ಸಂಪುಟ ಪುನಾರಚನೆಯಲ್ಲಿ ಹೊಸಬರಿಗೆ ಆದ್ಯತೆ

Update: 2016-04-04 17:05 GMT

ಬೆಂಗಳೂರು, ಎ. 4: ಅತೃಪ್ತ ಶಾಸಕರ ಮನವೊಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ಸಂಪುಟ ಪುನಾರಚನೆಯಲ್ಲಿ ಹೊಸಬರು ಹಾಗೂ ಉತ್ಸಾಹಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸೋಮವಾರ ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಕೆಲ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ ಸಿದ್ದರಾಮಯ್ಯ, ಎಪ್ರಿಲ್ ಎರಡನೆ ವಾರದಲ್ಲಿ ಹೊಸದಿಲ್ಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚೆ ನಡೆಸಿ ಸಂಪುಟ ಪುನಾರಚನೆ ಮಾಡುವುದಾಗಿ ಹೇಳಿದ್ದಾರೆಂದು ತಿಳಿದು ಬಂದಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ದೃಷ್ಟಿಯಿಂದ ಸಂಪುಟದಲ್ಲಿ 3 ವರ್ಷ ಪೂರೈಸುತ್ತಿರುವ ಇಪ್ಪತ್ತೈದು ಮಂದಿ ಸಚಿವರನ್ನು ಕೈಬಿಟ್ಟು, ಹೊಸಬರಿಗೆ ಆದ್ಯತೆ ನೀಡುವ ಮೂಲಕ ಸರಕಾರದ ಕ್ರಿಯಾಶೀಲತೆಯನ್ನು ಹೆಚ್ಚಿಸಬೇಕು. ಹಿರಿಯ ಸಚಿವರನ್ನು ಪಕ್ಷದ ಕೆಲಸಕ್ಕೆ ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ಸರಕಾರ ಹಾಗೂ ಪಕ್ಷವನ್ನು ಜನರ ನಡುವೆ ಸದೃಢಗೊಳಿಸಬೇಕು ಎಂದು ಶಾಸಕರು ಸಿಎಂಗೆ ಮನವಿ ಮಾಡಿದ್ದಾರೆ. ಜನರಿಗೆ ಸರಕಾರ ಹಾಗೂ ಪಕ್ಷದ ಮೇಲೆ ವಿಶ್ವಾಸ ಮೂಡಲು ಹೊಸಬರು ಹಾಗೂ ಕ್ರಿಯಾಶೀಲರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಸರಕಾರದ ವರ್ಚಸ್ಸನ್ನು ವೃದ್ಧಿಸಬೇಕು ಎಂದು ಶಾಸಕರು ಸಲಹೆ ನೀಡಿದ್ದಾರೆ. ಶಾಸಕರು ಅಹವಾಲುಗಳನ್ನು ಶಾಂತರೀತಿಯಲ್ಲೆ ಆಲಿಸಿದ ಸಿದ್ದರಾಮಯ್ಯ, ಬಹಿರಂಗವಾಗಿ ಪಕ್ಷ ಹಾಗೂ ಸರಕಾರಕ್ಕೆ ಮುಜುಗರವಾಗುವಂತಹ ಹೇಳಿಕೆಗಳನ್ನು ನೀಡಬಾರದು. ಪದೇ ಪದೇ ಶಾಸಕರು ಗುಂಪು ಕಟ್ಟಿಕೊಂಡು ರೆಸಾರ್ಟ್‌ಗಳಲ್ಲಿ ಸಭೆಗಳನ್ನು ನಡೆಸಿದರೆ ಜನರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ವಿರೋಧ ಪಕ್ಷಗಳು ಇದನ್ನು ಬಂಡವಾಳ ಮಾಡಿಕೊಳ್ಳುತ್ತಾರೆ ಎಂದು ಕಿವಿಮಾತು ಹೇಳಿದ್ದಾರೆ ಎಂದು ಗೊತ್ತಾಗಿದೆ.

ಮುಖ್ಯಮಂತ್ರಿಯ ಸಲಹೆಯನ್ನು ಸ್ವೀಕರಿಸಿರುವ ಅತೃಪ್ತ ಶಾಸಕರು, ಎಪ್ರಿಲ್ ಎರಡನೆ ವಾರದವರೆಗೆ ನಾವು ಸುಮ್ಮನಿರುತ್ತೇವೆ. ಸರಕಾರ ಹಾಗೂ ಪಕ್ಷಕ್ಕೆ ಮುಜುಗರವಾಗುವಂತಹ ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಆದರೆ, ನಮ್ಮ ಬೇಡಿಕೆಯನ್ನು ಈಡೇರಿಸುವ ಸ್ಪಷ್ಟವಾದ ಭರವಸೆಯನ್ನು ನೀವು ನೀಡಬೇಕು ಎಂದು ಮುಖ್ಯಮಂತ್ರಿಯ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ.
ಶಾಸಕರೊಂದಿಗಿನ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿವಾಸದಿಂದ ಸರಕಾರಿ ಬೆಂಗಾವಲು ವಾಹನವಿಲ್ಲದೆ, ಖಾಸಗಿ ಕಾರಿನಲ್ಲಿ ತೆರಳಿದರು.

ಮುಖ್ಯಮಂತ್ರಿ ಮೇಲೆ ವಿಶ್ವಾಸ
ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರ ಅಹವಾಲುಗಳನ್ನು ಆಲಿಸಿದ್ದು, ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಮೇಲೆ ನಮಗೆ ವಿಶ್ವಾಸವಿದ್ದು, ಎ.9ರ ನಂತರ ಮತ್ತೊಮ್ಮೆ ಶಾಸಕರು ಸಭೆ ಸೇರಿ, ಆನಂತರ ಹೊಸದಿಲ್ಲಿಗೆ ತೆರಳಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ಗಾಂಧಿಯನ್ನು ಭೇಟಿ ಮಾಡಿ ಸಂಪುಟ ಪುನಾರಚನೆ ಮಾಡುವಂತೆ ಮನವಿ ಸಲ್ಲಿಸಲಾಗುವುದು.
-ಕೆ.ಎನ್.ರಾಜಣ್ಣ, ಕಾಂಗ್ರೆಸ್ ಶಾಸಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News