ಕಾರಜೋಳ-ದೇಶಪಾಂಡೆ ಜಟಾಪಟಿ

Update: 2016-03-03 18:05 GMT

ರೈತರ ಪ್ರತಿಭಟನೆ

ಬೆಂಗಳೂರು, ಮಾ.3: ಕಬ್ಬುಬೆಳೆಗಾರರು ಹಾಗೂ ಶಾಶ್ವತ ನೀರಾವರಿ ಯೋಜನೆಗಳಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿಷಯವು ಕೆಲಕಾಲ ಬಿಜೆಪಿ ಸದಸ್ಯ ಗೋವಿಂದ ಕಾರಜೋಳ ಹಾಗೂ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ನಡುವೆ ಜಟಾಪಟಿಗೆ ಕಾರಣವಾಯಿತು.

ಕಬ್ಬುಬೆಳೆಗಾರರು ತಮಗೆ ಬರಬೇಕಿರುವ ಬಾಕಿಯನ್ನು ಕೊಡಿಸುವಂತೆ ಹಾಗೂ ನೀರಾವರಿಯ ಬೇಡಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂತಹ ಗಂಭೀರವಾದ ವಿಚಾರವನ್ನು ಸರಕಾರ ಪರಿಗಣಿಸುತ್ತಿಲ್ಲ ಎಂದು ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಚಿವ ಆರ್.ವಿ.ದೇಶಪಾಂಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ರೈತ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅವರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ನಮ್ಮದು ರೈತ ಪರವಾದ ಸರಕಾರ. ನೀವು(ಬಿಜೆಪಿ ಸರಕಾರ) ಘೋಷಣೆ ಮಾಡಿಹೋಗಿದ್ದ 25 ಸಾವಿರ ರೂ.ವರೆಗಿನ ಸಾಲ ಮನ್ನಾವನ್ನು ನಾವು ಅನುಷ್ಠಾನಕ್ಕೆ ತಂದಿದ್ದೇವೆ ಎಂದು ತಿರುಗೇಟು ನೀಡಿದರು.

ಭತ್ತ, ರಾಗಿ, ಜೋಳವನ್ನು ಬೆಂಬಲ ಬೆಲೆ ನೀಡಿ ಖರೀದಿಸಲಾಗುತ್ತಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡಲು ಪ್ರತಿ ಲೀಟರ್ ಹಾಲಿಗೆ 4 ರೂ.ಪ್ರೋತ್ಸಾಹ ಧನ ನೀಡುತ್ತಿದ್ದೇವೆ ಎಂದು ದೇಶಪಾಂಡೆ ಹೇಳಿದರು.

ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಪ್ರತಿಭಟನೆಗಳನ್ನು ನಡೆಸಲು ಸ್ವಾತಂತ್ರ ಉದ್ಯಾನವನದ ಆವರಣವನ್ನು ರಾಜ್ಯ ಸರಕಾರವೇ ನಿಗದಿ ಗೊಳಿಸಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತರು ಪ್ರತಿಭಟನೆ ನಡೆಸಲು ಬರುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನ ಹೊರಗಡೆ ತಡೆದು ನಿಲ್ಲಿಸಿರುವುದು ಅಕ್ಷಮ್ಯ. ಹಿರಿಯ ಸಚಿವರು ಪ್ರತಿಭಟನಾ ಸ್ಥಳಕ್ಕೆ ಹೋಗಿ ರೈತರ ಮನವಿಯನ್ನು ಕೇಳುವ ಸೌಜನ್ಯವನ್ನೂ ತೋರುತ್ತಿಲ್ಲ ಎಂದು ಟೀಕಿಸಿದರು. ಇದರಿಂದ ಕೆರಳಿದ ದೇಶಪಾಂಡೆ, ಕಳಸಾ ಬಂಡೂರಿ ಯೋಜನೆಗೆ ಆಗ್ರಹಿಸಿ ರೈತರು ನೂರಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರಮೋದಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗುತ್ತಿಲ್ಲ. ಅಲ್ಲದೆ, ಇತ್ತೀಚೆಗೆ ಬೆಳಗಾವಿಗೆ ಬಂದಿದ್ದ ಸಂದರ್ಭದಲ್ಲಿ ರೈತರನ್ನು ಯಾಕೆ ಭೇಟಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಹಕಾರಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಮಾತನಾಡಿ, ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ನಾನು ಭೇಟಿ ನೀಡಿ ಅವರ ಮನವಿಯನ್ನು ಸ್ವೀಕರಿಸಿದ್ದೇನೆ. ಅಲ್ಲದೆ, ಅವರಿಗೆ ನ್ಯಾಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಬಂದಿದ್ದೇನೆ ಎಂದರು.

ಎತ್ತಿನಹೊಳೆ ಬಗ್ಗೆ ಸ್ಪಷ್ಟನೆ ನೀಡಿ: ಬಿಜೆಪಿ ಸದಸ್ಯರನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾದ ಕಾಂಗ್ರೆಸ್ ಸದಸ್ಯ ವಸಂತ ಬಂಗೇರಾ ಎತ್ತಿನಹೊಳೆ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿರೋಧ ವ್ಯಕ್ತಪಡಿಸುವ ಬಿಜೆಪಿ ನಾಯಕರು, ಬೆಂಗಳೂರಿಗೆ ಬಂದು ಅದರ ಪರವಾಗಿ ಮಾತನಾಡುತ್ತಾರೆ. ಮೊದಲು ಈ ಯೋಜನೆ ಕುರಿತು ನಿಮ್ಮ ನಿಲುವಿನ ಕುರಿತು ಸ್ಪಷ್ಟನೆ ನೀಡಿ ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News