಾರ್ಯ ಕಲಿಯುತ್ತಿರುವ ಜೆಎನ್‌ಯುವಿನ ಸೆಂಟರ್ ಫಾರ್ ಹಿಸ್ಟಾರಿಕಲ್ ಸ್ಟಡೀಸ್‌ನಿಂದ ನಿವೃತ್ತರಾಗಿರುವ ಪ್ರೊ. ತನಿಕಾ ಸರ್ಕಾರ್ ಇಂದು ನೀಡಿದ ಭಾಷಣದ ಶೀರ್ಷಿಕೆ ‘ಗಾಂಧೀಸ್ ನೇಶನ್’ ಎಂಬುದಾಗಿತ್ತು.


ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇರಳದ ಮಾಜಿ ಶಿಕ್ಷಣ ಸಚಿವ ಇಟಿ ಮೊಹಮ್ಮದ್ ಬಶೀರ್ ತಮ್ಮ ಭಾಷಣದಲ್ಲಿ ಜೆಎನ್‌ಯುವಿನಲ್ಲಿ ನಡೆಯುತ್ತಿರುವಹೋರಾಟ ಒಂದು ವಿಶ್ವವಿದ್ಯಾಲಯಕ್ಕೆ ಮಾತ್ರ ಸಂಬಂಧಿಸದೆ ಇಡೀ ದೇಶಕ್ಕೆ ಸಂಬಂಧಿಸಿದುದಾಗಿದೆ ಎಂದು ಹೇಳಿದರು.
‘‘ಸಂಸ್ಥೆಗಳ ಸ್ವಾಯತ್ತತೆಯ ಮೇಲೆ ದಾಳಿ ನಡೆಸಿ ಸರಕಾರ ಇಡೀ ದೇಶದ ಮೇಲೆ ದಾಳಿ ನಡೆಸಲು ಇಚ್ಛಿಸುತ್ತಿದೆ,’’ ಎಂದವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News