ಶಿಕ್ಷಕರು, ವಿದ್ಯಾರ್ಥಿಗಳನ್ನು ಏಕಕಾಲದಲ್ಲಿ ತಲುಪುವ ಪ್ರಯತ್ನ

Update: 2016-03-21 16:48 GMT

ವ್ಯಕ್ತಿತ್ವ ವಿಕಸನ ಪುಸ್ತಕಗಳು ಕನ್ನಡದಲ್ಲಿ ಬಂದಿರುವುದು ತೀರಾ ಕಡಿಮೆ. ಹೆಚ್ಚಿನ ಕೃತಿಗಳು ಇಂಗ್ಲಿಷ್‌ನಿಂದ ಅನುವಾದಗೊಂಡವುಗಳು. ಈ ನಡುವೆ ಅಲ್ಲಲ್ಲಿ ಸಣ್ಣ ಪುಟ್ಟ ಪ್ರಯತ್ನಗಳು ನಡೆಯುತ್ತಲೇ ಇವೆ. ‘ನೀವೂ ಸ್ಟಾರ್ ಆಗಿ’ ಆರ್. ಬಿ. ಗುರುಬಸವರಾಜ ಅವರು ಬರೆದಿರುವ ವ್ಯಕ್ತಿತ್ವ ವಿಕಸನ ಕೃತಿ. ಸ್ವತಃ ಶಿಕ್ಷಕರಾಗಿರುವ ಲೇಖಕರು, ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ಮಾರ್ಗದರ್ಶನವಾಗುವಂತೆ, ಅತ್ಯಂತ ಸರಳವಾಗಿ, ನೇರವಾಗಿ ಬರೆದಿದ್ದಾರೆ. ಮುನ್ನುಡಿ ಹೇಳುವಂತೆ ‘‘ಇವು ಬರೀ ಶೈಕ್ಷಣಿಕ ಲೇಖನಗಳಲ್ಲ. ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತಹ ಪ್ರಾಯೋಗಿಕ ಅಂಶಗಳು ಇಲ್ಲಿವೆ. ಮಕ್ಕಳು, ಶಿಕ್ಷಕರು ಹಾಗೂ ಪೋಷಕರು ಸೇರಿದಂತೆ ಎಲ್ಲರೂ ಅನುಸರಿಸಬೇಕಾದ ಮಾರ್ಗ ಸೂಚಿಗಳನ್ನು ಇಲ್ಲಿನ ಲೇಖನಗಳು ಉದಾಹರಣೆ ಸಮೇತ ಪ್ರತಿಪಾದಿಸುತ್ತವೆ. ಶಾಲೆಯನ್ನು ಪ್ರಯೋಗ ಶಾಲೆಯಾಗಿಸಿ ತಾವು ಅನುಷ್ಠಾನಗೊಳಿಸಿದ ಅಂಶಗಳನ್ನು ಇಲ್ಲಿ ನಮೂದಿಸಿದ್ದಾರೆ. ಹಾಗಾಗಿ ಈ ಬರಹಗಳಿಗೆ ಅಧಿಕೃತತೆ ಪ್ರಾಪ್ತವಾಗಿದೆ’’

ಇಂದು ಶಿಕ್ಷಕರಲ್ಲೇ ಓದುವಿಕೆಯ ಕೊರತೆಯಿದೆ. ಅವರ ವ್ಯಕ್ತಿತ್ವಗಳೇ ನಾನಾ ರಾಜಕೀಯ ಕಾರಣಗಳಿಗಾಗಿ ಸಂಕುಚಿತಗೊಳ್ಳುತ್ತಿವೆೆ. ಅಂತಹ ಶಿಕ್ಷಕರು, ತಮ್ಮ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಹೇಗೆ ವಿಕಸನಗೊಳಿಸಬಲ್ಲರು? ಈ ಹಿನ್ನೆಲೆಯಲ್ಲಿ ಈ ಕಿರು ಕೃತಿ, ಶಿಕ್ಷಕರಿಗೆ ಒಂದು ಪ್ರಾಥಮಿಕ ಕೈಪಿಡಿಯಾಗಿ ಪರಿಣಾಕಾರಿ ಕೆಲಸ ಮಾಡಬಹುದು.

ದಲಾಯತ್ ಸುಭಾನ್ ಸಾಹೇಬ್ ವೆಲ್‌ಫೇರ್ ಆ್ಯಂಡ್ ಎಜುಕೇಶನ್ ಟ್ರಸ್ಟ್, ಬಳ್ಳಾರಿ ಹೊರತಂದಿರುವ ಈ ಕೃತಿಯ ಮುಖಬೆಲೆ 100 ರೂ. ಆಸಕ್ತರು 9900717229 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯ

contributor

Editor - ಕಾರುಣ್ಯ

contributor

Similar News