ರಾಜ್ಯಪಾಲರ ಅಸಮ್ಮತಿಯಿಂದ ನಾಡೋಜ ಪದವಿಯಿಲ್ಲ

Update: 2016-03-09 17:11 GMT

-ಪರುಶುರಾಮ ಕಲಾಲ್
ಹೊಸಪೇಟೆ, ಮಾ. 9: ಹಂಪಿ ಕನ್ನಡ ವಿಶ್ವವಿದ್ಯಾ ನಿಲಯದ ಘಟಿಕೋತ್ಸವ ಮಾ. 10ರಂದು ನಡೆಯಲಿದ್ದು, ವಿಶ್ವವಿದ್ಯಾನಿಲಯದ ನಾಡೋಜ ಗೌರವ ಪದವಿಗೆ ಮೂವರು ಸಾಧಕರನ್ನು ಗುರುತಿಸಲಾಗಿತ್ತು. ಆದರೆ ಇದಕ್ಕೆ ಹಂಪಿ ಕನ್ನಡ ವಿವಿ ಕುಲಾಧಿಪತಿ ಹಾಗೂ ರಾಜ್ಯಪಾಲ ವಜುಭಾಯಿ ರೂಡಾಭಾಯಿ ವಾಲಾ ಅದಕ್ಕೆ ಸಮ್ಮತಿ ಸೂಚಿಸದಿರುವುದರಿಂದ ನಾಡೋಜ ಪದವಿ ಈ ಬಾರಿ ಯಾರಿಗೂ ನೀಡುತ್ತಿಲ್ಲ.
 ಹಂಪಿ ಕನ್ನಡ ವಿಶ್ವವಿದ್ಯಾನಿಲಯವು ಕನ್ನಡಿಗರ ಏಕೈಕ ಪ್ರಾತಿನಿಧ್ಯ ವಿಶ್ವವಿದ್ಯಾನಿಲಯವಾಗಿದ್ದು, ರಾಜ್ಯಪಾಲರ ಈ ನಡೆಯು ಕನ್ನಡ ವಿವಿಗೆ ಬಗೆದ ಅಪಚಾರವಾಗಿದೆ ಎನ್ನುವುದು ಬಹುತೇಕ ಪ್ರಾಜ್ಞರ ಅಭಿಪ್ರಾಯವಾಗಿದೆ.
ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಜನ್ಮ ತಾಳಿದಾಗ ಅದಕ್ಕೆ ಕುಲಾಧಿಪತಿ ಮುಖ್ಯಮಂತ್ರಿಯೇ ಆಗಿದ್ದರು. ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ವಿವಿಗೆ ಕನ್ನಡ ಸಂಸ್ಕೃತಿ, ಪರಂಪರೆ ಗೊತ್ತಿಲ್ಲದ ಮುಖ್ಯಮಂತ್ರಿ ಬಂದರೆ ವಿವಿಗೆ ಅನುದಾನ ಸಿಗುವುದಿಲ್ಲ, ವಿವಿ ಉಳಿಯುವುದಿಲ್ಲ ಎಂದು ಭಾವಿಸಿ ಯುಜಿಸಿ ಅನುದಾನ ಪಡೆಯಲು ಸೂಚಿಸಿ ತಿದ್ದುಪಡಿ ಮಾಡಿದ್ದರಿಂದ ರಾಜ್ಯಪಾಲರು ವಿವಿ ಕುಲಾಧಿಪತಿ ಆಗುವಂತೆ ಆಯಿತು. ಅದು ಇರಲಿ, ಮುಖ್ಯಪ್ರಶ್ನೆ ಎಂದರೆ ಯಾಕೇ ರಾಜ್ಯಪಾಲರು ಮೂವರು ಸಾಧಕರ ಹೆಸರನ್ನು ಅಂತಿಮಗೊಳಿಸಲಿಲ್ಲ ಎನ್ನುವುದಾಗಿದೆ. ನಾಡೋಜ ಗೌರವ ಪದವಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ನೀಡುವಾಗ ವಿವಾದಗಳು ಉಂಟಾದ ಹಿನ್ನೆಲೆಯಲ್ಲಿ ರಾಜ್ಯಸರಕಾರವು ತಜ್ಞರ ಸಮಿತಿ ನೇಮಿಸಿ ಆಯ್ಕೆ ಮಾಡಲು ಸೂಚಿಸಿತ್ತು. ಈ ಸೂಚನೆಯಂತೆ ಹಂಪಿ ಕನ್ನಡ ವಿವಿಯು ಸರಕಾರದ ನಿರ್ದೇಶನದಂತೆ ಕನ್ನಡ ವಿವಿಯ ನಿವೃತ್ತ ಕುಲಪತಿಯನ್ನೊಳಗೊಂಡ ತಜ್ಞರ ಸಮಿತಿಯು ಜನಪದ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರೊಬ್ಬರನ್ನು ಮತ್ತು ಶೈಕ್ಷಣಿಕ ಕ್ಷೇತ್ರದ ಸಾಧಕರೊಬ್ಬರನ್ನು ಆಯ್ಕೆ ಮಾಡಿತ್ತು. ಈ ಮೂರು ಜನರ ಪಟ್ಟಿಯನ್ನು ರಾಜ್ಯಪಾಲರ ಭವನಕ್ಕೆ ಕಳಿಸಿಕೊಡಲಾಗಿತ್ತು.ಇದಕ್ಕೆ ಸಮ್ಮತಿ ಸೂಚಿಸದೇ ರಾಜ್ಯಪಾಲರು ವಿಳಂಬ ನೀತಿ ಅನುಸರಿಸಿದ್ದಾರೆ. ಈ ಮೂವರು ಸಂಘ ಪರಿವಾರದವರು ಆಗಿರಲಿಕ್ಕಿಲ್ಲ, ಇಷ್ಟು ಮಾತ್ರವಲ್ಲ, ಖಂಡಿತ ಇವರಲ್ಲಿ ಒಬ್ಬರು ಸಂಘ ಪರಿವಾರವನ್ನು ಟೀಕಿಸುವವರು ಇರುತ್ತಾರೆ. ಈ ಕಾರಣದಿಂದಲೇ ರಾಜ್ಯಪಾಲರು ಇದಕ್ಕೆ ಸಮ್ಮತಿ ಸೂಚಿಸಿರಲಿಕ್ಕಿಲ್ಲ. ಇದೂ ಒಂದು ಕಾರಣವಾದರೆ ಮತ್ತೊಂದು ಹೊಸದಿಲ್ಲಿಯ ಜವಾಹಾರ್ ಲಾಲ್ ವಿಶ್ವವಿದ್ಯಾನಿಲಯ ಎಂದರೆ ಕನಸಿನಲ್ಲೂ ಬೆಚ್ಚಿ ಬೀಳುವ ಕೇಂದ್ರ ಸರಕಾರ, ಸಂಘಪರಿವಾರವು ಇದೇ ಜೆಎನ್‌ಯು ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ ಅವರನ್ನು ಘಟಿಕೋತ್ಸವ ನುಡಿಹಬ್ಬದ ಭಾಷಣಕ್ಕೆ ಅಹ್ವಾನಿಸಿರುವುದು ರಾಜ್ಯಪಾಲರ ಮುನಿಸಿಗೆ ಕಾರಣವಾಗಿರಬಹುದು. ಡಾ.ಪುರುಷೋತ್ತಮ ಬಿಳಿಮಲೆ ನಮ್ಮ ಕನ್ನಡದವರು, ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು, ಕನ್ನಡ ಸಂಶೋಧನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಇತ್ತೀಚೆಗಷ್ಟೇ ಜೆಎನ್‌ಯುನಲ್ಲಿ ಆರಂಭವಾದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾಗಿ ಜೆಎನ್ ಯು ಭಾಗವಾದವರು. ಸಂಸ್ಕೃತಿ, ಸಂಶೋಧನೆ, ಪರಂಪರೆ, ಕನ್ನಡ ಸಾಹಿತ್ಯದ ಗಂಧಗಾಳಿ ಇಲ್ಲದ ರಾಜ್ಯಪಾಲರಿಂದ ಬೇರೇನು ನಿರೀಕ್ಷಿಸಲು ಸಾಧ್ಯ. ರಾಜ್ಯಪಾಲರು ಕನ್ನಡಿಗರಿಗೆ ಬಗೆದ ಅಪಚಾರ ಇದು ಎನ್ನದೆ ಬೇರೆ ವಿಧಿ ಇಲ್ಲ.

‘ಗೌರವ ಡಾಕ್ಟರೇಟ್’ ಮಾನದಂಡ ಪರಿಷ್ಕರಣೆ?
ಬೆಂಗಳೂರು, ಮಾ. 9: ವಿಶ್ವ ವಿದ್ಯಾನಿಲಯಗಳಿಂದ ನೀಡುವ ‘ಗೌರವ ಡಾಕ್ಟರೇಟ್’ ಇತ್ತೀಚಿನ ದಿನಗಳಲ್ಲಿ ತನ್ನ ಘನತೆ ಕಳೆದುಕೊಳ್ಳುತ್ತಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ‘ಗೌರವ ಡಾಕ್ಟರೇಟ್’ ನೀಡುವ ಸಂಬಂಧ ಹೊಸ ಮಾರ್ಗಸೂಚಿಯೊಂದನ್ನು ನೀಡಿದ್ದಾರೆ.
ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜ ಸೇವೆಯಲ್ಲಿ ತೊಡಗಿರುವ ಹಲವು ಗಣ್ಯರನ್ನು ಗುರುತಿಸಿ ವಿಶ್ವ ವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗುತ್ತಿತ್ತು. ಆದರೆ, ‘ಗೌಡಾ’ ಪದವಿ ಇತ್ತೀಚಿನ ದಿನಗಳಲ್ಲಿ ವಿವಾದಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಗೌರವ ಡಾಕ್ಟರೇಟ್‌ಗೆ ಎಂಟು ಹೊಸ ಮಾನಡಂದ ನಿಗದಿಪಡಿಸಿ ಆದೇಶ ಹೊರಡಿಸಿದ್ದಾರೆ.
ಗೌರವ ಡಾಕ್ಟರೇಟ್ ಬೇಕಾಬಿಟ್ಟಿ ನೀಡಬಾರದು. ಪರಿಶೀಲನಾ ಸಮಿತಿ ಅಂತಿಮ ವರದಿಯಂತೆ ನೀಡಬೇಕು. ವಿವಿಯ ಸಿಂಡಿಕೇಟ್‌ನಿಂದ ಹೆಸರುಗಳ ಶಿಾರಸು ಆಗಬೇಕು. ಒಂದು ಬಾರಿ ಮೂರಕ್ಕಿಂತ ಹೆಚ್ಚು ಗಣ್ಯರ ಹೆಸರು ಶಿಾರಸು ಬೇಡ. ರಾಜ್ಯಪಾಲರಿಂದಲೇ ನೂತನ ಪರಿಶೀಲನಾ ಸಮಿತಿ ರಚನೆ. ಘಟಿಕೋತ್ಸವ 45ದಿನಕ್ಕೆ ಮೊದಲೇ ಗಣ್ಯರ ಅಂತಿಮ ಪಟ್ಟಿ ಪ್ರಕಟಿಸಬೇಕು ಎಂದು ಉಪ ಕುಲಪತಿಗಳಿಗೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News