ಆರೋಗ್ಯಭಾಗ್ಯ: ನಗರವಾಸಿಗಳಿಗಿಂತ ಗ್ರಾಮೀಣರೇ ವಾಸಿ

Update: 2016-04-12 03:41 GMT

ಹೊಸದಿಲ್ಲಿ: ನಗರಗಳಲ್ಲಿ ನಾಯಿಕೊಡೆಗಳಂತೆ ಆರೋಗ್ಯ ಮತ್ತು ಕ್ಷೇಮ ಕ್ಲಿನಿಕ್‌ಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಉತ್ತಮ ತಲಾದಾಯ ಇಷ್ಟೆಲ್ಲ ಇದ್ದರೂ, ನಗರವಾಸಿಗಳಿಗಿಂತ ಗ್ರಾಮೀಣ ಜನತೆಯೇ ಆರೋಗ್ಯವಂತರು. ನಗರವಾಸಿಗಳ ಅನಾರೋಗ್ಯಕ್ಕೆ ಮುಖ್ಯ ಕಾರಣ ಮಾಲಿನ್ಯ ಮತ್ತು ಅನಾರೋಗ್ಯಕರ ಆಹಾರಕ್ರಮ.
ಸರ್ಕಾರಿ ಸಮೀಕ್ಷೆಯೊಂದರಿಂದ ಈ ಅಂಶ ಬಹಿರಂಗವಾಗಿದೆ. ಹದಿನೈದು ದಿನಗಳ ಕಾಲ ನಡೆಸಿದ ಸಮೀಕ್ಷೆಯಲ್ಲಿ, ಶೇಕಡ 11.8ರಷ್ಟು ನಗರವಾಸಿಗಳು ಹಾಗೂ ಶೇಕಡ 8.9ರಷ್ಟು ಗ್ರಾಮವಾಸಿಗಳು ಅನಾರೋಗ್ಯಪೀಡಿತರಾಗಿರುವುದು ಪತ್ತೆಯಾಗಿದೆ. ಆದರೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಹಿಳೆಯರಿಗೆ ಹೆಚ್ಚು ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುವ ಅಂಶ ಕೂಡಾ ಸ್ಪಷ್ಟವಾಗಿದೆ.
ಈ ಸಮೀಕ್ಷೆಯ ಪ್ರಕಾರ, ನಗರಗಳಲ್ಲಿ ಮಹಿಳೆಯರು ಶೇಕಡ 13.5ರಷ್ಟು ಅನಾರೋಗ್ಯಪೀಡಿತರಾಗಿದ್ದರೆ, ಶೇಕಡ 10.1ರಷ್ಟು ಪುರುಷರು ಆರೋಗ್ಯವಂತರಾಗಿಲ್ಲ. ಅಂತೆಯೇ ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಮಾಣ ಅನುಕ್ರಮವಾಗಿ ಶೇಕಡ 9.9 ಹಾಗೂ 8ರಷ್ಟಿದೆ.
ಸಮೀಕ್ಷೆಯಿಂದ ಬಹಿರಂಗವಾಗಿರುವ ಇನ್ನೊಂದು ಆತಂಕಕಾರಿ ವಿಚಾರವೆಂದರೆ, ಸರ್ಕಾರ ಆರೋಗ್ಯ ಕ್ಷೇತ್ರದ ಮೇಲೆ ಮಾಡುವ ವೆಚ್ಚದ ಸೌಲಭ್ಯಗಳು ಶೇಕಡ 86ರಷ್ಟು ನಗರವಾಸಿಗಳಿಗೆ ಹಾಗೂ ಶೇಕಡ 82ರಷ್ಟು ಗ್ರಾಮವಾಸಿಗಳಿಗೆ ತಲುಪುತ್ತಿಲ್ಲ ಎನ್ನುವುದು.
ಎನ್‌ಎಸ್‌ಎಸ್‌ಓ ಸಮೀಕ್ಷೆ ಕೂಡಾ ಇದನ್ನು ದೃಢಪಡಿಸಿದ್ದು, ಶೇಕಡ 70ರಷ್ಟು ಜನ ಅನಾರೋಗ್ಯಪೀಡಿತರಾಗಾದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಪಡೆಯುತ್ತಾರೆ. ನಗರ ಪ್ರದೇಶಗಳಲ್ಲಿ ಶೇಕಡ 79 ಹಾಗೂ ಗ್ರಾಮಗಳಲ್ಲಿ ಶೇಕಡ 72ರಷ್ಟು ರೋಗಿಗಳು ಖಾಸಗಿ ಚಿಕಿತ್ಸೆ ಪಡೆಯುತ್ತಾರೆ. ಒಳರೋಗಿಗಳ ಚಿಕಿತ್ಸೆಯಲ್ಲೂ ಖಾಸಗಿ ಮೇಲುಗೈ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇಕಡ 58 ಹಾಗೂ ನಗರಗಳಲ್ಲಿ ಶೇಕಡ 68ರಷ್ಟು ಒಳರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿವೆ.
ಪರ್ಯಾಯ ಚಿಕಿತ್ಸಾ ಕ್ರಮಗಳ ಉತ್ತೇಜನಕ್ಕೆ ಸರ್ಕಾರ ಮಾಡುತ್ತಿರುವ ಪ್ರಯತ್ನಗಳ ಹೊರತಾಗಿಯೂ ಅಲೋಪತಿ ವೈದ್ಯಪದ್ಧತಿಯನ್ನು ಶೇಕಡ 90ರಷ್ಟು ಮಂದಿ ಇಷ್ಟಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News