ನೀರು ಹರಿಸಲು ಆಗ್ರಹಿಸಿ ರೈತರ ಧರಣಿ

Update: 2016-04-04 16:31 GMT

ಶಿವಮೊಗ್ಗ, ಎ. 4: ನೀರಿನ ಕೊರತೆಯಿಂದ ತೋಟದ ಫಸಲು ಒಣಗುತ್ತಿವೆ. ಕುಡಿಯುವ ನೀರಿಗೂ ತತ್ವಾರ ಉಂಟಾಗುತ್ತಿದ್ದು, ತಕ್ಷಣವೇ ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿ, ಸೋಮವಾರ ನಗರದ ಹೊರವಲಯ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರಾಧಿಕಾರ (ಕಾಡಾ)ದ ಕಚೇರಿಯ ಮುಂಭಾಗ ಶಿವಮೊಗ್ಗ ತಾಲೂಕಿನ ವಿವಿಧ ಗ್ರಾಮಗಳ ರೈತರು ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಧರಣಿನಿರತ ರೈತರು ಕಚೇರಿ ಮುಂಭಾಗದಲ್ಲಿದ್ದ ಹೂಕುಂಡಗಳನ್ನು ಒಡೆದು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಾಡಾ ಅಧ್ಯಕ್ಷರೇ ಸ್ಥಳಕ್ಕೆ ಆಗಮಿಸಿ ತಮ್ಮ ಅಹವಾಲು ಕೇಳಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಉದ್ರಿಕ್ತ ಧರಣಿನಿರತ

ರನ್ನು ಸಮಾಧಾನಗೊಳಿಸಿದರು. ಕಡೇಕಲ್ಲು, ಮತ್ತೂರು, ಸಿದ್ದರಹಳ್ಳಿ, ಶ್ರೀರಾಮನಗರ, ವಡ್ಡಿನಕೊಪ್ಪ ಭಾಗದ ರೈತರು ಈ ಧರಣಿನಿಯಲ್ಲಿ ಭಾಗವಹಿಸಿದ್ದರು. ಕಾಡಾ ಅಧ್ಯಕ್ಷರು ಈ ಹಿಂದೆ ನೀಡಿದ್ದ ಭರವಸೆಯಂತೆ ನಾಲೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಭತ್ತ ಬೆಳೆ ಬೆಳೆಯದಂತೆ ಸೂಚಿಸಲಾಗಿತ್ತು. ಆದಾಗ್ಯೂ ಕೆಲವರು ಭತ್ತ ಬೆಳೆದಿದ್ದಾರೆ. ಇದರಿಂದ ನಾಲೆಯ ಕೊನೆಯ ಭಾಗದ ರೈತರಿಗೆ ನೀರು ಪೂರೈಕೆಯಾಗುತ್ತಿಲ್ಲ. ಪಂಪ್‌ಸೆಟ್ ಮೂಲಕ ಅಕ್ರಮವಾಗಿ ನೀರು ಎತ್ತುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News