ಅಗ್ನಿಗೆ ಆಹುತಿಯಾಗುತ್ತಿರುವ ಅರಣ್ಯ ಸಂಪತ್ತು

Update: 2016-05-04 18:37 GMT

ಪ್ರತಿವರ್ಷ ಬೇಸಿಗೆಯಲ್ಲಿ ಕಾಡ್ಗಿಚ್ಚು ನೂರಾರು ಎಕರೆ ಅರಣ್ಯವನ್ನು ಸುಟ್ಟು ಹಾಕುತ್ತದೆ. ಈ ಬಾರಿ ಉತ್ತರಾಖಂಡದಲ್ಲಿ ಭುಗಿಲೆದ್ದ ಬೆಂಕಿಗೆ ಅಮೂಲ್ಯ ಅರಣ್ಯ ಸಂಪತ್ತು ಸುಟ್ಟು ಬೂದಿಯಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಭೀಕರ ಪ್ರವಾಹದಿಂದ ತತ್ತರಿಸಿದ್ದ ಈ ರಾಜ್ಯ, ಈ ಬಾರಿ ಕಾಡ್ಗಿಚ್ಚಿನಿಂದ ಕಂಗಾಲಾಗಿದೆ. ಈ ಕಾಡ್ಗಿಚ್ಚು ಮನುಷ್ಯ ನಿರ್ಮಿತವಾಗಿದೆ ಎಂಬ ವರದಿಯ ಸುತ್ತ ವಾದ ವಿವಾದಗಳು ನಡೆಯುತ್ತಿವೆ. ಟಿಂಬರ್ ಮತ್ತು ಭೂ ಮಾಫಿಯಾಗಳು ಈ ಕಾಡ್ಗಿಚ್ಚಿನ ಹಿಂದಿವೆ ಎಂದು ತಿಳಿದುಬಂದಿದೆ. ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಕೂಡಾ ಇದನ್ನು ಮಾನವ ನಿರ್ಮಿತ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಯಾರು ಕಾರಣ ಎಂಬ ಬಗ್ಗೆ ಸ್ಪಷ್ಟವಾಗಿ ಅವರು ಏನನ್ನೂ ಹೇಳಿಲ್ಲ. ಉತ್ತರಾಖಂಡದ ಚುನಾಯಿತ ಸರಕಾರವನ್ನು ಕೇಂದ್ರ ಸರಕಾರ ಇತ್ತೀಚೆಗೆ ಅಸ್ಥಿರಗೊಳಿಸಿದ ಪರಿಣಾಮವಾಗಿ ದಿಢೀರನೆ ಕಾಣಿಸಿಕೊಂಡು ದಳ್ಳುರಿಯನ್ನು ನಿಯಂತ್ರಿಸುವಲ್ಲಿ ರಾಜ್ಯದ ಆಡಳಿತ ವ್ಯವಸ್ಥೆ ವಿಫಲಗೊಂಡಿದೆ. ಚುನಾಯಿತ ಸರಕಾರವೊಂದು ಅಲ್ಲಿ ಇದ್ದಿದ್ದರೆ ಇಂತಹ ಸ್ಥಿತಿ ನಿರ್ಮಾ ಣವಾಗುತ್ತಿರಲಿಲ್ಲ. ಕೊನೆಗೂ ಕೇಂದ್ರ ಸರಕಾರವೇನೋ ಎಚ್ಚೆತ್ತಿದೆ. ಆದರೆ,ಪರಿಸ್ಥಿತಿ ಕೈಮೀರಿ ಹೋಗಿದೆ. ಉತ್ತರಾ ಖಂಡದಲ್ಲಿ ಉರಿಯುತ್ತಿರುವ ಕಾಡಿನ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಇನ್ನೂ ಸಾಧ್ಯವಾಗಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ತಿಳಿಸಿದ್ದರೂ ಅಲ್ಲಿ ಇನ್ನೂ ಬೆಂಕಿ ಉರಿಯುತ್ತಲೇ ಇದೆ. ಈ ದಳ್ಳುರಿಯಿಂದಾಗಿ ಉತ್ತರಾಖಂಡದ 13 ಜಿಲ್ಲೆಗಳಲ್ಲಿ 2,500 ಹೆಕ್ಟೇರ್ ಪ್ರದೇಶ ಅಗ್ನಿಗಾಹುತಿಯಾಗಿದೆ. ಇದರಿಂದಾಗಿ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಉಂಟಾಗಿದೆ. ಅನೇಕ ಪ್ಯಾಕೇಜ್ ಪ್ರವಾಸಗಳು ರದ್ದಾಗಿವೆ ಎಂದು ತಿಳಿದುಬಂದಿದೆ. ಉತ್ತರಾಖಂಡದಲ್ಲಿ ಕಂಡುಬಂದ ಭೀಕರ ಕಾಡ್ಗಿಚ್ಚಿನ ಜ್ವಾಲೆ ಕಡಿಮೆ ಯಾಗಿದ್ದು, ಶೇ.70ರಷ್ಟು ನಿಯಂತ್ರಿಸಲಾಗಿದೆ ಎಂದು ಎನ್‌ಡಿಆರ್‌ಎಫ್ ತಿಳಿಸಿದೆ. ಇದರ ಬೆನ್ನಲ್ಲೇ ಉತ್ತರಭಾರತದಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಒಂದು ವೇಳೆ ಮಳೆ ಸುರಿದರೆ ಬಹುತೇಕ ಕಾಡ್ಗಿಚ್ಚು ಕಡಿಮೆಯಾಗಲಿದೆ. ಕಾಡ್ಗಿಚ್ಚಿನ ಪರಿಣಾಮ ಇಲ್ಲಿ ಅಪಾರ ಪ್ರಮಾಣದ ಸಸ್ಯ, ವನ್ಯ ಜೀವಿ ಸಂಪತ್ತುಗಳು ನಾಶವಾಗಿವೆೆ. ಕಾಡ್ಗಿಚ್ಚಿಗೆ ಈವರೆಗೆ ಕನಿಷ್ಠ 7 ಮಂದಿ ಬಲಿಯಾಗಿದ್ದಾರೆ. ಕಳೆದೆರಡು ವರ್ಷಗಳಿಂದ ಭೀಕರ ಪ್ರವಾಹ ಹಾಗೂ ಭೂಕಂಪಕ್ಕೆ ತತ್ತರಿಸಿರುವ ಉತ್ತರ ಭಾರತ ಮುಂಬರುವ ದಿನಗಳಲ್ಲಿ ಕಾಡ್ಗಿಚ್ಚಿನ ಪ್ರಕೋಪಕ್ಕೂ ಭಾರೀ ಬೆಲೆಯನ್ನು ತೆರಬೇಕಾದೀತು.

ಉತ್ತರಭಾರತ ಮಾತ್ರವಲ್ಲ, ನಮ್ಮ ಕರ್ನಾಟಕದಲ್ಲೂ ಬೇಸಿಗೆಯಲ್ಲಿ ಇಂತಹ ಅನಾಹುತಗಳು ಉದ್ಭವಿಸುತ್ತವೆ. ಬೆಂಗಳೂರು ಸಮೀಪದ ನಂದಿಬೆಟ್ಟದಲ್ಲಿ ಇತ್ತೀಚೆಗೆ ಒಮ್ಮೆಲೇ ಕಾಣಿಸಿಕೊಂಡ ದಳ್ಳುರಿಯ ಪರಿಣಾಮವಾಗಿ ಅಮೂಲ್ಯ ಅರಣ್ಯ ಸಂಪತ್ತು ನಾಶವಾಗಿದೆ. ಮಳೆಗಾಲ ಆರಂಭವಾದಾಗ ಸಾಕಷ್ಟು ಹುಲ್ಲು ಬೆಳೆಯಲಿ ಎಂಬ ಕಾರಣಕ್ಕಾಗಿ ಗ್ರಾಮದ ಜನ ಕಾಡಿಗೆ ಬೆಂಕಿ ಹಚ್ಚುತ್ತಾರೆ ಎಂಬ ವದಂತಿಗಳೂ ಇವೆ. ಕಳೆದ ಎರಡು ವರ್ಷಗಳಿಂದ ಮುಂಗಾರು ಮಳೆ ಸರಿಯಾಗಿ ಆಗಲಿಲ್ಲ. ಹೀಗಾಗಿ ಅರಣ್ಯ ಒಣಗಿ ಹೋಗಿದೆ. ಪರಿಸ್ಥಿತಿ ಇಷ್ಟೊಂದು ಹದಗೆಡಲು ಜಾಗತಿಕ ತಾಪಮಾನ ಕಾರಣವಾಗಿದೆ. ಹೀಗಾಗಿ ತೇವಾಂಶದ ಕೊರತೆಯಿಂದಾಗಿ ಒಂದು ಸಣ್ಣ ಕಿಡಿ ಕಾಣಿಸಿಕೊಂಡರೂ ಸಾಕು ಬೆಂಕಿ ವ್ಯಾಪಕವಾಗಿ ಹಬ್ಬುತ್ತದೆ. ನಮ್ಮ ಸರಕಾರಗಳ ಬಳಿ ಸರಿಯಾದ ವಿಪತ್ತು ನಿರ್ವಹಣಾ ವ್ಯವಸ್ಥೆ ಇಲ್ಲ. ಹೀಗಾಗಿ ಆಗಾಗ ಅಗ್ನಿ ಅನಾಹುತಗಳು ಸಂಭವಿಸುತ್ತಲೇ ಇವೆ. ಬೆಂಕಿ ಹಚ್ಚಿದಾಗ ಸೇನಾ ಪಡೆ ಹಾಗೂ ವಾಯು ಪಡೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುತ್ತಾರೆ. ನಂತರ ಸರಕಾರ ಎಲ್ಲವನ್ನೂ ಮರೆತುಬಿಡುತ್ತದೆ. ಮತ್ತೆ ಮುಂದಿನ ವರ್ಷ ಬೆಂಕಿ ಕಾಣಿಸಿಕೊಂಡಾಗಲೇ ಸರಕಾರಕ್ಕೆ ಎಚ್ಚರವಾಗುವುದು.

ಅಭಿವೃದ್ಧಿಯ ಅಟ್ಟಹಾಸದಲ್ಲಿ ನಮ್ಮ ಅಮೂಲ್ಯ ಅರಣ್ಯ ಸಂಪತ್ತು ನಾಶವಾಗುತ್ತಲೇ ಇದೆ. ಅರಣ್ಯವೆಂದರೆ ಬರೀ ಗಿಡಮರಗಳಲ್ಲ. ಅತ್ಯಂತ ಅಮೂಲ್ಯವಾದ ಸಸ್ಯ ಪ್ರಭೇದಗಳೂ ಅಲ್ಲಿ ಇವೆ. ಜೀವ ರಕ್ಷಕ ಔಷಧಿ ಸಸ್ಯಗಳೂ ಕಾಡಿನಲ್ಲಿವೆ. ನೂರಾರು ವಿಧದ ವನ್ಯ ಪ್ರಾಣಿಗಳು, ಪಕ್ಷಿಗಳು ಅರಣ್ಯದಲ್ಲಿ ಆಸರೆ ಪಡೆದಿವೆ. ಅರಣ್ಯ ಸಂಪತ್ತು ದೇಶದಲ್ಲಿ ನಾಶವಾಗುತ್ತಾ ಬಂದು ಶೇ.21ರಷ್ಟು ಮಾತ್ರ ಉಳಿದಿದೆ. ಇದರ ಪರಿಣಾಮ ವನ್ಯ ಪ್ರಾಣಿಗಳ ಮೇಲೂ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಅರಣ್ಯ ಸಂಪತ್ತನ್ನು ಕಾಪಾಡಿ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಇಡುವುದು ಅಗತ್ಯವಾಗಿದೆ. ನಮ್ಮ ಪೂರ್ವಜರು ಅತಿಯಾಸೆ ಪಡದೆ ಅವಶ್ಯವಿದ್ದಷ್ಟನ್ನು ಮಾತ್ರ ಬಳಸಿಕೊಂಡು ಜಗತ್ತನ್ನು, ಕಾಡಿನ ಸಂಪತ್ತನ್ನು ನಮಗೆ ಒಪ್ಪಿಸಿ ಹೋಗಿದ್ದಾರೆ. ನಾವು ಕೂಡಾ ಅಮೂಲ್ಯ ಸಂಪತ್ತನ್ನು ಕಾಪಾಡಿ ಮುಂದಿನ ಪೀಳಿಗೆಗೆ ಒಪ್ಪಿಸಿ ಹೋಗಬೇಕಾಗಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮನುಷ್ಯಕುಲ ಭಾರೀ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಮರೆಯಬಾರದು. ಅಭಿವೃದ್ಧಿಯ ಅಟ್ಟಹಾಸದಲ್ಲಿ ಈಗಾಗಲೇ ನಮ್ಮ ಅಮೂಲ್ಯವಾದ ಅರಣ್ಯ ಸಂಪತ್ತು ಮತ್ತು ಜಲ ಸಂಪತ್ತು ನಾಶವಾಗಿದೆ. ಇದರ ಪರಿಣಾಮವನ್ನು ಈ ಬೇಸಿಗೆಯಲ್ಲಿ ನಾವು ಅನುಭವಿಸುತ್ತಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಂಡು ಪ್ರಕೃತಿಯೊಂದಿಗೆ ಸೌಹಾರ್ದವಾದ ಸಹಜೀವನ ನಡೆಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News