ಪನಾಮ ಪಟ್ಟಿಯ ಕರ್ನಾಟಕ ಕನೆಕ್ಷನ್

Update: 2016-04-05 05:42 GMT

ಬೆಂಗಳೂರು , ಎ.5 : ತೆರಿಗೆ ಕಟ್ಟುವುದನ್ನು ತಪ್ಪಿಸಲು ತೆರಿಗೆ ಸ್ವರ್ಗ ದೇಶಗಳಲ್ಲಿ ಹಣ ಹೂಡಿದವರ ಹೆಸರು ಬಹಿರಂಗವಾಗಿರುವ ಪನಾಮ ಪಟ್ಟಿಯಲ್ಲಿ ಈಗ ಕರ್ನಾಟಕ ಕನೆಕ್ಷನ್ ಬಂದಿದೆ. 

ಪಟ್ಟಿಯಲ್ಲಿ ಇಬ್ಬರು ದಕ್ಷಿಣ ಭಾರತೀಯರು ಇದ್ದಾರೆ. ಅವರಲ್ಲಿ ಒಬ್ಬರು ರಾಜೇಂದ್ರ ಪಾಟೀಲ್. ಉದ್ಯಮಿಯಾಗಿರುವ ಇವರು ಕರ್ನಾಟಕ ಸರಕಾರದ ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಅವರ ಅಳಿಯ ಎಂದು ದಿ ನ್ಯೂಸ್ ಮಿನಿಟ್ ವೆಬ್ ಸೈಟ್ ವರದಿ ಮಾಡಿದೆ. 

ಪಟ್ಟಿ ಬಹಿರಂಗಪಡಿಸಿರುವ ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಾರ ಪಾಟೀಲ್ ಹಾಗು ಅವರ ಇಬ್ಬರು ಸಹವರ್ತಿಗಳು - ಸಂಜಯ್ ನಾಡಗೌಡ ಹಾಗು ಶಶಾಂಕ್ ಅಂಗಡಿ ಅವರು ಎಲ್ಜಿನ್ಬರ್ಗ್ ಲಿಮಿಟೆಡ್ ಎಂಬ ಕಂಪೆನಿಯನ್ನು ಬ್ರಿಟಿಷ್ ವರ್ಜಿನ್ ದ್ವೀಪದಲ್ಲಿ ೨೦೦೭ ರಲ್ಲಿ ಪ್ರಾರಂಭಿಸಿ ಹಣ ಹೂಡಿದ್ದಾರೆ. ದಾಖಲೆಗಳ ಪ್ರಕಾರ ಬೆಂಗಳೂರಿನಲ್ಲಿ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಮಾಲಕತ್ವದಲ್ಲಿರುವ ವಾಣಿಜ್ಯ ಸಂಕೀರ್ಣದ ವಿಳಾಸವನ್ನು ಪಾಟೀಲ್ ತಮ್ಮ ಭಾರತದ ವಿಳಾಸವಾಗಿ ನೀಡಿದ್ದಾರೆ.  

ಕಂಪೆನಿ 2007 ರಲ್ಲಿ ಪ್ರಾರಂಭವಾಗಿದ್ದು ಕೃಷಿ ಉತ್ಪನ್ನಗಳ ಮಾರಾಟದಲ್ಲಿ ತೊಡಗಿತ್ತು ಎಂದು ಪಾಟೀಲ್ ಹೇಳಿದ್ದಾರೆ. " ನಾವು ಒಂದು ವಹಿವಾಟು ಮಾಡಿದ್ದೆವು. ಆದರೆ ನಮಗೆ ಒಂದು ಕೋಟಿ ನಷ್ಟವಾಯಿತು. ಹಾಗಾಗಿ ಅದೇ ವರ್ಷ ಅದನ್ನು ಮುಚ್ಚಿದೆವು " ಎಂದು ಅವರು ಹೇಳಿದ್ದಾರೆ. 

ಇನ್ನಿಬ್ಬರು ದಕ್ಷಿಣ ಭಾರತೀಯರು ಇಂದಿರಾ ಶಿವಸೈಲಂ ಹಾಗು ಮಲ್ಲಿಕಾ ಶ್ರೀನಿವಾಸನ್ . ಈ ಪೈಕಿ ಅಮಾಲ್ಗಮೆಶನ್ಸ್ ಗ್ರೂಪ್ ಆಫ್ ಕಂಪೆನೀಸ್ ನ ಅಧ್ಯಕ್ಷರ ಪತ್ನಿ ಇಂದಿರಾ 2008 ರಲ್ಲಿ ಮೃತಪಟ್ಟಿದ್ದಾರೆ. ಮಲ್ಲಿಕಾ ಟಫೆ - ಟ್ರಾಕ್ ಟರ್ಸ್ ಅಂಡ್ ಫಾರ್ಮ್ ಏಕ್ವಿಪ್ಮೆಂಟ್ ಎಂಬ ಬಿಲಿಯನ್ ಡಾಲರ್ ಕಂಪೆನಿಯ ಅಧ್ಯಕ್ಷೆ. ಈಕೆ ಟಿವಿಎಸ್ ಮೋಟರ್ಸ್ ನ ವೇಣು ಶ್ರೀನಿವಾಸನ್ ಅವರ ಪತ್ನಿಯೂ ಹೌದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News