ರೇಷನ್ ಕಾರ್ಡ್‌ಗೆ ಮೊಬೈಲ್ ನಂಬರ್ ಲಿಂಕ್

Update: 2016-05-30 18:33 GMT

ಬೆಂಗಳೂರು, ಮೇ 30: ಪಡಿತರ ಚೀಟಿ ವಿತರಣೆ ಮಾಡುವ ನಿಯಮ ಸಡಿಲಿಕೆ ಮಾಡಿದರೆ ನಕಲಿ ಪಡಿತರ ಚೀಟಿ ಸೃಷ್ಟಿಯ ಜೊತೆಗೆ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಆಹಾರ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಆಯೋಜಿಸಿದ್ದ ನಗರದ ಕೊಳಗೇರಿ ಸಮಸ್ಯೆಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾರ್ಡ್ ವಿತರಣೆ ಮಾಡುವ ನಿಯಮದಲ್ಲಿ ಸಡಿಲಿಕೆ ಮಾಡಿದರೆ ಅನೇಕ ಜನ ನಕಲಿ ಪಡಿತರ ಚೀಟಿ ಸೃಷ್ಟಿಯ ಜೊತೆಗೆ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಹಾಗಾಗಿ ನಿಯಮ ಸಡಿಲಿಕೆಯಲ್ಲಿ ಯಾವುದೇ ರಾಜಿಯಿಲ್ಲ. ಕಾರ್ಡ್ ವಿತರಣೆ ಮಾಡುವಲ್ಲಿ ಭ್ರಷ್ಟಾಚಾರ ಮತ್ತು ಸಾರ್ವಜನಿಕರಿಂದ ಹಣ ವಸೂಲಿ ಮಾಡುವುದು ಸೇರಿದಂತೆ ಇತರೆ ತೊಂದರೆಗಳನ್ನು ನೀಡಿದರೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಮಾಹಿತಿ ಕೊರತೆ ಇರುವ ಅನೇಕ ಪಡಿತರ ಚೀಟಿಗಳನ್ನು ಅನರ್ಹಗೊಳಿಸಲಾಗಿದೆ. ಇಂತಹವರು ಮತ್ತೆ ಹೊಸ ಅರ್ಜಿಗಳನ್ನು ನೀಡಿ ಪಡೆಯಬಹುದು. ಇದರಿಂದ ನಕಲಿ ಮತ್ತು ಸುಳ್ಳು ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ ನೀಡಿದವರ ಕಾರ್ಡ್‌ಗಳು ಅನರ್ಹಗೊಳಿಸುವುದಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು. ಆಹಾರ ಇಲಾಖೆ ಹೆಚ್ಚುವರಿ ನಿರ್ದೇಶಕ ರಾಜಣ್ಣ ಮಾತನಾಡಿ, ರೇಷನ್ ಕಾರ್ಡ್ ಮತ್ತು ಆಹಾರ ಪೂರೈಕೆ ಮಾಡುವಲ್ಲಿ ಯಾವುದೇ ಸಮಸ್ಯೆ ಉಂಟಾದರೆ ಉಚಿತ ಕರೆ 1967 ಗೆ ಕರೆ ಮಾಡಿ ತಕ್ಷಣವೇ ನಿಮ್ಮ ಸಮಸ್ಯೆಗೆ ಪರಿಹಾರ ಮಾಡಲಾಗುತ್ತಿದೆ.

ನಿಮ್ಮ ರೇಷನ್ ಕಾರ್ಡ್‌ಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಮಾಡಿಸಿ ಪ್ರತಿ ತಿಂಗಳ 2 ತಾರೀಕಿನಂದು ನಿಮಗೆ ಎಷ್ಟು ಪ್ರಮಾಣದಲ್ಲಿ ಧಾನ್ಯ ನೀಡಲಾಗುತ್ತದೆ ನೀವು ಎಷ್ಟು ಹಣ ತೆಗೆದುಕೊಂಡು ಹೋಗಬೇಕು ಎಂದು ಸಂದೇಶ ಬರುತ್ತದೆ ಈ ಎಲ್ಲ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳಿ ಎಂದು ಮನವಿ ಮಾಡಿದರು. ಸಂಘಟನೆ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಎಸ್.ಲೀಲಾವತಿ ಅವರು ಕೊಳಗೇರಿಗಳ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಕೊಳಗೇರಿ ನಿವಾಸಿಗಳ ಅಭಿವೃದ್ಧಿ ಮುಖ್ಯಸ್ಥ ಮಹ್ಮದ್ ಆರೀಫ್, ಇಂಜನಿಯರ್ ರಕುಮಾರ್, ತಹಸೀಲ್ದಾರ್ ಗೀತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕೂಪನ್ ವ್ಯವಸ್ಥೆ ಜಾರಿ

ಪಡಿತರ ವಿತರಣೆ ಸೋರಿಕೆ ತಡೆಗಟ್ಟಲು ಮತ್ತು ಪಾರದರ್ಶಕ ಪಡಿತರ ವಿತರಣೆಗಾಗಿ ಸರಕಾರ ಬಯೋಮೆಟ್ರಿಕ್ ಕೂಪನ್ ವ್ಯವಸ್ಥೆ ಜಾರಿಗೊಳಿಸಲಿದೆ. ಬಿಬಿಎಂಪಿ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಜೂ.1ರಿಂದ ಸೀಮೆಎಣ್ಣೆ ವಿತರಣೆಗೆ ಕೂಪನ್‌ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಜುಲೈ ತಿಂಗಳಲ್ಲಿ ಆಹಾರ ಧಾನ್ಯಗಳ ವಿತರಣೆಗೂ ಕೂಪನ್ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಬೆಂಗಳೂರು ಒನ್ ಅಥವಾ ಸೈಬರ್ ಕೇಂದ್ರಗಳಲ್ಲಿ ಕೂಪನ್ ಪಡೆಯಬಹುದು. ಜತೆಗೆ, ಚೀಟಿದಾರರ ಮೊಬೈಲ್ಗೆ ಕೂಪನ್‌ಕೋಡ್ ಸಂಖ್ಯೆಯನ್ನು ಕಳುಹಿಸಲಾಗುತ್ತದೆ. ಅದನ್ನು ತೋರಿಸಿ ಪಡಿತರ ಪಡೆದುಕೊಳ್ಳಬಹುದು ಎಂದರು.

 ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ ವಿತರಿಸಲು ವಾರ್ಷಿಕ 2 ಸಾವಿರ ಕೋಟಿ ವೆಚ್ಚವಾಗುತ್ತಿದೆ. ಈಗ ಪ್ರತಿ ಯುನಿಟ್‌ಗೆ ಹೆಚ್ಚುವರಿಯಾಗಿ ಒಂದು ಕೆ.ಜಿ. ಅ್ಕಕಿಯನ್ನು ನೀಡಿದರೆ ಒಂದೂವರೆ ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ. ಒಬ್ಬರು ಅಥವಾ ಇಬ್ಬರು ಇರುವ ಕುಟುಂಬಗಳಿಗೆ 12 ಕೆ.ಜಿ. ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News