ನಿಗದಿತ ಸಮಯಕ್ಕೆ ಪಿಯು ಫಲಿತಾಂಶ: ಕಿಮ್ಮನೆ

Update: 2016-04-04 17:04 GMT

ಬೆಂಗಳೂರು, ಎ. 4: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಸ್ವಲ್ಪ ಮಟ್ಟಿಗೆ ಗೊಂದಲ ವಾಗಿದ್ದರೂ, ಫಲಿತಾಂಶ ಮಾತ್ರ ನಿಗದಿತ ಸಮಯಕ್ಕೆ ಬರಲಿದೆ. ಈ ಬಗ್ಗೆ ವಿದ್ಯಾರ್ಥಿ ಮತ್ತು ಪೋಷಕರು ಆತಂಕ ಪಡುವ ಆವಶ್ಯಕತೆಯಿಲ್ಲ ಎಂದು ಶಿಕ್ಷಣ ಸಚಿವ ಕಿಮ್ಮನೆ ಭರವಸೆ ನೀಡಿದ್ದಾರೆ.
ಸೋಮವಾರ ನಗರದ ಮಲ್ಲೇಶ್ವರಂನಲ್ಲಿರುವ ಪಿಯು ಮಂಡಳಿಗೆ ಸಚಿವ ಕಿಮ್ಮನೆ ಭೇಟಿ ನೀಡಿ ನಿರ್ದೇಶಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತದನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ 45 ಕೇಂದ್ರಗಳಲ್ಲಿ ಮಂಗಳವಾರದಿಂದ ವೌಲ್ಯಮಾಪನ ಪ್ರಾರಂಭವಾಗಲಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಆದರೆ, ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ. ನಿಗದಿತ ಸಮಯದೊಳಗೆ ಫಲಿತಾಂಶ ನೀಡುವುದು ನಮ್ಮ ಜವಾಬ್ದಾರಿ. ವೌಲ್ಯಮಾಪಕರ ಬೇಡಿಕೆ ಕುರಿತು ಮುಖ್ಯಮಂತ್ರಿ ಬಳಿ ಚರ್ಚಿಸಿದ್ದೇನೆ ಎಂದು ಮಾಹಿತಿ ನೀಡಿದರು.
ನಾವು ವೌಲ್ಯಮಾಪನ ಯಾವ ರೀತಿಯಲ್ಲಿ ನಡೆಸಬಹುದು ಎಂಬುದರ ಬಗ್ಗೆ ಸಮಗ್ರ ಚರ್ಚೆ ನಡೆಸಿದ್ದು, ವೌಲ್ಯಮಾಪನ ಕಾರ್ಯ ಪ್ರಾರಂಭವಾಗುವವರೆಗೂ ನಾವು ಏನು ಹೇಳಲು ಸಾಧ್ಯವಿಲ್ಲ ಎಂದ ಅವರು, ಈ ಸಾಲಿನ ಪಿಯು ಫಲಿತಾಂಶ ನಿಗದಿತ ಸಮಯಕ್ಕೆ ಬರಲಿದೆ. ಇದರಿಂದ ಯಾರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.
ಇಂದು ನಡೆದ ಪಿಯು ಮಂಡಳಿ ಸಭೆಯಲ್ಲಿ ನಿರ್ದೇಶಕರಾದ ರಾಮೇಗೌಡ ಹಾಗೂ ಮರು ಪರೀಕ್ಷೆಯ ಉಸ್ತುವಾರಿ ವಹಿಸಿರುವ ಪಿ.ಸಿ.ಜಾಫರ್ ಉಪಸ್ಥಿತರಿದ್ದರು.

ಶೇ.30ರಷ್ಟು ಭತ್ತೆ ಹೆಚ್ಚಳ
ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆ ವೌಲ್ಯಮಾಪನದಲ್ಲಿ ತೊಡಗುವ ಉಪಮುಖ್ಯ ವೌಲ್ಯಮಾಪಕರು ಹಾಗೂ ಸಹಾಯಕ ಮುಖ್ಯ ವೌಲ್ಯಮಾಪಕರು, ಸರಕಾರಿ- ಅನುದಾನಿತ ಕಾಲೇಜುಗಳ ಪರೀಕ್ಷಾ ವೌಲ್ಯಮಾಪನ ವೀಕ್ಷಕರು ಸೇರಿದಂತೆ ಪರೀಕ್ಷಾ ಸಿಬ್ಬಂದಿಗೆ ಶೇ.30ರಷ್ಟು ಪರೀಕ್ಷಾ ಭತ್ತೆ ಹೆಚ್ಚಳ ಮಾಡಲಾಗಿದೆ.
 ಪ್ರತಿದಿನದ ಭತ್ತೆಯಾಗಿ ಮೊದಲಿದ್ದ 575 ರೂ.ಒಳಗೊಂಡತೆ ಹೆಚ್ಚುವರಿಯಾಗಿ 170 ರೂ. ಹಾಗೂ ಪ್ರತಿ ಉತ್ತರ ಪತ್ರಿಕೆ ವೌಲ್ಯಮಾಪನಕ್ಕೆ 21ರಿಂದ 27 ರೂ.ಗಳಿಗೆ ಹೆಚ್ಚಳಗೊಳಿಸಲಾಗಿದೆ ಎಂದು ಪಿಯು ನಿರ್ದೇಶಕ ರಾಮೇಗೌಡ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News