ಮೇಲ್ಮನೆ ಎಂಬ ವ್ಯಂಗ್ಯ

Update: 2016-05-24 18:36 GMT

ರಾಜ್ಯಸಭೆಯನ್ನು ಮೇಲ್ಮನೆ ಎಂದು ನಾವು ಕರೆಯುತ್ತೇವೆ. ‘ಹಿರಿಯರ ಮನೆ’ ಎಂದೂ ಅದನ್ನು ಕರೆಯುವುದಿದೆ. ಮುತ್ಸದ್ದಿಗಳು, ಹಿರಿಯ ಚಿಂತಕರು ಈ ಮನೆಯನ್ನು ಪ್ರತಿನಿಧಿಸುವುದರಿಂದ ಹಿರಿಯರ ಮನೆ ಎಂದು ಕರೆಯಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವಯಸ್ಸಾದವರ ಅಥವಾ ನಿವೃತ್ತರ ಮನೆ ಎಂದು ಇದು ಅರ್ಥ ಪಡೆದುಕೊಳ್ಳುತ್ತಿದೆ. ಕೆಳಮನೆಗೆ ಮಾರ್ಗದರ್ಶನ ನೀಡಲು, ತಮ್ಮ ಬೌದ್ಧಿಕ ಚಿಂತನೆಯ ಮೂಲಕ ಕೆಳಮನೆ ದಾರಿ ತಪ್ಪಿದಾಗ ತಿದ್ದಲು ರಾಜ್ಯಸಭೆ ಅಸ್ತಿತ್ವದಲ್ಲಿದೆ ಎಂದು ನಾವು ಒಂದು ಕಾಲದಲ್ಲಿ ನಂಬಿದ್ದೆವು. ಉಪಸ್ಥಿತರಿರುವವರು, ವಿವಿಧ ರಾಜ್ಯಗಳನ್ನು, ಪ್ರದೇಶಗಳನ್ನು ಪ್ರತಿನಿಧಿಸುವ ಹಿರಿಯರಾಗಿರುವುದರಿಂದ, ಆಡಳಿತದ ಸಮಗ್ರತೆಯ ದೃಷ್ಟಿಯಿಂದ ರಾಜ್ಯಸಭೆಯನ್ನು ಉಳಿಸಿಕೊಳ್ಳುವುದು ಅಗತ್ಯ ಎಂದು ಈಗಲೂ ರಾಜಕೀಯ ಪಂಡಿತರು ಅಭಿಪ್ರಾಯ ಪಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯಸಭೆಗೆ ಪ್ರತಿನಿಧಿಸಲ್ಪಡುವವರ ಹಿನ್ನೆಲೆ ನೋಡಿದರೆ ನಿಜಕ್ಕೂ ‘ರಾಜ್ಯಸಭೆ’ ಎನ್ನುವ ಮನೆಯ ಅಗತ್ಯವಿದೆಯೇ? ಎಂಬ ಪ್ರಶ್ನೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಇಂದು ರಾಜ್ಯಸಭೆಗೆ ಪ್ರತಿನಿಧಿಗಳನ್ನು ಪಕ್ಷಗಳು ಯಾವ ಮಾನದಂಡದಲ್ಲಿ ಆಯ್ಕೆ ಮಾಡುತ್ತವೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.ಇಂದು ರಾಜ್ಯಸಭೆ ಮತ್ತು ವಿಧಾನಪರಿಷತ್ ಆಯ್ಕೆಯ ಸಂದರ್ಭಗಳಲ್ಲಿ ಪಕ್ಷಗಳು ಎರಡು ಮುಖ್ಯಮಾನದಂಡಗಳನ್ನು ಅನುಸರಿಸುತ್ತವೆ.

ಒಂದು, ವರಿಷ್ಠರಿಗೆ ಹತ್ತಿರವಿರುವ, ಆದರೆ ಜನರಿಗೆ ದೂರವಿರುವ, ಚುನಾವಣೆಯಲ್ಲಿ ಗೆಲ್ಲಲು ಅಸಾಧ್ಯವಿರುವ ಪಕ್ಷದ ಹಿರಿಯರಿಗೆ ಆಶ್ರಯ ಕಲ್ಪಿಸಲು ರಾಜ್ಯಸಭೆಯನ್ನು ಹಾಗೂ ವಿಧಾನಪರಿಷತ್‌ನ್ನು ಬಳಸಿಕೊಳ್ಳಲಾಗುತ್ತಿದೆ. ಈ ಮೂಲಕ, ರಾಜ್ಯಸಭೆ ವೃದ್ಧಾಶ್ರಮ, ನಿರಾಶ್ರಿತರ ಶಿಬಿರ ಎಂದೂ ಕುಹಕಕ್ಕೆ ಒಳಗಾಗಿದೆ. ಉಳಿದಂತೆ, ರಾಜ್ಯಸಭೆಗಳಿಗೆ ಒಬ್ಬನ ಆಯ್ಕೆಯ ಪ್ರಮುಖ ಮಾನದಂಡವೇ ಹಣ. ಹಣ ಸಂಗ್ರಹ ಅಂದರೆ ಪಾರ್ಟಿ ಫಂಡ್‌ಗಾಗಿ ರಾಜ್ಯಸಭಾ ಸ್ಥಾನಗಳನ್ನು ಮಾರಿಕೊಳ್ಳುವುದಕ್ಕೆ ಪಕ್ಷಗಳು ಆದ್ಯತೆಗಳನ್ನು ನೀಡುತ್ತಿವೆ. ಕೆಲವೊಮ್ಮೆ ಒಂದೊಂದು ಮತಕ್ಕೂ ಇಷ್ಟಿಷ್ಟು ಕೋಟಿ ಎಂದು ನಿಗದಿಯಾಗಿ ಬಿಡುತ್ತದೆ. ಈ ಹಿಂದೆ ಜೆಡಿಎಸ್‌ನ ಮುಖಂಡರಾದ ಕುಮಾರಸ್ವಾಮಿ ಬಹಿರಂಗವಾಗಿಯೇ ಇದನ್ನು ಹೇಳಿಕೊಂಡಿದ್ದರು. ಪಕ್ಷದ ನಾಯಕನನ್ನು ಬದಿಗಿಟ್ಟು, ಶಾಸಕನೇ ನೇರವಾಗಿ ವ್ಯವಹಾರಕ್ಕಿಳಿದು ಬಿಡುವ ಸಂದರ್ಭವೂ ಬರುತ್ತದೆ. ಈ ಕಾರಣದಿಂದ, ರಾಜ್ಯಸಭೆ ಮತ್ತು ವಿಧಾನಪರಿಷತ್‌ನಲ್ಲಿ ಅನರ್ಹರ ಒಂದು ದೊಡ್ಡ ದಂಡೇ ಇದೆ. ವಿಜಯ ಮಲ್ಯರನ್ನೇ ಇದಕ್ಕೆ ಅತ್ಯಂತ ಉತ್ತಮ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಔದ್ಯಮಿಕವಾಗಿ ಪತನದಂಚಿನಲ್ಲಿರುವ ಹೊತ್ತಿನಲ್ಲಿ ವಿಜಯ ಮಲ್ಯ ಅವರಿಗೆ ಕಟ್ಟ ಕಡೆಯ ಆಸರೆಯಾಗಿದ್ದು ರಾಜ್ಯಸಭೆ. ಜೆಡಿಎಸ್ ಅವರನ್ನು ಆಯ್ಕೆ ಮಾಡಿ ರಾಜ್ಯಸಭೆಗೆ ಕಳುಹಿಸಿತು.

ನಾಡಿಗೆ, ದೇಶಕ್ಕೆ ಯಾವ ಕೊಡುಗೆ ನೀಡಿದರೆಂದು ನೀವು ಮಲ್ಯ ಅವರನ್ನು ರಾಜ್ಯಸಭೆಗೆ ಕಳುಹಿಸಿದಿರಿ ಎಂದು ಕೇಳಿದರೆ ದೇವೇಗೌಡರ ಬಳಿ ವೌನವೇ ಉತ್ತರ. ರಾಜ್ಯಸಭೆಯಲ್ಲಿ ಈ ನಾಡಿನ ಪ್ರಗತಿಗಾಗಿ, ಏಳಿಗೆಗಾಗಿ ಒಮ್ಮೆಯೂ ತುಟಿ ತೆರೆದವರಲ್ಲ ಮಲ್ಯ. ಜೊತೆಗೆ ತನ್ನ ರಾಜ್ಯಸಭಾ ಸ್ಥಾನವನ್ನು ಬಳಸಿಕೊಂಡು, ಬ್ಯಾಂಕ್‌ಗಳ ಅಧಿಕಾರಿಗಳನ್ನು ಇನ್ನಷ್ಟು ಸುಲಭವಾಗಿ ಮೋಸಗೊಳಿಸಲು ಅವರಿಗೆ ಸಾಧ್ಯವಾಯಿತು. ಸಣ್ಣ ಪುಟ್ಟ ಭತ್ತೆಯನ್ನು ಕೂಡ ಬಿಡದೆ ಜೇಬಿಗಿಳಿಸಿಕೊಂಡ ಮಲ್ಯ, ಅಂತಿಮವಾಗಿ ಈ ದೇಶಕ್ಕೆ ಸಹಸ್ರಾರು ಕೋಟಿ ಹಣವನ್ನು ವಂಚಿಸಿ ವಿದೇಶದಲ್ಲಿ ಅಡಗಿಕೊಂಡರು. ವಿಜಯ ಮಲ್ಯರ ವಂಚನೆಯಲ್ಲಿ ನಮ್ಮ ರಾಜಕಾರಣಿಗಳ ಪಾಲು ಬಹುದೊಡ್ಡದು ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂದು ಯಾವ ರಾಜಕಾರಣಿಗಳೂ ಮಲ್ಯ ಮಾಡಿರುವ ವಂಚನೆಯ ಹೊಣೆಯನ್ನು ಹೊತ್ತುಕೊಳ್ಳಲು ಸಿದ್ದರಿಲ್ಲ. ಅಂತಹ ನೂರಾರು ಮಲ್ಯರು ವಿವಿಧ ರಾಜ್ಯಗಳಿಂದ ರಾಜ್ಯಸಭೆಗಳಿಗೆ ಆಗಿ ಹೋಗಿದ್ದಾರೆ. ಇವರಿಗಾಗಿ ಜನರ ತೆರಿಗೆಯ ಹಣ ಪ್ರತಿವರ್ಷ ಹಲವು ಕೋಟಿ ವ್ಯಯವಾಗುತ್ತದೆ. ಆದರೆ ಪ್ರತಿಯಾಗಿ ಇವರಿಂದ ದೇಶಕ್ಕೆ ದೊರಕುವುದು ಶೂನ್ಯ. ಬದಲಿಗೆ ಅವರು ಪಡೆದುಕೊಳ್ಳುವ ಲಾಭ, ಮಲ್ಯನಂತಹವರು ಮಾಡುವ ವಂಚನೆಯನ್ನು ಪ್ರತ್ಯೇಕವಾಗಿಯೇ ಉಲ್ಲೇಖಿಸಬೇಕಾಗುತ್ತದೆ. ಕನಿಷ್ಠ ವಿವಿಧ ರಾಜ್ಯಗಳ ಮುಖಂಡರು, ತಮ್ಮ ತಮ್ಮ ನಾಡಿನ ಹಿತಾಸಕ್ತಿಯನ್ನು ಇಟ್ಟುಕೊಂಡು ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸಿದರೆ ಅರ್ಧ ಸಮಸ್ಯೆ ಪರಿಹಾರವಾಗುತ್ತದೆ. ಆದರೆ ವಿವಿಧ ರಾಷ್ಟ್ರೀಯ ಪಕ್ಷಗಳೇ ಇದರಲ್ಲಿ ಸೋತಿರುವಾಗ, ಇನ್ನು ಅಳಿದುಳಿದ ಪ್ರಾದೇಶಿಕ ಪಕ್ಷಗಳನ್ನು ನಾವು ದೂರಿ ಪ್ರಯೋಜನವೇ ಇಲ್ಲ. ಕರ್ನಾಟಕದಲ್ಲೇ ಗಮನಿಸಿ. ಇಲ್ಲಿಂದ ರಾಜ್ಯಸಭೆಗೆ ಬಿಜೆಪಿ ಪ್ರತಿಬಾರಿ ವೆಂಕಯ್ಯನಾಯ್ಡು ಅವರನ್ನು ಆರಿಸಿ ಕಳುಹಿಸುತ್ತದೆ. ಕರ್ನಾಟಕದಿಂದ ಇದರ ವಿರುದ್ಧ ಈ ಹಿಂದೆಯೇ ಟೀಕೆಗಳು ಕೇಳಿ ಬಂದಿದ್ದವಾದರೂ, ನಾಯ್ಡು ಅವರನ್ನು ಕರ್ನಾಟಕ ರಾಜ್ಯದಿಂದ ಹೊರಗಿಡುವಲ್ಲಿ ಪಕ್ಷದ ವರಿಷ್ಠರು ಸಂಪೂರ್ಣ ವಿಫಲವಾಗಿದ್ದಾರೆ. ವೆಂಕಯ್ಯನಾಯ್ಡು ಅವರಿಗೆ ನೇರವಾಗಿ ಚುನಾವಣೆಯನ್ನು ಎದುರಿಸಿ ಗೆಲ್ಲುವ ಧೈರ್ಯವಿಲ್ಲ. ಹಾಗೆಂದು, ಪಕ್ಷದೊಳಗೆ ಅವರ ವರ್ಚಸ್ಸು ಕೆಲಸ ಮಾಡುತ್ತದೆ. ರಾಜ್ಯಸಭೆಗೂ ಆಂಧ್ರದಿಂದ ಕಳುಹಿಸುವ ಪರಿಸ್ಥಿತಿ ಬಿಜೆಪಿಗಿಲ್ಲ.

ಈ ಎಲ್ಲ ಕಾರಣದಿಂದ ಅವರು ಪ್ರತಿ ಬಾರಿ ಕರ್ನಾಟಕದಿಂದಲೇ ಆಯ್ಕೆಯಾಗುತ್ತಿದ್ದಾರೆ. ಸರಿ. ತನ್ನನ್ನು ಕರ್ನಾಟಕದ ಪ್ರತಿನಿಧಿಯಾಗಿ ಕಳುಹಿಸುತ್ತಿದ್ದಾರೆ ಎನ್ನುವ ಋಣವನ್ನಾದರೂ ರಾಜ್ಯಸಭೆಯಲ್ಲಿ ಸಂದಾಯ ಮಾಡುತ್ತಿದ್ದಾರೆಯೇ ಎಂದು ಕೇಳಿದರೆ ಅದೂ ಇಲ್ಲ. ಈವರೆಗೆ ಕನ್ನಡದ ಪರವಾಗಿ ಒಂದು ಸಾಲು ಮಾತನಾಡಿದವರಲ್ಲ. ಕರ್ನಾಟಕ ಮತ್ತು ಆಂಧ್ರಗಳ ನಡುವೆ ವಿವಾದಗಳು ಎದ್ದಾಗ, ಸಹಜವಾಗಿಯೇ ಅವರು ಆಂಧ್ರದ ಪರವಾಗಿ ನಿಂತವರು. ಎಲ್ಲ ಬಿಡಿ. ಒಂದು ಸಾಲು ಕನ್ನಡ ಮಾತನಾಡುವುದಕ್ಕೂ ಅವರು ಕಲಿತಿಲ್ಲ. ಹೀಗಿರುವಾಗ, ಕರ್ನಾಟಕ ಜನಪ್ರತಿನಿಧಿಗಳು ಯಾಕಾಗಿ ಅವರನ್ನು ರಾಜ್ಯದ ಪರವಾಗಿ ದಿಲ್ಲಿಗೆ ಕಳುಹಿಸಬೇಕು? ಇದನ್ನು ಸ್ಪಷ್ಟಪಡಿಸಬೇಕಾದವರು ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ. ಕನ್ನಡಪರವಾಗಿ ಸಾರ್ವಜನಿಕವಾಗಿ ಕಾಳಜಿ ವ್ಯಕ್ತಪಡಿಸುವ ಬಿಜೆಪಿ ನಾಯಕರು ಜನರಿಗೆ ಉತ್ತರಿಸಬೇಕಾಗಿದೆ. ಈ ಬಾರಿ ವೆಂಕಯ್ಯ ನಾಯ್ಡು ಮರು ಆಯ್ಕೆ ಬಯಸುತ್ತಿದ್ದಾರೆ. ರಾಜ್ಯ ಬಿಜೆಪಿಯ ನಾಯಕರು, ಕೇಂದ್ರದ ವರಿಷ್ಠರ ಆಜ್ಞೆಗೆ ತಲೆಬಾಗುತ್ತಾರೆಯೋ ಅಥವಾ ಕನ್ನಡದ ಹಿತಾಸಕ್ತಿಯನ್ನು ಎತ್ತಿ ಹಿಡಿಯುತ್ತಾರೆಯೋ ಎನ್ನುವುದನ್ನು ಕಾದು ನೋಡಬೇಕಾಗಿದೆ. ಇದು ಕೇವಲ ನಾಯ್ಡು ಅವರ ಆಯ್ಕೆಗಷ್ಟೇ ಸೀಮಿತವಾಗಿಲ್ಲ. ಬೇರೆ ಬೇರೆ ಪಕ್ಷಗಳಿಂದ ಪರರಾಜ್ಯದ ಪ್ರತಿನಿಧಿಗಳು ಕರ್ನಾಟಕದ ಮೂಲಕ ಸದ್ದುಗದ್ದಲವಿಲ್ಲದೆ ಆಯ್ಕೆಯಾಗುತ್ತಿದ್ದಾರೆ. ಆಯ್ಕೆಯಾಗುವ ಅವರಿಗೆ ತಮಿಳು, ತೆಲುಗು ಬಿಟ್ಟರೆ ಬೇರೆ ಭಾಷೆಯೇ ಗೊತ್ತಿಲ್ಲ.

ಒಂದೆಡೆ ಸಾಮಾಜಿಕ, ರಾಜಕೀಯ ಕ್ಷೇತ್ರಗಳ ಅರಿವೇ ಇಲ್ಲದ, ಯಾವುದೇ ವೌಲ್ಯಗಳನ್ನು ಮೈಗೂಡಿಸಿಕೊಳ್ಳದ ಅಪ್ಪಟ ಉದ್ಯಮಿಗಳನ್ನು ಹಣದ ಉದ್ದೇಶದಿಂದ ಆಯ್ಕೆ ಮಾಡುವುದು, ರಾಜಕೀಯ ಕಾರಣಗಳಿಗಾಗಿ ಬೇರೆ ರಾಜ್ಯದ ನಾಯಕರನ್ನು ಅಥವಾ ನಿಷ್ಪ್ರಯೋಜಕ ವೃದ್ಧ ನಾಯಕರನ್ನು ಆಯ್ಕೆ ಮಾಡುವುದು ನಿಲ್ಲಬೇಕು. ಇಲ್ಲವಾದರೆ ಮುಂದೊಂದು ದಿನ, ಇಡೀ ರಾಜ್ಯಸಭೆ ಪ್ರಜಾಸತ್ತೆಯ ಬಹುದೊಡ್ಡ ವ್ಯಂಗ್ಯವಾಗಿ ಗುರುತಿಸಿಕೊಳ್ಳಬಹುದು. ರಾಜ್ಯಸಭೆಯನ್ನೇ ವಿಸರ್ಜಿಸಬೇಕಾದ ಸನ್ನಿವೇಶ ನಿರ್ಮಾಣವಾಗಬಹುದು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯದ ವಿವಿಧ ಪಕ್ಷಗಳ ವರಿಷ್ಠರು ಎಚ್ಚೆತ್ತು, ರಾಜ್ಯಸಭೆ ಮತ್ತು ವಿಧಾನಪರಿಷತ್‌ನ ಘನತೆಯನ್ನು ಉಳಿಸಲು ಮುಂದಾಗಬೇಕು. ನಾಡಿನ ಜನರ ತೆರಿಗೆಯ ಹಣ, ಪಕ್ಷಗಳ ನಾಯಕರ ಸ್ವಾರ್ಥಕ್ಕೆ ಬಳಕೆಯಾಗದೆ, ನಾಡಿನ ಹಿತಾಸಕ್ತಿಗೆ ಬಳಕೆಯಾಗುವಂತಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News