ತುಮಕೂರು ಹಾಸ್ಟೆಲ್ ವಾರ್ಡನ್ ಅಮಾನತು: ಸಚಿವ ಎಚ್.ಆಂಜನೇಯ

Update: 2016-04-04 17:03 GMT

ಬೆಂಗಳೂರು, ಎ. 4: ಎಸ್ಸಿ-ಎಸ್ಟಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶದ ಉಪಾಹಾರ-ಊಟ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸದಿದ್ದರೆ ಹಾಸ್ಟೆಲ್ ವಾರ್ಡ್‌ನ್‌ಗಳನ್ನು ಅಮಾನತು ಮಾಡಲಾಗುವುದೆಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಎಚ್ಚರಿಸಿದ್ದಾರೆ.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ನಗರ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ತಾನು ಎ.1ರಂದು ಬೆಳಗ್ಗೆ 8ಗಂಟೆ ಸುಮಾರಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಲ್ಲಿ ವಿದ್ಯಾರ್ಥಿನಿಯರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸದ ಹಿನ್ನೆಲೆಯಲ್ಲಿ ವಾರ್ಡನ್ ತಾರಾದೇವಿಯನ್ನು ಅಮಾನತು ಮಾಡಲಾಗಿದೆ ಎಂದರು.
ತಾನು ಹಾಸ್ಟೆಲ್‌ಗೆ ಭೇಟಿ ನೀಡಿದ್ದ ವೇಳೆ ವಿದ್ಯಾರ್ಥಿನಿಯಲದ ಮೇಲ್ವಿಚಾರಕಿ ಸ್ಥಳದಲ್ಲಿ ಇರಲಿಲ್ಲ. ನಿಲಯಾರ್ಥಿಗಳ ಹಾಜರಾತಿ ಸಮರ್ಪಕವಾಗಿಲ್ಲ. ಆಹಾರ ಪದಾರ್ಥಗಳ ಮಾಹಿತಿ ಇಲ್ಲ. ಎರಡು ದಿನಕ್ಕೊಮ್ಮೆ ಬಾಳೆಹಣ್ಣು ಹಾಗೂ ವಾರಕ್ಕೆ ಎರಡು ದಿನ ಮೊಟ್ಟೆ ನೀಡಬೇಕಿದ್ದು, ಅವನ್ನು ನೀಡಿಲ್ಲ ಎಂದು ಆಂಜನೇಯ ತಿಳಿಸಿದರು.
15 ದಿನಕ್ಕೊಮ್ಮೆ ಕೋಳಿಮಾಂಸದ ಊಟ ನೀಡಬೇಕಿದ್ದು, ಅದನ್ನು ನೀಡಿಲ್ಲ. ನಿಲಯಾರ್ಥಿಗಳು ವಾಸಿಸುವ ಕೊಠಡಿಯಲ್ಲಿ ಫ್ಯಾನ್ ವ್ಯವಸ್ಥೆ ಇಲ್ಲ. ದಾಸ್ತಾನು ಕೊಠಡಿಯಲ್ಲಿ ಟೊಮೆಟೋ ಮತ್ತು ಈರುಳ್ಳಿ ಹೊರತುಪಡಿಸಿ ಬೇರೆ ತರಕಾರಿ ಇರಲಿಲ್ಲ ಎಂದು ಅವರು ಮಾಹಿತಿ ನೀಡಿದರು.
ಹಾಸ್ಟೆಲ್‌ನ ಶೌಚಾಲಯ ಮತ್ತು ಸ್ನಾನದ ಕೊಠಡಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿಲ್ಲ. ಆ ಹಿನ್ನೆಲೆಯಲ್ಲಿ ರಾಜ್ಯದ ಹಾಸ್ಟೆಲ್‌ಗಳಿಗೆ ತಾನು ದಿಢೀರ್ ಭೇಟಿ ನೀಡಲಿದ್ದೇನೆ. ವಿದ್ಯಾರ್ಥಿಗಳಿಗೆ ಸಮರ್ಪಕ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ ವಾರ್ಡನ್‌ಗಳಿಗೆ ಅಮಾನತು ಶಿಕ್ಷೆ ನೀಡಲಾಗುವುದು ಎಂದು ಆಂಜನೇಯ ಎಚ್ಚರಿಸಿದರು.

ತುಮಕೂರು ನಗರದ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಬಾಲಕಿಯರ ವಿದ್ಯಾರ್ಥಿ ನಿಯಲದಲ್ಲಿ 90 ಮಂದಿ ವಿದ್ಯಾರ್ಥಿನಿಯರಿಗೆ ‘ಅರ್ಧ’ ಲೀಟರ್ ಹಾಲಿನಲ್ಲಿ ಚಹಾ ತಯಾರಿಸಿ ನೀಡಲಾಗುತ್ತಿತ್ತು ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಹೀಗಾಗಿ ವಾರ್ಡನ್ ಅಮಾನತು ಮಾಡಲಾಗಿದೆ.’
-ಎಚ್.ಆಂಜನೇಯ, ಸಮಾಜ ಕಲ್ಯಾಣ ಸಚಿವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News