‘ಮಾಂಸ’ ಮಾರಾಟಕ್ಕೊಂದು ಮಹಾ ಮಂಡಳ ಅಸ್ತಿತ್ವಕ್ಕೆ

Update: 2016-03-13 18:14 GMT

ಬೆಂಗಳೂರು, ಮಾ.13: ಶೋಷಿತ ಸಮುದಾಯಗಳ ಸಬಲೀಕರಣ, ಸದೃಢ ಮಾನವ ಸಂಪನ್ಮೂಲ ವೃದ್ಧಿಸುವ ನಿಟ್ಟಿನಲ್ಲಿ ಕಡಿಮೆ ಬೆಲೆಗೆ ಉತ್ಕೃಷ್ಟ ಗುಣಮಟ್ಟದ ‘ಮಾಂಸ’ ಪೂರೈಸಲು ಕೆಎಂಎಫ್ ಮಾದರಿಯಲ್ಲೇ ‘ಕರ್ನಾಟಕ ಸಹಕಾರ ಕುರಿ-ಆಡು (ಮೇಕೆ) ಅಭಿವೃದ್ಧಿ ಮತ್ತು ಸಾಕಣೆದಾರರ ಮಹಾ ಮಂಡಳ’ ಸ್ಥಾಪಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.

ಆರೋಗ್ಯವಂತ ವ್ಯಕ್ತಿ ವಾರ್ಷಿಕ ಕನಿಷ್ಠ 11ಕೆ.ಜಿ.ಯಷ್ಟು ಮಾಂಸ ಸೇವಿಸಬೇಕು. ಆದರೆ, ಪ್ರಸ್ತುತ ಕೇವಲ 3ರಿಂದ 5 ಕೆ.ಜಿ.ಯಷ್ಟು ಮಾಂಸವಷ್ಟೇ ದೊರೆಯುತ್ತಿದೆ. ಹೀಗಾಗಿ ಅಪೌಷ್ಟಿಕತೆಯಿಂದ ಗರ್ಭಿಣಿ, ತಾಯಂದಿರ ಸಾವು ಹೆಚ್ಚುತ್ತಿರುವ ಆತಂಕಕಾರಿ ಅಂಶ ಅಧ್ಯಯನದಿಂದ ಬಹಿರಂಗ ವಾಗಿದೆ. ಆದ್ದರಿಂದ ಕಡಿಮೆ ಬೆಲೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಮಾಂಸ ಪೂರೈಕೆಗೆ ಸರಕಾರ ಉದ್ದೇಶಿಸಿದೆ.

ರಾಜ್ಯದ 1.15 ಕೋಟಿ ಕುಟುಂಬಗಳ ಪೈಕಿ 76ಲಕ್ಷ ಕೃಷಿ ಕುಟುಂಬಗಳಿವೆ. ಆ ಪೈಕಿ 15ಲಕ್ಷಕ್ಕೂ ಹೆಚ್ಚು ಕುಟುಂಬಗಳು ಆಡು ಮತ್ತು ಮೇಕೆ ಸಾಕಣೆಯನ್ನು ಅವಲಂಬಿಸಿವೆ. ದೇಶದಲ್ಲೇ ಕುರಿ- ಮೇಕೆ ಸಾಕಣೆಯಲ್ಲಿ ಕರ್ನಾಟಕ 2ನೆ ಸ್ಥಾನದಲ್ಲಿದೆ ಎಂಬುದು ಗಮನಾರ್ಹ.

2012ರ ಸಮೀಕ್ಷೆಯನ್ವಯ ರಾಜ್ಯದಲ್ಲಿ 96.71ಲಕ್ಷ ಕುರಿ ಮತ್ತು 48ಲಕ್ಷ ಆಡು (ಮೇಕೆ) ಗಳಿವೆ. ಪ್ರತಿನಿತ್ಯ ಸಾವಿರಾರು ಕುರಿ, ಮೇಕೆಗಳನ್ನು ವಧೆ ಮಾಡಲಾಗುತ್ತಿದ್ದರೂ, ಜನ ಸಾಮಾನ್ಯರಿಗೆ ಗುಣಮಟ್ಟದ ಮಾಂಸ ಪೂರೈಕೆ ಆಗುತ್ತಿಲ್ಲ, ಅದು ಕಡಿಮೆ ಬೆಲೆಗೂ ದೊರೆಯುತ್ತಿಲ್ಲ. ಮಧ್ಯವರ್ತಿಗಳ ಸುಳಿಗೆ ಸಿಲುಕಿ ಸಾಕಣೆದಾರ ಮತ್ತು ಗ್ರಾಹಕರ ಶೋಷಣೆ ಆಗುತ್ತಿರುವುದು ಗೊತ್ತಿರುವ ಸಂಗತಿಯಾಗಿದೆ.

ರಾಜ್ಯದ 747ಹೋಬಳಿ ಕೇಂದ್ರಗಳ ಪೈಕಿ 646 ಹೋಬಳಿಗಳಲ್ಲಿ ಕುರಿ-ಆಡು ಸಾಕಣೆದಾರರಿದ್ದು, ಒಂದು ಹೋಬಳಿಯಲ್ಲಿ ಕನಿಷ್ಠ 15 ಸಾವಿರ ಕುರಿ-ಆಡುಗಳಿವೆ. ರಾಜ್ಯದಲ್ಲಿ ಒಟ್ಟು 142 ಆಡು-ಕುರಿ ಸಂತೆಗಳು ನಡೆಯುತ್ತಿರುವುದು ವ್ಯಾಪಕತೆ ಮತ್ತು ಕೋಟ್ಯಂತರ ರೂಪಾಯಿ ವಹಿವಾಟಿಗೆ ಇದು ಸಾಕ್ಷಿಯಾಗಿದೆ.

ನಾಲ್ಕು ವರ್ಷಗಳಿಂದಲೂ ರಾಜ್ಯದಲ್ಲಿ ಭೀಕರ ಸ್ವರೂಪದ ಬರ ಆವರಿಸಿದೆ. ಈ ಮಧ್ಯೆಯೂ ಆಡು-ಮೇಕೆ ಸಾಕಣೆಯಲ್ಲಿ ಶೇ.30ರಷ್ಟು ಹೆಚ್ಚಳವಾಗಿದೆ ಎಂದು ಅಂಕಿ-ಅಂಶ ಹೇಳುತ್ತದೆ. ಶೋಷಿತ ಸಮುದಾಯದ ಆರ್ಥಿಕ ಮೂಲವಾಗಿರುವ ಆಡು(ಮೇಕೆ) ಮತ್ತು ಕುರಿ ಮಾಂಸ, ಮತ್ತವುಗಳ ಉಪ ಉತ್ಪನ್ನಗಳ ಮಾರಾಟಕ್ಕೆ ಆಕರ್ಷಣೀಯ ‘ಬ್ರಾಂಡ್’ ಸೃಷ್ಟಿಸುವುದು ಮಹಾ ಮಂಡಳದ ಉದ್ದೇಶ.

ಕುರಿ-ಆಡು, ಕುರಿ ಉಣ್ಣೆ, ಹಾಲು, ಮಾಂಸ, ಗೊಬ್ಬರ, ಚರ್ಮದ ಉತ್ಪನ್ನಗಳ ಸಂಗ್ರಹಣೆ, ಸಾಗಣೆ, ಶೇಖರಣೆ, ಸಂಸ್ಕರಣೆ, ವೌಲ್ಯವರ್ಧನೆ ಮತ್ತು ಮಾರಾಟಕ್ಕೆ ಸೂಕ್ತ ವ್ಯವ್ಯಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ‘ಮಹಾ ಮಂಡಳ’ ಸ್ಥಾಪಿಸುವಂತೆ ಆಗ್ರಹಿಸಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಕೆಎಂಎಫ್ ವಾರ್ಷಿಕ 7 ಸಾವಿರ ಕೋಟಿ ರೂ.ವಹಿವಾಟು ನಡೆಸುತ್ತಿದೆ. ಆದರೆ, ಕುರಿ ಮತ್ತು ಆಡು (ಮೇಕೆ) ಉತ್ಪನ್ನಗಳಿಂದ ವಾರ್ಷಿಕ 20ಸಾವಿರ ಕೋಟಿ ರೂ.ಗಳಷ್ಟು ವಹಿವಾಟು ನಡೆಯುತ್ತಿದೆ. ಸಣ್ಣ ರೈತರು ಹಾಗೂ ಕೃಷಿಯೇತರ ಕೂಲಿ ಕಾರ್ಮಿಕರ ಆದಾಯದ ಮೂಲವಾಗಿರುವ ಕುರಿ ಮತ್ತು ಆಡು ಸಾಕಣೆದಾರರ ಸಬಲೀಕರಣದ ದೃಷ್ಟಿಯಿಂದ ಕುರಿ-ಆಡು(ಮೇಕೆ)ಅಭಿವೃದ್ಧಿ ಮತ್ತು ಸಾಕಣೆದಾರರ ಮಹಾ ಮಂಡಳ ಅಸ್ತಿತ್ವಕ್ಕೆ ಬರಬೇಕೆಂಬ ವ್ಯಾಪಕ ಒತ್ತಾಯವೂ ಕೇಳಿಬಂದಿದೆ.

ವಿದೇಶಕ್ಕೆ ರಫ್ತು ಆಗಿರುತ್ತಿರುವ ಪ್ರಮುಖ ಹತ್ತು ಉತ್ಪನ್ನಗಳ ಪೈಕಿ ಮಾಂಸ ಮತ್ತು ಚರ್ಮ ಪ್ರಮುಖ ಸ್ಥಾನದಲ್ಲಿವೆ. ಆದರೆ, ಉತ್ಕೃಷ್ಟ ಗುಣಮಟ್ಟದ ಮಾಂಸ ಪೂರೈಕೆ ಆಗುತ್ತಿಲ್ಲ. ಚರ್ಮೋದ್ಯಮ, ಮತ್ತದರ ಉಪ ಉತ್ಪನ್ನಗಳ ತಯಾರಿಕೆಯೂ ಆಗುತ್ತಿಲ್ಲ ಎಂಬ ಕೂಗೂ ಹಳೆಯದು.
ಹೀಗಾಗಿ ಸ್ಥಳೀಯ ಆರ್ಥಿಕ ವೃದ್ಧಿ ಹಾಗೂ ಉದ್ಯೋಗಾವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ‘ಸಹಕಾರ ಕುರಿ-ಆಡು ಮಹಾ ಮಂಡಳ’ ಸ್ಥಾಪಿಸಲು ಮಹತ್ವದ ಹೆಜ್ಜೆಯನ್ನಿರಿಸಿದೆ. ಪ್ರಸಕ್ತ ಬಜೆಟ್‌ನಲ್ಲಿ ಮಹಾ ಮಂಡಳ ಸ್ಥಾಪಿಸುವ ಸಂಬಂಧ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಿಸುವ ಸಾಧ್ಯತೆಗಳಿವೆ.

...
ಕೃಷಿಯ ನಂತರ ಅತ್ಯಂತ ಹೆಚ್ಚಿನ ಸಂಖ್ಯೆಯ ಜನ ಕುರಿ-ಆಡು ಸಾಕಣೆಯನ್ನು ಅವಲಂಬಿಸಿದ್ದು, ಅವರ ಆರ್ಥಿಕ ಸಬಲೀಕರಣ ಹಾಗೂ ಕುರಿ-ಆಡುಗಳ ಉಪ ಉತ್ಪನ್ನಗಳ ಮಾರುಕಟ್ಟೆಗೆ ‘ಮಹಾಮಂಡಳ’ ಅಸ್ತಿತ್ವಕ್ಕೆ ಬರಬೇಕು. ನಿರ್ಲಕ್ಷಿತ ವರ್ಗಗಳ ಉನ್ನತಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತುತ ಬಜೆಟ್‌ನಲ್ಲಿ ಮಂಡಳ ಘೋಷಿಸುವ ಭರವಸೆ ನೀಡಿದ್ದಾರೆ.
 - ಪಂಡಿತ್ ರಾವ್ ಚಿದ್ರಿ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News