ಇಂದಿನಿಂದ ಎಸೆಸೆಲ್ಸಿ ಪರೀಕ್ಷೆ

Update: 2016-03-30 09:49 GMT

ಬೆಂಗಳೂರು, ಮಾ.30: ರಾಜ್ಯದೆಲ್ಲೆಡೆ ಬುಧವಾರ ಎಸೆಸೆಲ್ಸಿ ಪರೀಕ್ಷೆ ಆರಂಭಗೊಂಡಿದ್ದು, ಎ.13ಕ್ಕೆ ಪರೀಕ್ಷೆ ಮುಕ್ತಾಯವಾಗಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಯಾವುದೇ ರೀತಿಯ ನ್ಯೂನತೆಗಳು ಆಗದಂತೆ ಕ್ರಮ ಕೈಗೊಳ್ಳಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮುಂದಾಗಿದೆ.

ಪ್ರಸ್ತುತ ಸಾಲಿನಲ್ಲಿ 8,49,233 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ನಗರ ವ್ಯಾಪ್ತಿ ಯಲ್ಲಿ 1,94,585 ಬಾಲಕರು, 1,83,116 ಬಾಲಕಿಯರು, ಗ್ರಾಮೀಣ ಪ್ರದೇಶದಲ್ಲಿ 2,56,055 ಬಾಲಕರು, 2,15,477 ಬಾಲಕಿಯರು ಪರೀಕ್ಷೆಯನ್ನು ಬರೆಯುತ್ತಿದ್ದಾರೆ ಎಂದು ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

ರಾಜ್ಯಾದ್ಯಂತ ಒಟ್ಟು 111 ಸೂಕ್ಷ್ಮ, 27 ಅತೀ ಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಈ ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ಇಡಲು ಜಿಲ್ಲಾ ಹಂತದಲ್ಲಿರುವ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಜಾಗೃತ ದಳವನ್ನಾಗಿ ನೇಮಕಾತಿ ಮಾಡಲಾಗಿದೆ. ಈ ಅಧಿಕಾರಿಗಳು ಮುನ್ಸೂಚನೆಯಿಲ್ಲದೆ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ.

  ನಿಷೇಧ: ಪರೀಕ್ಷೆ ಕೇಂದ್ರಗಳ ವ್ಯಾಪ್ತಿ ಪರೀಕ್ಷಾ ಸಮಯ ಮುಗಿಯುವವರೆಗೂ ನಿಷೇಧಾಜ್ಞೆ ಜಾರಿಯಲ್ಲಿದ್ದು, ಕಾನೂನು ಬಾಹಿರ ಚಟುವಟಿಕೆಗಳು ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪರೀಕ್ಷಾ ಕೇಂದ್ರಗಳ ಸಮೀಪವಿರುವ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷೆ ಮುಗಿಯುವವರೆಗೂ ಬಂದ್ ಮಾಡಲು ಈಗಾಗಲೇ ಸೂಚಿಸಲಾಗಿದೆ.

ಪರೀಕ್ಷೆಗೆ ಅಗತ್ಯವಿರುವ ಎಲ್ಲ ಪೂರ್ವ ಸಿದ್ಧತೆಗಳು ಮುಗಿದಿದ್ದು, 3,082 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಅದರಲ್ಲಿ 1,188 ಶಾಲೆಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಲಾಗಿದ್ದು, ಬಿಗಿ ಬಂದೂಬಸ್ತ್ ಮಾಡಲಾಗಿದೆ. ದಿನಪೂರ್ತಿ ಸಿಸಿ ಟಿವಿ ಚಾಲನೆಯಲ್ಲಿರುತ್ತದೆ ಎಂದು ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News