ಸಾವಿರ ಕುಡಿಯುವ ನೀರಿನ ಘಟಕಗಳ ಲೋಕಾರ್ಪಣೆ

Update: 2016-03-29 18:33 GMT

ಬೆಂಗಳೂರು, ಮಾ.29: ರಾಜ್ಯದಲ್ಲಿ 7,300 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸುವ ಗುರಿಯಿದ್ದು, ಗ್ರಾಮೀಣ ಪ್ರದೇಶದ ಎಲ್ಲ ಜನರಿಗೆ ಶುದ್ಧ ಕುಡಿಯುವ ನೀರು ನೀಡುವ ಸವಾಲಿನ ಮೊದಲ ಹೆಜ್ಜೆಯಾಗಿ 1 ಸಾವಿರ ಶುದ್ಧ ಕುಡಿಯುವ ನೀರು ಘಟಕಗಳನ್ನು ಆರಂಭಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ಸಂಸ್ಥೆಯ ಮೂಲಕ ಕಲುಷಿತ ನೀರಿನ ಬಳಕೆಯಿಂದ ಬಾಧಿತ ಗ್ರಾಮಗಳಲ್ಲಿ ಸ್ಥಾಪಿಸಿರುವ 1 ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಈ ಹಿಂದೆ ಕುಡಿಯುವ ನೀರಿಗೆ ಬಾವಿ-ಕೆರೆಗಳನ್ನು, ಅನಂತರ ಕೊಳವೆಬಾವಿಗಳನ್ನು ಆಶ್ರಯಿಸುತ್ತಿದ್ದೇವೆ.

ಪ್ರಕೃತಿ ವಿಕೋಪದಿಂದ ಮಳೆ ಕಡಿಮೆಯಾಗಿ ಕೊಳವೆಬಾವಿಗಳಲ್ಲಿ ನೀರಿನ ಕೊರತೆಯುಂಟಾಗಿ ಗ್ರಾಮೀಣ ಜನರು ಕುಡಿಯುವ ನೀರಿಗೆ ತತ್ವಾರ ಅನುಭವಿಸಬೇಕಾಯಿತು. ಆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 7ಸಾವಿರ ಶುದ್ಧ ಕುಡಿಯುವ ನೀರು ಘಟಕಗಳನ್ನು ಆರಂಭಿಸಲು ನಿರ್ಧರಿಸಿತು ಎಂದರು.

45 ಕೋಟಿ ರೂ. ಅಗತ್ಯ: ರಾಜ್ಯದ ಜನರ 62 ಟಿಎಂಸಿ ಕುಡಿಯುವ ನೀರಿನ ಅಗತ್ಯವಿದ್ದು, ಎಲ್ಲ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಕನಿಷ್ಠ 45 ಸಾವಿರ ಕೋಟಿ ರೂ.ಅಗತ್ಯವಿದೆ. ಆ ನಿಟ್ಟಿನಲ್ಲಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ರಾಜ್ಯ ಸರಕಾರ ಸಂಕಲ್ಪ ಮಾಡಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್, ಗ್ರಾಮೀಣರ ರೋಗ-ರುಜಿನ ನಿವಾರಿಸುವ ಯತ್ನದಲ್ಲಿ ಶುದ್ಧ ಕುಡಿಯುವ ನೀರು ಘಟಕ ತೆರೆಯಲಾಗುತ್ತಿದೆ. 7 ಸಾವಿರ ಶುದ್ಧ ಕುಡಿಯುವ ನೀರಿನ ಘಟಕ ತೆಗೆದು ಒಂದೂವರೆ ಕೋಟಿ ಜನರು ಹಂತ-ಹಂತವಾಗಿ ಶುದ್ಧ ನೀರು ಕೊಡಲು ಉದ್ದೇಶಿಸಲಾಗಿದೆ ಎಂದರು.

ಮೇಲ್ಮನೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು. ಸ್ಪೀಕರ್ ಕಾಗೋಡು ತಿಮ್ಮಪ್ಪ ಶುದ್ಧ ಕುಡಿಯುವ ನೀರು ಘಟಕ ಕುರಿತ ಅಂತರ್ಜಾಲವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಆಂಜನೇಯ, ರೋಷನ್ ಬೇಗ್, ಎ.ಮಂಜು, ಉಪಾಧ್ಯಕ್ಷ ಶಿವಶಂಕರ ರೆಡ್ಡಿ, ಉಪ ಸಭಾಪತಿ ಮರಿತಿಬ್ಬೇಗೌಡ, ಮೇಲ್ಮನೆ ವಿಪಕ್ಷ ನಾಯಕ ಈಶ್ವರಪ್ಪ ಸೇರಿದಂತೆ ಇಲಾಖೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News