ಬೆಂಗಳೂರಿನಲ್ಲಿ ತಮಿಳುನಾಡಿನ ತಾಳೆ ಹಣ್ಣಿಗೆ' ಭಾರೀ ಬೇಡಿಕೆ: ಖರೀದಿಗೆ ಮುಗಿಬಿದ್ದ ಜನರು

Update: 2024-04-29 08:08 GMT

ಬೆಂಗಳೂರು: ಬೇಸಿಗೆ ಶುರವಾಗುತ್ತಿ ದ್ದಂತೆ ಬೆಂಗಳೂರಿನಾದ್ಯಂತ ತಾಳೆ ಹಣ್ಣು ಮಾರಾಟ ಮಾಡುವುದು ಸರ್ವೇ ಸಾಮಾನ್ಯ ವಾಗಿದ್ದು, ತಾಳೆ ಹಣ್ಣು ಖರೀದಿಗೆ ನಗರದ ಜನ ಮುಗಿಬಿದ್ದಿದ್ದಾರೆ. ಕೆ.ಆರ್.ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ತಾಳೆ ಹಣ್ಣಿನ ಬುಟ್ಟಿ ಬರುತ್ತಿದ್ದಂತೆ, ಖಾಲಿಯಾಗಿ ಉತ್ತಮ ವ್ಯಾಪಾರವಾಗುತ್ತಿದೆ.

ಬೇಸಿಗೆ ಕಾಲದಲ್ಲಿ ದಾಹವನ್ನು ತಣಿಸಲು ಎಳನೀರು, ನಿಂಬೆಹಣ್ಣು, ಕರಬೂಜ ಹಣ್ಣಿನಂತೆ ತಾಳೆಹಣ್ಣು ನಿಸರ್ಗದತ್ತವಾಗಿ ನಮಗೆ ಸಿಗುತ್ತದೆ. ಇವೆಲ್ಲವೂ ಬೇಸಿಗೆ ಕಾಲದಲ್ಲಿ ಜನರ ದೇಹವನ್ನು ತಂಪು ಮಾಡಲು ಉಪಯುಕ್ತವಾಗುತ್ತವೆ. ಹೀಗಾಗಿ ಬೆಂಗಳೂರಿನಲ್ಲಿ ಯಥೇಚ್ಚವಾಗಿ ತಾಳೆ ಹಣ್ಣನ್ನು ಮಾರಾಟ ಮಾಡಲಾಗುತ್ತಿದೆ. ನಗರದಲ್ಲಿ ಹಿಂದೆಂದೂ ಕಾಣದ ಬಿಸಿಲು ಇರುವ ಕಾರಣ ಗ್ರಾಹಕರು ತಾಳೆ ಹಣ್ಣನ್ನು ಹೆಚ್ಚಾಗಿ ಕೊಂಡುಕೊಳ್ಳುತ್ತಿದ್ದಾರೆ.

ತಾಳೆ ಹಣ್ಣು ವರ್ಷಕ್ಕೆ ಕೇವಲ ಒಂದು ಬಾರಿ ಬರುವ ಬೆಳೆಯಾ ಗಿದ್ದು, ಮಧ್ಯಾಹ್ನದ ಬಿಸಿಲಿನಲ್ಲಿ ತಾಳೆ ಹಣ್ಣಿನ ಜ್ಯೂಸ್ ಅಥವಾ ಹಣ್ಣಿನ ತೊಳೆಗಳನ್ನು ತಿನ್ನಬೇಕು ಎಂದು ಪ್ರತಿಯೊಬ್ಬರೂ ಅಂದುಕೊಳ್ಳುತ್ತಾರೆ.

ಬೆಂಗಳೂರಿನಲ್ಲಿ ತಾಳೆ ಹಣ್ಣನ್ನು ಸಿಯಾಳದಂತೆ ಗೊಂಚಲನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುತ್ತಾರೆ. ಕೆಲವು ಕಡೆಗಳಲ್ಲಿ ಸುಲಿದ ತೊಳೆಗಳನ್ನು ಮಾರಾಟ ಮಾಡುತ್ತಿರುತ್ತಾರೆ. ಬೆಂಗಳೂರಿಗೆ ಹೆಚ್ಚಾಗಿ ತಮಿಳುನಾಡಿನಿಂದ ತಾಳೆ ಹಣ್ಣು ಪೂರೈಕೆಯಾಗುತ್ತಿವೆ.

ಬೇಸಿಗೆ ಕಾಲದಲ್ಲಿ ಕೆಲವರಿಗೆ ರಕ್ತದೊತ್ತಡದಲ್ಲಿ ಏರುಪೇರು ಉಂಟಾಗುತ್ತದೆ. ಇದರಿಂದ ಆರೋಗ್ಯದಲ್ಲಿ ಸುಸ್ತು, ಆಯಾಸ ಜೊತೆಗೆ ಹೃದಯದ ತೊಂದರೆಗಳೂ ಕಾಣಿಸಿಕೊಳ್ಳುತ್ತವೆ. ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಪಡೆಯಲು ತಾಳೆ ಹಣ್ಣಿನ ಸೇವನೆ ಮಾಡಬಹುದು.

ಬೇಸಿಗೆ ಕಾಲದಲ್ಲಿ ಈ ದೇಹದಿಂದ ನೀರಿನ ಅಂಶ ಸಾಕಷ್ಟು ಪ್ರಮಾಣದಲ್ಲಿ ಬೆವರಿನ ರೂಪದಲ್ಲಿ ಹರಿದು ಹೊರಬರುತ್ತದೆ. ತಾಳೆ ಹಣ್ಣು ತಿನ್ನುವುದರಿಂದ ದೇಹದ ನೀರಿನ ಅಂಶದಲ್ಲಿ ಸಮತೋಲನ ಕಾಯುತ್ತದೆ.

ತಾಪಮಾನ ಕಡಿಮೆ ಮಾಡುವ ಗುಣ

ತಾಳೆ ಹಣ್ಣಿನಲ್ಲಿ ದೇಹದ ತಾಪಮಾನವನ್ನು ತಂಪು ಮಾಡುವ ಗುಣ ಲಕ್ಷಣಗಳು ಹೆಚ್ಚಾಗಿವೆ. ಈ ಹಣ್ಣಿನಲ್ಲಿ ಕಾರ್ಬೋ ಹೈಡ್ರೇಟ್, ಫೈಟೊನ್ಯೂಟ್ರಿ ಯೆಂಟ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಕಡಿಮೆ ಕ್ಯಾಲರಿಗಳನ್ನು ಹೊಂದಿರುತ್ತದೆ, ಆದರೆ ಫೈಬರ್, ಪ್ರೋಟೀನ್ ಮತ್ತು ವಿಟಮಿನ್-ಸಿ,ಎ,ಇ ಮತ್ತು ಕೆಯಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದಲ್ಲದೇ, ಇದು ಕಬ್ಬಿಣ, ಪೊಟ್ಯಾಸಿಯಮ್, ಸತು ಮತ್ತು ರಂಜಕದಂತಹ ಖನಿಜಗಳನ್ನು ಹೊಂದಿರುತ್ತದೆ ಎಂದು ವೈದ್ಯರೊಬ್ಬರು ತಿಳಿಸಿದರು.

ಪ್ರತೀ ಬೇಸಿಗೆಯಲ್ಲಿ ತಮಿಳುನಾಡಿನಿಂದ ತಾಳೆ ಹಣ್ಣನ್ನು ತಂದು ಬೆಂಗಳೂರಿನಲ್ಲಿ ಮಾರುತ್ತೇವೆ. ಸುಲಿದಿರುವ ತಾಳೆ ಹಣ್ಣಿನ 5 ತೊಳೆಗಳನ್ನು 50 ರೂ.ಗೆ ಮಾರಾಟ ಮಾಡುತ್ತಿದ್ದೇವೆ. ಅರ್ಧ ಗಂಟೆಯಲ್ಲೇ ಒಂದು ಬುಟ್ಟಿ ತೊಳೆಗಳು ಮಾರಾಟವಾಗುತ್ತಿವೆ. ದಿನಕ್ಕೆ 1ಸಾವಿರ ರೂ.ನಿಂದ 1,500ರೂ.ಗಳ ವರೆಗೆ ಹಣ ಸಂಪಾದನೆ ಮಾಡುತ್ತಿದ್ದೇನೆ. ಹೆಚ್ಚು ಬಿಸಿಲು ಇರುವ ಕಾರಣ ತಾಳೆ ಹಣ್ಣಿಗೆ ಹೆಚ್ಚು ಬೇಡಿಕೆ ಇದೆ. ಜನರು ದೂರದಿಂದ ಹುಡುಕಿಕೊಂಡು ಬರುತ್ತಾರೆ.

-ರಾಜೇಶ್, ತಾಳೆ ಹಣ್ಣಿನ ಮಾರಾಟಗಾರ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಮಾಳಿಂಗರಾಯ ಕೆಂಭಾವಿ

contributor

Similar News