ಹೇಮಂತ್ ಕರ್ಕರೆ ತಂಡದ ಬಲಿದಾನಕ್ಕೆ ಅವಮಾನ

Update: 2016-05-16 04:01 GMT

ನರಿಗಳು ಗುಳ್ಳೆ ನರಿಗಳ ಅಪರಾಧಗಳ ಕುರಿತಂತೆ ತನಿಖೆ ನಡೆಸಿದರೆ ಅದರ ಅಂತಿಮ ಫಲಿತಾಂಶ ಏನಿರಬಹುದು ಎನ್ನುವುದಕ್ಕೆ ಉದಾಹರಣೆಯಾಗಿದೆ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ನಡೆಸಿದ ತನಿಖೆ. ಬೇಲಿಯೂ, ಗೂಳಿಯೂ ಜೊತೆಗೂಡಿ ಕಾನೂನೆಂಬ ಹೊಲವನ್ನು ಮೇಯ್ದಿದೆ. ಪರಿಣಾಮವೆಂದರೆ,ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲುವ ಮೊದಲೇ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಶಂಕಿತ ಭಯೋತ್ಪಾದಕಿ ಪ್ರಜ್ಞಾಸಿಂಗ್ ಮತ್ತು ಆಕೆಯ ಜೊತೆಗಾರರಿಗೆ ಕ್ಲೀನ್ ಚಿಟ್ ದೊರಕಿದೆ. ಅಷ್ಟೇ ಅಲ್ಲ, ಇನ್ನೋರ್ವ ಶಂಕಿತ ಉಗ್ರ ಕರ್ನಲ್ ಪುರೋಹಿತ್ ಮೇಲಿನ ಮೊಕಾ ಕಾಯ್ದೆಯಡಿಯ ಆರೋಪಗಳನ್ನೂ ಕೈ ಬಿಡಲಾಗಿದೆ. ಈ ದೇಶದ ಪಾಲಿಗೆ ಎನ್‌ಐಎ ತನಿಖೆ ಇದೇ ದಾರಿಯಲ್ಲಿ ಸಾಗುತ್ತದೆ ಎನ್ನುವ ಮುನ್ಸೂಚನೆ ವರ್ಷಗಳ ಹಿಂದೆಯೇ ದೊರಕಿತ್ತು. ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ಅವರು, ಎನ್‌ಐಎ ಉಗ್ರರ ಜೊತೆಗೆ ಒಳಗೊಳಗೆ ಕೈ ಜೋಡಿಸಿರುವುದನ್ನು ಈಗಾಗಲೇ ಎರಡೆರಡು ಬಾರಿ ಮಾಧ್ಯಮಗಳಲ್ಲಿ ಬಹಿರಂಗಪಡಿಸಿದ್ದಾರೆ. ಕೇಸರಿ ಉಗ್ರರ ವಿರುದ್ಧ ವಾದಮಾಡುವಾಗ ಮೃದು ಧೋರಣೆ ತಾಳಲು ಎನ್‌ಐಎ ಅಧಿಕಾರಿಗಳು ತನ್ನ ಮೇಲೆ ಒತ್ತಡ ಹೇರಿರುವುದನ್ನು ಮತ್ತು ತಾನದನ್ನು ವಿರೋಧಿಸಿರುವುದನ್ನು ಅವರು ಹೊರಗೆಡಹಿದಾಗಲೇ ಮಾಲೆಗಾಂವ್ ಪ್ರಕರಣ ಹಳ್ಳ ಹಿಡಿಯುತ್ತದೆ ಮತ್ತು ಕೇಸರಿ ಉಗ್ರರು ನಿರಪರಾಧಿಗಳಾಗಿ ಹೊರ ಬರುತ್ತಾರೆ ಎನ್ನುವುದು ಸ್ಪಷ್ಟವಾಗಿತ್ತು. ಆದರೆ ಇಲ್ಲಿ ಕೇಸರಿ ಉಗ್ರರನ್ನು ನ್ಯಾಯಾಲಯ ವಿಚಾರಣೆ ನಡೆಸಿ ನಿರಪರಾಧಿಯೆಂದು ಘೋಷಿಸುವ ಮೊದಲೇ ಎನ್‌ಐಎ ತನಿಖಾ ತಂಡವೇ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಈ ಉಗ್ರರ ಅನಾಯಾಸ ಬಿಡುಗಡೆಯ ಹಿಂದೆ ಯಾರಿದ್ದಾರೆ ಎನ್ನುವುದು ಇಡೀ ವಿಶ್ವಕ್ಕೆ ತಿಳಿದಿದೆ. ಈ ಮೂಲಕ ಬಿಜೆಪಿ ಸರಕಾರ ಉಗ್ರವಾದದ ಕುರಿತಂತೆ ದ್ವಂದ್ವ ನಿಲುವು ತಳೆದಿರುವುದು ಸ್ಪಷ್ಟವಾಗಿದೆ. ಈ ಬಿಡುಗಡೆ ಕೇವಲ ಮಾಲೆಗಾಂವ್ ಪ್ರಕರಣಕ್ಕೆ ಸೀಮಿತವಾಗಿ ಮುಗಿಯುವುದಿಲ್ಲ. ಮುಂದಿನ ದಿನಗಳಲ್ಲಿ ದೇಶದೊಳಗೆ ಇನ್ನಷ್ಟು ಉಗ್ರವಾದಿ ಕೃತ್ಯವನ್ನೆಸಗಲು ನಮ್ಮ ದುರ್ಬಲ ಕಾನೂನು ವ್ಯವಸ್ಥೆ ನೀಡಿದ ಪರವಾನಿಗೆಯಾಗಿದೆ. ಎನ್‌ಐಎ ತಳೆದ ನಿಲುವಿನಿಂದ ಈ ದೇಶದಲ್ಲಿ ಉಗ್ರವಾದ ಸಂಸ್ಕೃತಿ, ಧರ್ಮ, ಸನಾತನ ಎಂಬಿತ್ಯಾದಿ ವೇಷದಲ್ಲಿ ಇನ್ನಷ್ಟು ವಿಸ್ತೃತವಾಗಿ ಹರಡಲಿದೆ. ‘ತಾವೇನೂ ಮಾಡಿದರೂ, ಕಾನೂನು ತಮ್ಮ ಕೂದಲನ್ನೂ ಕೊಂಕಿಸದು’ ಎನ್ನುವುದು ದುಷ್ಕರ್ಮಿಗಳಿಗೆ ಅರಿವಾಗಿದೆಯೆಂದರೆ ಅದು ಇನ್ನಷ್ಟು ಅಪರಾಧ ಚಟುವಟಿಕೆಗಳಿಗೆ ನೀಡಿದ ಪರವಾನಿಗೆಯೇ ತಾನೆ? ಅಷ್ಟೇ ಅಲ್ಲ, ಈ ನಿರ್ಧಾರ ಒಂದೆಡೆ ಕೇಸರಿ ಉಗ್ರವಾದಿಗಳಿಗೆ ಆತ್ಮವಿಶ್ವಾಸವನ್ನು ಕೊಟ್ಟರೆ, ಇನ್ನೊಂದೆಡೆ ಮಾಡದ ಅಪರಾಧಕ್ಕಾಗಿ ಇನ್ನಷ್ಟು ಅಮಾಯಕರು ಜೈಲು ಸೇರಿಸುವ ಕೆಲಸ ಇನ್ನಷ್ಟು ಭರದಲ್ಲಿ ನಡೆಯುವ ಸೂಚನೆಗಳು ಕಾಣುತ್ತಿವೆ. ಇದರ ಅಂತಿಮ ಪರಿಣಾಮವಾಗಿ ದೇಶದಲ್ಲಿ ವಿಧ್ವಂಸಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಲಿದೆ. ಬಹುಶಃ ನರೇಂದ್ರ ಮೋದಿಯ ಭವಿಷ್ಯದ ಅಚ್ಛೇದಿನ್ ಪಟ್ಟಿಯಲ್ಲಿ ಇವುಗಳೆಲ್ಲ ಈ ಮೊದಲೇ ದಾಖಲಾಗಿರಬಹುದು. ಅದರ ಅನುಷ್ಠಾನದ ಭಾಗವಾಗಿಯೇ ಎನ್‌ಐಎ ತನ್ನ ಆರೋಪಪಟ್ಟಿಯಲ್ಲಿ ಹಲವು ಶಂಕಿತ ಉಗ್ರರನ್ನು ಹೊರಗಿಟ್ಟಿದೆ. ಎನ್‌ಐಎ ನಿರ್ಧಾರವನ್ನು ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರು ಬಣ್ಣಿಸಿದ್ದು ಹೀಗೆ ‘‘ಹೇಮಂತ್ ಕರ್ಕರೆ ಎರಡು ಬಾರಿ ಕೊಲ್ಲಲ್ಪಟ್ಟರು. ಮುಂಬೈ ದಾಳಿಯಲ್ಲಿ ವಿದೇಶಿ ಉಗ್ರರಿಂದ ಒಮ್ಮೆ ಕೊಲ್ಲಲ್ಪಟ್ಟರೆ, ಈಗ ನಮ್ಮವರಿಂದ...’’. ಆದರೆ ಸರ್ದೇಸಾಯಿ ಮಾತುಗಳನ್ನು ಇಟ್ಟುಕೊಂಡೇ ಇನ್ನೂ ಮುಂದೆ ಹೋಗಬಹುದು. ಈ ತೀರ್ಪು ಕರ್ಕರೆಯನ್ನು ಮೊದಲ ಬಾರಿ ಕೊಂದವರು ನಿಜಕ್ಕೂ ಯಾರು? ಎನ್ನುವ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಹೇಮಂತ್ ಕರ್ಕರೆ ಮತ್ತು ಅವರ ಬಳಗದ ಉನ್ನತಾಧಿಕಾರಿಗಳ ಸಾವು ಬೇಕಾಗಿದ್ದದ್ದು ಯಾರಿಗೆ? ಇಂದು ಎನ್‌ಐಎ ತಂಡ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ, ಅಂದಿನ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆಯನ್ನೇ ಆರೋಪಿಯನ್ನಾಗಿಸಲು ಹವಣಿಸುತ್ತಿದೆ. ಹೇಮಂತ್ ಕರ್ಕರೆಯ ತನಿಖೆಯಲ್ಲಿ ವೈಫಲ್ಯವನ್ನು ಹುಡುಕಲು ಯತ್ನಿಸುತ್ತಾ, ಅದು ತನ್ನನ್ನು ತಾನು ಸಮರ್ಥಿಸಲು ಹೊರಟಿದೆ. ಆದರೆ ಇದೇ ಸಂದರ್ಭದಲ್ಲಿ ಹೇಮಂತ್ ಕರ್ಕರೆಯ ತನಿಖೆಯನ್ನು ಸಂಪೂರ್ಣವಾಗಿ ಅಲ್ಲಗಳೆಯುತ್ತಿಲ್ಲ ಎನ್ನುವುದೂ ಅಷ್ಟೇ ಮುಖ್ಯ. ಮಾಲೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಗಳನ್ನು ನಾಪತ್ತೆ ಮಾಡುವಲ್ಲಿ ಎನ್‌ಐಎ ಯಶಸ್ವಿಯಾಗಿದೆ. ಸಾಕ್ಷಿ ಹೇಳಿದವರೀಗ ‘ದೌರ್ಜನ್ಯಕ್ಕೆ ಹೆದರಿ ಆ ಹೇಳಿಕೆ ನೀಡಿದ್ದೆವು’ ಎಂದು ತಮ್ಮ ಮಾತು ಬದಲಿಸಿದ್ದಾರೆ. ಇದಕ್ಕೂ ಎನ್‌ಐಎ ಸಾಕಷ್ಟು ಶ್ರಮ ಪಟ್ಟಿದೆ. ಇವೆಲ್ಲದರ ಬೆನ್ನಿಗೇ, ಕರ್ಕರೆಯ ತನಿಖೆಯಲ್ಲಿ ಲೋಪವಿದೆ ಎಂದೂ ಎನ್‌ಐಎ ಹೇಳುತ್ತಿದೆ. ಕರ್ಕರೆ ಈ ತನಿಖೆಯನ್ನು ತನ್ನ ಜೀವ ಒತ್ತೆಯಿಟ್ಟು ಮಾಡಿದ್ದರು. ಈ ತನಿಖೆ ನಡೆಸುತ್ತಿದ್ದ ಬೆನ್ನಿಗೇ ಅವರಿಗೆ ಜೀವ ಬೆದರಿಕೆಗಳ ಸರಮಾಲೆಯೇ ಎದುರಾಗಿದ್ದವು. ಕರ್ಕರೆ ಮತ್ತು ಅವರ ಬಳಗ ಇಂದು ಜೀವಂತ ಇರುತ್ತಿದ್ದರೆ, ಈ ದೇಶದ ಉದ್ದಗಲಕ್ಕೆ ಹರಡಿಕೊಂಡ ಕೇಸರಿ ಉಗ್ರರು ಮತ್ತು ಅವರು ದೇಶಕ್ಕೆ ಎಸಗಿದ ಹತ್ತು ಹಲವು ವಿದ್ರೋಹದ ಪ್ರಕರಣಗಳು ಬಹಿರಂಗವಾಗುತ್ತಿದ್ದವು. ಈ ಕಾರಣದಿಂದ ಕರ್ಕರೆ ಮತ್ತು ಅವರ ತಂಡವನ್ನು ಮುಗಿಸುವುದು ಕೇಸರಿ ಉಗ್ರರಿಗೆ ಅತ್ಯಗತ್ಯವಾಗಿತ್ತು. ಮುಂಬೈ ದಾಳಿ ಎನ್ನುವ ನಿಗೂಢ ಪ್ರಕರಣದಲ್ಲಿ ನೂರಾರು ಅಮಾಯಕರು ಬಲಿಯಾಗಿರುವುದು ಮಾತ್ರವಲ್ಲ, ಕೇಸರಿ ಉಗ್ರರ ಕುರಿತಂತೆ ತನಿಖೆ ನಡೆಸಿದ ಎಲ್ಲ ಪ್ರಮುಖ ಅಧಿಕಾರಿಗಳೂ ಅತ್ಯಂತ ಅನಾಯಾಸವಾಗಿ ಬಲಿಯಾದರು. ಇದೀಗ ಅವರು ನಡೆಸಿದ ತನಿಖೆಯನ್ನು ಕಸದಬುಟ್ಟಿಗೆ ಹಾಕಿ, ಉಗ್ರರನ್ನು ಬಿಡುಗಡೆ ಮಾಡಲು ದಾರಿ ಮಾಡಿಕೊಡುವ ಮೂಲಕ ಕರ್ಕರೆ ಮತ್ತು ಅವರ ಬಳಗದ ಬಲಿದಾನಕ್ಕೆ ಅವಮಾನಮಾಡಲಾಗಿದೆ. ಮುಂದಿನ ದಿನಗಳಲ್ಲಿ ಯಾವ ಅಧಿಕಾರಿಗಳೂ ಉಗ್ರರ ವಿರುದ್ಧ ತಮ್ಮ ಜೀವ ಒತ್ತೆಯಿಟ್ಟು ತನಿಖೆ ನಡೆಸುವಂತಹ ಸನ್ನಿವೇಶ ನಿರ್ಮಾಣವಾಗಲಾರದು. ತನಿಖಾಧಿಕಾರಿಗಳ ನೈತಿಕ ಸ್ಥೈರ್ಯವೇ ಮಾಲೆಗಾಂವ್ ಪ್ರಕರಣದಲ್ಲಿ ಕುಸಿದು ಹೋಗಿದೆ.

 ಇಂದು ಕೇಂದ್ರ ಸರಕಾರ, ಪಾಕಿಸ್ತಾನದ ಉಗ್ರರ ಮೇಲೆ ಕ್ರಮ ಕೈಗೊಳ್ಳಲು ಅಲ್ಲಿನ ಸರಕಾರಕ್ಕೆ ಒತ್ತಡ ಹೇರುತ್ತಿದೆ. ಇತ್ತ ಉಗ್ರರ ಕುರಿತಂತೆ ಚೀನಾದ ನಿಲುವನ್ನು ಟೀಕಿಸುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ತನ್ನದೇ ನೆಲದ ಉಗ್ರರ ಕುರಿತಂತೆ ಸರಕಾರ ದ್ವಂದ್ವ ನಿಲುವನ್ನು ತಾಳಿದೆ. ಹೀಗಿರುವಾಗ, ಅದು ಹೊರಗಿನ ಸರಕಾರಕ್ಕೆ ಯಾವ ನೈತಿಕತೆಯ ಆಧಾರದ ಮೇಲೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಹೇಳುತ್ತದೆ? ತನ್ನ ಕಾಲ ಬುಡದಲ್ಲೇ ಹರಡಿಕೊಂಡಿರುವ ಉಗ್ರರಿಗೆ ಹಾಲೆರೆಯುತ್ತಾ, ವಿದೇಶಿ ಉಗ್ರರನ್ನು ಮಟ್ಟ ಹಾಕಲು ಹೊರಡುವುದು ಎರಡು ಹುಲಿಗಳ ಮೇಲೆ ಸವಾರಿ ಮಾಡಿದಂತೆ. ಅಂತಿಮವಾಗಿ ಅದು ಸವಾರಿ ಮಾಡಿದವರನ್ನೇ ತಿನ್ನುತ್ತದೆ. ಜೊತೆಗೆ ಈ ದೇಶದ ಪ್ರಜಾಸತ್ತೆಯನ್ನೂ ಕೂಡ ಆಹುತಿ ತೆಗೆದುಕೊಳ್ಳುವ ದಿನ ಬರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News