ಎಸಿಬಿಗೆ ಲೋಕಾಯುಕ್ತ ಪ್ರಕರಣ ವರ್ಗಕ್ಕೆ ಹೈಕೋರ್ಟ್ ತಡೆ

Update: 2016-04-07 18:36 GMT

ಸರಕಾರಕ್ಕೆ ತೀವ್ರ ಮುಖಭಂಗ

ಬೆಂಗಳೂರು, ಎ.7: ಲೋಕಾಯುಕ್ತ ದಾಖಲಿಸಿಕೊಂಡಿರುವ ಪ್ರಕರಣಗಳನ್ನು ಎಸಿಬಿಗೆ ವರ್ಗಾಯಿಸ ದಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಎಸಿಬಿ ರಚನೆಗೆ ತಡೆ ಹಾಗೂ ಈ ಕುರಿತು ರಾಜ್ಯ ಸರಕಾರ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ವಕೀಲ ಚಿದಾನಂದ ಅರಸ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾಯಮೂರ್ತಿ ರವಿ ಮಳೀಮಠ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಲೋಕಾಯುಕ್ತ ಸಂಸ್ಥೆಯಲ್ಲಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಲು ಪೊಲೀಸ್ ಬಲ ಹೆಚ್ಚಿಸುವಂತೆ ನ್ಯಾಯಪೀಠ ಆದೇಶಿಸಿತ್ತು. ಆದರೆ, ರಾಜ್ಯ ಸರಕಾರವು ಪ್ರತ್ಯೇಕ ಎಸಿಬಿ ರಚನೆ ಮಾಡಿ ಪ್ರಕರಣಗಳನ್ನು ಎಸಿಬಿಗೆ ವರ್ಗಾಯಿಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಪೀಠವು, ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಯಾವುದೇ ಕಾರಣಕ್ಕೂ ಎಸಿಬಿಗೆ ವರ್ಗಾಯಿಸಿಕೊಳ್ಳಬಾರದೆಂದು ನಿರ್ದೇಶನ ನೀಡಿದೆ.

ಲೋಕಾಯುಕ್ತ ದೂರು ಸ್ವೀಕರಿಸದಂತೆ ನಿರ್ದೇಶಿಸಿರುವ ರಾಜ್ಯ ಸರಕಾರದ ಆದೇಶ ರದ್ದುಪಡಿಸಬೇಕು ಹಾಗೂ ಸಂವಿಧಾನದ ಪರಿಚ್ಛೇದ ಹಾಗೂ ಐಪಿಸಿ ಕಲಂ 162ರಂತೆ ದೂರುಗಳನ್ನು ವರ್ಗಾಯಿಸುವಂತಿಲ್ಲ.

ಹೀಗಾಗಿ, ಪ್ರಕರಣಗಳ ವರ್ಗಾವಣೆಗೆ ತಡೆ ನೀಡುವಂತೆ ಅರ್ಜಿದಾರರು ಕೋರಿದ್ದರು. ಇದನ್ನು ಪರಿಗಣಿಸಿದ ನ್ಯಾಯಪೀಠವು, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಎ.12ಕ್ಕೆ ಮುಂದೂಡಿತು.

ಎಎಜಿ ಪೊನ್ನಣ್ಣ ವಾದ ಮಂಡಿಸಿ ಲೋಕಾಯುಕ್ತಕ್ಕೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು ತನಿಖೆ ನಡೆಸುವ ಅಧಿಕಾರವಿಲ್ಲ. ಅಲ್ಲದೆ, ರಾಜ್ಯ ಹೈಕೋರ್ಟ್ ಕೂಡ ಹಲವು ಬಾರಿ ಕೆಲ ಪ್ರಕರಣಗಳ ವಿಚಾರಗಳಲ್ಲಿ ಸ್ಪಷ್ಟವಾಗಿ ಹೇಳಿದ್ದು, ಕಾನೂನಿನ ಎಲ್ಲ ಸಾಧಕ ಬಾಧಕಗಳ ಕುರಿತು ಚರ್ಚಿಸಿ ಸರಕಾರ ಈ ನಿರ್ಧಾರ ಕೈಗೊಂಡಿದೆ. ಅಲ್ಲದೆ, ಸಂಬಂಧಪಟ್ಟ ದಾಖಲಾತಿಗಳನ್ನು ಹೈಕೋರ್ಟ್‌ಗೆ ಒದಗಿಸಲು ಕಾಲಾವಕಾಶ ನೀಡಿ ಎಂದು ನ್ಯಾಯಪೀಠದ ಎದುರು ಎಎಜಿ ಪೊನ್ನಣ್ಣ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ನ್ಯಾಯಪೀಠವು ದಾಖಲಾತಿಗಳನ್ನು ಒದಗಿಸಲು ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News