ಸುತ್ತಲ ಹಸಿರು ಹಾಳಾಗಿ ಈಗ ತಾಜ್ ಮಹಲ್ ಬಣ್ಣ ಹಸಿರಾಗುತ್ತಿದೆ !

Update: 2016-05-25 06:48 GMT

ಹೊಸದಿಲ್ಲಿ, ಮೇ 25: ವಿಶ್ವದ ಅದ್ಭುತಗಳಲ್ಲೊಂದಾದ ತಾಜ್ ಮಹಲ್ ಇತ್ತೀಚಿನ ದಿನಗಳಲ್ಲಿ ಕೀಟಗಳಿಂದ ಬಾಧಿತವಾಗಿದ್ದು ಹತ್ತಿರದಲ್ಲಿಯೇ ಹರಿಯುತ್ತಿರವ ಯಮುನಾ ನದಿ ಮಲಿನಗೊಂಡಿರುವುದರಿಂದ ಅದರಲ್ಲಿರುವ ಕ್ರಿಮಿಕೀಟಗಳು ಈ ಪ್ರೇಮ ಸ್ಮಾರಕವನ್ನು ಹಾಳುಗೆಡಹುತ್ತಿದೆಯೆಂದು ಪರಿಸರವಾದಿಗಳು ಹೇಳುತ್ತಿದ್ದಾರೆ. ಇದರಿಂದಾಗಿ ತಾಜ್ ಮಹಲ್ ಕಟ್ಟಡದ ಅಮೃತಶಿಲೆಯಲ್ಲಿ ಅಲ್ಲಲ್ಲಿ ಹಳದಿ ಬಣ್ಣಗಳು ಕಾಣಿಸುತ್ತಿವೆ.

17ನೇ ಶತಮಾನದ ಈ ಸ್ಮಾರಕ ಹಲವಾರು ವರ್ಷಗಳಿಂದ ಮಾಲಿನ್ಯ, ಕಟ್ಟಡ ನಿರ್ಮಾಣ ಚಟುವಟಿಕೆಗಳು, ಹತ್ತಿರದಲ್ಲಿಯೇ ಇರುವ ರುದ್ರಭೂಮಿಯಿಂದ ಬಾಧಿತವಾಗಿದೆ.

ಬಿಬಿಸಿ ವರದಿಯೊಂದು ತಾಜ್ ಮಹಲ್ಹಿಂದೆ ಎದುರಿಸುತ್ತಿದ್ದ ಹಾಗೂ ಈಗ ಎದುರಿಸುತ್ತಿರುವ ಅಪಾಯಗಳನ್ನುತನ್ನ ವರದಿಯೊಂದರಲ್ಲಿ ವಿವರಿಸಿದೆ.

1. ಕೀಟ ಬಾಧೆ : ಪರಿಸರವಾದಿ ಡಿ ಕೆ ಶೋಷಿಯವರ ಪ್ರಕಾರ ಚಿರೊನೊಮಸ್ ಕ್ಯಾಲ್ಲಿಗ್ರಾಫಸ್ (ಜಿಯೋಲ್ಡಿಖಿರೊನೊಮಸ್) ಎಂಬ ಹೆಸರಿನ ಕೀಟ ಬಾಧೆಯಿಂದ ತಾಜ್ ಮಹಲ್ ಕಟ್ಟಡದ ಬಣ್ಣ ಅಲ್ಲಲ್ಲಿ ಹಳದಿಯಾಗುತ್ತಿದೆ.

ಈ ವಿಚಾರವಾಗಿ ಅವರು ಈಗಾಗಲೇ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಿದ್ದು ಮಲಿನಗೊಂಡಿರುವ ಯಮುನಾ ನದಿಯಲ್ಲಿ ಸ್ಫೋಟಕ ಮಾದರಿಯಲ್ಲಿ ಬೆಳೆಯುತ್ತಿರುವ ಕೀಟಗಳು ತಾಜ್ ಮಹಲ್ ಅಂದಗೆಡಿಸುತ್ತಿವೆಯೆಂದು ದೂರಿದ್ದಾರೆ.

‘‘ಸುಮಾರು 52 ಕಾಲುವೆಗಳ ನೀರು ನೇರವಾಗಿ ತಾಜ್ ಮಹಲ್ ಹಿಂದೆ ಹರಿಯುವ ಯಮುನ ನದಿ ಸೇರುವುದರಿಂದ ಕೀಟಗಳನ್ನು ನಿಯಂತ್ರಿಸಲೆಂದು ನದಿ ನೀರಿಗೆ ಬಿಡಲಾಗಿದ್ದ ಮೀನುಗಳೂ ಸಾಯುತ್ತಿವೆ’’ ಎಂದವರು ಹೇಳಿದ್ದಾರೆ.

2. ಕೈಗಾರಿಕೆಗಳ ಮಾಲಿನ್ಯ : ಆಗ್ರಾದ ಸುತ್ತಮುತ್ತಲಿರುವ ಹಲವು ಕೈಗಾರಿಕೆಗಳು ಹಾಗೂ ಹತ್ತಿರದಲ್ಲಿಯೇ ಇರುವ ತೈಲಾಗಾರವೊಂದರ ಕಾರ್ಯಾಚರಣೆಯಿಂದ ತಾಜ್ ಮಹಲ್ ನ ಅಮೃತ ಶಿಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಇದಕ್ಕೆ ಪರಿಹಾರವೆಂಬಂತೆ ಭಾರತದ ಪುರಾತತ್ವ ಇಲಾಖೆ ಈ ಹಳದಿಯಾಗಿರುವ ಭಾಗಗಳಿಗೆ ಮತ್ತೆ ಹಾನಿಯಾಗದಂತೆ ‘ಮಣ್ಣಿನ ಪ್ಯಾಕು’ಗಳನ್ನು ಅವುಗಳಿಗೆ ಹಚ್ಚುತ್ತಿದೆ. ಈ ಮಣ್ಣಿನ ಪ್ಯಾಕ್ ಅಥವಾ ಮಡ್ ಪ್ಯಾಕ್ ಚಿಕಿತ್ಸೆಯನ್ನು ತಾಜ್ ಮಹಲ್ ಗೆ 1994, 2001, 2008 ಹಾಗೂ 2014ರಲ್ಲಿ ನೀಡಲಾಗಿದೆ.

3. ಶಾಪಿಂಗ್ ಸೆಂಟರ್ : ತಾಜ್ ಮಹಲ್ ಸಮೀಪ ಶಾಪಿಂಗ್ ಕಾಂಪ್ಲೆಕ್ಸ್ ಯೋಜನೆಯೊಂದನ್ನು ಉತ್ತರ ಪ್ರದೇಶ ಸರಕಾರ 2002ರಲ್ಲಿ ಕೈಗೆತ್ತಿಕೊಂಡಿತ್ತು. ತಾಜ್ ಮಹಲ್ ಸಮೀಪವಿರುವ ಹಲವು ಅಂಗಡಿಗಳನ್ನು ಈ ಶಾಪಿಂಗ್ ಕಾಂಪ್ಲೆಕ್ಸ್ ಗೆ ವರ್ಗಾಯಿಸಿದಲ್ಲಿ ಈ ಸ್ಮಾರಕ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಅನಾನುಕೂಲತೆ ಕಡಿಮೆಯಾಗುವುದು ಎಂಬ ವಾದವನ್ನು ಅಂದಿನ ಮಾಯಾವತಿ ನೇತೃತ್ವದ ಸರಕಾರ ವಾದಿಸಿತ್ತು. ಆದರೆ ಈ ಯೋಜನೆ ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತಿದೆಯೆಂದು ಪರಿಸರವಾದಿಗಳು ದೂರುತ್ತಿದ್ದಾರೆ.

4. ರುದ್ರಭೂಮಿ : ತಾಜ್ ಮಹಲ್ ಸಮೀಪವಿರುವ ರುದ್ರಭೂಮಿಯಲ್ಲಿ ಶವಗಳನ್ನು ಸುಡುವಾಗ ಉಂಟಾಗುವ ಹೊಗೆಯಿಂದ ತಾಜ್ ಮಹಲ್ ಗೆ ಅಪಾಯವಿದೆಯೆಂದು ರುದ್ರಭೂಮಿಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಕಳೆದ ವರ್ಷ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ 200 ವರ್ಷ ಹಳೆಯದಾದ ರುದ್ರಭೂಮಿಯನ್ನು ಒಂದೋ ಸ್ಥಳಾಂತರಿಸಬೇಕು ಇಲ್ಲವೇ ಅದನ್ನು ವಿದ್ಯುತ್ ಚಿತಾಗಾರವನ್ನಾಗಿ ಬದಲಿಸಬೇಕೆಂದು ನ್ಯಾಯಾಲಯ ಹೇಳಿತ್ತು. ಇದಕ್ಕೆ ರಾಜ್ಯ ಸರಕಾರ ಒಪ್ಪಿದ್ದರೂ ಕೆಲ ಹಿಂದೂ ಸಂಘಟನೆಗಳ ವಿರೋಧದಿಂದಾಗಿ ಅದನ್ನು ಇನ್ನೂ ಸ್ಥಳಾಂತರಗೊಳಿಸಲಾಗಿಲ್ಲ.

5. ಬಾಂಬ್ ಮತ್ತು ಉಗ್ರಗಾಮಿಗಳು : ಉಗ್ರ ಸಂಘಟನೆ ಅಲ್ ಖೈದಾ ತಾಜ್ ಮಹಲ್ ಮೇಲೆ ದಾಳಿ ನಡೆಸುವುದಾಗಿ ಬೆದರಿಸಿದಂದಿನಿಂದ ತಾಜ್ ಮಹಲ್ ನಲ್ಲಿ ಸುರಕ್ಷಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗದೆ.

ಜನವರಿ 2001ರಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ ಸಂಘಟನೆ ತಾಜ್ ಮಹಲ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ನಂತರ ಮತ್ತೆ ಸುರಕ್ಷೆಯನ್ನು ಬಲಪಡಿಸಲಾಗಿದೆ.

ತಾಜ್ ಮಹಲ್ ಮೇಲೆ ದಾಳಿ ನಡೆಸುವುದಾಗಿ ಸಂಘಟನೆ ಕಳುಹಿಸಿದ ಇಮೇಲ್ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದರೂ ಎಲ್‌ಇಟಿ ಈ ಆಪಾದನೆಯನ್ನುನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News