ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳಿಗೆ ಚಿತ್ರಕಲೆಯ ಮೆರುಗು!

Update: 2024-04-29 09:42 GMT

ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳಿಗೆ ಚಿತ್ರಕಲೆಯ ಮೆರುಗು!

ಉಡುಪಿ, ಎ.28: ಇಲ್ಲೊಬ್ಬ ಸಾಮಾಜಿಕ ಕಾರ್ಯಕರ್ತ ತನ್ನ ಸಂಪಾದನೆಯ ಒಂದಿಷ್ಟು ಹಣವನ್ನು ಗ್ರಾಮೀಣ ಪ್ರದೇಶ ಗಳಲ್ಲಿರುವ ಸರಕಾರಿ ಶಾಲೆಗಳ ಸೌಂದರ್ಯಕರಣ ಹಾಗೂ ಪ್ರಗತಿಗೆ ಮೀಸಲಿಡುತ್ತಿದ್ದಾರೆ. ಶಾಲಾ ಕಟ್ಟಡಗಳ ಗೋಡೆಗಳಿಗೆ ಬಣ್ಣ ಬಳಿದು ವಿವಿಧ ಚಿತ್ರಕಲಾ ಕೃತಿಗಳನ್ನು ರಚಿಸಿ ಮಕ್ಕಳನ್ನು ಸರಕಾರಿ ಶಾಲೆಗಳತ್ತ ಆಕರ್ಷಿಸುವಂತೆ ಮಾಡುತ್ತಿದ್ದಾರೆ.

ಈ ವಿಶಿಷ್ಟ ರೀತಿಯ ಸಮಾಜ ಸೇವೆಯನ್ನು ನಡೆಸುತ್ತಿರುವವರು ಕಾರ್ಕಳದ ಕೃಷಿಕರೂ, ಉದ್ಯಮಿಯೂ ಆಗಿರುವ ರೊನಾಲ್ಡ್ ವಲೇರಿಯನ್ ಲೋಬೊ. ಇವರು ಕಳೆದ ಹಲವು ವರ್ಷಗಳಿಂದ ಗ್ರಾಮೀಣ ಪ್ರದೇಶದ ಜನರಿಗೆ ನೇತ್ರ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಆಶ್ರಮಗಳ ನಿವಾಸಿಗಳ ಹುಟ್ಟು ಹಬ್ಬ ಆಚರಣೆ ಸೇರಿದಂತೆ ವಿವಿಧ ಸಮಾಜ ಸೇವೆಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ.

‘ನನಗೊಂದು ಆಸೆ ಇತ್ತು. ನನ್ನ ಸಂಪಾದನೆಯಲ್ಲಿ ಸಮಾಜಕ್ಕೆ ಏನಾದರೂ ಮಾಡಬೇಕೆಂದು ಅದರಂತೆ ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್ ನೀಡುತ್ತಿದ್ದೆ. ಅದೇ ರೀತಿ ಮಕ್ಕಳ ದಿನಾಚರಣೆಗೆ ಸಿಹಿ ತಿಂಡಿ ವಿತರಿಸಿ ಸಂತೋಷ ಪಡುತ್ತಿದೆ. ಕೊಡೆ, ಬ್ಯಾಗ್, ಪುಸ್ತಕ ಕೇವಲ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಮತ್ತೆ ಅದು ಹಾಳುತ್ತದೆ. ಹಾಗಾಗಿ ತುಂಬಾ ವರ್ಷ ಉಪಯೋಗವಾಗುವ ಕಾರ್ಯಕ್ರಮಗಳನ್ನು ಮಾಡಬೇಕೆಂಬ ಯೋಚನೆ ನನ್ನಲ್ಲಿ ಬಂತು. ಅದಕ್ಕಾಗಿ ನಾನು ಗ್ರಾಮೀಣ ಪ್ರದೇಶಗಳ ಸರಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡೆ’ ಎನ್ನುತ್ತಾರೆ ವಲೇರಿಯನ್ ಲೋಬೊ.

ಪ್ರತಿವರ್ಷ 6 ಶಾಲೆಗಳಿಗೆ ಬಣ್ಣ: ಶಾಲೆಗಳ ಗೋಡೆಗಳಿಗೆ ಸುಣ್ಣ ಬಣ್ಣ ಬಳಿದು, ಅತ್ಯಾಕರ್ಷಕ ಚಿತ್ರಗಳನ್ನು ಬಿಡಿಸಿ ಮಕ್ಕಳಿಗೆ ಸದಾ ಅನುಕೂಲವಾಗುವ ವಿಶಿಷ್ಟ ರೀತಿಯ ಕಾರ್ಯಕ್ರಮವನ್ನು ವಲೇರಿಯನ್ ಲೋಬೊ ಕೈಗೆತ್ತಿಕೊಂಡರು. ಅದಕ್ಕಾಗಿ ಅವರು ಪ್ರತಿವರ್ಷ 5-6 ಸರಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡರು. ಹೀಗೆ ಇವರು ಕಾರ್ಕಳ, ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶದ ಸುಮಾರು 20 ಶಾಲೆಗಳಿಗೆ ಸುಣ್ಣ ಬಣ್ಣ ಬಳಿಸಿ ಸುಂದರಗೊಳಿಸಿದ್ದಾರೆ.

‘ಹಳ್ಳಿಯ ಸರಕಾರಿ ಶಾಲೆಗಳನ್ನು ಆಯ್ಕೆ ಮಾಡಿ ಚಿತ್ರಕಲೆ ಬಿಡಿಸುವ ಗುತ್ತಿಗೆಯನ್ನು ಒಬ್ಬರಿಗೆ ವಹಿಸಿಕೊಡುತ್ತೇನೆ. ಅದರಂತೆ ಅವರು ಅತ್ಯುತ್ತಮ ಚಿತ್ರ ಕಲಾಕೃತಿಗಳನ್ನು ಗೋಡೆಯಲ್ಲಿ ರಚಿಸುತ್ತಾರೆ. ಅದೇ ರೀತಿ ಮಕ್ಕಳ ದಿನಾಚರಣೆ, ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ದಿನದಂದು ಮಕ್ಕಳ ಜೊತೆ ಬೆರೆತು ಪ್ರಶ್ನೆ ಕೇಳುವುದು, ಸಿಹಿ ತಿಂಡಿ ಹಂಚುವುದು, ಅವರ ಜೊತೆ ಊಟ ಮಾಡುವುದು ಕೂಡ ನನಗೆ ತುಂಬಾ ಖುಷಿ ಕೊಡುತ್ತದೆ’ ಎಂದು ಲೋಬೊ ಹೇಳುತ್ತಾರೆ.

‘ಸರಕಾರಿ ಶಾಲೆಯ ಸೌಂದರ್ಯಕರಣದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ, ಮಕ್ಕಳಿಗೆ ಅವರ ಶಾಲೆ ತುಂಬಾ ಅಂದವಾಗಿ ಕಂಡು ಬರುವಂತೆ ಮಾಡುವ ಇವರ ಕಾರ್ಯ ಮೆಚ್ಚುವಂತದ್ದು. ಓರ್ವ ಕೃಷಿಕರಾಗಿ, ಉದ್ಯಮಿಯಾಗಿ ಇವರ ಈ ಕಾಳಜಿ ಎಲ್ಲರಿಗೂ ಮಾದರಿಯಾಗಿದೆ. ಮಕ್ಕಳ ಮೇಲಿನ ಪ್ರೀತಿ, ಸರಕಾರಿ ಶಾಲೆಗಳ ಬಗ್ಗೆ ಅಭಿಮಾನ ಶ್ಲಾಘನೀಯ’ ಎನ್ನುತ್ತಾರೆ ಕಾರ್ಕಳ ತಾಲೂಕಿನ ಕಲ್ಯಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕಸ್ತೂರಿ.

ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತ ಬರುತ್ತಿದೆ. ಇಂತಹ ಶಾಲೆಗಳ ಸೌಂದರ್ಯಕ್ಕಾಗಿ ವಲೇರಿಯನ್ ಲೋಬೊ ವಿಶೇಷ ಒತ್ತು ನೀಡಿ ಗೋಡೆಗಳಲ್ಲಿ ಚಿತ್ರಗಳನ್ನು ಬಿಡಿಸುತ್ತಿದ್ದಾರೆ. ಈ ಮೂಲಕ ನಮ್ಮ ಜನಪದ ಕಲೆಗಳ ಬಗ್ಗೆ ಮಕ್ಕಳಿಗೆ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ. ಬಡ ವಿದ್ಯಾರ್ಥಿ ವಿಶೇಷ ಪ್ರೋತ್ಸಾಹ ಧನ, ಪುಸ್ತಕ, ಬ್ಯಾಗ್ ನೀಡುತ್ತ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳುತ್ತಾರೆ ಸಾಣೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಉಷಾ ತಾಮನ್ಕರ್.

ಆಕರ್ಷಣೀಯ ಚಿತ್ತಾರಗಳು!

ಮಸೀದಿ, ಮಂದಿರ, ಚರ್ಚ್‌ಗಳನ್ನು ಒಟ್ಟಿಗೆ ರಚಿಸುವ ಮೂಲಕ ಸರ್ವ ಧರ್ಮ ಸಂದೇಶ ಸಾರುವ ಚಿತ್ರಗಳು, ಸಾಲುಮರದ ತಿಮ್ಮಕ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರು, ಕಂಬಳ, ಯಕ್ಷಗಾನ ಸೇರಿದಂತೆ ತುಳುನಾಡಿನ ಸಂಸ್ಕೃತಿ ಬಿಂಬಿಸುವ ಚಿತ್ರಗಳು, ಜನಪದ ಸಂಸ್ಕೃತಿ ಮತ್ತು ಕಲೆಗಳು, ದೇಶದ ವಿವಿಧ ರಾಜ್ಯಗಳ ಕಲೆ ಮತ್ತು ಸಂಸ್ಕೃತಿಗಳ ಚಿತ್ರಗಳು, ಗ್ರಾಮೀಣ ಪ್ರದೇಶದ ಬದುಕಿನ ಚಿತ್ರಣ, ಜಗತ್ತಿನ ವಿವಿಧ ದೇಶಗಳ ವಿಶೇಷತೆಗಳು, ವನ್ಯಜೀವಿಗಳು, ಪಕ್ಷಿಗಳ ಚಿತ್ರಗಳನ್ನು ಶಾಲೆಗಳ ಗೋಡೆಗಳಲ್ಲಿ ಆಕರ್ಷಣೀಯವಾಗಿ ಚಿತ್ರಿಸಲಾಗಿದೆ.

ಯಾವುದೇ ಶಾಲೆ ಮಕ್ಕಳನ್ನು ಆಕರ್ಷಿಸಬೇಕಾದರೆ ಮೊದಲು ಭೌತಿಕವಾಗಿ ಸುಂದರ ಆಗಿರಬೇಕು. ಶಾಲೆಗೆ ಬರುವ ಮಕ್ಕಳು ಮೊದಲು ನೋಡುವುದು ಶಾಲಾ ಕಟ್ಟಡ ಅಂದವಾಗಿದೆಯೇ ಎಂಬುದನ್ನು. ಆ ನಿಟ್ಟಿನಲ್ಲಿ ನಮಗೆ ನಮ್ಮ ಶಾಲಾ ಕಟ್ಟಡವನ್ನು ಮಕ್ಕಳಿಗೆ ಆಕರ್ಷಿತಗೊಳಿಸಬೇಕಾಗಿತ್ತು. ಅದಕ್ಕೆ ನಮಗೆ ತುಂಬಾ ಸಹಕಾರ ನೀಡಿದವರು ವಲೇರಿಯನ್ ಲೋಬೊ. ಸುಮಾರು ಒಂದೂವರೆ ಲಕ್ಷ ರೂ. ಮೊತ್ತದಲ್ಲಿ ಶಾಲಾ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿದು ಚಿತ್ರ ಬಿಡಿಸಿಕೊಟ್ಟಿದ್ದಾರೆ.

- ಗಣೇಶ್ ಮೊಗವೀರ, ಮುಖ್ಯ ಶಿಕ್ಷಕರು, ಸಾಣೂರು ಸರಕಾರಿ ಪ್ರೌಢಶಾಲೆ

ನಮ್ಮ ಶಾಲೆಗೆ ಚಿತ್ರ ಬಿಡಿಸಿಕೊಡುವಂತೆ ಹಲವು ಮಂದಿಗೆ ಮನವಿ ಮಾಡಿದ್ದೇವು. ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಎಲ್ಲರೂ ಹಿಂದೇಟು ಹಾಕಿದರು. ಆದರೆ ವಲೇರಿಯನ್ ಅವರನ್ನು ಸಂಪರ್ಕಿಸಿದಾಗ ಅವರು ತುಂಬಾ ಖುಷಿಯಿಂದ ಒಪ್ಪಿಕೊಂಡರು. ಮಕ್ಕಳಿಗಾಗಿ ವಿವಿಧ ಚಿತ್ರಗಳನ್ನು ರಚಿಸಿಕೊಟ್ಟರು. ಆ ಮೂಲಕ ಅವರು ಮಕ್ಕಳು ಪ್ರತಿದಿನ ಈ ಕಲಾಕೃತಿಗಳನ್ನು ನೋಡಿ ಖುಷಿ ಪಡುವ ವಾತಾವರಣವನ್ನು ಸೃಷ್ಟಿಸಿಕೊಟ್ಟಿದ್ದಾರೆ.

- ಶಶಿದೇವಿ, ಮುಖ್ಯ ಶಿಕ್ಷಕರು, ಬೆಳ್ತಂಗಡಿಯ ನಾವರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ

ಶಾಲೆಗೆ ಜಾತಿ, ಧರ್ಮ ಎಂಬುದಿಲ್ಲ. ಹಾಗಾಗಿ ಈ ವಿಶಿಷ್ಟ ಕಾರ್ಯಕ್ರಮಕ್ಕೆ ನನ್ನ ಸಮುದಾಯ ಅಥವಾ ಖಾಸಗಿ ಶಾಲೆಯನ್ನು ಆಯ್ಕೆ ಮಾಡಿಕೊಂಡಿಲ್ಲ. ಅದಕ್ಕಾಗಿ ಕೇವಲ ಸರಕಾರಿ ಶಾಲೆಗಳನ್ನೇ ಆಯ್ಕೆ ಮಾಡಿ ಚಿತ್ರಕಲಾಕೃತಿಗಳನ್ನು ರಚಿಸಿ ಸೌಂದರ್ಯವನ್ನು ಹೆಚ್ಚಿಸುತ್ತಿದ್ದೇವೆ. ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಮುಖ್ಯವಲ್ಲ. ಒಂದಿರಲಿ ಸಾವಿರ ಮಕ್ಕಳು ಇರಲಿ. ಸರಕಾರಿ ಶಾಲೆಯನ್ನು ಹೆಚ್ಚು ಆಕರ್ಷಿತವಾಗಿ ಮಾಡುವುದು ನನ್ನ ಮುಖ್ಯ ಉದ್ದೇಶ ವಾಗಿದೆ.

- ರೊನಾಲ್ಡ್ ವಲೇರಿಯನ್ ಲೋಬೊ, ಸಾಮಾಜಿಕ ಕಾರ್ಯಕರ್ತ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಝೀರ್ ಪೊಲ್ಯ

contributor

Similar News