ಯು.ಆರ್.ಅನಂತಮೂರ್ತಿ ದ್ವಿಮಾನ ಮನಸ್ಥಿತಿವುಳ್ಳವರಾಗಿದ್ದರು: ಸಿ.ಎನ್.ಆರ್.

Update: 2016-05-19 18:06 GMT

ಬೆಂಗಳೂರು, ಮೇ 19: ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ಯು.ಆರ್.ಅನಂತ ಮೂರ್ತಿ ದ್ವಿಮಾನ ಮನಸ್ಥಿತಿವುಳ್ಳವರಾಗಿದ್ದು, ತಮ್ಮ ಕೃತಿಗಳಲ್ಲಿ ಇಂತಹ ಮನಸ್ಥಿತಿಯನ್ನೇ ಪ್ರಮುಖ ಪಾತ್ರಗಳಲ್ಲಿ ತಂದಿದ್ದಾರೆ ಎಂದು ಹಿರಿಯ ವಿಮರ್ಶಕ ಸಿ.ಎನ್.ರಾಮಚಂದ್ರನ್ ಅಭಿಪ್ರಾಯಿಸಿದ್ದಾರೆ.
ಗುರುವಾರ ಸಾಹಿತ್ಯ ಅಕಾಡಮಿ ನಗರದ ಕಸಾಪದಲ್ಲಿ ಆಯೋಜಿಸಿದ್ದ ‘ಯು.ಆರ್.ಅನಂತಮೂರ್ತಿ: ಜೀವನ ಮತ್ತು ದರ್ಶನ’ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯು.ಆರ್.ಅನಂತಮೂರ್ತಿಯವರ ಸಾಹಿತ್ಯವನ್ನು ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡುವುದರ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ಅರಿಯಬೇಕು ಎಂದು ತಿಳಿಸಿದರು.
ಡಾ.ಯು. ಆರ್.ಅನಂತಮೂರ್ತಿ ಮೂಲತಃ ಬಂಡುಕೋರ ಮನಸ್ಥಿತಿವುಳ್ಳವರಾಗಿದ್ದರು. ಯಥಾಸ್ಥಿತಿ ವಾದವನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಪ್ರತಿಯೊಂದು ವಿಷಯಕ್ಕೂ ಹಲವು ದೃಷ್ಟಿಕೋನಗಳಿರುವುದನ್ನು ನಂಬುತ್ತಿದ್ದರು. ಒಂದು ಸಿದ್ಧಾಂತಕ್ಕೆ ಅವರೆಂದಿಗೂ ಜೋತು ಬೀಳುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಿಸಿದರು.
  ಯು.ಆರ್.ಅನಂತಮೂರ್ತಿ ದ್ವಿಮಾನ ಮನಸ್ಥಿತಿ ವುಳ್ಳವರು ಎಂಬುದಕ್ಕೆ ಎರಡು ಕಾಲಘಟ್ಟಗಳನ್ನು ಉದಾಹರಿಸಬಹುದಾಗಿದೆ. 1960ರಿಂದ 1970ರವರೆಗೆ ಅವರು ಸಮಾಜದಲ್ಲಿದ್ದ ಯಥಾಸ್ಥಿತಿ ವಾದವನ್ನು ಕಟುವಾಗಿ ವಿರೋಧಿಸಿ, ಪಾಶ್ಚಾತ್ಯ ಸಂಸ್ಕೃತಿಯತ್ತ ಒಲವು ತೋರುತ್ತಿದ್ದರು. ಆದರೆ, 1990ರ ನಂತರದ ಆಧುನಿಕತೆಯ ಪರಿಣಾಮವಾಗಿ ಅವರ ಮನಸ್ಥಿತಿ ವಿರುದ್ಧ ದಿಕ್ಕಿನಲ್ಲಿ ಚಲಿಸಲಾರಂಭಿಸಿತು ಎಂದು ಸಿ.ಎನ್.ರಾಮಚಂದ್ರನ್ ವಿಶ್ಲೇಷಿಸಿದರು.
 1990ರ ಪ್ರಾರಂಭದಲ್ಲಿ ಜಾಗತೀಕರಣ ಹಾಗೂ ಆಧುನಿಕತೆಯ ಪರಿಣಾಮದಿಂದ ದೇಶದಲ್ಲಾದ ಬದಲಾವಣೆ ಕುರಿತು ಯು.ಆರ್.ಅನಂತಮೂರ್ತಿ ಬೇಸರ ವ್ಯಕ್ತಪಡಿಸುತ್ತಿದ್ದರು. ಆಧುನಿಕತೆಯ ಪರಿಣಾಮ ಪಾಶ್ಚಾತ್ಯ ಸಂಸ್ಕೃತಿಯು ನಮ್ಮ ದೇಶದ ಪರಂಪರೆಯನ್ನು ಹಾಳು ಮಾಡುತ್ತಿದೆ. ಐಟಿ ಉದ್ಯೋಗಿಗಳು ಕೂಲಿ ಕಾರ್ಮಿಕರಿಗಿಂತ ಕೀಳಾಗಿ ಜೀವನ ನಡೆಸುತ್ತಿದ್ದಾರೆ ಎಂದು ಅಭಿಪ್ರಾಯಿಸುತ್ತಿದ್ದರು. ಇದು ಯು.ಆರ್.ಅನಂತಮೂರ್ತಿ ಯಾವುದೇ ಒಂದು ಸಿದ್ಧಾಂತಕ್ಕೆ ಜೋತು ಬೀಳುತ್ತಿರಲಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಅವರು ತಿಳಿಸಿದರು.
 ಸಾರ್ವಜನಿಕರ ವ್ಯಕ್ತಿಯಾದ ಕೂಡಲೇ ಒಳ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾನೆ ಎಂಬುದಕ್ಕೆ ಡಾ.ಯು.ಆರ್.ಅನಂತಮೂರ್ತಿ ಉದಾಹರಣೆಯಾಗಿದ್ದಾರೆ. 1990ರ ನಂತರ ಹಾಗೂ ಜ್ಞಾನಪೀಠ ಪ್ರಶಸ್ತಿ ಬಂದ ನಂತರ ದೇಶದಾದ್ಯಂತ ಪ್ರಸಿದ್ಧಿ ಪಡೆದರು. ಹೀಗಾಗಿ ಅವರ ಪ್ರತಿಯೊಂದು ಹೇಳಿಕೆಯನ್ನು ಇಡೀ ತೃತೀಯ ಜಗತ್ತು ಕಿವಿಗೊಟ್ಟು ಕೇಳುತ್ತಿತ್ತು. ಹೀಗಾಗಿ ಅವರ ಮೇಲೆ ಕೆಲವು ಶಕ್ತಿಗಳು ಹಿಡಿತ ಸಾಧಿಸಿದವು ಎಂದು ಅವರು ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News