ಸ್ವಜಾತಿ ವಿವಾಹಗಳಿಂದಾಗಿ ಅಂಗವಿಕಲರ ಸಂಖ್ಯೆ ಹೆಚ್ಚಳ: ಡಾ.ಸಿದ್ದಲಿಂಗಯ್ಯ

Update: 2016-04-21 17:42 GMT

ಬೆಂಗಳೂರು, ಎ.21: ಸಾವಿರಾರು ವರ್ಷಗಳಿಂದ ನಡೆಯುತ್ತಿರುವ ಸ್ವಜಾತಿ ವಿವಾಹಗಳಿಂದಾಗಿ ದೇಶದಲ್ಲಿ ಅಂಗವಿಕಲರ ಸಂಖ್ಯೆ ಹೆಚ್ಚಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಸಿದ್ದಲಿಂಗಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ನಗರದ ಮಹಾರಾಣಿ ಕಾಲೇಜಿನಲ್ಲಿ ಸ್ಥಾಪಿಸಿರುವ ‘ಅಂಬೇಡ್ಕರ್ ಅಧ್ಯಯನ ಕೇಂದ್ರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಜಾತಿ ವಿವಾಹಗಳ ಪರಿಣಾಮ ಇಡೀ ದೇಶ ರೋಗಗ್ರಸ್ತವಾಗಿದೆ. ಇಂದಿನ ಆಧುನಿಕ ಸಮಾಜದಲ್ಲೂ ಸ್ವಜಾತಿಗಳ ನಡುವೆಯೇ ಮದುವೆಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಕುರಿತು ಜಾಗೃತಿ ಮೂಡಿ ಸುವ ಅಗತ್ಯವಿದೆ ಎಂದು ಸಿದ್ಧಲಿಂಗಯ್ಯ ಅಭಿಪ್ರಾಯಿಸಿದರು.
ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಸೇರಿದಂತೆ ಹಲವು ನಾಯಕರು ಸ್ವಜಾತಿ ವಿವಾಹ ಪದ್ಧತಿಗಳನ್ನು ವಿರೋಧಿಸಿದ್ದರು. ಅಂಬೇಡ್ಕರ್ ಅವರು ‘ಜಾತಿ ವಿನಾಶ’ ಕೃತಿಯನ್ನು ಬರೆಯುವುದರ ಮೂಲಕ ಸ್ವಜಾತಿ ವಿವಾಹಗಳಿಂದ ದೇಶದ ಮೇಲಾಗುವ ದುಷ್ಪರಿಣಾಮಗಳ ಕುರಿತು ಸವಿಸ್ತಾರವಾಗಿ ಬರೆದಿದ್ದಾರೆ. ಹೀಗಾಗಿ ಅಂಬೇಡ್ಕರ್ ಚಿಂತನೆಗಳನ್ನು ಪಾಲಿಸುವವರು ಅಂತರ್‌ಜಾತಿ ವಿವಾಹವಾಗಬೇಕು ಎಂದು ಅವರು ಸಲಹೆ ನೀಡಿದರು.
ಒಂದು ಜಾತಿಯಲ್ಲಿ ಹುಟ್ಟಿದ ವ್ಯಕ್ತಿ ತನ್ನ ಜೀವಂತದಲ್ಲಿ ಬಹುತೇಕ ಅವಧಿಯನ್ನು ಅದೇ ಜಾತಿಯ ಸಮುದಾಯದ ನಡುವೆ ಕಳೆಯುತ್ತಾನೆ. ಇದರಿಂದ ಇತರ ಜಾತಿ ಸಮುದಾಯಗಳ ಕಷ್ಟ, ಸುಖ, ಪ್ರೀತಿ, ವಿಶ್ವಾಸವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಜಾತಿ ಸೌಹಾರ್ದ, ಸಹಬಾಳ್ವೆಯನ್ನು ಕಾಣಲು ಸಾಧ್ಯವಿಲ್ಲ. ಕೇವಲ ಜಾತಿಕೂಪಗಳಾಗಿ ಹುಟ್ಟಿ, ಕಚ್ಚಾಡುತ್ತಾ, ದ್ವೇಷಿಸುತ್ತಲೇ ಕಾಲ ಕಳೆಯಬೇಕಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇತ್ತೀಚೆಗೆ ಪ್ರೀತಿಸಿದ ಕಾರಣಕ್ಕಾಗಿ ತನ್ನ ಕುಟುಂಬಸ್ಥರಿಂದ ಹತ್ಯೆಯಾಗುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ತಡೆಗಟ್ಟಲು ದೊಡ್ಡ ಆಂದೋಲನ ಆಗಬೇಕಾದ ಅಗತ್ಯವಿದೆ. ಸರಕಾರವು ಸಹ ಅಂತರ್‌ಜಾತಿ ವಿವಾಹವಾಗುವವರಿಗೆ ಸೂಕ್ತ ರಕ್ಷಣೆ ಹಾಗೂ ಹೆಚ್ಚಿನ ಮಟ್ಟದ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಅವರು ತಿಳಿಸಿದರು.
  ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಕೇವಲ ದಲಿತರಿಗೆ ಮಾತ್ರ ಮೀಸಲಾಗಿ ಕಲ್ಪಿಸಿದ್ದಾರೆ ಎಂದು ಅಪಪ್ರಚಾರ ಮಾಡಲಾಗಿದೆ. ಆದರೆ, ದಲಿತರಿಗೆ ಶೇ.15ರಷ್ಟು ಮೀಸಲಾತಿಯಿದ್ದರೆ, ಎಲ್ಲ ಜಾತಿಯ ಬಡವರಿಗೂ ಶೇ.30ರಷ್ಟು ಮೀಸಲಾತಿಯನ್ನು ಒದಗಿಸಿದ್ದಾರೆ. ಇದನ್ನು ಮೇಲ್ಜಾತಿ ಸಮುದಾಯ ತಿಳಿಯಬೇಕೆಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ದಲಿತರಿಗಿಂತ ಮುಖ್ಯವಾಗಿ ಈ ದೇಶದ ಹೆಣ್ಣುಮಕ್ಕಳ ಏಳ್ಗೆಗಾಗಿ ಹೋರಾಟ ಮಾಡಿದ್ದರು. ಆಸ್ತಿಯಲ್ಲಿ ಮಹಿಳೆಯರಿಗೆ ಸಮಾನ ಪಾಲನ್ನು ಒದಗಿಸಲು ಸಂಸತ್‌ನಲ್ಲಿ ಹಿಂದೂ ಕೋಡ್ ಬಿಲ್‌ನ್ನು ಮಂಡಿಸಲು ಮುಂದಾದರು. ಆದರೆ, ಸಂಸತ್‌ನಲ್ಲಿದ್ದ ಜಾತಿ ಮನಸುಗಳು ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಇದರಿಂದ ಬೇಸರಗೊಂಡ ಡಾ.ಬಿ.ಆರ್.ಅಂಬೇಡ್ಕರ್ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು ಎಂದು ಅವರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಚಾಲಕ ಡಾ.ಶಾರದಾ, ಕಾಲೇಜು ಶಿಕ್ಷಣ ಇಲಾಖೆಯ ಆಡಳಿತಾಧಿಕಾರಿ ಶಂಕರಪ್ಪ, ಮಹಾರಾಣಿ ಕಾಲೇಜಿನ ಪ್ರಾಂಶುಪಾಲೆ ಡಾ.ಆರ್.ಶಾಂತಕುಮಾರಿ, ಪ್ರಾಧ್ಯಾಪಕ ಡ.ಕೆ.ರಾಮಚಂದ್ರ ಮತ್ತಿತರರಿದ್ದರು.

ಆರ್‌ಬಿಐ ಸ್ಥಾಪನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ, ಈ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿಯಿಲ್ಲ. ಹಣದ ನೋಟುಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ನಮೂದಿಸಬಹುದಾಗಿತ್ತು. ಆದರೆ, ನೋಟುಗಳು ಅಸ್ಪಶ್ಯತೆಗೊಳಗಾಗುತ್ತವೆ ಎಂದು ಮನುವಾದಿಗಳು ಮುದ್ರಿಸಿಲ್ಲ.
- ಡಾ.ಸಿ.ಎಸ್.ದ್ವಾರಕಾನಾಥ್, ಮಾಜಿ ಅಧ್ಯಕ್ಷರು, ಹಿಂದುಳಿದ ವರ್ಗಗಳ ಆಯೋಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News