ಕನ್ನಡ ಉಳಿವಿಗಾಗಿ ತಜ್ಞರೊಂದಿಗೆ ಸಮಾಲೋಚನೆ: ಮನು ಬಳಿಗಾರ್

Update: 2016-03-03 18:09 GMT

ಬೆಂಗಳೂರು, ಮಾ.3: ಕನ್ನಡ ನಾಡು, ನುಡಿಯ ಉಳಿವಿಗಾಗಿ ಕನ್ನಡ ಪರ ಹೋರಾಟಗಾರರು, ವಿದ್ವಾಂಸರು, ಸಾಹಿತಿಗಳು ಹಾಗೂ ವಿವಿಧ ಕ್ಷೇತ್ರದ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್‌ನ ನೂತನ ಅಧ್ಯಕ್ಷ ಮನು ಬಳಿಗಾರ್ ತಿಳಿಸಿದ್ದಾರೆ.

ಗುರುವಾರ ಕನ್ನಡ ಸಾಹಿತ್ಯ ಪರಿಷತ್‌ನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ್‌ರವರಿಂದ ಕಸಾಪದ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕನ್ನಡ ಜನತೆಯ ಬದುಕನ್ನು ಹಸನು ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ, ಜಾತ್ಯತೀತ, ಪ್ರಾದೇಶಿಕ ನ್ಯಾಯವನ್ನು ಎತ್ತಿ ಹಿಡಿಯುತ್ತೇನೆ. ಈ ನಿಟ್ಟಿನಲ್ಲಿ ರಾಜ್ಯದ ವಿವಿಧ ಕ್ಷೇತ್ರದ ಗಣ್ಯರೊಂದಿಗೆ ಸಭೆಗಳನ್ನು ನಡೆಸುತ್ತೇನೆ. ಆ ಸಭೆಗಳಲ್ಲಿ ಬರುವ ಸಲಹೆಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತೇನೆಂದು ಅವರು ಹೇಳಿದರು.

ಸರಕಾರದ ಆಡಳಿತದಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡವನ್ನು ಕಡ್ಡಾಯ ಮಾಡುವ ನಿಟ್ಟಿನಲ್ಲಿ ನಿಯಮವನ್ನು ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ಇದರ ಜೊತೆಗೆ ಕೇಂದ್ರೀಯ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಲು ಸುತ್ತೋಲೆ ಹೊರಡಿಸಲಾಗುವುದು ಎಂದು ಮನುಬಳಿಗಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News