ಹೆನುಗಾರಿಕೆ ಅಳವಡಿಸಿ, ಸಂಕಷ್ಟದಿಂದ ಪಾರಾಗಿ: ಮಂಜು

Update: 2016-05-06 18:08 GMT

ಬೆಂಗಳೂರು, ಮೇ 6: ಹೈನುಗಾರಿಕೆಯಿಂದಾಗಿ ಬರಗಾಲದ ಸ್ಥಿತಿಯಲ್ಲಿಯೂ ಗ್ರಾಮಾಂತರ ಜನತೆ ಜೀವನೋತ್ಸಾಹವನ್ನು ಉಳಿಸಿಕೊಂಡಿದ್ದಾರೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಎ.ಮಂಜು ಅಭಿಪ್ರಾಯಿಸಿದ್ದಾರೆ.

ಶುಕ್ರವಾರ ರಾಜ್ಯ ಪಶುವೈದ್ಯಕೀಯ ಸಹಾಯಕರ ಸಂಘ ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ತಾಂತ್ರಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಕೃಷಿಯ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗುವ ಮೂಲಕ ಆರ್ಥಿಕ ಸಂಕಷ್ಟದಿಂದ ಪಾರಾಗಬೇಕು ಎಂದು ತಿಳಿಸಿದರು.
ಕೃಷಿ ಬೆಳೆಯನ್ನು ನಂಬಲು ಸಾಧ್ಯವಿಲ್ಲ. ಲಕ್ಷಾಂತರ ರೂ.ಸಾಲ ಮಾಡಿ ಬೆಳೆದ ಬೆಳೆಯು ಮಳೆಯಿಂದ ನಷ್ಟವಾಗಬಹುದು. ಇಲ್ಲವೆ ಮಳೆಯಿಲ್ಲದೆ ಒಣಗಬಹುದು. ಹಾಗೂ ಮಾರುಕಟ್ಟೆ ಯಲ್ಲಿ ಸೂಕ್ತ ಬೆಲೆ ಸಿಗದೆ ನಷ್ಟವುಂಟಾಗಬಹುದು. ಇದರಿಂದ ಬೇಸತ್ತ ರೈತ ಆತ್ಮಹತ್ಯೆಯಂತಹ ಘಟನೆಗಳಿಗೆ ತುತ್ತಾಗಬ ಹುದು. ಹೀಗಾಗಿ ಇದಕ್ಕೆ ಉತ್ತಮ ಪರಿಹಾರವೆಂದರೆ ರೈತರು ಹೈನುಗಾರಿಕೆಯತ್ತ ಆಸಕ್ತಿವಹಿಸುವುದೇ ಆಗಿದೆ ಎಂದು ಅವರು ತಿಳಿಸಿದರು.
ಹೆಚ್ಚಿನದಾಗಿ ಗ್ರಾಮಾಂತರ ಭಾಗದ ಮಹಿಳೆಯರು ಹೈನುಗಾ ರಿಕೆಯಲ್ಲಿ ತೊಡಗಿದ್ದಾರೆ. ಕೃಷಿಯಲ್ಲಿ ನಷ್ಟವುಂಟಾದರು ಹೈನುಗಾರಿಕೆಯ ಮುಖಾಂತರ ಕುಟುಂಬ ನಿರ್ವಹಣೆಯನ್ನು ಮಾಡಬಹುದಾಗಿದೆ. ಸರಕಾರವು ಸಹ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಹೀಗಾಗಿ ಗ್ರಾಮಾಂತರ ಜನತೆ ಸರಕಾರದ ಸೌಲಭ್ಯಗಳನ್ನು ಪಡೆದು ಹೈನುಗಾರಿಕೆಯಲ್ಲಿ ತೊಡಗಬೇಕು ಎಂದು ಎ.ಮಂಜು ಸಲಹೆ ನೀಡಿದರು.
ರಾಜ್ಯದಲ್ಲಿ ಹೈನುಗಾರಿಕೆ ಯಶಸ್ವಿಯಾಗುವುದಕ್ಕೆ ಪಶು ವೈದ್ಯರ ಹಾಗೂ ಸಿಬ್ಬಂದಿ ಪಾತ್ರವನ್ನು ಮರೆಯಲು ಸಾಧ್ಯವಿಲ್ಲ. ಪಶು ವೈದ್ಯರು ಹಳ್ಳಿ-ಹಳ್ಳಿಗೆ ತಿರುಗಿ ಜಾನುವಾರುಗಳ ಆರೋಗ್ಯ ವನ್ನು ಪರೀಕ್ಷಿಸಿ ಅಗತ್ಯ ಚಿಕಿತ್ಸೆ ನೀಡುತ್ತಾರೆ. ಹೀಗಾಗಿ ಜಾನುವಾರುಗಳ ಆರೋಗ್ಯದಿಂದಾಗಿ ರೈತರಿಗೆ ಆರ್ಥಿಕವಾಗಿ ಹಲವು ರೀತಿಯಲ್ಲಿ ಸಹಾಯವಾಗುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪಶುವೈದ್ಯಕೀಯ ಸಹಾಯಕರು ಸರಕಾರದ ಮುಂದೆ ಹಲವು ಬೇಡಿಕೆಗಳನ್ನು ಮುಂದಿರಿಸಿ ಈಡೇರಿಸುವಂತೆ ಒತ್ತಾಯಿಸಿದ್ದಾರೆ. ಇವರ ಬೇಡಿಕೆಗಳು ಸಕಾರಾತ್ಮಕವಾಗಿದ್ದು, ಈಗಾಗಲೆ ಹಲವು ಬೇಡಿಕೆಗಳನ್ನು ಈಡೇರಿಸಿದ್ದೇನೆ. ನನಗೆ ಮೀರಿದ ಬೇಡಿಕೆಗಳಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಜೊತೆ ಮಾತನಾಡಿ ಬಗೆಹರಿಸುತ್ತೇನೆ ಎಂದು ಅವರು ತಿಳಿಸಿದರು.
ಕೆಎಂಎಫ್ ಅಧ್ಯಕ್ಷ ನಾಗರಾಜು ಮಾತನಾಡಿ, ಹೈನುಗಾರಿಕೆ ಗ್ರಾಮಾಂತರ ಪ್ರದೇಶದ ಜನತೆಯನ್ನು ಸ್ವಾಭಿಮಾನಿಗಳನ್ನಾಗಿ ಮಾಡಿದೆ. ಅದರಲ್ಲೂ ಮಹಿಳೆಯರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿಸಿದೆ. ಇದಕ್ಕೆ ಸರಕಾರವು 4 ರೂ. ಪ್ರೋತ್ಸಾಹಧನ ನೀಡಿದೆ. ಹೀಗಾಗಿ ರೈತರು ಹೈನುಗಾರಿಕೆಯನ್ನು ಉಪ ಕಸುಬಾಗಿ ಮಾಡಿಕೊಂಡು ಸ್ವಾಭಿಮಾನಿಗಳಾಗಬೇಕು ಎಂದು ತಿಳಿಸಿದರು.
ರಾಜ್ಯ ಪಶುವೈದ್ಯಕೀಯ ಸಹಾಯಕರ ಸಂಘದ ಕಾರ್ಯದರ್ಶಿ ದಿನೇಶ್ ಮಾತನಾಡಿ, ಪಶು ವೈದ್ಯಕೀಯ ಸಹಾಯಕರು ಜಾನುವಾರುಗಳ ಚಿಕಿತ್ಸೆಯ ವೇಳೆ ಹಲವಾರು ಅಪಾಯಕ್ಕೆ ತುತ್ತಾಗುತ್ತಾರೆ. ಕೆಲವು ವೇಳೆ ಪ್ರಾಣಿಗಳು ರೇಬಿಸ್, ಕ್ಷಯ, ಕಂದು ರೋಗಗಳಿಗೆ ತುತ್ತಾಗುತ್ತವೆ. ಹೀಗಾಗಿ ಅಪಾಯ ಭತ್ತೆಯನ್ನು ನೀಡಬೇಕು ಎಂದು ತಿಳಿಸಿದರು.
ಪಶು ವೈದ್ಯಕೀಯ ಸಹಾಯಕರು ಹಳ್ಳಿ, ಹಳ್ಳಿಗಳಿಗೆ ತಿರುಗಿ ಜಾನುವಾರುಗಳ ಯೋಗ ಕ್ಷೇಮವನ್ನು ವಿಚಾರಿಸಬೇಕಾಗುತ್ತದೆ. ಇದರಿಂದ ಅವರಿಗೆ ಪ್ರಯಾಣ ವೆಚ್ಚ ಹೆಚ್ಚಾಗುತ್ತದೆ. ಹಾಗೂ ಇವರಿಗೆ ಬರುವ ಸಂಬಳವು ತೀರ ಕಡಿಮೆಯಿದೆ. ಹೀಗಾಗಿ ಸರಕಾರದ ವತಿಯಿಂದ ಪ್ರಯಾಣದ ವೆಚ್ಚವನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಕೆಎಎಸ್ ಅಧಿಕಾರಿ ಸೈಯದ್ ಎಜಾಝ್‌ಅಹ್ಮದ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ, ಗೌರವಾಧ್ಯಕ್ಷ ಎಚ್.ಕೆ.ರಾಮು, ರಾಜ್ಯ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಎಚ್.ಪಾಂಡುರಂಗ, ಖಜಾಂಚಿ ಕೇಶವ, ವಸಂತಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಪಶು ಸಂಗೋಪನಾ ಇಲಾಖೆಯಲ್ಲಿ 2,140 ವೈದ್ಯರ ಮಂಜೂರಾತಿ ಹುದ್ದೆಗಳಿವೆ. ಅವುಗಳಲ್ಲಿ 1,140 ಹುದ್ದೆಗಳು ಖಾಲಿ ಇವೆ. ಇದರಲ್ಲಿ 660 ಹುದ್ದೆಗಳು ಈಗಾಗಲೆ ಭರ್ತಿಯಾಗಿದ್ದು, 250 ಹುದ್ದೆಗಳ ನೇಮಕಾತಿಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡಿಸಿ ಅನುಮತಿ ಪಡೆದುಕೊಳ್ಳಲಾಗುವುದು.
- ಎ.ಮಂಜು ಸಚಿವ, ಪಂಶುಸಂಗೋಪನೆ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News