ಈಗ ಹೆದರದೆ ಮಾವಿನ ಹಣ್ಣು ಸವಿಯಿರಿ

Update: 2016-03-28 03:25 GMT

ಪುಣೆ, ಮಾ.28: ಇನ್ನು ನೀವು ಹೆದರಿಕೆ ಇಲ್ಲದೇ ಮಾವು ಸವಿಯಬಹುದು; ರಾಸಾಯನಿಕ ಬಳಸಿ ಹಣ್ಣು ಮಾಡಿದ್ದು ಎಂಬ ಭೀತಿ ಬೇಡ.

ಮಾವನ್ನು ಸುರಕ್ಷಿತವಾಗಿ ಹಣ್ಣುಮಾಡಲು ಅಗತ್ಯವಾದ ಚೇಂಬರ್‌ಗಳನ್ನು ಇದೇ ಮೊದಲ ಬಾರಿಗೆ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾರುಕಟ್ಟೆ ಯಾರ್ಡ್‌ನಲ್ಲಿ ನಿರ್ಮಿಸುತ್ತಿದೆ. ಯಾವುದೇ ವಿಷಕಾರಿ ರಾಸಾಯನಿಕಗಳನ್ನು ಬಳಸದೇ, ವೈಜ್ಞಾನಿಕ ವಿಧಾನದಲ್ಲಿ ಹಣ್ಣು ಮಾಡುವ ಸಲುವಾಗಿ ಈ ಚೇಂಬರ್‌ಗಳು ನಿರ್ಮಾಣಗೊಳ್ಳುತ್ತಿವೆ.


ಮಾವನ್ನು ಹಣ್ಣು ಮಾಡುವ ಸಲುವಾಗಿ ಕ್ಯಾಲ್ಸಿಯಂ ಕಾರ್ಬೈಡ್ ಹಾಗೂ ಇತರ ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತಿದ್ದು, ಇದನ್ನು ತಡೆಯುವುದು ಎಪಿಎಂಸಿ ಪ್ರಯತ್ನದ ಉದ್ದೇಶ. ಎಪಿಎಂಸಿ ಅಧಿಕಾರಿಗಳು ಇದಕ್ಕೆ ಅಗತ್ಯವಾದ ಸ್ಥಳವನ್ನು ಈಗಾಗಲೇ ನಿಗದಿಪಡಿಸಿದ್ದಾರೆ. ಜತೆಗೆ ಯಂತ್ರಗಳ ಜೋಡಣೆ ಮತ್ತು ತಾಂತ್ರಿಕ ಸಲಹೆ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಇದರ ಕಾರ್ಯನಿರ್ವಹಣೆಯ ರೂಪುರೇಷೆಯನ್ನು ಸೋಮವಾರ ನಡೆಯುವ ಸಭೆಯಲ್ಲಿ ಅಂತಿಮಪಡಿಸಲಿದ್ದಾರೆ. ಮುಂದಿನವಾರದಿಂದ ಇವು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.


ಕೊಂಕಣ ಪ್ರದೇಶ ಮತ್ತು ನೆರೆಯ ರಾಜ್ಯಗಳಿಂದ ಈಗಾಗಲೇ ಮಾವು ಮಾರುಕಟ್ಟೆಗೆ ಬರುತ್ತಿದ್ದು, ತಕ್ಷಣ ಹಣ್ಣು ಮಾಡುವ ಚೇಂಬರ್ ಆರಂಭಿಸಬೇಕು ಎಂದು ಮಾವಿನಹಣ್ಣಿನ ಸಗಟು ವ್ಯಾಪಾರಿಗಳ ಸಂಘದ ಅಧ್ಯಕ್ಷ ಶಿವಲಾಲ್ ಬೋಸ್ಲೆ ಹೇಳಿದ್ದಾರೆ.

ಕಳೆದ ವರ್ಷ ತೀರಾ ತಡವಾಗಿ ಈ ವ್ಯವಸ್ಥೆಯನ್ನು ಎಪಿಎಂಸಿಯಲ್ಲಿ ಕಲ್ಪಿಸಲಾಗಿತ್ತು. ಈ ಬಾರಿ, ಮಾವು ಮಾರುಕಟ್ಟೆಗೆ ಬರುವ ವೇಳೆಗೆ ಆರಂಭಿಸುವ ಭರವಸೆ ನೀಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.


ಈ ಕ್ರಮದಿಂದ ಮಾವು ಬೆಳೆಗಾರರು ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗುವ ಜತೆಗೆ ಗ್ರಾಹಕರಿಗೂ ಪ್ರಯೋಜನವಾಗಲಿದೆ. ಇದು ಕ್ಯಾಲ್ಸಿಯಂ ಕಾರ್ಬೈಡ್‌ನ ದುರ್ಬಳಕೆಯನ್ನು ತಡೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. 2000 ಚದರ ಅಡಿಯ ಚೇಂಬರ್ ಸಿದ್ದವಾಗಿದ್ದು, ಒಂದು ಬಾರಿಗೆ ನಾಲ್ಕು ಲೋಡ್ ಮಾವು ಹಣ್ಣು ಮಾಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News